ವಿಶ್ವದಲ್ಲಿ ಲಭ್ಯವಿರುವ ಮರದಲ್ಲಿ ಆಗುವ ಹಣ್ಣುಗಳ ಪೈಕಿ ಹಲಸಿನ ಹಣ್ಣು ಅತಿ ದೊಡ್ಡ ಹಣ್ಣು. ಪೊಟಾಷಿಯಂ, ವಿಟಮಿನ್ ಬಿ ಹಾಗೂ ಪ್ರೊಟೀನಿನಿಂದ ಸಮೃದ್ಧವಾಗಿರುವ ಹಲಸಿನ ಹಣ್ಣು ತಿಂದ ಮೇಲೆ ಬಹಳಷ್ಟು ಸಾರಿ ಬೀಜವನ್ನು ಎಸೆಯುವುದೇ ಹೆಚ್ಚು. ಹಣ್ಣಿಗೆ ಸಿಗುವ ಮರ್ಯಾದೆಯನ್ನು ನಾವು ಬೀಜಕ್ಕೆ ಕೊಡುವುದಿಲ್ಲ. ಆದರೆ ಹಲಸಿನ ಬೀಜವೆಂದು (Jackfruit seeds) ಮೂದಲಿಕೆ ಮಾಡಬೇಡಿ. ಅಯ್ಯೋ, ಒಂದು ರಾಶಿ ಹಲಸಿನ ಬೀಜ ಇದೆ, ಏನು ಮಾಡುವುದು ಎಂದು ಎಸೆಯಲು ಹೊರಡಬೇಡಿ. ಅಥವಾ ಈ ಹಲಸಿನ ಬೀಜದಿಂದ ಏನು ಮಹಾ ಮಾಡಬಹುದು ಎಂದು ಉಡಾಫೆಯನ್ನೂ ಮಾಡಬೇಡಿ. ಈ ಬೀಜದಲ್ಲೂ ಸಮೃದ್ಧವಾದ ಪೋಷಕಾಂಶಗಳಿವೆ. ಇದನ್ನು ಎಸೆದಿರೆಂದರೆ, ನಿಮ್ಮ ದೇಹಕ್ಕೆ ಲಭಿಸುವ ಅತ್ಯುತ್ತಮ ಪೋಷಕಾಂಶಗಳನ್ನು (nutrients) ನೀವೇ ನಿಮ್ಮ ಕೈಯಾರೆ ನಷ್ಟ ಮಾಡಿಕೊಂಡಂತೆ.
ಮಲೆನಾಡಿನಲ್ಲೆಲ್ಲ ಹಲಸಿನ ಹಣ್ಣಿನ ಕಾಲ ಇನ್ನೂ ಮುಗಿದಿಲ್ಲ. ತಿಂದು ತಿಂದು ಸಾಕಾಯಿತು ಎಂದು ಹಣ್ಣನ್ನು ಕೊನೆಗೆ ಮರದಲ್ಲೇ ಬಿಟ್ಟು ಅದು ಅಲ್ಲೇ ಹಣ್ಣಾಗಿ ಕೊಳೆಯು ಉದುರಿಹೋಗುವಷ್ಟು ಹಲಸಿನಹಣ್ಣು ಸಾಕಾಗಿಬಿಟ್ಟಿರುತ್ತದೆ. ನಗರದ ಮಂದಿ ಹಣ್ಣನ್ನು ತಿಂದು ತಿಂದು ಬೀಜಗಳನ್ನು ಜತನದಿಂದ ಶೇಖರಿಸಿಟ್ಟು ಬಳಸುವುದೂ ಉಂಟು, ಎಸೆಯುವವರೂ ಇದ್ದಾರೆ. ಸದ್ಯ ಹಣ್ಣು ತಿಂದು ಬೀಜ ಶೇಖರಿಸಿಟ್ಟ, ಹಾಗೂ ಈಗ ಎಸೆದಿರುವ ಮಂದಿ ಮುಂದಾದರೂ ಶೇಕರಿಸಿಡಬೇಕು ಎಂಬ ಜ್ಞಾನೋದಯ ಹೊಂದಲು ಈ ಬೀಜದ ಪ್ರಾಮುಖ್ಯತೆಯನ್ನು ಅರಿಯೋಣ.
1. ಮಹಿಳೆಯರೆಲ್ಲ ತಮ್ಮ ಸೌಂದರ್ಯವರ್ಧನೆಗೆ ಏನೇನೆಲ್ಲ ಕಸರತ್ತು ಮಾಡುವುದುಂಟು. ವಯಸ್ಸಾಗುತ್ತಿದ್ದಂತೆ ಮುಖದಲ್ಲಿ ಸುಕ್ಕುಗಳಾಗುತ್ತಿದೆಯೆಂದು ತಲೆಬಿಸಿ ಮಾಡುವುದೂ ಉಂಟು. ಅದಕ್ಕಾಗಿ ಮಾರುಕಟ್ಟೆಯ ಥರಹೇವಾರಿ ಕ್ರೀಮುಗಳು, ಸೀರಮ್ಮುಗಳನ್ನು ಮನೆಯಲ್ಲಿ ಗುಡ್ಡೆ ಹಾಕುವುದೂ ಉಂಟು. ಅಂಥವರು ಒಮ್ಮೆ ಈ ಬೀಜದ ಮಹಿಮೆ ತಿಳಿಯಿರಿ. ಹಲಸಿನ ಬೀಜವನ್ನು ತಂಪಾದ ಹಾಲಿನೊಂದಿಗೆ ರುಬ್ಬಿ, ಇದನ್ನು ಮುಖಕ್ಕೆ ನಿಯಮಿತವಾಗಿ ಹಚ್ಚುತ್ತಾ ಬಂದರೆ ಖಂಡಿತವಾಗಿಯೂ ನಿಮ್ಮ ಸುಕ್ಕುಗಳು ಕಡಿಮೆಯಾಗುತ್ತದೆ. ಬಹಳಷ್ಟು ಚರ್ಮದ ಸಮಸ್ಯೆಗಳು ಮಾಯವಾಗಿ, ಮುಖ ನಯವಾಗಿ ಹೊಸ ಚೈತನ್ಯ ಮೂಡುತ್ತದೆ.
2. ಹಲಸಿನ ಬೀಜದಲ್ಲಿ ಪ್ರೊಟೀನ್ ಶ್ರೀಮಂತವಾಗಿರುವುದರಿಂದ ಮಾನಸಿಕ ಒತ್ತಡದಂತಹ ಸಮಸ್ಯೆಗಳಿಗೂ ಇದು ರಾಮಬಾಣ.
3. ರಕ್ತಹೀನತೆಗೂ ಹಲಸಿನ ಬೀಜ ಅತ್ಯುತ್ತಮ. ಇದರಲ್ಲಿ ಕಬ್ಬಿಣಾಂಶ ಹೆಚ್ಚಿರುವುದರಿಂದ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಇದು ಸರಿಯಾದ ಆಹಾರ. ರಕ್ತದ ಇತರ ತೊಂದರೆಗಳಿಗೂ ಪರಿಹಾರ ನೀಡುತ್ತದೆ. ಕಬ್ಬಿಣಾಂಶ ದೇಹದಲ್ಲಿ ಬೇಕಾದಷ್ಟಿದ್ದರೆ, ನಮ್ಮ ಹೃದಯ, ಮೆದುಳು ಎಲ್ಲವೂ ಆರೋಗ್ಯವಾಗಿರುತ್ತದೆ.
4. ದೃಷ್ಟಿದೋಷವಿರುವವರಿಗೂ ಹಲಸಿನ ಬೀಜ ಉತ್ತಮ. ಕಣ್ಣನ್ನು ಸದಾ ಆರೋಗ್ಯದಿಂದಿರಿಸಲು, ಹಾಗೂ ಕೂದಲಿನ ಆರೋಗ್ಯ ಕಾಪಾಡುವಲ್ಲಿಯೂ ಹಲಸಿನ ಬೀಜ ಸಹಕಾರಿ. ಈ ಬೀಜದಲ್ಲಿ ವಿಟಮಿನ್ ಎ ಸಮೃದ್ಧವಾಗಿರುವುದರಿಂದ ಇದು ಇರುಳುಗಣ್ಣಿನ ತೊಂದರೆ ಇರುವವರಿಗೂ ಒಳ್ಳೆಯದು.
5. ಜೀರ್ಣಕ್ರಿಯೆಯ ತೊಂದರೆಯಿಂದ ಕಷ್ಟಪಡುತ್ತಿರುವ ಮಂದಿಗೂ ಹಲಸಿನ ಬೀಜ ಉತ್ತಮ. ಮಲಬದ್ಧತೆಗೂ ಇರುವವರೂ ಹಲಸಿನ ಬೀಜ ತಿಂದರೆ ಮಲವಿಸರ್ಜನೆ ಸರಾಗವಾಗಿ ಆಗುತ್ತದೆ. ಹಲಸಿನಬೀಜಗಳನ್ನು ಒಣಗಿಸಿ ಪುಡಿಮಾಡಿ ಡಬ್ಬದಲ್ಲಿ ಶೇಖರಿಸಿಟ್ಟರೆ, ಇಂಥ ತೊಂದರೆಗಳಿರುವ ಸಂದರ್ಭ ಇದನ್ನು ಬಳಸುವ ಮೂಲಕ ಹಣ್ಣು ಸಿಗದ ಕಾಲಗಳಲ್ಲೂ ಇದರ ಉಪಯೋಗ ಪಡೆಯಬಹುದು.
6. ಉತ್ತಮ ಮಾಂಸಖಂಡಗಳು ಬೇಕೆಂದು ವ್ಯಾಯಾಮ ಮಾಡುವವರಿಗೂ ಹಲಸಿನ ಬೀಜ ಒಳ್ಳೆಯದು. ಅನಗತ್ಯ ಮಾರುಕಟ್ಟೆಯ ಪ್ರೊಟೀನು ಪುಡಿಗಳನ್ನು ಖರೀದಿಸುವ ಬದಲು ನಿಸರ್ಗದತ್ತವಾಗಿ ಲಭ್ಯವಿರುವ ಪ್ರೊಟೀನುಯುಕ್ತ ಇಂತಹ ಆಹಾರಗಳನ್ನು ನಿತ್ಯದ ಆಹಾರದಲ್ಲಿ ಸೇರಿಸಿಕೊಂಡಲ್ಲಿ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಹಲಸಿನ ಬೀಜದ ಪ್ರೊಟೀನಿನಲ್ಲಿ ಕೊಲೆಸ್ಟೆರಾಲ್ ಭಯವೂ ಇಲ್ಲ ಎಂಬುದನ್ನು ನೆನಪಿಡಿ.
7. ಹಲಸಿನ ಬೀಜ ಕಾಮಾಸಕ್ತಿಯನ್ನೂ ವೃದ್ಧಿಗೊಳಿಸುತ್ತದಂತೆ. ಲೈಂಗಿಕ ಸಮಸ್ಯೆಗಳಿಂದ ಬಳಲುತ್ತಿರುವವರೆಗೆ, ಆ ಬಗ್ಗೆ ಆಸಕ್ತಿ ಕಡಿಮೆಯಾದವರಿಗೆ ಇದು ಅತ್ಯುತ್ತಮ ಸಾಂಪ್ರದಾಯಿಕ ಔಷಧಿಯಂತೆ.
ಇದನ್ನೂ ಓದಿ: Krishi Khajane : ಹುಲುಸಾಗಿ ಹಲಸು ಬೆಳೆಯಿರಿ, ಎಕರೆಗೆ 2.5 ಲಕ್ಷ ಆದಾಯ ಪಡೆಯಿರಿ!