Site icon Vistara News

Health benefits Of Red Foods: ಕೆಂಪು ಬಣ್ಣದ ಆಹಾರಗಳ ಮೇಲೂ ಇರಲಿ ಪ್ರೇಮ!

Health benefits Of Red Foods

ಈಗ ಎಲ್ಲೆಡೆ ಕೆಂಪು ಬಣ್ಣದ ಕಂಪು. ಕೆಂಪು ಗುಲಾಬಿ, ಕೆಂಪು ಬಟ್ಟೆ, ಕೆಂಪು ಟೆಡ್ಡಿಬೇರ್‌, ಕೆಂಪು ಅದು, ಕೆಂಪು ಇದು…! ಉಳಿದೆಲ್ಲ ಕೆಂಪು ಬಣ್ಣಗಳ ಜೊತೆಗೆ ಕೆಂಬಣ್ಣದ ಆಹಾರಗಳಿಗೂ ಆದ್ಯತೆ ನೀಡಬಹುದು. ಅಂದರೆ ಕೆಂಪು ಬಣ್ಣದ ವೆಲ್ವೆಟ್‌ ಕೇಕ್‌, ಬಾಯಲ್ಲಿ ನೀರೂರಿಸುವ ಕೆಂಪು ಕ್ಯಾಂಡಿಗಳು… ಇಂಥವಲ್ಲ. ಹಣ್ಣು-ತರಕಾರಿಗಳಲ್ಲಿ ಕೆಂಪು ಬಣ್ಣದ ಯಾವುದನ್ನೆಲ್ಲ ತಿಂದರೆ ಏನೆಲ್ಲ ಲಾಭಗಳು (benefits of red foods) ಎಂಬುದನ್ನು ನೋಡಿದರೆ… ಪ್ರೇಮಿಗಳ ದಿನ ಮುಗಿದ ಮೇಲೂ ಈ ಕೆಂಪಿನ ಕಂಪು ತಾಜಾ ಇರಬಹುದು. ಕೆಂಪು ಬಣ್ಣದ ಆಹಾರಗಳಲ್ಲಿ ಇರಬಹುದಾದ ಸತ್ವಗಳು ಯಾವುವು? ಬಣ್ಣಕ್ಕೇಕೆ ಅಷ್ಟು ಪ್ರಾಮುಖ್ಯತೆ ನೀಡಬೇಕು? ಎಲ್ಲ ತರಕಾರಿ-ಹಣ್ಣುಗಳೂ ಒಂದಿಲ್ಲೊಂದು ಬಣ್ಣದಲ್ಲಿ ಇರಲೇಬೇಕಲ್ಲವೇ? ನಿಜ, ಯಾವುದಾದರೊಂದು ಬಣ್ಣ ಇವುಗಳಿಗೆ ಇರಲೇಬೇಕೆಂಬುದು ಹೌದಾದರೂ, ಕೆಂಬಣ್ಣದ ಹಣ್ಣು-ತರಕಾರಿಗಳಲ್ಲಿ ಇರುವ ಲೈಕೋಪೇನ್‌, ಆಂಥೋ ಸಯನಿನ್ಗಳು ಮತ್ತು ಬೆಟಲೈನ್‌ಗಳು ನಮ್ಮ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಯಾವ ಆಹಾರಗಳವು ಎಂಬುದನ್ನು ನೋಡೋಣ.

ಯಾವುದೆಲ್ಲ ಬೇಕು?

ಟೊಮೇಟೊ, ಸ್ಟ್ರಾಬೆರಿ, ಚೆರ್ರಿ, ಕೆಂಪು ಕ್ಯಾಪ್ಸಿಕಂ, ಕಲ್ಲಂಗಡಿ, ಕೋಕಂ, ದಾಳಿಂಬೆ, ಕೆಂಪು ಸೇಬುಗಳು, ಕ್ರೇನ್‌ಬೆರಿ… ಇಂಥ ಯಾವುದೇ ಕೆಂಬಣ್ಣದ ಹಣ್ಣು, ತರಕಾರಿಗಳು ಬಳಕೆಗೆ ಒಳ್ಳೆಯವು. ಇವುಗಳನ್ನು ತರಹೇವಾರಿ ಅಡುಗೆಗಳಲ್ಲಿ, ಬೇಸಿಗೆಯ ಸಲಾಡ್‌ಗಳಿಗೆ, ಸೂಪ್‌, ಸ್ಮೂದಿ, ಹಣ್ಣಿನ ಚಾಟ್‌ಗಳು, ಜ್ಯೂಸ್‌ಗಳು, ಟ್ರೇಲ್‌ ಮಿಕ್ಸ್‌ಗಳು, ಹಾಗೆಯೇ ಬಾಯಾಡಲು… ಹೀಗೆ ಯಾವುದೇ ರೀತಿಯಲ್ಲಿ ಸೇವಿಸಬಹುದು.

ಏನುಪಯೋಗ?

ಟೊಮೇಟೊದಂಥ ಕೆಂಪು ತರಕಾರಿಗಳಲ್ಲಿರುವ ಲೈಕೋಪೇನ್‌ ಅಂಶಗಳು ಹೃದಯದ ಆರೋಗ್ಯಕ್ಕೆ ಅತ್ಯಂತ ಉಪಕಾರಿಯಾದವು. ರಕ್ತದೊತ್ತಡವನ್ನು ನಿಯಂತ್ರಿಸಿ, ಹೃದಯಕ್ಕೆ ಬೀಳಬಹುದಾದ ಬರೆಯನ್ನು ತಪ್ಪಿಸುವಲ್ಲಿ ಇವು ಅಗತ್ಯ. ಕಲ್ಲಂಗಡಿಯಲ್ಲಿರುವ ಪೊಟಾಶಿಯಂ ಅಂಶವೂ ರಕ್ತದೊತ್ತಡ ನಿಯಂತ್ರಣದಲ್ಲಿ ಗಮನಾರ್ಹ ಕೆಲಸವನ್ನು ಮಾಡುತ್ತದೆ.

ಕ್ಯಾನ್ಸರ್‌ ತಡೆ

ಇದರಲ್ಲಿರುವ ಹಲವು ರೀತಿಯ ಉತ್ಕರ್ಷಣ ನಿರೋಧಕಗಳು ಕ್ಯಾನ್ಸರ್‌ನಂಥ ಮಾರಕ ರೋಗಗಳ ತಡೆಗೆ ನೆರವು ನೀಡುತ್ತವೆ. ದೇಹದಲ್ಲಿರುವ ಮುಕ್ತ ಕಣಗಳನ್ನು ನಿರ್ಬಂಧಿಸಿ, ರೋಗವನ್ನು ಹತೋಟಿಗೆ ತರುವಲ್ಲಿಯೂ ಅಗತ್ಯ ನೆರವನ್ನು ನೀಡುತ್ತವೆ. ಸ್ತನ ಮತ್ತು ಪ್ರೊಸ್ಟೇಟ್‌ ಕ್ಯಾನ್ಸರ್‌ಗಳ ಭೀತಿಯನ್ನು ಕಡಿಮೆ ಮಾಡುವಲ್ಲಿ ಈ ಉತ್ಕರ್ಷಣ ನಿರೋಧಕಗಳು ಗಣನೀಯ ಕೆಲಸ ಮಾಡುತ್ತವೆ

ಚರ್ಮ, ದೃಷ್ಟಿಗೆ ಲಾಭ

ಇವುಗಳಲ್ಲಿರುವ ವಿಟಮಿನ್‌ ಸಿ ಅಂಶಗಳಿಂದ ಚರ್ಮದ ಕೊಲಾಜಿನ್‌ ಉತ್ಪಾದನೆಗೆ ಸಹಾಯ ದೊರೆಯುತ್ತದೆ. ಇದರಿಂದ ಸುಕ್ಕಿಲ್ಲದಂಥ, ನಯವಾದ ಚರ್ಮವನ್ನು ಹೊಂದಲು ಸಾಧ್ಯ. ಈ ಉತ್ಕರ್ಷಣ ನಿರೋಧಕಗಳಿಂದ ದೃಷ್ಟಿಯ ರಕ್ಷಣೆಗೆ ಪೂರಕವಾದ ಅಂಶಗಳು ದೊರೆಯುತ್ತವೆ. ಅದರಲ್ಲೂ ವಯಸ್ಸಾದಂತೆ ದೃಷ್ಟಿ ಮಂದವಾಗುವುದನ್ನು ಮುಂದೂಡುವಲ್ಲಿ ಇವೆಲ್ಲ ಮಹತ್ವದ ಪೋಷಕಾಂಶಗಳು.

ರೋಗ ನಿರೋಧಕ ಶಕ್ತಿ

ವಿಟಮಿನ್‌ ಸಿ ಹೆಚ್ಚಿರುವ ಆಹಾರಗಳಿಂದ ದೇಹದ ಪ್ರತಿರೋಧಕ ಶಕ್ತಿ ಪ್ರಬಲವಾಗುತ್ತದೆ. ಇದರಿಂದ ಋತುಮಾನ ಬದಲಾಗುವ ದಿನಗಳಲ್ಲಿ, ವಾತಾವರಣದ ಏರುಪೇರಿನ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಕಾಡುವ ಸೋಂಕುಗಳ ಬಾಧೆಯನ್ನು ಹತ್ತಿಕ್ಕಲು ಸುಲಭ ಸಾಧ್ಯವಾಗುತ್ತದೆ.

ಉರಿಯೂತ ಶಮನ

ಉತ್ಕರ್ಷಣ ನಿರೋಧಕಗಳು ಆಹಾರದಲ್ಲಿ ಹೆಚ್ಚೆಚ್ಚು ಇದ್ದಷ್ಟೂ, ದೇಹದಲ್ಲಿ ಉರಿಯೂತಗಳನ್ನು ಶಮನ ಮಾಡುವಲ್ಲಿ ಸಹಕಾರಿಯಾಗುತ್ತದೆ. ಆರ್ಥರೈಟಿಸ್‌ನಂಥ ಉರಿಯೂತ ಸಂಬಂಧಿ ತೊಂದರೆಗಳಿದ್ದಲ್ಲಿ, ಯಾವುದೇ ಉತ್ಕರ್ಷಣ ನಿರೋಧಕಗಳು ಪ್ರಯೋಜನಕಾರಿ. ಹಣ್ಣು-ತರಕಾರಿಗಳ ಬಣ್ಣ ಗಾಢವಾದಷ್ಟೂ ಈ ಸತ್ವಗಳ ಸಾಂದ್ರತೆ ಹೆಚ್ಚು.

ಜೀರ್ಣಕಾರಿ

ಚೆರ್ರಿ, ರಾಸ್ಪ್‌ಬೆರಿಯಂಥ ಕೆಂಪು ಹಣ್ಣುಗಳಲ್ಲಿ ನಾರು ಹೇರಳವಾಗಿದೆ. ಇದು ಜೀರ್ಣಾಂಗಗಳ ಕಾರ್ಯಕ್ಷಮತೆಯನ್ನು ವೃದ್ಧಿಸುವಂಥದ್ದು. ನಾರು ಸಾಕಷ್ಟಿದ್ದರೆ, ಕರುಳಿನ ಬ್ಯಾಕ್ಟೀರಿಯಗಳ ಸಮತೋಲನವನ್ನು ಕಾಯ್ದುಕೊಳ್ಳುವುದು ಕಷ್ಟವಲ್ಲ. ಜೊತೆಗೆ, ಮಲಬದ್ಧತೆಯೂ ದೂರವಾಗಿ ಹೊಟ್ಟೆ ಸ್ವಚ್ಛವಾಗುತ್ತದೆ.

ಇದನ್ನೂ ಓದಿ: Not Having Children: ಮಕ್ಕಳಾಗುತ್ತಿಲ್ಲವೇ?; ಹಾಗಾದರೆ, ಇವಿಷ್ಟು ಸಾಮಾನ್ಯ ಅಂಶಗಳು ಗೊತ್ತಿರಲಿ!

Exit mobile version