ʻಸರ್ವ ರೋಗಕ್ಕೆ ಒಂದೇ ಮದ್ದುʼ ಅಂತ ಆಗುವುದುಂಟೇ? ಕೆಲವೊಮ್ಮೆ ಉಂಟು! ಉದಾ, ತಲೆಕೂದಲ ಸಮಸ್ಯೆ ಏನೇ ಇದ್ದರೂ ನಮ್ಮ ಅಜ್ಜಿಯರ ಕಾಲದಲ್ಲಿ ಇರುತ್ತಿದ್ದುದು ಒಂದೇ ಮದ್ದು- ತಲೆಗೆ ಹದವಾದ ಎಣ್ಣೆ ಮಸಾಜ್ ಮಾಡುವುದು! ನಿಜ, ತಲೆ ನೋವಿನಿಂದ ಪ್ರಾರಂಭವಾಗಿ, ಕೂದಲು ಉದುರುವುದಕ್ಕೆ, ತಲೆ ಹೊಟ್ಟಿಗೆ, ಸೀಳುಗೂದಲಿಗೆ, ಬಾಲನೆರೆಗೆ- ಹೀಗೆ ಎಲ್ಲದಕ್ಕೂ ಎಣ್ಣೆ ಮಸಾಜ್ ಅವರ ಉತ್ತರವಾಗಿತ್ತು. ಆದರೆ ಎಣ್ಣೆಗಳನ್ನು ಅವರೇ ತಯಾರು ಮಾಡುತ್ತಿದ್ದರಿಂದ, ಯಾವ ಸಮಸ್ಯೆಗೆ ಎಂಥಾ ಎಣ್ಣೆ ಬೇಕು ಎನ್ನುವುದು ಅವರಿಗೆ ಗೊತ್ತಿರುತ್ತಿತ್ತು. ನಮಗೀಗ ಗೊತ್ತಿಲ್ಲವಲ್ಲ, ಇದು ಸಮಸ್ಯೆ. ಎಂಥಾ ಕೂದಲಿಗೆ ಯಾವ ರೀತಿಯ ಎಣ್ಣೆ ಸೂಕ್ತ? (Hair Oil Tips) ವಿವರಗಳು ಈ ಲೇಖನದಲ್ಲಿವೆ.
ಯಾವ ರೀತಿಯ ಕೂದಲು?
ನೇರ ಕೂದಲು
ಯಾವುದೇ ಗುಂಗುರು, ಸುರುಳಿಗಳಿಲ್ಲದೇ ನೇರವಾಗಿ ಇಳಿಬೀಳುವ ಕೂದಲುಗಳಿವು. ಇವು ನೋಡುವುದಕ್ಕೆ ಮೃದುವಾದ, ಹೊಳೆಯುವ ಗುಚ್ಛದಂತೆ ಕಾಣುವ ಕೇಶಗಳು. ಪರಿಣಾಮವಾಗಿ, ಕೂದಲಿಗೆ ಸ್ವಲ್ಪ ಎಣ್ಣೆ ಹಾಕಿದರೂ, ತೈಲವನ್ನು ಹಿಡಿದಿಟ್ಟುಕೊಳ್ಳದೆ ಹೊರಸೂಸುತ್ತವೆ, ಅಂಟಾಗಿ ಜಿಡ್ಡಾಗಿ ಕಾಣುತ್ತವೆ. ಇವುಗಳಿಗೆ ಹೆಚ್ಚು ಜಿಡ್ಡಿಲ್ಲದ ಲಘುವಾದ ತೈಲಗಳು ಸೂಕ್ತ. ಬಾದಾಮಿ ಎಣ್ಣೆ, ಜೊಜೂಬಾ ಎಣ್ಣೆ, ಆರ್ಗಾನ್ ಎಣ್ಣೆಯಂಥವು ಇದಕ್ಕೆ ಸೂಕ್ತ.
ಅಲೆಯಾದ ಕೂದಲು
“S” ಆಕಾರದಲ್ಲಿ ಕಾಣುವ ಕೂದಲುಗಳಿವು. ಅಲ್ಲಲ್ಲಿ ಸುರುಳಿಗಳಿದ್ದು ನೋಡುವುದಕ್ಕೆ ಸುಂದರ ಕೂದಲುಗಳಿವು. ಆದರೆ ಕೂದಲು ಒಣಗುವ ಮತ್ತು ಸಿಕ್ಕಾಗುವ ಸಾಧ್ಯತೆ ನೇರ ಕೂದಲಿಗಿಂತ ಅಧಿಕ. ಹಾಗಾಗಿ ಹೆಚ್ಚು ಉದುರಲೂಬಹುದು. ಇಂಥ ಕೂದಲಿಗೆ ಮಧ್ಯಮ ಪ್ರಮಾಣದಲ್ಲಿ ಜಿಡ್ಡಿರುವಂಥ ತೈಲಗಳು ಬೇಕು. ತೀರಾ ಲಘುವಾದ ತೈಲಗಳು ನಾಟುವುದೇ ಇಲ್ಲ. ಕೊಬ್ಬರಿ ಎಣ್ಣೆ ಇದಕ್ಕೆ ತಕ್ಕುದಾದದ್ದು. ಬೇರಾವುದೇ ತೈಲಗಳನ್ನು ಮಾಡಿಕೊಳ್ಳುವುದಾದರೂ ಅದಕ್ಕೆ ಆಧಾರವಾಗಿ ಕೊಬ್ಬರಿ ಎಣ್ಣೆಯನ್ನೇ ಉಪಯೋಗಿಸುವುದು ಸೂಕ್ತ.
ದಪ್ಪ, ಗುಂಗುರು ಕೂದಲು
ಇಂಥ ಕೂದಲು ಹೆಚ್ಚು ಉದ್ದ ಬೆಳೆಯಲಾರದು. ಬದಲಿಗೆ ದಪ್ಪನಾಗಿ ಬೆಳೆದು, ಗುಂಗುರಾಗಿ ಭುಜಕ್ಕಿಂತ ಸ್ವಲ್ಪ ಕೆಳಗಿಳಿಯಬಲ್ಲದಷ್ಟೆ. ಇದನ್ನು ಸರಿಗಾಣಿಸಿ ಇರಿಸಿಕೊಳ್ಳುವುದು ಸವಾಲಿನ ಕೆಲಸ. ಇದಕ್ಕೆ ಘನವಾದ ತೈಲಗಳೇ ಬೇಕು. ಇಲ್ಲದಿದ್ದರೆ ಬಾಚಣಿಕೆ ಮೇಲಿಂದ ಕೆಳಕ್ಕಿಳಿಯುವುದೂ ಕಷ್ಟವಾಗಬಹುದು. ಹಾಗಾಗಿ ಆಲಿವ್ ಎಣ್ಣೆ, ಎಳ್ಳೆಣ್ಣೆ, ಹರಳೆಣ್ಣೆಯಂಥ ದಿವಿನಾದ ತೈಲಗಳ ಮೊರೆ ಹೋಗುವುದು ಒಳ್ಳೆಯದು. ಒಂದೊಮ್ಮೆ ಈ ತೈಲಗಳ ವಾಸನೆ ಇಷ್ಟವಾಗದಿದ್ದರೆ, ಕೊಬ್ಬರಿ ಎಣ್ಣೆಯನ್ನೇ ನಿತ್ಯವೂ ಲೇಪಿಸಬೇಕಾಗುತ್ತದೆ.
ಸಪೂರ ಕೂದಲು
ಇದು ಕೂದಲು ಉದುರಿ ತೆಳ್ಳಗಾಗಿದ್ದಲ್ಲ, ಇದ್ದಿದ್ದೇ ಸಪೂರ. ಇವು ಸಹ ಬೇಗ ತುಂಡಾಗಿ, ಶಕ್ತಿಹೀನವಾದಂತೆ ಕಾಣುತ್ತವೆ. ಇವುಗಳಿಗೂ ಲಘುವಾದ ತೈಲಗಳೇ ಸೂಕ್ತ. ಜೊಜೂಬಾ ತೈಲ, ತೆಂಗಿನ ಹಾಲಿನ ತೈಲ ಮುಂತಾದ ತೀರಾ ಜಿಡ್ಡಿಲ್ಲದ, ಅಂಟಾಗದಂಥ ಎಣ್ಣೆಗಳು ಇಂಥ ಕೂದಲಿಗೆ ಬೇಕಾಗುತ್ತದೆ. ಅಂಟಾಗುತ್ತದೆಂದು ಎಣ್ಣೆಯನ್ನೇ ಹಾಕದಿದ್ದರೆ ಕೂದಲ ಆರೋಗ್ಯ ಬಿಗಡಾಯಿಸುವುದು ನಿಶ್ಚಿತ.
ತಲೆಯ ಚರ್ಮದಲ್ಲೂ ವಿಧಗಳಿವೆ!: ನಿಮ್ಮದು ಹೇಗಿದೆ?
ಸಾಮಾನ್ಯ ಚರ್ಮ
ಇಂಥ ತಲೆಚರ್ಮಗಳಲ್ಲಿ ಅಧಿಕವಾದ ತೈಲ ಉತ್ಪಾದನೆ ಆಗುವುದಿಲ್ಲ. ತಲೆಸ್ನಾನ ಮಾಡುವುದು ಒಂದೆರಡು ದಿನ ಆಚೀಚೆಯಾದರೆ, ಕೂದಲೆಲ್ಲ ಅಂಟಾಗಿ, ಜಲೀಜಾಗಿ ಮುಂದ್ದೆಯಾಗುವುದಿಲ್ಲ. ಇಂಥವರಿಗೆ ಕೊಬ್ಬರಿ ಎಣ್ಣೆ ಒಳ್ಳೆಯ ಆಯ್ಕೆ.
ಎಣ್ಣೆ ಚರ್ಮ
ತಲೆಯ ಚರ್ಮದಲ್ಲಿ ತೈಲ ಅಥವಾ ಸೇಬಂ ಅತಿಯಾಗಿ ಉತ್ಪಾದನೆ ಆಗುತ್ತದೆ ಕೆಲವರಿಗೆ. ಬೇಗನೆ ಕೂದಲು ಕೊಳೆಯಾಗುವುದು, ಅಂಟಾಗುವುದು, ಜೀವವೇ ಇಲ್ಲದಂತೆ ಕಾಣುವುದು, ಹೊಟ್ಟಾಗುವುದೆಲ್ಲ ಇದರ ಅಡ್ಡ ಪರಿಣಾಮಗಳು. ಇಂಥವರು ಲಘುವಾದ ಎಣ್ಣೆಗಳನ್ನೇ ಕೂದಲಿಗೆ ಲೇಪಿಸಬೇಕು. ಜೊಊಬಾ ಎಣ್ಣೆ, ಟೀಟ್ರೀ ಎಣ್ಣೆ, ಗ್ರೇಪ್‌ಸೀಡ್ ಎಣ್ಣೆಯಂಥವು ಸೂಕ್ತ.
ಇದನ್ನೂ ಓದಿ: Herbal Supplement: ಅರಿಶಿನ ಸೇರಿದಂತೆ ಹರ್ಬಲ್ ಸಪ್ಲಿಮೆಂಟ್ ಸೇವಿಸುತ್ತಿದ್ದೀರಾ? ಹಾಗಾದರೆ ಎಚ್ಚರ!
ಒಣ ಚರ್ಮ
ಇವರಲ್ಲಿ ತಲೆಯ ಚರ್ಮಕ್ಕೆ ಹೆಚ್ಚು ತೇವವೇ ಇರುವುದಿಲ್ಲ; ಹಾಗಾಗಿ ಒಣಗಿ ಜೀವವಿಲ್ಲದಂತೆ ಕಾಣುತ್ತದೆ. ಇದರಿಂದಾಗಿ ತಲೆಯಲ್ಲಿ ಹೊಟ್ಟಾಗುವುದು, ತುರಿಕೆ, ಕಿರಿಕಿರಿ ಮಾಮೂಲಾಗುತ್ತದೆ. ಹಾಗೆಯೇ ಬಿಟ್ಟರೆ ಎಕ್ಸಿಮಾ, ಸೋರಿಯಾಸಿಸ್‌ನಂಥ ತೊಂದರೆಗಳು ಬರಬಹುದು. ಹಾಗಾಗಿ ಕೊಬ್ಬರಿ ಎಣ್ಣೆ, ಅವಕಾಡೊ ಎಣ್ಣೆ, ಆಲಿವ್ ಎಣ್ಣೆಯಂಥವು ಇವರಿಗೆ ಒಳ್ಳೆಯದ ಆಯ್ಕೆ.