ಕೂದಲಿಗೆ ಎಣ್ಣೆ (Hair Oil Tips) ಹಾಕುವ ಬಗ್ಗೆ ನಾನಾ ಅಭಿಪ್ರಾಯಗಳಿವೆ. ಹಾಕುವುದೇ ಇಲ್ಲ ಎನ್ನುವವರಿಂದ ಹಿಡಿದು, ಹಾಕಿದ ಎಣ್ಣೆ ತೆಗೆಯುವುದೇ ಇಲ್ಲ ಎನ್ನುವವರೆಗೆ, ದೇಶದ ಉದ್ದಗಲಕ್ಕೆ ಹಲವು ಮಾತುಗಳು ಕೇಳಬರುತ್ತವೆ. ಅದರಲ್ಲೂ ಮಕ್ಕಳ ಕೂದಲಿಗೆ ಎಣ್ಣೆ ಹಾಕುವ ಅಥವಾ ಪ್ರೀತಿ ಪಾತ್ರರ ತಲೆಗೆ ಎಣ್ಣೆ ತಟ್ಟುವ ಸಂಪ್ರದಾಯಕ್ಕೆ ಶತಮಾನಗಳ ಇತಿಹಾಸವಿದೆ. ಹೀಗಿರುವಾಗ ದಿನವೂ ರಾತ್ರಿ ಎಣ್ಣೆ ಹಾಕಿ (ಅಂದರೆ… ತಲೆಗೆ!) ಬೆಳಗ್ಗೆ ಕೂದಲು ಸ್ವಚ್ಛ ಮಾಡುವುದು ಸರಿಯೇ? ಇದರಿಂದ ಲಾಭ ಹೆಚ್ಚೋ ನಷ್ಟವೋ ಎಂಬ ಅನುಮಾನ ಹಲವರಲ್ಲಿ ಇರಬಹುದು. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಲಾಭಗಳೇನು?
ಕೂದಲಿಗೆ ಸರಿಯಾದ ತೇವವನ್ನು ನೀಡುವದು ಮುಖ್ಯವಾದ ಕೆಲಸ. ರಾತ್ರಿಡಿ ತೈಲದಂಶವನ್ನು ಕೂದಲಲ್ಲೇ ಉಳಿಸಿದರೆ, ಬೆಳಗಿನವರೆಗೆ ಆಳವಾಗಿ ಕಂಡೀಶನಿಂಗ್ ಮಾಡುವುದಕ್ಕೆ ಸಾಧ್ಯವಿದೆ. ಕೂದಲಿನ ಬುಡ ಮತ್ತು ತಲೆಯ ಚರ್ಮವನ್ನು ಚೆನ್ನಾಗಿ ಕಂಡೀಶನಿಂಗ್ ಮಾಡಿ, ತೇವವನ್ನು ಸರಿಯಾಗಿ ಹೀರಿಕೊಳ್ಳುವುದಕ್ಕೆ ಸಾಕಷ್ಟು ಸಮಯಾವಕಾಶ ದೊರೆಯುತ್ತದೆ. ತಲೆಗೆ ಎಣ್ಣೆ ಮಸಾಜ್ ಮಾಡಿದ ಕೆಲವೇ ತಾಸುಗಳಲ್ಲಿ ತಲೆಸ್ನಾನ ಮಾಡಿದಾಗ, ಈ ಕೆಲಸ ಪೂರ್ಣ ಆಗಿರುವವ ಸಂಭವ ಕಡಿಮೆ.
ಸುರುಳಿ ಕೂದಲಿಗೆ ಲಾಭ
ನೇರವಾದ, ನಯವಾದ ಕೂದಲುಗಳಿಗಿಂತ, ಒರಟಾದ, ಗುಂಗುರಾದ ಕೂದಲುಗಳಿಗೆ ಅಹೋರಾತ್ರಿ ತೈಲದಲ್ಲಿ ನೆನೆಸುವುದು ಹೆಚ್ಚು ಲಾಭದಾಯಕ. ಇದರಿಂದ ಕೂದಲಿನ ಒರಟುತನ ಕಡಿಮೆಯಾಗಿ, ತೇವ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಕೂದಲಿನ ನೈಸರ್ಗಿಕ ತೈಲದಂಶವನ್ನು ಉಳಿಸಿಕೊಂಡು, ಕೂದಲಿಗೆ ಹೆಚ್ಚಿನ ಆರೈಕೆ ಒದಗಿಸಲು ಅನುಕೂಲ.
ಚರ್ಮದ ಆರೋಗ್ಯ
ತಲೆಯ ಚರ್ಮ ಕಣ್ಣಿಗೆ ಕಾಣುವುದಿಲ್ಲ, ಆದರೆ ಸೂಕ್ಷ್ಮವಾದ ಪ್ರಕೃತಿಯದ್ದು. ತಲೆಯ ಚರ್ಮ ಶುಷ್ಕವಾದರೆ ಹೊಟ್ಟು, ತುರಿಕೆ ಗಂಟು ಬೀಳುತ್ತದೆ. ಇದನ್ನೆಲ್ಲ ನಿವಾರಿಸಿಕೊಳ್ಳಲು ಇರುವ ಸರಳವಾದ ನೈಸರ್ಗಿಕವಾದ ಉಪಾಯವೆಂದರೆ ರಾತ್ರಿಯ ಸಮಯದಲ್ಲಿ ತಲೆಯ ಚರ್ಮಕ್ಕೆ ಲಘುವಾಗಿ ಎಣ್ಣೆ ಮಸಾಜ್ ಮಾಡುವುದು. ಇದರಿಂದ ತಲೆಯ ಭಾಗಕ್ಕೆ ರಕ್ತ ಸಂಚಾರ ಹೆಚ್ಚಿ, ಕೂದಲು ಸೊಂಪಾಗಿ ಬೆಳೆಯುವುದಕ್ಕೆ ಸಹಾಯವಾಗುತ್ತದೆ.
ರಕ್ಷಣೆ
ತೈಲದಂಶವು ಕೂದಲು ಮತ್ತು ತಲೆಯ ಚರ್ಮದ ಮೇಲೆ ತೆಳುವಾದ ರಕ್ಷಣಾ ಕವಚವನ್ನು ನಿರ್ಮಿಸಬಲ್ಲದು. ಈ ಕವಚವು ವಾತಾವರಣದ ಮಾಲಿನ್ಯ, ದೂಳು, ಹೊಗೆ ಮುಂತಾದವುಗಳಿಂದ ರಕ್ಷಣೆಯನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ತಲೆಗೆ ಉಪಯೋಗಿಸುವ ಹಲವು ರೀತಿಯ ಜೆಲ್, ಬಣ್ಣದಂಥ ರಾಸಾಯನಿಕಗಳು ಮತ್ತು ಹೀಟ್ ಸ್ಟೈಲಿಂಗ್ ನಿಂದ ಆಗಬಹುದಾದ ಹಾನಿಯನ್ನೂ ತಗ್ಗಿಸುತ್ತದೆ.
ತೊಂದರೆಗಳೂ ಇವೆ
ಹಾಗೆಂದು ಕೂದಲಿಗೆ ತೈಲ ಹಾಕುವುದರಿಂದ ಎಲ್ಲವೂ ಸರಾಗ ಎಂದು ಭಾವಿಸುವಂತಿಲ್ಲ. ಅಹೋರಾತ್ರಿ ತೈಲದಲ್ಲಿ ಕೂದಲು ನೆನೆಸುವುದರಿಂದ ತಲೆಯ ಚರ್ಮದ ಸೂಕ್ಷ್ಮ ರಂಧ್ರಗಳು ಕಟ್ಟಿಕೊಳ್ಳಬಹುದು. ಇದರಿಂದ ತ್ವಚೆಯ ಆ ಭಾಗ ಸೋಂಕುಗಳಿಗೆ ಸುಲಭ ತುತ್ತಾಗುತ್ತದೆ. ಹಾಗಾಗಿ ಮಾರನೇ ದಿನ ತಲೆಸ್ನಾನ ಮಾಡುವಾಗ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ನೀಡಬೇಕು.
ಕೊಳೆ
ತಲೆಯಲ್ಲಿ ದೀರ್ಘ ಕಾಲ ಎಣ್ಣೆ ಉಳಿಯಿತು ಎಂದಾದರೆ, ಕೂದಲು ಬೇಗನೇ ಕೊಳೆಯಾಗುತ್ತವೆ. ತಲೆಯಲ್ಲಿ ಹೊಟ್ಟು, ತುರಿಕೆಗಳು ಪ್ರಾರಂಭವಾಗುತ್ತವೆ. ಹೊಳೆಯುವ ಸ್ವಚ್ಛವಾದ ಕೂದಲಿಗೂ ಜಿಡ್ಡುಜಿಡ್ಡಾದ ಮೆತ್ತಿಕೊಂಡು ಮುದ್ದೆಯಂತಾದ ಕೂದಲಿಗೂ ಎಲ್ಲಿಂದೆಲ್ಲಿಯ ಹೋಲಿಕೆ! ಹಾಗಾಗಿ ಎಣ್ಣೆಯಂಶ ಅತಿಯಾಗಿ ಉಳಿಯದಂತೆ ಸ್ವಚ್ಛ ಮಾಡುವುದು ಮುಖ್ಯ. ಹಾಗೆಂದು ತಲೆ ಚರ್ಮದ ನೈಸರ್ಗಿಕ ತೈಲವೂ ತೊಳೆದು ಹೋಗುವಂತೆ ಶಾಂಪೂ ಹಾಕಿ ಉಜ್ಜುವುದು ಬೇಡ.
ಇದನ್ನೂ ಓದಿ: Health Tips: ಮಧ್ಯಾಹ್ನದ ನಂತರ ಏನಾದರು ಸಿಹಿತಿನಿಸು ತಿನ್ನಬೇಕು ಅನಿಸುತ್ತಿದೆಯೆ? ಇದಕ್ಕೂ ಇದೆ ಕಾರಣ
ಯಾವ ಎಣ್ಣೆ?
ತಲೆಗೆ ಹಾಕುವುದಕ್ಕೆಂದೇ ಮಾರುಕಟ್ಟೆಯಲ್ಲಿ ಲೆಕ್ಕವಿಲ್ಲದಷ್ಟು ತೈಲಗಳು ಲಭ್ಯವಿವೆ. ಇವುಗಳಲ್ಲಿ ಯಾವುದನ್ನು ಹಾಕುವುದು? ಅಸಂಖ್ಯಾತ ಗಿಡಮೂಲಿಕೆಗಳನ್ನು ಸೇರಿಸಿದ, ಚಿತ್ರವಿಚಿತ್ರ ಬಣ್ಣದ ಎಣ್ಣೆಗಳಿಗಿಂತ ಸರಳವಾದ ಕೊಬ್ಬರಿ ಎಣ್ಣೆ ಉತ್ತಮ ಆಯ್ಕೆ. ನಿಮ್ಮ ಎಣ್ಣೆಯನ್ನು ನೀವೇ ತಯಾರಿಸಿಕೊಳ್ಳುವವರಾದರೆ ಆ ಮಾತು ಬೇರೆ. ಹಾಗಲ್ಲದಿದ್ದರೆ, ಶುದ್ಧವಾದ ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆಯಂಥವು ಕೂದಲಿಗೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತವೆ.
ಕೂದಲಿಗೆ ಎಣ್ಣೆ ಹಾಕುವ ಭರದಲ್ಲಿ ತಲೆ ನೆನೆಯುವಂತೆ ಎಣ್ಣೆ ಮೆತ್ತಿಕೊಳ್ಳಬೇಡಿ. ಇದರಿಂದ ಹಾಸಿಗೆ ದಿಂಬುಗಳೂ ಹಾಳಾಗಿ ಹೋಗುತ್ತವೆ. ಎಷ್ಟು ಎಣ್ಣೆ ನಿಮ್ಮ ತಲೆಗೆ ಬೇಕು ಎನ್ನುವುದು ನಿಮ್ಮ ಕೂದಲಿನ ಉದ್ದ, ದಪ್ಪಗಳನ್ನು ಅವಲಂಬಿಸಿದೆ. ತಲೆಯ ಬುಡವನ್ನು ಲಘುವಾಗಿ ಮಸಾಜ್ ಮಾಡಿ, ಉಜ್ಜುವ ಭರದಲ್ಲಿ ಕೂದಲು ಕಿತ್ತುಕೊಳ್ಳಬೇಡಿ. ತೀರಾ ಅಂಟಾದ ಎಣ್ಣೆಯೂ ಸೂಕ್ತವಲ್ಲ. ಹಗುರವಾದ ಎಣ್ಣೆಯನ್ನು ಆಯ್ಕೆ ಮಾಡಿಕೊಳ್ಳಿ.