Site icon Vistara News

GOOD NEWS: ಡಯಾಬಿಟಿಸ್‌, ಹೃದಯ, ಕಿಡ್ನಿ ಕಾಯಿಲೆಯ ಔಷಧಗಳ ದರ ಇಳಿಕೆ ಶೀಘ್ರ

medecine

ನವ ದೆಹಲಿ: ಕೇಂದ್ರ ಸರ್ಕಾರವು ಡಯಾಬಿಟಿಸ್‌, ಹೃದಯ, ಕಿಡ್ನಿ ಮತ್ತು ಇತರ ಕಾಯಿಲೆಗಳ ಉಪಶಮನಕ್ಕೆ ಬಳಸುವ ಔಷಧಗಳ ಮಾರಾಟದಲ್ಲಿ ಲಾಭಾಂಶವನ್ನು ನಿಗದಿಪಡಿಸುವ ಮೂಲಕ ದರವನ್ನು ಇಳಿಸಲು ನಿರ್ಧರಿಸಿದೆ.

ಸರ್ಕಾರ ಔಷಧ ಉತ್ಪಾದಕರ ದರ ಮತ್ತು ಎಂಆರ್‌ಪಿ ದರದ ನಡುವಣ ವ್ಯತ್ಯಾಸವನ್ನು (Trade margin) ನಿರ್ಧರಿಸಲಿದೆ. ಇದರಿಂದ ಸರ್ಕಾರಕ್ಕೆ ಈ ಔಷಧಗಳ ದರ ನಿಯಂತ್ರಣಕ್ಕೆ ಸಾಧ್ಯವಾಗಲಿದೆ.

ಮಧುಮೇಹ, ಹೃದಯ ಮತ್ತು ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಇದರಿಂದ ಔಷಧಗಳ ವೆಚ್ಚ ಇಳಿಕೆಯಾಗಲಿದೆ. ಶೀಘ್ರದಲ್ಲಿಯೇ ಈ ಔಷಧಗಳ ಟ್ರೇಡ್‌ ಮಾರ್ಜಿನ್‌ ಅನ್ನು ಸರ್ಕಾರ ಪ್ರಕಟಿಸಲಿದೆ.

ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರವು ( NPPA) ೨೦೧೮-೧೯ರಲ್ಲಿ ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಬಳಸುವ ೪೨ ಔಷಧಗಳ ದರಗಳಿಗೆ ಮಿತಿ ವಿಧಿಸಿತ್ತು. ಇದರ ಪರಿಣಾಮ ೫೨೬ ಔಷಧ ಬ್ರ್ಯಾಂಡ್‌ಗಳ ದರ ಕಡಿತವಾಗಿತ್ತು. ಇದೇ ಮಾದರಿಯನ್ನು ಅನುಸರಿಸಿ ಮಧುಮೇಹ, ಹೃದಯ, ಕಿಡ್ನಿ ಕಾಯಿಲೆ ಉಪಶಮನಕ್ಕೆ ಬಳಸುವ ಔಷಧಗಳ ದರ ಇಳಿಸಲು ಎನ್‌ಪಿಪಿಎ ಸಿದ್ಧತೆ ನಡೆಸಿದೆ.

ಎನ್‌ಪಿಪಿಎ ನಡೆಸಿದ ಅಧ್ಯಯನದ ಪ್ರಕಾರ ಮಾತ್ರೆಗಳ ದರವನ್ನು ಆಧರಿಸಿ ಮಾರಾಟಗಾರರ ಲಾಭಾಂಶ ವ್ಯತ್ಯಾಸವಾಗುತ್ತದೆ. ಉದಾಹರಣೆಗೆ ೨ ರೂ. ಮಾತ್ರೆಗೆ ಬಹುತೇಕ ಬ್ರ್ಯಾಂಡ್‌ಗಳು ೫೦% ಮಾರ್ಜಿನ್‌ ೫೦% ತನಕ ಇರುತ್ತದೆ. ದರ ೧೫-೨೫ ರೂ. ನಡುವೆ ಇದ್ದರೆ ಮಾರ್ಜಿನ್‌ ೪೦% ಗಿಂತ ಕಡಿಮೆ ಇರುವುದಿಲ್ಲ. ೫೦-೧೦೦ ರೂ. ದರದ ಮಾತ್ರೆಗಳ ಕೆಟಗರಿಯಲ್ಲಿ ಕನಿಷ್ಠ ೨.೯೭% ಔಷಧಗಳಲ್ಲಿ ಮಾರ್ಜಿನ್‌ ೫೦%-೧೦೦% ತನಕ ಇರುತ್ತದೆ.

ಮಧುಮೇಹ ಔಷಧಗಳ ದರ ೫೦% ಇಳಿಕೆ ಸಂಭವ

ಡಯಾಬಿಟಿಸ್‌ ಕಾಯಿಲೆಯ ಉಪಶಮನಕ್ಕೆ ಬಳಸುವ ಜನುವಿಯಾ (Januvia-Sitagliptin) ಮಾತ್ರೆಯ ದರಗಳು ಶೀಘ್ರ ೫೦% ಅಗ್ಗವಾಗಲಿದೆ. ಜನುವಿಯಾ ಮಾತ್ರೆಯ ಪೇಟೆಂಟ್‌ ಅವಧಿ ಜುಲೈನಲ್ಲಿ ಅಂತ್ಯವಾಗುತ್ತಿರುವುದು ಇದಕ್ಕೆ ಕಾರಣ. ಹೀಗಾಗಿ ಈ ಮಾತ್ರೆಯ ಜೆನರಿಕ್‌ ಆವೃತ್ತಿ ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು, ದರ ತಗ್ಗಲಿದೆ. ದಿನಕ್ಕೆ ೪೫ ರೂ. ವೆಚ್ಚವಾಗುವ ಈ ಮಾತ್ರೆಯ ದರ ೮-೧೮ ರೂ.ಗೆ ಇಳಿಕೆಯಾಗುವ ನಿರೀಕ್ಷೆ ಇದೆ.

Exit mobile version