Site icon Vistara News

Hair care | ಫಳಫಳಿಸುವ ತಲೆಕೂದಲಿಗೆ ಸತ್ವಯುತ ಆಹಾರವೇ ಮೂಲ

Hair care

ಆ ಕಾಲವೊಂದಿತ್ತು, ನೀರೆಯರೆಂದರೆ ನೀಳವೇಣಿಯರು ಎಂಬ ಭಾವ ತಾನಾಗಿತ್ತು. ಕೂದಲು ಎಂಥೆಂಥ ಕೆಲಸಕ್ಕೆಲ್ಲಾ ಸಂಗಾತಿ… ಚಂದ ಕಾಣಲು, ವಯ್ಯಾರ ಮಾಡಲು, ನಾಚಿಕೆ ತೋರಲು, ಬೇಸರ ಕಳೆಯಲು, ಹೊತ್ತು ಹಾಳುಮಾಡಲು, ಹೆರಳು ಹಾಕುವ ನೆವದಲ್ಲಿ ಹರಟೆ ಹೊಡೆಯಲು, ಕೋಪ ತೋರಲು, ಜಗಳ ಕಾಯಲು… ಒಂದೇ ಎರಡೇ. ಈಗಿನವರಿಗೆ ಉದ್ದ ಕೂದಲೇ ಅಪರೂಪ, ಹಾಗಾದರೆ ಈ ಭಾವಗಳನ್ನೆಲ್ಲಾ ತೋರಿಸುವುದಿಲ್ಲವೇ ಎಂದರೆ, ಹಾಗಲ್ಲ. ಸಿರಿಮುಡಿಯ ಝಳಪಿಲ್ಲದೆಯೇ ಇದಿಷ್ಟೂ ಭಾವಗಳನ್ನು ಪ್ರಕಟಿಸುವುದು ಅನಿವಾರ್ಯ. ಉಪ್ಪಿನಕಾಯಿ ಇಲ್ಲದಿದ್ದರೇನು, ಊಟ ಮಾಡುವುದಿಲ್ಲವೇ? ಹಾಗೆಯೆ. ಆದರೆ ಉದ್ದ ಕೂದಲು ಇದ್ದವರ ಸಂಖ್ಯೆ ಕಡಿಮೆಯಾಗಿರುವುದಂತೂ ಹೌದು. ಯಾರನ್ನು ಕೇಳಿದರೂ, ʻಕೂದಲು ತುಂಬಾ ಉದುರುತ್ತಿದೆʼ ಎಂದೇ ದೂರು ಹೇಳುತ್ತಾರೆ. ಈಗಿನ ಗಾಳಿ, ನೀರು, ಆಹಾರ ಎಲ್ಲದರಲ್ಲೂ ಸಮಸ್ಯೆ ಇರುವಾಗ ಇದು ಸಹಜವೇ. ಮಾತ್ರವಲ್ಲ, ನಮ್ಮ ವಂಶವಾಹಿಗಳು, ವಯಸ್ಸು, ಆರೋಗ್ಯ, ತೆಗೆದುಕೊಳ್ಳುವ ಔಷಧ, ಆಹಾರ ಸಹ ನಮ್ಮ ಕೂದಲ ಮೇಲೆ ಪರಿಣಾಮ ಬೀರುತ್ತದೆ.

ವಯಸ್ಸು ಮತ್ತು ವಂಶವಾಹಿಗಳು ನಮ್ಮ ನಿಯಂತ್ರಣದಲ್ಲಿ ಇಲ್ಲದ ವಿಷಯಗಳು. ಔಷಧಗಳ ಬಳಕೆ ಕೆಲವೊಮ್ಮೆ ಅಗತ್ಯವಾದರೂ ಆಹಾರ ಸೇವನೆ ನಮ್ಮ ಹತೋಟಿಯಲ್ಲಿರುವುದು ಹೌದಲ್ಲ. ಸಮತೋಲಿತ ಆಹಾರದ ಸೇವನೆಯಿಂದ ಕೂದಲುಗಳ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅಪೌಷ್ಟಿಕ ಆಹಾರದಿಂದ ಕೂದಲು ಉದುರುವುದನ್ನು ತಡೆಗಟ್ಟಲಾಗದು. ಕೂದಲುಗಳ ಸಮೃದ್ಧಿಗೆ ವಿಟಮಿನ್‌ ಡಿ, ಬಿ೧೨, ಕಬ್ಬಿಣ, ಬಯೋಟಿನ್‌, ರೈಬೋಫ್ಲೇವಿನ್‌ ಮತ್ತು ಕೆಲವು ಸೂಕ್ಷ್ಮ ಪೋಷಕಾಂಶಗಳು ಅಗತ್ಯವಾಗಿ ಬೇಕು. ಇವೆಲ್ಲವಕ್ಕೂ ಪೂರಕವಾದ ಆಹಾರಗಳ ಪಟ್ಟಿ ಇಲ್ಲಿದೆ.

ಮೊಟ್ಟೆ: ಕೂದಲುಗಳ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಪ್ರೊಟೀನ್‌ ಮತ್ತು ಬಯೋಟಿನ್‌ಗಳು ಮೊಟ್ಟೆಯಲ್ಲಿ ಸಮೃದ್ಧವಾಗಿವೆ. ಕೂದಲು ಉದುರುವುದು ದೇಹದಲ್ಲಿ ಪ್ರೊಟೀನ್‌ ಕೊರತೆಯ ಸಂಕೇತವೂ ಆಗಿರಬಹುದು. ಕೂದಲ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಕೆರಾಟಿನ್‌ ಎಂಬ ಪ್ರೊಟೀನ್‌ ಉತ್ಪತ್ತಿ ಮಾಡಲು ಬಯೋಟಿನ್‌ ಅವಶ್ಯಕ. ಮೊಟ್ಟೆಯಲ್ಲಿ ಜಿಂಕ್‌, ಸೆಲೆನಿಯಂ ಮುಂತಾದ ಹಲವು ಬಗೆಯ ಅಗತ್ಯ ಪೋಷಕಾಂಶಗಳಿದ್ದು, ದೇಹಾರೋಗ್ಯ ಉತ್ತಮಗೊಳ್ಳಲು ನೆರವಾಗುತ್ತವೆ.

ಇದನ್ನೂ ಓದಿ | National Nutrition week | ಹೊಟ್ಟೆಯಲ್ಲಿದೆ ನಿಮ್ಮ ಆರೋಗ್ಯದ ಗುಟ್ಟಿನ ಮೊಟ್ಟೆ

ಬೆರಿಗಳು: ಋತುಮಾನದಲ್ಲಿ ದೊರೆಯುವ ಹಲವು ರೀತಿಯ ಕಾಡು ಹಣ್ಣುಗಳು ಸಹ ಸೂಕ್ಷ್ಮ ಪೌಷ್ಟಿಕಾಂಶಗಳು ಮತ್ತು ವಿಟಮಿನ್‌ ಸಿಗಳ ಆಗರ. ಬೆಟ್ಟದ ನೆಲ್ಲಿ ಕಾಯಿ, ನೇರಳೆ, ಅಮಟೆ, ಬಿಂಬಲದಂಥ ಹಲವು ಕಾಡು ಫಲಗಳು ಎ ಮತ್ತು ಸಿ ವಿಟಮಿನ್‌ ಹೇರಳವಾಗಿ ಹೊಂದಿವೆ. ಇದಲ್ಲದೆ, ಚೆರ್ರಿ, ಸ್ಟ್ರಾಬೆರಿಯಂಥ ಹಣ್ಣುಗಳೂ ಸಹ ವಿಟಮಿನ್‌ ಸಿ ಜೀವಸತ್ವದ ಖನಿಗಳು. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವುದೇ ಅಲ್ಲದೆ, ಕೂದಲ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ಕೊಲಾಜಿನ್‌ ಉತ್ಪತ್ತಿಗೆ ಮತ್ತು ಕಬ್ಬಿಣದ ಅಂಶವನ್ನು ಹೀರಿಕೊಳ್ಳುವುದಕ್ಕೆ ಸಹಾಯಕವಾಗಿತ್ತದೆ.

ಸೊಪ್ಪು: ಪಾಲಕ್‌, ಮೆಂತೆ, ಸಬ್ಬಸಿಗೆ ಮುಂತಾದ ಸೊಪ್ಪುಗಳು ಕಬ್ಬಿಣ, ವಿಟಮಿನ್‌ಗಳು ಮತ್ತು ಫೋಲೇಟ್‌ಗಳನ್ನು ಹೊಂದಿರುವಂಥವು. ಈ ಆಹಾರಗಳು ಮಾತ್ರವೇ ಅಲ್ಲ, ಬೀಟಾ ಕ್ಯಾರೋಟಿನ್‌ ಸಾಕಷ್ಟು ಪ್ರಮಾಣದಲ್ಲಿರುವ ಬೀಟ್‌ರೂಟ್‌, ಸಿಹಿ ಗೆಣಸು ಮುಂತಾದ ತರಕಾರಿಗಳು ಸಹ ಕೂದಲ ಆರೋಗ್ಯ ವೃದ್ಧಿಗೆ ನೆರವಾಗುತ್ತವೆ.

ಎಣ್ಣೆ ಬೀಜಗಳು: ಒಮೇಗಾ ೩ ಮತ್ತು ವಿಟಮಿನ್‌ ಇ ವಿಫುಲವಾಗಿರುವ ಬಾದಾಮಿ, ಸೂರ್ಯಕಾಂತಿ ಬೀಜ, ಚಿಯಾ ಮತ್ತು ಅಗಸೆ ಬೀಜ ಮುಂತಾದವು ನಮ್ಮ ಆಹಾರದ ಅಗತ್ಯ ಭಾಗ ಆಗಿರಲೇ ಬೇಕಾದಂಥವು. ಜಿಂಕ್‌ ಸೆಲೆನಿಯಂನಂಥ ಇನ್ನಿತರ ಪೌಷ್ಟಿಕಾಂಶಗಳನ್ನೂ ಹೊಂದಿರುವ ಈ ಎಣ್ಣೆ ಬೀಜಗಳು, ನಮ್ಮ ದೇಹಕ್ಕೆ ಹೆಚ್ಚುವರಿ ಕ್ಯಾಲರಿಗಳನ್ನು ಅಷ್ಟಾಗಿ ಸೇರಿಸದೆಯೇ ಉಪಕಾರ ಮಾಡುತ್ತವೆ.

ನಾವೇನು ತಿನ್ನುತ್ತೇವೆ ಎಂಬುದು ನಮ್ಮ ಆರೋಗ್ಯದ ಮೂಲಕ ಪ್ರತಿಫಲಿಸುತ್ತದೆ. ನಳನಳಿಸುವ ಆರೋಗ್ಯ ಬೇಕೆ? ಸತ್ವಯುತ ಆಹಾರ ತಿನ್ನುವುದೊಂದೇ ಮಾರ್ಗ. ಇದಕ್ಕೆ ಕಳ್ಳದಾರಿಗಳಿಲ್ಲ!

ಇದನ್ನೂ ಓದಿ | National nutrition week | ಕಣ್ಣಿನ ಆರೋಗ್ಯಕ್ಕಾಗಿ ಈ ಆಹಾರ ನಿಮ್ಮ ಕಣ್ಣಿಗೆ ಬೀಳಲಿ!

Exit mobile version