Site icon Vistara News

Health Article Kannada: ಸ್ವೀಟ್‌ ತಿನ್ನುವ ಚಪಲವೇ? ಆರೋಗ್ಯಕರವಾಗಿ ಸಿಹಿ ತಿನ್ನುವ ಉಪಾಯ ಇಲ್ಲಿದೆ!

Health Article Kannada

ಸಿಹಿ ತಿನ್ನಬೇಕು ಎನಿಸುವುದು ಬಹಳ ಸಾಮಾನ್ಯ. ಸಹಜ ಕೂಡ. ಆಗಾಗ ಎಲ್ಲರಿಗೂ ಸಿಹಿ ತಿನ್ನೋಣ ಎಂದನಿಸುತ್ತದೆ. ಸಂತಸವನ್ನು ಹಂಚಿಕೊಂಡೂ ನಾವ ಸಿಹಿ ತಿನ್ನುತ್ತೇವೆ. ಸಿಹಿ ತಿನ್ನಲು ಕಾರಣಗಳೇ ಬೇಕಾಗಿಲ್ಲ. ಕೆಲವೊಮ್ಮೆ ಹೊತ್ತಲ್ಲದ ಹೊತ್ತಿನಲ್ಲಿ ಸಿಹಿ ಬೇಕೆನಿಸುತ್ತದೆ. ಆದರೆ ಇವೆಲ್ಲ ನಾಲಿಗೆಗೆ ಸಿಹಿಯಾಗಿದ್ರೂ ದೇಹಕ್ಕೆ ಸಿಹಿಯಲ್ಲ ಎಂಬುದೂ ನಮಗೆ ಗೊತ್ತು. ಆದರೆ, ಬಾಯಿ ಚಪಲವನ್ನು ತಡೆಯುವವರ್ಯಾರು ಹೇಳಿ. ಇಂದು ಬೇಡ ಎಂದುಕೊಂಡರೂ ನಾಳೆಯಾದರೂ ಸಿಹಿಯ ಬಲೆಯಲ್ಲಿ ಬೀಳುತ್ತೇವೆ. ಕೆಲವರಿಗೆ ನಿತ್ಯವೂ ಸಿಹಿ ತಿನ್ನುವ ಅಭ್ಯಾಸವಾಗಿಬಿಟ್ಟಿರುತ್ತದೆ. ಸಿಹಿ ಆ ಹೊತ್ತಿಗೆ ತಿನ್ನದೇ ಇದ್ದರೆ, ಅದೇನೋ ಕಸಿವಿಸಿ, ಕಳೆದುಕೊಂಡ ಭಾವ. ಆದರೆ, ಸಿಹಿಯನ್ನು ಕಡಿಮೆ ಮಾಡಬೇಕು, ಹೇಗೆ ಎಂದು ತಿಳಿಯುತ್ತಿಲ್ಲ ಎನ್ನುವವರೂ ಇದ್ದಾರೆ. ಸಿಹಿ ತಿನ್ನಬಾರದೆಂಬ ವೃತವನ್ನು (Health Article Kannada) ಮುರಿದವರೇ ಹೆಚ್ಚು.

ಮನಸ್ಸಿದ್ದಲ್ಲಿ ಮಾರ್ಗವಿದ್ದೇ ಇದೆ

ಸಿಹಿ ಪ್ರಿಯರು ಬೇಸರಿಸಿಕೊಳ್ಳುವ ಅಗತ್ಯವಿಲ್ಲ. ಮನಸ್ಸಿದ್ದಲ್ಲಿ ಮಾರ್ಗವಿದ್ದೇ ಇದೆ. ಸಿಹಿಯ ಅತಿಯಾದ ಚಪಲವನ್ನು ಕಡಿಮೆ ಮಾಡಲು, ಸಿಹಿಯ ಬದಲಾಗಿ ದೇಹಕ್ಕೆ ಹಿತವಾದ ಸಿಹಿಯನ್ನು ಪರ್ಯಾಯವಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕವೂ ಸಿಹಿಯ ಬಯಕೆಯನ್ನು ತಕ್ಕಮಟ್ಟಿಗೆ ಹತ್ತಿಕ್ಕಿಕೊಳ್ಳಬಹುದು. ಫಿಟ್‌ ಆಗಿರುವ ಬಯಕೆಯಿಂದ ಸಿಹಿಯನ್ನು ಬಹಿಷ್ಕರಿಸಲು, ಆದರೆ, ಆಗಾಗ ಸಿಹಿ ತಿನ್ನಬೇಕೆನಿಸುವಾಗ ನಾಲಿಗೆಯನ್ನು ಸಮಾಧಾನಪಡಿಸಲು ತಿನ್ನಬಹುದಾದ ಕೆಲವು ಆರೋಗ್ಯಕರವಾದ ಸಿಹಿಗಳೂ ಇವೆ. ಬನ್ನಿ, ನಿಮ್ಮ ಸಿಹಿ ಚಪಲಕ್ಕೆ ತಣ್ಣೀರೆರಚದಂತೆ ಕೆಲವು ಪರ್ಯಾಯ ಸಿಹಿಗಳಾವುವು ಎಂಬುದನ್ನು ನೋಡೋಣ.

ಚಿಯಾ ಬೀಜದ ಪುಡ್ಡಿಂಗ್‌

ರಾತ್ರಿ ಮಲಗುವ ಮೊದಲೇ ಒಂದೆರಡು ಚಮಚ ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆ ಹಾಕಿ ಫ್ರಿಡ್ಜ್‌ನಲ್ಲಿಡಿ. ಬೆಳಗ್ಗೆ ಅದಕ್ಕೆ ಬೇಕಾದ ಬೀಜಗಳನ್ನೂ, ಒಣಹಣ್ಣುಗಳನ್ನೂ ನೆನೆಸಿ ಸೇರಿಸಬಹುದು. ಖರ್ಜೂರ, ನೆನೆಸಿದ ಒಣದ್ರಾಕ್ಷಿ ಇತ್ಯಾದಿಗಳನ್ನೂ ಹಾಕಬಹುದು. ಸ್ಟ್ರಾಬೆರ್ರಿ ಸೇರಿದಂತೆ ಹಣ್ಣುಗಳನ್ನೂ ಇದಕ್ಕೆ ಸೇರಿಸಬಹುದು. ಒಂದು ಚಮಚ ಜೇನುತುಪ್ಪ ಸೇರಿಸಿ ಇವನ್ನು ಚೆನ್ನಾಗಿ ಮಿಕ್ಸ್‌ ಮಾಡಿ ಸವಿಯಬಹುದು. ರುಚಿಯಾದ ಚಿಯಾ ಪುಡ್ಡಿಂಗ್‌ನಲ್ಲಿ, ಚಿಯಾ ಬೀಜದಲ್ಲಿ ಹೇರಳವಾಗಿರುವ ಪ್ರೊಟೀನ್‌, ನಾರಿನಂಶವೂ ಸೇರಿದಂತೆ, ಇತರ ಒಣಬೀಜಗಳು ಹಾಗೂ ಹಣ್ಣುಗಳ ಪೋಷಕಾಂಶಗಳೂ ಸೇರಿ ಅತ್ಯುತ್ತಮ ಸಂಪೂರ್ಣ ಆಹಾರ ಇದಾಗುತ್ತದೆ. ಬೆಳಗಿನ ಬ್ರೇಕ್‌ಫಾಸ್ಟ್‌ಗೆ ಸುಲಭವಾಗಿ ಮಾಡಿಕೊಳ್ಳಬಹುದಾದ ತಿನಿಸಿದು. ಅರ್ಜೆಂಟಲ್ಲಿ ಆಫೀಸಿಗೆ ಹೊರಡುವ ಮುನ್ನವೂ ಹೊಟ್ಟೆತುಂಬ ಆರೋಗ್ಯಕರ ತಿಂಡಿ ತಿಂದ ಸಂತೃಪ್ತಿಯೂ ನಿಮ್ಮದು.

ಖರ್ಜೂರ

ಆಫೀಸಿನಲ್ಲಿ, ಮನೆಯಲ್ಲಿ ಬಿಡುವಾದಾಗ, ಸ್ನ್ಯಾಕ್ಸ್‌ ಟೈಮ್‌ನಲ್ಲಿ ಏನಾದರೂ ಸಿಹಿ ತಿನ್ನಬೇಕೆನಿಸುವುದು ಸಹಜ. ಹೊರಗೆ ಹೋಗಿ ಸಿಹಿತಿನಿಸು ತಿನ್ನುವ ಬದಲು ಯಾವಾಗಲೂ ಒಂದೆರಡು ಖರ್ಜೂರವನ್ನು ಡಬ್ಬದಲ್ಲಿಟ್ಟುಕೊಳ್ಳಿ. ಒಳ್ಳೆಯ ಕಬ್ಬಿಣಾಂಶವೂ ಇತರ ಪೋಷಕಾಂಶಗಳನ್ನೂ ಹೊಂದಿದ ಖರ್ಜೂರ ನಿಮ್ಮನ್ನು ಸಿಹಿಬಯಕೆಯಿಂದ ದೂರವಿಟ್ಟು ಸಂತೃಪ್ತಗೊಳಿಸುತ್ತದೆ. ಅತಿಯಾಗಿ ತಿನ್ನಬೇಡಿ. ಹಿತಮಿತವಾಗಿ ತಿನ್ನಿ. ತುಂಬ ಸುಸ್ತಾದಾಗ, ದಿಢೀರ್‌ ಶಕ್ತಿ ಬೇಕೆನಿಸಿದಾಗಲೂ ಇದು ಒಳ್ಳೆಯದು.

ಸಿಹಿಗೆಣಸು

ಸಿಹಿಗೆಣಸು ಅತ್ಯುತ್ತಮ ಪೋಷಕಾಂಶಗಳಿರುವ ಗೆಡ್ಡೆ. ಇದರಲ್ಲಿ ಹೇರಳವಾಗಿ ನಾರಿನಂಶ, ಖನಿಜಾಂಶ ಹಾಗೂ ಜೀವಸತ್ವಗಳೂ ಇವೆ. ಸಿಹಿಗೆಣಸನ್ನು ಬೇಯಿಸಿ ಜೊತೆಯಲ್ಲಿ ಡಬ್ಬದಲ್ಲಿ ಹಾಕಿಟ್ಟುಕೊಂಡು ಹೊರಗೆ ಹೊರಟರೆ, ಹಸಿವಾದಾಗ ತಿನ್ನಲು ಯೋಗ್ಯ. ಆರೋಗ್ಯಕ್ಕೂ ಉತ್ತಮ.

ಸ್ಮೂದಿಗಳು

ಸಿಹಿಯ ಬಯಕೆಯಾದಾಗ ಆರೋಗ್ಯಕರವಾಗಿ ತಿನ್ನಬಹುದಾದ ಆಯ್ಕೆಗಳಲ್ಲಿ ಸ್ಮೂದಿಗಳೂ ಒಂದು. ನಿಮಗೆ ಬೇಕಾದ ಸ್ಮೂದಿಯನ್ನು ಬೇಕಾದ ಹಣ್ಣುಗಳನು ಹಾಕಿ ಮಾಡಿ ಕುಡಿಯಬಹುದು. ಆರೋಗ್ಯಕ್ಕೂ ಹಿತ.

ಇದನ್ನೂ ಓದಿ: Health Tips Kannada: ನಿಂತ ಮಳೆ ನೀರಿನಿಂದ ಈ 7 ರೋಗಗಳು ಬರುತ್ತವೆ ಎನ್ನುವುದು ನಿಮಗೆ ಗೊತ್ತೆ?

ಪ್ರೊಟೀನ್‌ ಬಾರ್

ಮನೆಯಲ್ಲಿ ಸಮಯವಿದ್ದಾಗ ಎಲ್ಲ ಒಣ ಬೀಜಗಳನ್ನೂ, ಒಣಹಣ್ಣುಗಳನ್ನೂ ಕ್ರಶ್‌ ಮಾಡಿ, ಚೆನ್ನಾಘಿ ಮಿಕ್ಸ್‌ ಮಾಡಿ, ಚಾಕೋಲೇಟ್‌ನ ಬಾರ್‌ನಂತೆ ಮಾಡಿಟ್ಟುಕೊಂಡು ಫ್ರೀಜರ್‌ನಲ್ಲಿಡಬಹುದು. ಬೇಕಾದಾಗ ಡಬ್ಬದಲ್ಲಿ ಹಾಕಿ ಬ್ಯಾಗ್‌ನಲ್ಲಿಟ್ಟು ಹಸಿವಾದಾಗ ತಿನ್ನಬಹುದು. ಖರ್ಜೂರವನ್ನು ಸೇರಿಸಿದರೆ ಸಿಹಿಯಾಗಿರುವಂತೆ ಮಾಡಿಕೊಳ್ಳಬಹುದು.

Exit mobile version