Site icon Vistara News

Benefits Of Ginger: ಶುಂಠಿ ಘಾಟು, ಘಮಕ್ಕೆ ಮಾತ್ರವಲ್ಲ; ಔಷಧಕ್ಕೂ ಬೇಕು!

ginger

ನಿರೋಗಿಗಳಾಗಿರಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಶತಮಾನಗಳಿಂದ ನಾವು ಹುಡುಕಾಡುತ್ತಲೇ ಇದ್ದೇವೆ ಉತ್ತರವನ್ನು. ಉತ್ತರ ದೊರೆಯಲೇ ಇಲ್ಲ ಎನ್ನುವುದಕ್ಕೆ ಆಗದಿದ್ರೂ, ಪ್ರಶ್ನೆಗಳು ಮುಗಿದಿಲ್ಲ. ಕಾರಣ, ಕಾಲಕ್ಕೆ ತಕ್ಕಂತೆ ಹೊಸ ಪ್ರಶ್ನೆಗಳು, ಹೊಸ ರೋಗ ಮತ್ತು ಹೊಸ ಸವಾಲುಗಳು ತಲೆ ಎತ್ತುತ್ತಿವೆ. ಉದಾ, ದಿನವಿಡೀ ಕಂಪ್ಯೂಟರ್‌ ಮುಂದೆ ಕುಳಿತು ಕೆಲಸ ಮಾಡುವ ಸವಾಲುಗಳು ಹಳೆಯ ಕಾಲದವರಿಗಿರಲಿಲ್ಲ. ಅವರದ್ದು ಹೆಚ್ಚಿನ ಸಾರಿ ದೇಹಶ್ರಮದ ಕೆಲಸವೇ ಇರುತ್ತಿತ್ತು. ಆದರೀಗ ದೇಹಕ್ಕೆ ಬೆವರು ಬರುವಂತೆ ಶ್ರಮವಾಗದಿದ್ದರೂ, ಕುಳಿತು ಕಂಗೆಡುವ ಶ್ರಮ ಕಡಿಮೆಯದಲ್ಲ. ಹೆಚ್ಚು ಹೊತ್ತು ಕುಳಿತೇ ಇರುವ ಜಡ ಜೀವನದ ಅಡ್ಡ ಪರಿಣಾಮಗಳು ನಾವು ಊಹಿಸಿದ್ದಕ್ಕಿಂತ ಹೆಚ್ಚು ದೂರದವರೆಗೆ ನಮ್ಮ ಬೆನ್ನಟ್ಟುತ್ತವೆ. ಇಂಥ ಸವಾಲುಗಳ ಉತ್ತರವೊ ಎಂಬಂತೆ ಹಲವು ರೀತಿಯ ನೈಸರ್ಗಿಕ ಮದ್ದು ಅಥವಾ ಸಿದ್ಧೌಷಧಗಳು ಜನಪ್ರಿಯಗೊಳ್ಳುತ್ತಿವೆ. ಇಂಥದ್ದೊಂದು ಮದ್ದು ಶುಂಠಿ ರಸ. ಅಡುಗೆಯಲ್ಲಿ ಸಾಧಾರಣವಾಗಿ ಬಳಕೆಯಾಗುವಂಥ ಮೂಲಿಕೆಯಿದು, ಆದರೆ ಔಷಧಿಯಾಗಿ ಅಲ್ಲ. ಘಾಟು, ಘಮ, ರುಚಿ ಮುಂತಾದವನ್ನು ಹೆಚ್ಚಿಸುವ ಉದ್ದೇಶದಿಂದ ಶುಂಠಿ ಅಡುಗೆಯಲ್ಲಿ ಬಳಕೆಯಾಗುತ್ತದೆ. ಆದರೆ ಶುಂಠಿ ರಸ, ಕಷಾಯ, ಚಹಾ ಇಂಥವೆಲ್ಲ ಇತ್ತೀಚಿನ ದಿನಗಳಲ್ಲಿ ಬಹುಬೇಡಿಕೆಯನ್ನು ಪಡೆದುಕೊಂಡಿವೆ. ಇದರಲ್ಲಿರುವ ಸತ್ವಗಳು ಮತ್ತು ಅದರ ಪರಿಣಾಮಗಳು ಅರಿವಿಗೆ ಬರುತ್ತಿವೆ. ಏನಿದೆ ಶುಂಠಿಯಲ್ಲಿ (BENEFITS OF GINGER) ಅಂಥದ್ದು?

ಪಚನಕಾರಿ

ಶುಂಠಿಯಲ್ಲಿರುವ ಜಿಂಜರಾಲ್‌ ಎಂಬ ಅಂಶವು ಜೀರ್ಣಾಂಗಗಳನ್ನು ಚುರುಕು ಮಾಡುತ್ತದೆ. ಜಠರದಲ್ಲಿ ಅಗತ್ಯಕ್ಕಿಂತ ಹೆಚ್ಚು ಸಮಯ ಉಳಿಯಲು ಬಿಡದಂತೆ ಆಹಾರವನ್ನು ಮುಂದೂಡುತ್ತದೆ. ಇದರಿಂದ ಅಜೀರ್ಣ, ಹೊಟ್ಟೆಯುಬ್ಬರ, ಮಲಬದ್ಧತೆಯಂಥ ಸಮಸ್ಯೆಗಳನ್ನು ದೂರ ಮಾಡಲು ಸಾಧ್ಯ. ಕೆಲವು ಸಂದರ್ಭಗಳಲ್ಲಿ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೆಚ್ಚಿನ ಪರಿಣಾಮ ಕಾಣಬಹುದು. ಆದರೆ ಖಾಲಿ ಹೊಟ್ಟೆಯಲ್ಲಿ ಶುಂಠಿ ಸೇವಿಸುವುದು ಕೆಲವರಿಗೆ ಹೊಂದಿಕೆಯಾಗದಿರುವ ಸಾಧ್ಯತೆಯಿದೆ.

ಉತ್ಕರ್ಷಣ ವಿರೋಧಿ

ಶುಂಠಿಯಲ್ಲಿ ಹಲವು ರೀತಿಯ ಪ್ರಬಲ ಉತ್ಕರ್ಷಣ ನಿರೋಧಕಗಳಿವೆ. ದೇಹದಲ್ಲಿ ಉರಿಯೂತ ನಿವಾರಣೆಗೆ ಉತ್ತಮ ಮದ್ದು ಇದು ಎಂಬುದು ಈಗಾಗಲೇ ತಿಳಿದಿರುವ ವಿಷಯ. ಜೊತೆಗೆ, ದೇಹದ ಪ್ರತಿರೋಧಕ ಶಕ್ತಿಯನ್ನು ಉದ್ದೀಪಿಸುವುದಲ್ಲೂ ಇದರದ್ದು ಎತ್ತಿದ ಕೈ. ಹಾಗಾಗಿ ಸಣ್ಣ-ಪುಟ್ಟ ಸೋಂಕಿನ ದಿನಗಳಲ್ಲಿ ಒಂದು ಖಡಕ್‌ ಶುಂಠಿ ಕಷಾಯ ದೇಹಕ್ಕೆ ಬಹಳಷ್ಟು ಆರಾಮ ನೀಡಬಲ್ಲದು.

ತೂಕ ನಿರ್ವಹಣೆ

ದೇಹದ ಚಯಾಪಚಯ ಹೆಚ್ಚಿಸಿ, ಕೊಬ್ಬು ಕಡಿತ ಮಾಡುವಲ್ಲಿ ಶುಂಠಿ ಅತ್ಯಂತ ಪ್ರಯೋಜನಕಾರಿ. ಅನಗತ್ಯ ಹಸಿವೆಯನ್ನು ನಿರ್ಬಂಧಿಸಿ, ತಿಂದಿದ್ದೆಲ್ಲ ಸೂಕ್ತ ರೀತಿಯಲ್ಲಿ ರಕ್ತ ಸೇರುವಂತೆ ಮಾಡುವುದರಿಂದ, ಆಹಾರ ಸೇವನೆಯ ಸಂತೃಪ್ತಿ ಹೆಚ್ಚುತ್ತದೆ. ಈ ಎಲ್ಲ ಕಾರಣಗಳಿಂದಾಗಿ ತೂಕ ನಿರ್ವಹಣೆಯಲ್ಲಿ ಸವಾಲುಗಳಿದ್ದರೆ, ಶುಂಠಿಯನ್ನು ಆಹಾರದಲ್ಲಿ ಸೇರಿಸಿಕೊಂಡು ಪ್ರಯತ್ನಿಸಬಹುದು.

ಗರ್ಭಿಣಿಯರಿಗೆ

ಬೆಳಗಿನ ಹೊತ್ತು ವಾಂತಿ, ಓಕರಿಕೆಯಂಥ ಮಾರ್ನಿಂಗ್‌ ಸಿಕ್‌ನೆಸ್‌ನಿಂದ ಒದ್ದಾಡುತ್ತಿರುವ ಗರ್ಭಿಣಿಯರಿಗೆ ಶುಂಠಿ ನೆರವಾಗಬಲ್ಲದು. ಹಸಿ ಶುಂಠಿಯ ರಸ, ಕಷಾಯ ಅಥವಾ ಶುಂಠಿಯನ್ನೇ ಬಾಯಲ್ಲಿರಿಸಿಕೊಂಡರೂ, ಹೊಟ್ಟೆ ತೊಳೆಸುವುದನ್ನು ಕಡೆಯಬಹುದು. ಪರಂಪರಾಗತ ಔಷಧಿಯಲ್ಲಿ ಈ ಸಮಸ್ಯೆಗೆ ಶುಂಠಿಯೇ ಮದ್ದು.

ಮಧುಮೇಹಿಗಳಿಗೆ

ದೇಹದ ಚಯಾಪಚಯ ಹೆಚ್ಚಿಸುವ ಇದರ ಸಾಮರ್ಥ್ಯದಿಂದಾಗಿ ಮಧುಮೇಹಿಗಳು ಇದನ್ನು ತಮ್ಮ ಆಹಾರದ ಭಾಗವಾಗಿಸಿಕೊಳ್ಳಬಹುದು. ಜೀರ್ಣಕ್ರಿಯೆಯನ್ನು ಸರಾಗ ಮಾಡಿ, ರಕ್ತದಲ್ಲಿ ಸಕ್ಕರೆಯಂಶ ಧಿಡೀರ್‌ ಏರದಂತೆ ಇದು ತಡೆಯಬಲ್ಲದು. ಜೊತೆಗೆ ರಕ್ತ ಪರಿಚಲನೆಯನ್ನೂ ಇದು ಉತ್ತೇಜಿಸುವುದರಿಂದ, ಅಂಗಾಂಗಗಳ ಯೋಗಕ್ಷೇಮ ಕಾಪಾಡುವಲ್ಲೂ ಶುಂಠಿ ಸಹಕಾರಿ.
ಶುಂಠಿಯನ್ನು ಹಸಿಯಾಗಿ, ಒಣಗಿಸಿದ ರೂಪದಲ್ಲಿ, ಪುಡಿ ಮಾಡಿಕೊಂಡು, ಪೇಸ್ಟ್‌ ಮಾಡಿ, ರಸ ತೆಗೆದು ಕಾಪಿಟ್ಟುಕೊಂಡು… ಹೇಗೆ ಉಪಯೋಗಿಸಿದರೂ ಪ್ರಯೋಜನಕಾರಿ. ಆದರೆ ತಾಜಾ ಹಸಿ ಶುಂಠಿಯ ಘಾಟು ಮತ್ತು ಘಮ ಉಳಿದ ರೂಪಗಳಲ್ಲಿ ದೊರೆಯುವುದಿಲ್ಲ. ಹಾಗೆಂದು ಅತಿಯಾಗಿ ಸೇವಿಸಿದರೂ ಆರೋಗ್ಯಕ್ಕೆ ಸಮಸ್ಯೆ ತರಬಹುದು. ಹಾಗಾಗಿ ನಿಯಮಿತವಾಗಿ, ಹಿತ-ಮಿತವಾಗಿ ಶುಂಠಿ ಬಳಸುವುದು ಸೂಕ್ತ.

ಇದನ್ನೂ ಓದಿ: Superfood Tomato: ಬಲ್ಲಿರಾ ಟೊಮೆಟೊ ಎಂಬ ಹಣ್ಣಿನ ಸದ್ಗುಣಗಳನ್ನು?

Exit mobile version