Site icon Vistara News

Guava For Weight Loss: ತೂಕ ಇಳಿಸಬೇಕೆ? ಪೇರಲೆ ಹಣ್ಣು ತಿನ್ನಿ!

Guava For Weight Loss

ಸೀಬೆ ಕಾಯಿ, ಪೇರಲೆ ಕಾಯಿ, ಚೇಪೆ ಕಾಯಿ (Guava for Weight Loss) ಮುಂತಾದ ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಈ ಕಾಯಿ ಮತ್ತು ಹಣ್ಣು ಯಾರಿಗೆ ಇಷ್ಟವಿಲ್ಲ? ಅದರಲ್ಲೂ ಆಚೀಚೆ ಮನೆಗಳಲ್ಲಿ ಇದರ ಮರವಿದ್ದರೆ, ಅವರೆಷ್ಟೇ ಕರೆದು ಕೊಟ್ಟರೂ ಕದ್ದು ತಿಂದಿದ್ದು ಇನ್ನೂ ರುಚಿ! ಮಿಡಿಗಾಯಿ, ಎಳೆಗಾಯಿ, ದೋರಗಾಯಿ, ಅರೆಹಂಪು, ಕಳಿತ ಹಣ್ಣು- ಹೀಗೆ ಯಾವುದನ್ನೂ ಬಿಡದೆ ಬೋಳಿಸಿ ತಿನ್ನುವವರಿದ್ದಾರೆ. ತಿನ್ನಲು ಬಾಯಿಗೆ ರುಚಿ, ಮನಸ್ಸಿಗೆ ತೃಪ್ತಿ ಎನ್ನುವುದನ್ನು ಮೀರಿ ಬೇರೆ ಕಾರಣಗಳುಂಟೆ ಪೇರಲೆಕಾಯಿ ತಿನ್ನುವುದಕ್ಕೆ?

ಪೇರಲೆಕಾಯಿ ತೂಕ ಇಳಿಸುವವರಿಗೆ ಅವಶ್ಯವಾಗಿ ಬೇಕಾದ್ದು ಎಂದರೆ ಬಹಳಷ್ಟು ಜನರಿಗೆ ಖುಷಿಯಾದೀತು. ಹೌದು ತೂಕ ಇಳಿಸುವವರಿಗೆ ಅಗತ್ಯವಾಗಿ ಬೇಕಾದ್ದು ಪೌಷ್ಟಿಕ ಆಹಾರ ಮತ್ತು ಆ ಆಹಾರವನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎಂಬ ಅರಿವು. ಹಸಿವಾದಾಗ ಸುಲಭಕ್ಕೆ ಪ್ಯಾಕ್‌ ಕತ್ತರಿಸಿ ಕರಂಕುರುಂ ಮೆಲ್ಲುವುದರ ಬದಲಿಗೆ ಆರೋಗ್ಯಕರ ತಿನಿಸುಗಳನ್ನು ಅಗತ್ಯವಿದ್ದಷ್ಟೇ ಪ್ರಮಾಣದಲ್ಲಿ ತಿನ್ನಬೇಕು. ಇಂಥ ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುವುದು ಸೀಬೆ ಕಾಯಿ.

Guava salad

ಕ್ಯಾಲರಿ ಕಡಿಮೆ

ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವ ಈ ಹಣ್ಣಿನಲ್ಲಿ ಕ್ಯಾಲರಿ ಕಡಿಮೆ, ಕೊಬ್ಬು ಬಹುತೇಕ ಇಲ್ಲವೇ ಇಲ್ಲ. ಇದರಲ್ಲಿ ಅಗತ್ಯ ಪ್ರಮಾಣದ ನಾರು ಇರುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡಿ, ಕಳ್ಳ ಹಸಿವೆಯನ್ನು ನೀಗಿಸುತ್ತದೆ. ಹೆಚ್ಚು ಕಾಲದವರೆಗೆ ಹಸಿವಾಗದಂತೆ ತಡೆಯುತ್ತದೆ. ಬಾಯಾಡುವುದಕ್ಕೆ ಇನ್ನೇನಿದೆ ಎಂದು ತಡಕುವುದನ್ನು ತಡೆಯುತ್ತದೆ. ಜೊತೆಗೆ, ದೇಹಕ್ಕೆ ಅಗತ್ಯವಾದ ಖನಿಜಗಳು, ವಿಟಮಿನ್‌ ಸಿ ಮತ್ತಿತರ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ಹಾಗಾಗಿ ತೂಕ ಇಳಿಸುವ ಯೋಜನೆಯಿದ್ದರೆ ಪೇರಲೆ ಹಣ್ಣನ್ನು ಸಂತೋಷದಿಂದ ನಿಮ್ಮ ಆಹಾರಯೋಜನೆಯಲ್ಲಿ ಸೇರಿಸಿಕೊಳ್ಳಿ. ಆದರೆ ಇದನ್ನು ಆಹಾರದ ಭಾಗವಾಗಿ ಬಳಸಿಕೊಳ್ಳುವುದು ಹೇಗೆ? ಪೇರಲೆಯನ್ನು ಕಚ್ಚಿ ತಿನ್ನುವುದು ಮಾತ್ರವೇ ಎಲ್ಲರಿಗೂ ಪರಿಚಿತವಾದದ್ದು. ಹೀಗೆ ಎಷ್ಟು ತಿನ್ನಲು ಸಾಧ್ಯ? ದಿನವೂ ಅದನ್ನೇ ಮಾಡಿದರೆ ಬೋರಾಗುವುದಿಲ್ಲವೇ? ಇಲ್ಲಿದೆ ಪರಿಹಾರ.

ಸೀಬೆ ಸ್ಮೂದಿ

ತೂಕ ಇಳಿಸುವವರಿಗೆ ಸ್ಮೂದಿ ಉತ್ತಮ ಆಹಾರ. ಯಾವುದೇ ಹಣ್ಣುಗಳನ್ನು ಇಡಿಯಾಗಿ ಅಥವಾ ಉಳಿದೆಲ್ಲ ಹಣ್ಣುಗಳ ಜೊತೆಯಾಗಿ ಹಾಕಿ ಸ್ಮೂದಿ ಮಾಡಿಕೊಳ್ಳಬಹುದು. ಇದಕ್ಕೆ ಪೇರಲೆಯನ್ನೂ ಸೇರಿಸಿದರೆ ಉತ್ತಮ. ಇದು ಸ್ಮೂದಿಯ ರುಚಿ ಮತ್ತು ಘಮವನ್ನು ಇಮ್ಮಡಿಗೊಳಿಸುತ್ತದೆ. ಮಾತ್ರವಲ್ಲ, ಪೌಷ್ಟಿಕಾಂಶವನ್ನೂ ಹೆಚ್ಚಿಸುತ್ತದೆ. ಬಾಳೆಹಣ್ಣು, ಬೆರ್ರಿಗಳು ಮುಂತಾದ ನಿಮ್ಮ ಆಯ್ಕೆಯ ಹಣ್ಣುಗಳ ಜೊತೆಗೆ ಸೀಬೆಯನ್ನೂ ಸೇರಿಸಿ. ಜೊತೆಗೆ ಹಾಲು ಅಥವಾ ಮೊಸರು- ಯಾವುದು ಸರಿ ಹೊಂದುತ್ತದೆ ಎಂಬುದೂ ನಿಮ್ಮದೇ ಆಯ್ಕೆ. ಇದರ ಮೇಲೆ ಚಿಯಾ, ಅಗಸೆ ಮುಂತಾದ ಬೀಜಗಳನ್ನು ಉದುರಿಸಿದರೆ ಸತ್ವಯುತ ಸ್ಮೂದಿ ಸಿದ್ಧ.

ಸೀಬೆ ಸಲಾಡ್

ತೂಕ ಇಳಿಸುವವರಿಗೆ ಸಲಾಡ್‌ ಇಲ್ಲದೆ ಮುಂದೆ ಹೋಗುವುದೇ ಇಲ್ಲ. ಕಡಿಮೆ ಕೊಬ್ಬಿರುವ ಅಗತ್ಯ ಸತ್ವಗಳನ್ನು ಹೊಂದಿರುವ ಸಲಾಡ್‌ಗಳು ದೇಹಕ್ಕೆ ಚೈತನ್ಯ ನೀಡುವುದರ ಜೊತೆಗೆ ಕೊಬ್ಬು ಕರಗಿಸಲು ನೆರವಾಗುತ್ತವೆ. ಇಂಥ ಯಾವುದೇ ಸಲಾಡ್‌ಗೂ ಪೇರಲೆಯನ್ನು ಸೇರಿಸಬಹುದು. ತರಕಾರಿ ಸಲಾಡ್‌, ಹಣ್ಣುಗಳ ಸಲಾಡ್‌ ಎರಡಕ್ಕೂ ಪೇರಲೆಯ ರುಚಿ ಮತ್ತು ಪರಿಮಳ ಹೊಂದಿಕೊಳ್ಳುತ್ತದೆ. ಹೊತೆಗೆ ಒಂದಿಷ್ಟು ನಿಂಬೆ ರಸ ಅಥವಾ ನಿಮ್ಮಿಷ್ಟ ಯಾವುದೇ ಕಡಿಮೆ ಕೊಬ್ಬಿನ ಡ್ರೆಸ್ಸಿಂಗ್‌ ಬಳಸಬಹುದು.

ಪರ್ಯಾಯ ತಿನಿಸು

ಸಿಹಿ ತಿನ್ನಬೇಕೆಂಬ ಬಯಕೆ ಮೂಡಿದಾಗೆಲ್ಲಾ ಸಕ್ಕರೆ ಭರಿತ ತಿಂಡಿಗಳೇ ಬೇಕೆಂದಿಲ್ಲ. ರುಚಿಯಾದ ಪೇರಲೆ ಹಣ್ಣನ್ನೂ ಮೆಲ್ಲಬಹುದು. ತೂಕ ಇಳಿಸುವವರಿಗೆ ಸಕ್ಕರೆಯನ್ನು ಬಿಡುವುದು ಅತಿ ಮುಖ್ಯ. ಪುಟ್ಟದೊಂದು ಚಾಕಲೇಟ್‌ ಅಥವಾ ಕ್ಯಾಂಡಿ ಸಹ ತೂಕ ಇಳಿಸುವ ದಾರಿಯಲ್ಲಿ ಅಡಚಣೆಯನ್ನೇ ತರುತ್ತದೆ. ನೈಸರ್ಗಿಕವಾಗಿ ಸಿಹಿ ರುಚಿಯಿರುವ ತಿನಿಸುಗಳು ಕೃತಕ ಸಿಹಿಗಳಿಗಿಂತ ಯಾವಾಗಲೂ ಉತ್ತಮ. ಹಾಗಾಗಿ ಸಿಹಿ ತಿನ್ನುವ ಆಸೆಗೆ ಸಿಹಿಯಾದ ಪೇರಲೆ ಹಣ್ನು ಒಳ್ಳೆಯ ಪರ್ಯಾಯ

ಸೀಬೆ ಚಹಾ

ಹೌಹಾರಬೇಡಿ! ಇದರ ಹಣ್ಣಿನಿಂದಲ್ಲ, ಸೀಬೆಯ ಎಲೆಗಳಿಂದ ಚಹಾ ತಯಾರಿಸಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ, ದೇಹದ ಚಯಾಪಚಯ ಹೆಚ್ಚಿಸುವ ಸಾಮರ್ಥ್ಯ ಸೀಬೆಯ ಎಲೆಗಳಿಗಿವೆ. ಹಾಗಾಗಿ ತೂಕ ಇಳಿಸುವವರಿಗೆ ಸೀಬೆ ಎಲೆಯ ಚಹಾ ಅಥವಾ ಕಷಾಯ ಒಳ್ಳೆಯ ಆಯ್ಕೆ. ಒಂದು ಹಿಡಿ ಸೀಬೆಯ ಎಲೆಗಳನ್ನು ಚೆನ್ನಾಗಿ ತೊಳೆದು ಒಂದು ಕಪ್‌ ನೀರಲ್ಲಿ ಕುದಿಸಿ. ಹತ್ತು ನಿಮಿಷಗಳ ನಂತರ ಇದನ್ನು ಸೋಸಿ ಬೆಚ್ಚಗಿರುವಾಗಲೇ ಕುಡಿಯಿರಿ. ರುಚಿಗೆ ಬೇಕಿದ್ದರೆ ನಿಂಬೆರಸ ಮತ್ತು ತುಸುವೇ ಜೇನುತುಪ್ಪ ಸೇರಿಸಿಕೊಳ್ಳಬಹುದು.

ಇದನ್ನೂ ಓದಿ: Healthy Food For Women: 40 ದಾಟಿದ ಮಹಿಳೆ ಮರೆಯದೆ ತಿನ್ನಬೇಕಾದ ಆಹಾರಗಳ್ಯಾವುವು ಗೊತ್ತೇ?

Exit mobile version