Site icon Vistara News

Health Benefits Of Saffron: ಹಿತಮಿತ ಕೇಸರಿ ಬಳಕೆಯಿಂದ ಅಪಾರ ಪ್ರಯೋಜನ!

Saffron

ಮಸಾಲೆಗಳಲ್ಲಿ ಅತ್ಯಂತ ದುಬಾರಿಯದ್ದು ಯಾವುದು? ಹೀಗೆನ್ನುತ್ತಿದ್ದಂತೆ ಮಾರುಕಟ್ಟೆಯ ಧಾರಣೆ ನೋಡುವುದಕ್ಕೆಂದು ಹೋಗಬೇಕಿಲ್ಲ. ಯಾವುದನ್ನು ಉತ್ಪಾದಿಸುವುದು ಸುಲಭವಲ್ಲವೋ, ಸಹಜವಾಗಿ ಅದರ ಬೆಲೆ ತುಟ್ಟಿಯಿರುವುದು ಹೌದಲ್ಲ. ಈ ಹಿನ್ನೆಲೆಯಲ್ಲಿ ಕೇಸರಿಯನ್ನು ಜಗತ್ತಿನ ದುಬಾರಿ ಮಸಾಲೆಗಳಲ್ಲಿ ಒಂದು ಎನ್ನಲಾಗುತ್ತದೆ. ಹಾಗಾಗಿಯೇ ಇದನ್ನು ʻಕೆಂಪು ಕನಕʼ ಎಂದು ಕರೆಯಲಾಗುತ್ತದೆ. ಇದನ್ನು ಮಿತ ಪ್ರಮಾಣದಲ್ಲಿ ಬಳಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭವಿದೆ. ಏನವು (Health benefits of Saffron) ಎಂಬುದನ್ನು ನೋಡೋಣ.

ಮೂಡ್‌ ಸುಧಾರಣೆ

ಒಮ್ಮೆ ಸಿಟ್ಟು, ಮತ್ತೆ ಬೇಸರ, ಹಾಗೆಯೇ ಖುಷಿ, ಅಲ್ಲಿಯೇ ಕಿರಿಕಿರಿ… ನಿಮ್ಮ ಮೂಡ್‌ ಹೀಗೆಲ್ಲ ಏರಿಳಿತವಾಗುತ್ತಿದ್ದರೆ ನಿಯಮಿತವಾಗಿ ಕೇಸರಿಯಲ್ಲಿ ಅಲ್ಪ ಪ್ರಮಾಣದಲ್ಲಿ ಬಳಸುವುದು ಸೂಕ್ತ ಎನ್ನುತ್ತವೆ ಅ‍ಧ್ಯಯನಗಳು. ಇದರಿಂದ ಖಿನ್ನತೆಯಂಥ ಸಮಸ್ಯೆಗಳನ್ನು ನಿಯಂತ್ರಿಸುವುದಕ್ಕೆ ಸಹಾಯವಾಗುತ್ತದೆ. ಆಗಾಗ ಮೂಡ್‌ ಏರಿಳಿತದಿಂದ ಒದ್ದಾಡುತ್ತಿರುವವರಿಗೂ ಇದು ನೆರವಾದೀತು.

ಉತ್ಕರ್ಷಣ ನಿರೋಧಕಗಳು

ದೇಹವನ್ನು ಉರಿಯೂತದಿಂದ ಕಾಪಾಡಿಕೊಳ್ಳುವುದಕ್ಕೆ ನಮ್ಮ ಆಹಾರದಲ್ಲಿ ಉತ್ಕರ್ಷಣ ನಿರೋಧಕಗಳು ಇರುವುದು ಮುಖ್ಯ. ಮುಕ್ತ ಕಣಗಳು ದೇಹದೆಲ್ಲೆಡೆ ಓಡಾಡಿಕೊಂಡು ಅನಾಹುತಗಳನ್ನು ಮಾಡದಂತೆ ತಡೆಯುವುದಕ್ಕೂ ಇಂಥ ಉರಿಯೂತ ಶಾಮಕಗಳು ಅಗತ್ಯ. ಕೇಸರಿಯಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು, ಮಾರಕ ರೋಗಗಳಿಂದ ರಕ್ಷಣೆಗೆ ನೆರವಾಗಬಲ್ಲವು.

ಪಿಎಂಎಸ್‌ ಶಮನ

ಮುಟ್ಟಿನ ದಿನಗಳ ಮುನ್ನ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗುವುದು ಸಹಜ. ಇವುಗಳು ಕೆಲವೊಮ್ಮೆ ಇದೇ ಅತಿಯಾಗಿ ಸ್ವಾಸ್ಥ್ಯ ತಪ್ಪಿಸುವುದೂ ಹೌದು. ಇಂಥ ಮಹಿಳೆಯರಿಗೆ ಪ್ರಿ ಮೆನ್ಟ್ರುವಲ್‌ ಸಿಂಡ್ರೋಮ್‌ (ಪಿಎಂಎಸ್‌) ಎಂದು ಕರೆಯಲಾಗುವ ಈ ಲಕ್ಷಣಗಳನ್ನು ಶಮನ ಮಾಡುವಲ್ಲಿ ಕೇಸರಿಯ ಸೇವನೆ ನೆರವಾಗುತ್ತದೆ. ಮುಟ್ಟಿನ ದಿನಗಳಲ್ಲಿ ಕಾಡುವ ಅತೀವ ಹೊಟ್ಟೆನೋವು ಕಡಿಮೆ ಮಾಡಲು ಕೇಸರಿ ನೆರವಾಗುತ್ತದೆ.

ತೂಕ ಇಳಿಕೆ

ಉಳಿದೆಲ್ಲ ಆಹಾರಗಳನ್ನು ತಿಂದಂತೆಯೇ ಕೇಸರಿಯನ್ನು ಒಂದು ಮುಷ್ಟಿ ತಿನ್ನುವಂತಿಲ್ಲ. ಹಾಗಾದರೆ ಇದರಲ್ಲಿ ತೂಕ ಇಳಿಕೆ ಹೇಗೆ ಎಂಬುದು ಪ್ರಶ್ನೆ. ಹಸಿವನ್ನು ತಗ್ಗಿಸುವಂಥ ಗುಣ ಕೇಸರಿಗಿದೆ. ಹಾಗಾಗಿ ಅಲ್ಪ ಪ್ರಮಾಣದಲ್ಲಿ ತಿನ್ನುವುದೇ ಸಾಕಾದೀತು. ಕೇಸರಿಯನ್ನು ಅತಿಯಾಗಿ ತಿನ್ನುವಂತೆಯೂ ಇಲ್ಲ. ಉತ್ಕರ್ಷಣ ನಿರೋಧಕಗಳು ಸಾಂದ್ರವಾಗಿರುವ ತಿನಿಸುಗಳು ಬೊಜ್ಜು ಕರಗಿಸಲು ನೆರವಾಗುತ್ತವೆ ಎನ್ನುವುದು ಅ‍ಧ್ಯಯನಗಳ ಮಾತು.

ಹೃದಯಕ್ಕೆ ಪೂರಕ

ದೇಹದಲ್ಲಿ ಜಮೆಯಾಗಿ ಹೃದಯಕ್ಕೆ ಬರೆ ಹಾಕುವ ಕೊಲೆಸ್ಟ್ರಾಲ್‌ ಮತ್ತು ಟ್ರೈಗ್ಲಿಸರೈಡ್‌ ಮಟ್ಟವನ್ನು ಕಡಿಮೆ ಮಾಡುವಲ್ಲಿ ಕೇಸರಿ ಉಪಯುಕ್ತ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕಡಿಮೆ ಮಾಡಲು ನೆರವಾಗುತ್ತವೆ. ಇದರಿಂದ ಹೃದಯವನ್ನು ಆರೋಗ್ಯವಾಗಿ ಇರಿಸಿಕೊಳ್ಳಲು ಸಾಧ್ಯವಿದೆ.

ಮಧುಮೇಹ ನಿಯಂತ್ರಣ

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಉದ್ದೇಶವಿದ್ದರೆ ಕೊಂಚವೇ ಕೇಸರಿಯನ್ನು ಆಹಾರದಲ್ಲಿ ಉಪಯೋಗಿಸಬಹುದು. ದೇಹದ ಚಯಾಪಚಯಕ್ಕೂ ಪೋಷಕಾಂಶಗಳಿಗೂ ಇರುವ ನಂಟಿನ ಬಗ್ಗೆ ನಡೆಸಲಾದ ಅಧ್ಯಯನದಲ್ಲಿ, ನಿಯಮಿತವಾಗಿ ಅಲ್ಪ ಪ್ರಮಾಣದಲ್ಲಿ ಕೇಸರಿ ನೀಡಲಾದ ಮಧುಮೇಹಿಗಳಲ್ಲಿ ಸುಮಾರು ಎಂಟು ವಾರಗಳಲ್ಲಿ ಉತ್ತಮ ಫಲಿತಾಂಶ ಕಂಡುಬಂದಿದ್ದಾಗಿ ವರದಿ ಹೇಳುತ್ತದೆ.

ದೃಷ್ಟಿ ಚುರುಕು

ಇದರಲ್ಲಿರುವ ವಿಟಮಿನ್‌ಗಳಿಂದಾಗಿ ತ್ವಚೆ ಮತ್ತು ದೃಷ್ಟಿಯ ಆರೋಗ್ಯ ಸುಧಾರಿಸುತ್ತದೆ. ಕೇಸರಿ ಸೇರಿಸಿದ ಫೇಸ್‌ಪ್ಯಾಕ್‌ಗಳ ಮೂಲಕ ತ್ವಚೆಯ ಆರೋಗ್ಯ ಸುಧಾರಿಸಬಹುದು. ಕಪ್ಪು ಕಲೆಗಳನ್ನು ಹೋಗಲಾಡಿಸಿ, ಸುಕ್ಕುಗಳನ್ನು ಕಡಿಮೆ ಮಾಡಬಹುದು. ಆಹಾರದ ಮೂಲಕ ಸೇವಿಸುವ ವಯಸ್ಕರಲ್ಲಿ ದೃಷ್ಟಿಯ ದೋಷ ಉಂಟಾಗುವುದನ್ನು ಮುಂದೂಡಬಹುದು ಎನ್ನುತ್ತಾರೆ ತಜ್ಞರು.

ಅತಿ ಬೇಡ

ಹೀಗೆನ್ನುತ್ತಿದ್ದಂತೆ ಕೇಸರಿ ಹಾಲು, ಕೇಸರಿ ಭಾತ್‌, ಹಲ್ವಾ, ಬಿರಿಯಾನಿ ಎನ್ನುತ್ತಾ ಸಿಕ್ಕಿದ್ದಕ್ಕೆಲ್ಲ ಕೇಸರಿ ಹಾಕಿಕೊಂಡು ತಿನ್ನುವಂತಿಲ್ಲ. ಮಿತ ಪ್ರಮಾಣದಲ್ಲಿ ಸೇವನೆ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು. ಗರ್ಭಿಣಿಯರಿಗೂ ಇದನ್ನು ಹೆಚ್ಚು ನೀಡುವಂತಿಲ್ಲ. ನಾಲ್ಕಾರು ಎಳೆಗಳ ಲೆಕ್ಕದಲ್ಲೇ ಸಾಕಾಗುತ್ತದೆ. ಅತಿಯಾಗಿ ತಿಂದರೆ ಹೊಟ್ಟೆನೋವು, ವಾಂತಿ ಮುಂತಾದ ಅಡ್ಡ ಪರಿಣಾಮಗಳು ಆಗಬಹುದು. ಅತಿಯನ್ನೂ ಮೀರಿದರೆ ಇದೇ ದೇಹಕ್ಕೆ ಟಾಕ್ಸಿಕ್‌ ಆಗಬಹುದು.

Exit mobile version