ಸದ್ಯದ ಯುವಜನರ ಆಹಾರದ ಟ್ರೆಂಡ್ ಎಂದರೆ ಅದು ಸ್ಮೂದಿ. ಬಹಳ ಸುಲಭವಾಗಿ ಮಾಡಬಲ್ಲ, ಹೊಟ್ಟೆ ತುಂಬಿಸಿಕೊಳ್ಳಬಹುದಾದ ಹಾಗೂ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾದ ಟ್ರೆಂಡ್ ಆದ ಆಹಾರ ಕ್ರಮ. ಒಂದಿಷ್ಟು ಹಣ್ಣುಗಳನ್ನು ಸೇರಿಸಿ ಮಾಡುವ ಸ್ಮೂದಿ, ತರಕಾರಿಗಳನ್ನು ಸೇರಿಸಿ ಮಾಡುವ ಸ್ಮೂದಿ, ಬೀಜಗಳು ಒಣ ಹಣ್ಣುಗಳು, ವೇಗನ್ ಹಾಲು ಇತ್ಯಾದಿ ಇತ್ಯಾದಿ ಹಲವು ಬಗೆಯನ್ನು ಸೇರಿಸಿ ಮಾಡಬಹುದಾದ ಸ್ಮೂದಿಗಳು ಬಹುತೇಕರ ಜೀವನದಲ್ಲಿ ಇಂದು ಪ್ರತಿನಿತ್ಯದ ಆಹಾರ. ಹಲವು ಪೋಷಕಾಂಶಗಳನ್ನು ಒಳಗೊಂಡ, ಒಮ್ಮೆಲೇ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಸುಲಭವಾಗಿ ದೇಹಕ್ಕೆ ಸಿಗುವಂತೆ ಮಾಡಬಲ್ಲ, ಸುಲಭ ಸರಳವಾದ, ಫಟಾಫಟ್ ಮಾಡಬಹುದಾದ ಆಯ್ಕೆ ಇದು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಹಾಗಾದರೆ, ಈ ಸ್ಮೂದಿಗಳನ್ನು ಕುಡಿಯುವುದರಿಂದ, ದೇಹಕ್ಕೆ ಹಣ್ಣು, ತರಕಾರಿ, ಬೀಜಗಳನ್ನು ತಿಂದಷ್ಟೇ ಲಾಭಗಳು ದೊರೆಯುತ್ತವೆಯೇ ಎಂಬ ಬಗ್ಗೆ ನಿಮಗೆ ಪ್ರಶ್ನೆ ಉದ್ಭವಿಸಿದಲ್ಲಿ ಅದಕ್ಕೆ (Fruit and Veggie Smoothies) ಉತ್ತರ ಇಲ್ಲಿದೆ.
- ನೀವು ಸ್ಮೂದಿಗಾಗಿ ಬಳಸುವ ಹಣ್ಣು ಹಂಪಲಾಗಿರಬಹುದು, ತರಕಾರಿಗಳಿರಬಹುದು, ಬೀಜ ಒಣಹಣ್ಣುಗಳಿರಬಹುದು, ಅವುಗಳನ್ನು ಹಾಗೆಯೇ ಜಗಿದು ತಿಂದರೆ ಆ ಜಗಿಯುವ ಪ್ರಕ್ರಿಯೆಯಲ್ಲಿ ಬಾಯಲ್ಲಿ ಲಾಲಾರಸವೂ ಅಂದರೆ ಜೊಲ್ಲೂ ಕೂಡಾ ಅದಕ್ಕೆ ಸೇರುತ್ತದೆ. ಈ ರಸ ಜೀರ್ಣಕ್ರಿಯೆಗೆ ಸಹಾಯ ಮಾಡುವ ರಸ. ಜೊತೆಗೆ ಇದು ಬಾಯಿಯನ್ನು ತೇವವಾಗಿ ಇಟ್ಟುಕೊಳ್ಳುವ ರಸವಾದ್ದರಿಂದ ಇದು ಬಾಯಿಯ ಮೂಲಕ ದೇಹಕ್ಕೆ ಇನ್ಫೆಕ್ಷನ್ ಹೋಗದಂತೆಯೂ ರಕ್ಷಿಸುತ್ತದೆ. ಸ್ಮೂದಿ ಮಾಡಿ ಕುಡಿಯುವುದರಿಂದ ದೇಹದ ಈ ನೈಸರ್ಗಿಕ ಕ್ರಿಯೆಯನ್ನೇ ನೀವು ದೂರ ಮಾಡಿ ಸುಲಭವಾಗಿ ಆಹಾರವನ್ನು ಹೊಟ್ಟೆಗೆ ಕಳುಹಿಸುತ್ತಿದ್ದೀರಿ ಎಂದಾಯಿತು. ಬಾಯಿಗೆ ಕೆಲಸವೇ ಇಲ್ಲ. ಜೀರ್ಣಕ್ರಿಗೆ ಸಹಾಐ ಆಡುವ ಅಂಶಗಳೂ ಅಲ್ಲಿ ಸೇರಲಿಲ್ಲ!
- ಸ್ಮೂದಿಯನ್ನು ಕುಡಿಯುವುದರಿಂದ ಬಾಯಿಗೆ ಕೆಲಸವಿಲ್ಲದೆ ಅದು ನೇರವಾಗಿ ಹೊಟ್ಟೆಗೆ ಇಳಿಯುತ್ತದೆ. ಅಲ್ಲಿ ನಿಮ್ಮ ಜೊಲ್ಲುರಸ ಅಂದರೆ ಲಾಲಾರಸ ಈ ಆಹಾರದ ಜೊತೆಗೆ ಸರಿಯಾಗಿ ಸೇರಲಿಲ್ಲ ಅಂತಾಯಿತು. ಇದರಿಂದಾಗಿ ನಿಮ್ಮ ಜೀರ್ಣಕ್ರಿಯೆಯ ಸಾಮರ್ಥ್ಯ ನಿಧಾನವಾಗಿ ಕುಂಠಿತವಾಗುತ್ತಾ ಬರುತ್ತದೆ. ಕೇವಲ ಜೀರ್ಣಕ್ರಿಯೆಯಷ್ಟೇ ಅಲ್ಲ, ರೋಗನಿರೋಧಕ ಶಕ್ತಿಯೂ ಕುಂಠಿತವಾಗುತ್ತಾ ಬರುತ್ತದೆ. ಇಂತಹ ಬಗೆಯ ಆಹಾರಕ್ಕೇ ದೇಹ ಹೊಂದಿಕೊಂಡು, ಜೀರ್ಣ ಮಾಡುವ ಶಕ್ತಿ ಇಳಿಕೆಯಾಗುತ್ತದೆ.
- ಸ್ಮೂದಿಯು ದ್ರವರೂಪದಲ್ಲಿರುವುದರಿಂದ ಸಹಜವಾಗಿಯೇ, ಸ್ಮೂದಿಯಲ್ಲಿರುವ ನೈಸರ್ಗಿಕ ಸಕ್ಕರೆ ಬಹುಬೇಗನೆ ರಕ್ತಕ್ಕೆ ಸೇರಿ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಇದ್ದಕ್ಕಿದ್ದಂತೆ ಏರಿಕೆಯಾಗುತ್ತದೆ. ಇದರಿಂದಾಗಿ ಸುಸ್ತಿನ ಅನುಭವ, ತಲೆಸುತ್ತಿನಂತ ಸಮಸ್ಯೆಗಳೂ ಮುಂದೆ ತಲೆದೋರಬಹುದು. ಹಣ್ಣುಗಳು, ಹಂಪಲುಗಳು ಹಾಗೂ ತರಕಾರಿಗಳಲ್ಲಿರುವ ನಾರಿನಂಶ ಸರಿಯಾಗಿ ಹೊಟ್ಟೆ ಸೇರದೆ, ವ್ಯರ್ಥವಾಗಬಹುದು. ಪೋಷಕಾಂಶವೂ ನಷ್ಟವಾಗಬಹುದು. ಇವೆಲ್ಲವನ್ನೂ ಜಗಿದು ತಿನ್ನುವಾಗ ಸಿಗಬಃಉದಾದ ಆರೋಗ್ಯದ ಲಾಭಗಳೆಲ್ಲವೂ ಸ್ಮೂದಿಯ ಮೂಲಕ ಸಿಗದೇ ಹೋಗುವ ಸಾಧ್ಯತೆಗಳೇ ಹೆಚ್ಚು.
- ಕೆಲವು ಮಂದಿಗೆ ದೇಹದಲ್ಲಿರುವ ಸಕ್ಕರೆಯ ಅಂಶದ ಏರಿಕೆಯಿಂದಾಗಿ ತಕ್ಷಣ ತಲೆಸುತ್ತು, ತಲೆನೋವು ಮತ್ತಿತರ ಸಮಸ್ಯೆಯೂ ಕಾಡಬಹುದು. ಆದರೆ, ಸ್ಮೂದಿಗೆ ಬಳಸಿದ ಹಣ್ಣು ಹಂಪಲು ಅಥವಾ ತರಕಾರಿ, ಒಣ ಹಣ್ಣು ಬೀಜಗಳನ್ನು ಹಾಗೆಯೇ ತಿನ್ನುವುದರಿಂದ ಈ ಪರಿಣಾಮಗಳು ಕಾಣಿಸಿಕೊಳ್ಳಲಾರದು. ಹಾಗಾಗಿ, ಸ್ಮೂದಿಗಿಂತ ಹಾಗೆಯೇ ತಿನ್ನುವುದೇ ಆರೋಗ್ಯಕ್ಕೆ ಹೆಚ್ಚು ಸೂಕ್ತ ಎಂಬುದನ್ನು ನೆನಪಿಡಿ.
ಇದನ್ನೂ ಓದಿ: Nosebleeds In Summer: ಬೇಸಿಗೆಯ ತಾಪಕ್ಕೆ ಮೂಗಿನಲ್ಲಿ ರಕ್ತಸ್ರಾವವೇ? ತಡೆಯಲು ಇಲ್ಲಿವೆ ಸರಳ ಉಪಾಯ