ಮನುಷ್ಯನ ಯಾವುದೇ ಆರೋಗ್ಯದ ಸಮಸ್ಯೆಗಳಿಗೂ ನಿಸರ್ಗದಲ್ಲೇ ಉತ್ತರವಿದೆ. ಸಮಸ್ಯೆಯ ಆರಂಭದಲ್ಲಿ, ಈ ನೈಸರ್ಗಿಕ ಉಪಾಯಗಳು ಮನುಷ್ಯನಿಗೆ ಸಾಕಷ್ಟು ಬಾರಿ ಸಮಸ್ಯೆಯಿಂದ ಸಂಪೂರ್ಣವಾಗಿ ಹೊರಬರಲು ಸಾಹಾಯ ಮಾಡುತ್ತದೆ. ಶಿಸ್ತುಬದ್ಧ ಜೀವನ ಶೈಲಿ, ಉತ್ತಮ ಆಹಾರ ಕ್ರಮ ಇತ್ಯಾದಿಗಳಿದ್ದರೆ, ಪ್ರಕೃತಿದತ್ತ ಪರಿಹಾರಗಳು ಹೆಚ್ಚು ಫಲಪ್ರದವಾಗುತ್ತದೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಇತ್ತೀಚೆಗೆ ಹೆಚ್ಚಾಗುತ್ತಿರುವ ಮಧುಮೇಹದಂತಹ ತೊಂದರೆಗಳಿಗೂ ಅಷ್ಟೇ, ಆರಂಭದಲ್ಲೇ, ಸರಿಯಾದ ಆಹಾರಕ್ರಮದಿಂದ ಹಾಗೂ ನೈಸರ್ಗಿಕ ಪರಿಹಾರೋಪಾಯಗಳಿಂದ ಮದುಮೇಹವನ್ನು ಹತೋಟಿಗೆ ತರಬಹುದು ಎಂಬುದನ್ನು ಸಾಧಿಸಿ ತೋರಿಸಿದ ಮಂದಿ ನಮ್ಮ ನಡುವೆ ಎಷ್ಟೋ ಮಂದಿ ಇದ್ದಾರೆ. ಹಾಗಾದರೆ ಬನ್ನಿ, ಯಾವೆಲ್ಲ ಎಲೆಗಳ ಸೇವನೆಯಿಂದ, (Sugar Control Leaves) ಆಹಾರಕ್ರಮದಲ್ಲಿ ನಿಯಮಿತವಾಗಿ ಬಳಸುವುರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗುವುದನ್ನು ನಿಯಂತ್ರಿಸಿ ಮಧುಮೇಹವನ್ನು ಸಮತೋಲನದಲ್ಲಿಡಬಹುದು ಎಂಬುದನ್ನು ತಿಳಿಯೋಣ.
ನುಗ್ಗೆಸೊಪ್ಪು
ನುಗ್ಗೆ ಸೊಪ್ಪಿನಲ್ಲಿ ಹೇರಳವಾಗಿ ಆಂಟಿ ಆಕ್ಸಿಡೆಂಟ್‌ಗಳು ಹಾಗೂ ಆಂಟಿ ಇನ್‌ಫ್ಲಮೇಟರಿ ಗುಣಗಳು ಇವೆ. ಇದರಲ್ಲಿ ಇನ್ಸುಲಿನ್ನಂತಹ ಪ್ರೊಟೀನ್‌ಗಳಿರುವುದರಿಂದ, ಇದರ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಅಂಶವ ಏರುವುದನ್ನು ನಿಯಂತ್ರಿಸಬಹುದಾಗಿದೆ. ಇದರಲ್ಲಿರುವ ಸಸ್ಯಜನ್ಯ ರಾಸಾಯನಿಕಗಳು ಸಕ್ಕರೆಯ ಮಟ್ಟದ ನಿಯಂತ್ರಣದ ಜೊತೆಗೆ ದೇಹ ಹೆಚ್ಚಿನ ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದಿಸುವಂತೆ ಪ್ರಚೋದಿಸುವ ಕೆಲಸವನ್ನೂ ಮಾಡುತ್ತದೆ.
ಕರಿಬೇವು
ದಕ್ಷಿಣ ಭಾರತೀಯರ ಅಡುಗೆಯ ಅಚ್ಚುಮೆಚ್ಚಾಗಿರುವ ಕರಿಬೇವಿನಲ್ಲೂ, ಆಂಟಿ ಆಕ್ಸಿಡೆಂಟ್, ಆಂಟಿ ಇನ್‌ಫ್ಲಮೇಟರಿ ಹಾಗೂ ಆಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ಇದರಿಂದಾಗಿ ರಕ್ತದಲ್ಲಿನ ಅತಿಯಾದ ಸಕ್ಕರೆ ನಿಯಂತ್ರಣದಲ್ಲಿಡಬಹುದು.
ಪೇರಳೆ ಎಲೆ
ಪೇರಳೆ ಅಥವಾ ಸೀಬೆಕಾಯಿ ಗಿಡದ ಎಲೆಯನ್ನು ನಿತ್ಯವೂ ಸೇವಿಸುವುದರಿಂದ ಖಂಡಿತವಾಗಿಯೂ ಮಧುಮೇಹ ಅದರಲ್ಲೂ ಟೈಪ್ 2 ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಈ ಎಲೆಯಲ್ಲಿ ಉತ್ತಮ ನಾರಿನಂಶವೂ ಇದೆ. ಸೀಬೆ ಗಿಡದ ಚಿಗುರು ಅಥವಾ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಕುಡಿಯುವುದರಿಂದ ಸಕ್ಕರೆಯ ಮಟ್ಟ್ ಗಮನೀಯವಾಗಿ ನಿಯಂತ್ರಣಕ್ಕೆ ಬಂದ ಉದಾಹರಣೆಗಳೂ ಇವೆ.
ಮೆಂತ್ಯ ಸೊಪ್ಪು
ಚಳಿಗಾಲದಲ್ಲಿ ಹೇರಳವಾಗಿ ಲಭ್ಯವಾಗುವ ಮೆಂತ್ಯ ಸೊಪ್ಪಿಗೆ ಇನ್ಸುಲಿನ್ ಉತ್ಪಾದನೆಯನ್ನು ಪ್ರಚೋದಿಸುವ ಗುಣವಿದೆ. ಅಷ್ಟೇ ಅಲ್ಲ, ಗ್ಲುಕೋಸನ್ನು ದೇಹ ಹೀರಿಕೊಳ್ಳುವುದನ್ನೂ ಇದು ಕಡಿಮೆ ಮಾಡುತ್ತದೆ.
ತುಳಸಿ ಎಲೆ
ತುಳಸಿ ಗಿಡ ಸಾಮಾನ್ಯವಾಗಿ ಬಹುತೇಕ ಭಾರತೀಯರ ಮನೆಯಲ್ಲಿ ಇರುವ ಸಾಮಾನ್ಯ ಸಸ್ಯ. ಧಾರ್ಮಿಕವಾಗಿಯೂ ಇದು ಅತ್ಯಂತ ಶ್ರೇಷ್ಠವಾದ ಪೀಜನೀಯ ಸಸ್ಯವೆಂಬ ನಂಬಿಕೆ ಹಿಂದೂಗಳದ್ದು. ಆದರೆ, ಧಾರ್ಮಿಕತೆಗಳ ಹೊರತಾಗಿಯೂ ತುಳಸಿ ನಿಜಕ್ಕೂ ಅತ್ಯಪೂರ್ವ ಸಸ್ಯ. ಇದರಿಂದ ಸಾಕಷ್ಟು ಆರೋಗ್ಯಕರ ಲಾಭಗಳಿದ್ದು, ಇದು ಆರಂಭದ ಹಂತದಲ್ಲಿ ಮಧುಮೇಹ ಬರದಂತೆ ಕಾಪಾಡುತ್ತದೆ. ರಕ್ತದಲ್ಲಿ ಸಕ್ಕರೆಯ ಮಟ್ಟ ಏರದಂತೆ ತಡೆಯುತ್ತದೆ.
ಇದನ್ನೂ ಓದಿ: Mental Health: ಒತ್ತಡದ ಬದುಕಿನಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ