Site icon Vistara News

Hair Growth Tips: ಕೂದಲು ಉದುರುವುದಕ್ಕೆ ಬೀಟಾ ಕ್ಯಾರೊಟಿನ್‌ ಮದ್ದು!

Hair Growth Tips

ದೇಹದ ಆರೋಗ್ಯ ರಕ್ಷಣೆಯಲ್ಲಿ ಉತ್ಕರ್ಷಣ ನಿರೋಧಕಗಳ ಪಾತ್ರ ಹಿರಿದು. ರೋಗಗಳನ್ನು ದೂರ ಇರಿಸುವುದು ಮಾತ್ರವಲ್ಲ, ಹಲವು ವಿಷಯಗಳು ಏರುಪೇರಾಗದಂತೆ ನಿರ್ವಹಿಸಲು ಸಹಾಯವನ್ನೂ ಮಾಡುತ್ತದೆ. ಉದಾಹರಣೆಗೆ ಹೇಳುವುದಾದರೆ, ಕೂದಲು ಉದುರದಂತೆ ಕಾಪಾಡಿಕೊಳ್ಳಲು ನಮಗೆ ಬೀಟಾ ಕ್ಯಾರೊಟಿನ್‌ ಎಂಬ ಉತ್ಕರ್ಷಣ ನಿರೋಧಕ ಸಹಾಯ ಮಾಡುತ್ತದೆ. ಆದರೆ ಆ ಸತ್ವ ನಮಗೆ ದೊರೆಯುವುದು ಹೇಗೆ? ಯಾವ ಆಹಾರಗಳಿಂದ ಅದು ದೊರೆಯುತ್ತದೆಂದು ತಿಳಿದರೆ, ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಕೂದಲಿನ ಸಮಸ್ಯೆಗೆ ಬೀಟಾ ಕ್ಯಾರೊಟಿನ್‌ ಹೇಗೆ ನೆರವಾಗುತ್ತದೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ಈ ಸತ್ವವನ್ನು ವಿಟಮಿನ್‌ ಎ ಆಗಿ ದೇಹ ಪರಿವರ್ತಿಸಿಕೊಳ್ಳುತ್ತದೆ. ಎ ಜೀವಸತ್ವವು ತಲೆಯ ಚರ್ಮದ ತೇವವನ್ನು ಕಾಪಾಡಿಕೊಂಡು, ಕೂದಲಿನ ಬುಡವನ್ನು ಸುದೃಢಗೊಳಿಸುತ್ತದೆ. ಬೇರು ಭದ್ರವಾಗಿದ್ದಾಗ ಸತ್ವಗಳನ್ನು ಪಡೆಯುವುದು ಕಷ್ಟವಲ್ಲ. ಹೀಗೆ ಕೂದಲು ಉದುರುವುದು ಕಡಿಮೆಯಾಗಿ, ನಯವಾದ, ಹೊಳಪಿನ ಕೂದಲನ್ನು ಪಡೆಯಬಹುದು. ಇದಕ್ಕೆ ಬೇಕಾದ (Hair Growth Tips) ಆಹಾರಗಳು ಯಾವುವು?

ಗೆಣಸು

ವಿಟಮಿನ್‌ ಎ ಆಗಿ ಪರಿವರ್ತನೆ ಆಗಬಲ್ಲಂಥ ಬೀಟಾ ಕ್ಯಾರೊಟಿನ್‌ಗಳು ಇದರಲ್ಲಿ ಹೇರಳವಾಗಿವೆ. ಜೊತೆಗೆ, ಪ್ರೊಟೀನ್‌, ಕಬ್ಬಿಣ, ವಿಟಮಿನ್‌ ಸಿಯಂಥ ಸತ್ವಗಳು ಇದರಲ್ಲಿ ತುಂಬಿವೆ. ಇದರಿಂದ ತಲೆಯ ಚರ್ಮದ ಆರೋಗ್ಯವನ್ನು ಸುಧಾರಿಸುವುದು ಮಾತ್ರವಲ್ಲ, ಕೂದಲು ದುರ್ಬಲವಾಗಿ ತುಂಡಾಗದಂತೆಯೂ ತಡೆಯಬಹುದು. ಹೀಗಾಗಿ ಕೂದಲು ಉದುರುವುದು ನಿಂತು, ಗಾತ್ರದಲ್ಲೂ ಸುಧಾರಣೆ ಆಗುತ್ತದೆ.

ದಪ್ಪ ಮೆಣಸು

ಇವುಗಳಲ್ಲಿ ಕೆಂಪು ಬಣ್ಣದವುಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚು. ಇದಲ್ಲಿರುವ ಬೀಟಾ ಕ್ಯಾರೊಟಿನ್‌ ಮತ್ತು ವಿಟಮಿನ್‌ ಸಿ ಅಂಶಗಳು ಹೆಚ್ಚಿನ ಪ್ರಮಾಣದ ಕೊಲಾಜಿನ್‌ ಉತ್ಪಾದನೆಗೆ ನೆರವಾಗುತ್ತವೆ. ಕೊಲಾಜಿನ್‌ ಹೆಚ್ಚು ಉತ್ಪಾದನೆ ಆದಷ್ಟಕ್ಕೂ ಕೂದಲಿನ ಬಲವರ್ಧನೆಯಾಗುತ್ತದೆ. ಈ ಮೂಲಕ ಉದುರುವುದನ್ನು ಕಡಿಮೆ ಮಾಡಬಹುದು.

ಪಾಲಕ್‌ ಸೊಪ್ಪು

ಕೇವಲ ಪಾಲಕ್‌ ಮಾತ್ರವಲ್ಲ, ಯಾವುದೇ ಹಸಿರು ಸೊಪ್ಪುಗಳ ಸೇವನೆ ಕೂದಲಿನ ಆರೋಗ್ಯದಲ್ಲಿ ಸುಧಾರಣೆಯನ್ನು ತರಬಲ್ಲದು. ಇದರಲ್ಲಿರುವ ವಿಟಮಿನ್‌ ಸಿ, ಇ, ಕಬ್ಬಿಣದ ಸತ್ವಗಳು ಕೂದಲಿನ ಒಟ್ಟಾರೆ ಆರೋಗ್ಯಕ್ಕೆ ಬಹಳಷ್ಟು ಒಳಿತು ಮಾಡುತ್ತವೆ. ಕೂಲಿನ ಬುಡವನ್ನು ಭದ್ರಮಾಡಿ, ತುಂಡಾಗದಂತೆ ನೋಡಿಕೊಂಡು, ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತವೆ. ಹಾಗಾಗಿ ಪಾಲಕ್‌ ಸೇರಿದಂತೆ ಯಾವುದೇ ಹಸಿರು ಸೊಪ್ಪುಗಳ ಸೇವನೆ ಕೂದಲಿನ ಬೆಳವಣಿಗೆಗೆ ಉಪಯುಕ್ತ.

ಕ್ಯಾರೆಟ್‌

ಬೀಟಾ ಕ್ಯಾರೊಟಿನ್‌ ಸಾಂದ್ರತೆಯ ವಿಷಯದಲ್ಲಿ ಗಜ್ಜರಿ ಸಾಕಷ್ಟು ಹೆಸರಾಗಿದೆ. ಇದು ಕೂದಲಿನ ಬೆಳವಣಿಗೆಗೆ ಮಾತ್ರವಲ್ಲ, ತಲೆಯ ಚರ್ಮದ ಆರೋಗ್ಯ ಸುಧಾರಣೆಯಲ್ಲೂ ಮಹತ್ವದ ಕೊಡುಗೆ ನೀಡುತ್ತದೆ. ಕೂದಲಿನ ಬಲ ವೃದ್ಧಿಸಿ, ಗಾತ್ರವನ್ನು ಹೆಚ್ಚಿಸುತ್ತದೆ.

ಮೆಲನ್‌ಗಳು

ಈ ಹಣ್ಣುಗಳಲ್ಲಿ ವಿಟಮಿನ್‌ ಸಿ, ಬೀಟಾ ಕ್ಯಾರೊಟಿನ್‌ ಸೇರಿದಂತೆ ಹಲವು ರೀತಿಯ ಉತ್ಕರ್ಷಣ ನಿರೋಧಕಗಳು ಇವೆ. ಕೂದಲಿನ ಬುಡದ ತೇವವನ್ನು ಕಾಪಾಡಲು ಇವು ಸಹಕಾರಿ. ಅಂದರೆ ಇವೆಲ್ಲ ನೈಸರ್ಗಿಕ ಕಂಡೀಶನರ್‌ಗಳಂತೆ ಕೆಲಸ ಮಾಡುತ್ತವೆ. ಇದರಿಂದ ಕೂದಲಿನ ಕೋಶಗಳು ಆರೋಗ್ಯಯುತವಾಗಿದ್ದು, ಕೇಶರಾಶಿ ನಳನಳಿಸುತ್ತದೆ.

ಇದನ್ನೂ ಓದಿ: Mango For Diabetes: ಮಧುಮೇಹಿಗಳೂ ಮಾವಿನಹಣ್ಣಿನ ರುಚಿ ಸವಿಯಬಹುದೇ? ಇಲ್ಲಿದೆ ಉತ್ತರ!

ವಿಟಮಿನ್‌ ಸಿ ಆಹಾರಗಳು

ಬೆರ್ರಿಗಳು ಮತ್ತು ಸಿಟ್ರಸ್‌ ಹಣ್ಣುಗಳು ಈ ಪಟ್ಟಿಯಲ್ಲಿ ಮೊದಲು ನಿಲ್ಲುತ್ತವೆ. ಇವುಗಳಲ್ಲಿ ವಿಟಮಿನ್‌ ಎ ಮಾತ್ರವಲ್ಲ, ಹಲವು ರೀತಿಯ ಖನಿಜಗಳು, ಫ್ಲೆವನಾಯ್ಡ್‌ಗಳು ವಿಫುಲವಾಗಿವೆ. ಇವೆಲ್ಲವೂ ಕೊಲಾಜಿನ್‌ ಉತ್ಪಾದನೆಗೆ ನೆರವಾಗಿ, ಕೂದಲಿನ ಆಯಸ್ಸನ್ನೂ ಹೆಚ್ಚಿಸುತ್ತವೆ. ಇಂಥವುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಕೂದಲಿನ ಆರೋಗ್ಯಕ್ಕೆ ಮಾತ್ರವೇ ಅಲ್ಲ, ದೇಹದ ಒಟ್ಟಾರೆ ಆರೋಗ್ಯ ಸುಧಾರಣೆಯನ್ನೂ ಸಾಧಿಸಬಹುದು.

Exit mobile version