Site icon Vistara News

Glasses or Lenses?: ಕನ್ನಡಕವೋ ಕಾಂಟ್ಯಾಕ್ಟ್‌ ಲೆನ್ಸ್‌ ಬೇಕೋ? ಇದನ್ನು ಓದಿ, ನೀವೇ ನಿರ್ಧರಿಸಿ!

Glasses or Lenses

ಕಣ್ಣಿಗೆ ಪವರ್‌ ಇದ್ದರೆ ಆಗಾಗ ಕಾಡುವ ಪ್ರಶ್ನೆ- ಕನ್ನಡಕ ಹಾಕಬೇಕೆ ಅಥವಾ ಕಾಂಟ್ಯಾಕ್ಟ್‌ ಲೆನ್ಸ್‌ ಹಾಕಬೇಕೆ? ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಂಡರೂ ದೃಷ್ಟಿದೋಪ ಸರಿಪಡಿಸುವುದು ಇದರ ಪ್ರಧಾನ ಉದ್ದೇಶವೆಂಬುದು ನಿಜ. ಆದರೆ ಜೊತೆಗೊಂದಿಷ್ಟು ಇದೆಯಲ್ಲ… ಕೊಸರು! ಇವೆರಡಕ್ಕೂ ಅವುಗಳದ್ದೇ ಆದ ಇತಿ-ಮಿತಿಗಳಿವೆ. ಅದರಲ್ಲೂ ಜೇಬಿಗೆಷ್ಟು ಭಾರ, ಯಾವುದು ಆರಾಮದಾಯಕ, ಧರಿಸುವವರ ಆದ್ಯತೆಗಳೇನು, ಜೀವನಶೈಲಿಗೆ ಹೊಂದುತ್ತದೆಯೇ ಎಂಬ ಹಲವು ವಿಷಯಗಳನ್ನು ಆಧರಿಸಿಯೇ ಆಯ್ಕೆ ಮಾಡುವುದಲ್ಲವೇ? ಇವೆಲ್ಲವುಗಳ ಜೊತೆಗೆ, ಕಣ್ಣಿನ ಆರೋಗ್ಯಕ್ಕೆ ಯಾವುದು ಹಿತ ಎನ್ನುವ ಪ್ರಶ್ನೆ ಮಹತ್ವದ್ದಾಗುತ್ತದೆ. ಯಾವುದು ಹಿತ ಈ (Glasses or Lenses) ಎರಡರೊಳಗೆ?

ಕನ್ನಡಕ

ಶತಮಾನಗಳಿಂದ ಎಲ್ಲರ ದೃಷ್ಟಿದೋಷವನ್ನು ಸರಿಪಡಿಸುತ್ತ ಬಂದಿರುವ ಕನ್ನಡಕಗಳು ಯಾವುದೇ ತಲೆಬಿಸಿ ನೀಡದಂಥವು. ನಿಯಮಿತವಾಗಿ ನೇತ್ರವೈದ್ಯರಲ್ಲಿ ಹೋಗಿ ತಪಾಸಣೆ ಮಾಡಿಸಿಕೊಂಡು, ಕಣ್ಣಿನ ಪವರ್‌ ಎಷ್ಟಿದೆ ಎಂಬುದನ್ನು ನೋಡಿಕೊಂಡರಾಯಿತು. ಇರುವ ಕನ್ನಡಕವನ್ನು ಬದಲಾಯಿಸಬೇಕು ಎಂದಿದ್ದರೆ ವೈದ್ಯರೇ ಅದನ್ನು ಸೂಚಿಸುತ್ತಾರೆ. ಅದರಂತೆ ಕನ್ನಡದ ಬದಲಾಯಿಸಿದರೆ, ಮತ್ತಿನ್ನೇನೂ ಮಾಡಬೇಕಿಲ್ಲ. ಕನ್ನಡದ ಗಾಜನ್ನು ಒರೆಸಿ ಸ್ವಚ್ಛ ಮಾಡುವುದಕ್ಕಿಂತ ಹೆಚ್ಚಿನ ನಿರ್ವಹಣೆಯನ್ನು ಅದು ಬೇಡುವುದಿಲ್ಲ. ಇದು ದೃಷ್ಟಿ ದೋಷಕ್ಕೆ ಮದ್ದಷ್ಟೇ ಅಲ್ಲ, ಧೂಳು, ಬಿಸಿಲು, ಹಾನಿಕಾರಕ ಕಿರಣಗಳಿಂದಲೂ ರಕ್ಷಣೆಯನ್ನು ನೀಡಬಲ್ಲದು. ಅದರಲ್ಲೂ ಕೆಲವು ಸುಧಾರಿತ ಫೋಟೋಕ್ರೋಮಿಕ್‌ ಕನ್ನಡಕಗಳು ನೂರು ಪ್ರತಿಶತ ಅತಿನೇರಳೆ ಕಿರಣಗಳನ್ನು ತಡೆಗಟ್ಟಬಲ್ಲವು. ಈ ಕೆಲಸವನ್ನು ಯಾವುದೇ ಲೆನ್ಸ್‌ಗಳೂ ಮಾಡಲಾರವು. ಅವರವರ ಮುಖಮಂಡಲಕ್ಕೆ ಕಳೆಗಟ್ಟಿಸುವಂಥ ಸುಂದರ ಫ್ರೇಮ್‌ಗಳನ್ನು ಆಯ್ದುಕೊಂಡರೆ, ಕನ್ನಡಕವೂ ಫ್ಯಾಷನ್‌ ಘೋಷಣೆಯನ್ನು ಹೊರಡಿಸಬಲ್ಲದು. ಆದರೊಂದು, ಕನ್ನಡಕವನ್ನು ಹಾಕುವುದು ಅನಿವಾರ್ಯ ಎಂದಾಗ, ಕೆಲವೊಮ್ಮೆ ಅದು ಸಮಸ್ಯೆಯನ್ನೂ ಸೃಷ್ಟಿಸಬಲ್ಲದು. ಉದಾ, ಆಡುವುದು, ಓಡುವುದು ಮುಂತಾದ ದೈಹಿಕ ಚಟುವಟಿಕೆಗಳು ಮುಖ್ಯವಾಗಿದ್ದಾಗ ಕನ್ನಡಕ ತೊಡಕೆನಿಸುತ್ತದೆ. ನೃತ್ಯ, ನಟನೆಯಂಥ ಕಲೆಗಳಲ್ಲಿ ಕನ್ನಡಕ ಅಡಚಣೆ ಕೊಡುತ್ತದೆ. ಹೀಗೆ ಬಳಕೆದಾರರ ಮಿತ್ರ ಎನಿಸುವ ಕನ್ನಡಕವೂ ಕೆಲವೊಮ್ಮೆ ಕಣ್‌ ಕಣ್‌ ಬಿಡಿಸುತ್ತದೆ.

ಕಾಂಟ್ಯಾಕ್ಟ್‌ ಲೆನ್ಸ್‌

ಶತಮಾನಗಳ ಇತಿಹಾಸವಿಲ್ಲದ ಇದು, ಆಧುನಿಕ ಕಾಲದ್ದು. ಇಂದಿನ ಹಲವು ರೀತಿಯ ಅಗತ್ಯಗಳು ಮತ್ತು ಬದಲಾವಣೆಗಳಿಗೆ ಹೇಳಿ ಮಾಡಿಸಿದಂತದ್ದು. ಕನ್ನಡಕದ ಭಾರದಿಂದ ಮುಕ್ತಿ ನೀಡುವ ಇದು, ಮುಖದ ಸೌಂದರ್ಯವನ್ನು ಇದ್ದಂತೆಯೇ ಉಳಿಸುತ್ತದೆ. ಮದುವೆ, ನಾಮಕರಣದಂಥ ಸಾಮಾಜಿಕ ಕಾರ್ಯಕ್ರಮಗಳಿರಲಿ, ಆಟ, ಓಟದಂಥ ದೈಹಿಕ ಚಟುವಟಿಕೆಗಳಿರಲಿ, ನೃತ್ಯ-ನಟನೆಯಂಥ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿ- ಸಂದರ್ಭ ಯಾವುದೇ ಆದರೂ ಕಾಂಟ್ಯಾಕ್ಟ್‌ ಲೆನ್ಸ್‌ ಬಳಕೆ ಸೂಕ್ತವಾದದ್ದು. ವಾತಾವರಣದಲ್ಲಿ ತೇವ ಹೆಚ್ಚಿದ್ದಾಗ ಅಥವಾ ಮಾಸ್ಕ್‌ ಧರಿಸಿದಾಗ ಕನ್ನಡಕದ ಗಾಜಿನಂತೆ ಲೆನ್ಸ್‌ ಮಸುಕಾಗುವುದಿಲ್ಲ. ಹಾಗಾಗಿ ಕ್ರಿಯಾತ್ಮಕ ದೃಷ್ಟಿಯಿಂದಲೂ ಇದು ಕನ್ನಡಕಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸುತ್ತದೆ. ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುವುದರಲ್ಲಿ ಇನ್ನೂ ಕೆಲವು ಲಾಭಗಳಿವೆ. ದೃಷ್ಟಿಯ ವ್ಯಾಪ್ತಿ ಕನ್ನಡಕ ಹಾಕಿದ ಸಂದರ್ಭಕ್ಕಿಂತ ಹೆಚ್ಚು ವಿಶಾಲವಾಗಿರುತ್ತದೆ ಲೆನ್ಸ್‌ನಲ್ಲಿ. ಜೊತೆಗೆ ನಿಖರತೆ ಮತ್ತು ಸ್ಪಷ್ಟತೆಯೂ ಅಧಿಕ. ಅದರಲ್ಲೂ ತೀವ್ರ ಅಸ್ಟಿಗ್ಮ್ಯಾಟಿಸಂ ಇರುವವರಲ್ಲಿ ದೃಷ್ಟಿಯ ನಿಖರತೆಯನ್ನು ಕನ್ನಡಕಕ್ಕಿಂತ ಸಾಕಷ್ಟು ಹೆಚ್ಚಿಸಬಲ್ಲದು ಕಾಂಟ್ಯಾಕ್ಟ್‌ ಲೆನ್ಸ್‌. ಎಲ್ಲಕ್ಕಿಂತ ಮುಖ್ಯವಾಗಿ ದೃಷ್ಟಿ ದೋಷ ಇರುವುದನ್ನು ಜಗಜ್ಜಾಹೀರು ಮಾಡದೆಯೇ, ಇದನ್ನು ಬಳಸಬಹುದು.

ಇದನ್ನೂ ಓದಿ: Rock Salt Or Powder Salt: ಬೆಳ್ಳನೆಯ ಪುಡಿ ಉಪ್ಪು ಆರೋಗ್ಯಕರವೇ ಅಥವಾ ಕಲ್ಲುಪ್ಪೇ?

ಜಾಗ್ರತೆ ಅಗತ್ಯ

ಕಾಂಟ್ಯಾಕ್ಟ್‌ ಲೆನ್ಸ್‌ಗಳು ತುಟ್ಟಿ. ಕನ್ನಡಕಗಳಂತೆ ಕಿಸೆಗೆ ಹಗುರವಲ್ಲ ಇವು. ಜೊತೆಗೆ ಇವುಗಳನ್ನು ಸದಾ ಬಳಸುತಿದ್ದರೆ ಕಣ್ಣುಗಳು ತೇವ ಕಳೆದುಕೊಂಡು ಶುಷ್ಕವಾಗುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇವುಗಳನ್ನು ಬಳಸುವಾಗ ಕೈಗಳ ಸ್ವಚ್ಛತೆಯ ಬಗ್ಗೆ ಜಾಗ್ರತೆ ಅಗತ್ಯ. ಹಾಗಿಲ್ಲದಿದ್ದರೆ ಕಣ್ಣಿಗೆ ಸೋಂಕು ಉಂಟಾಗಬಹುದು. ಈ ಕಾರಣದಿಂದಲೇ ಕನ್ನಡಕಗಳಿಗೆ ಹೋಲಿಸಿದರೆ, ಲೆನ್ಸ್‌ ಬಳಕೆದಾರರಲ್ಲಿ ಸೋಂಕಿನ ಪ್ರಮಾಣ ಹೆಚ್ಚು. ಲೆನ್ಸ್‌ಗಳು ಮತ್ತು ಅವುಗಳ ಡ್ರಾಪ್ಸ್‌ ವ್ಯಾಲಿಡಿಟಿಯನ್ನು ಆಗಾಗ ಪರಿಶೀಲಿಸುವುದು ಬಹುಮುಖ್ಯ. ಲೆನ್ಸ್‌ ಧರಿಸಿ ಈಜುವುದು, ರಾತ್ರಿ ನಿದ್ದೆ ಮಾಡುವುದು ಮುಂತಾದವು ಸಲ್ಲದು.

Exit mobile version