Site icon Vistara News

Health Benefits Of Strawberries: ಸ್ಟ್ರಾಬೆರಿ ತಿಂದರೆ ಲಾಭಗಳು ಒಂದೆರಡಲ್ಲ!

Strawberry

ಬೆರ್ರಿಗಳ ರುಚಿಯನ್ನು ತಿಂದವನೇ ಬಲ್ಲ. ಕೊಂಚ ಹುಳಿ, ಒಂದಿಷ್ಟು ಸಿಹಿ, ಅದರಲ್ಲೇ ಘಮ… ಮಕ್ಕಳಿಗಂತೂ ಇವು ಮನಮೆಚ್ಚಿನವು. ಇವುಗಳಲ್ಲಿ ಹೆಚ್ಚಿನ ಬೆರ್ರಿಗಳು ಭಾರತೀಯ ಮೂಲದ್ದಲ್ಲ. ಹೊರ ದೇಶಗಳಿಂದ ಆಮದಾಗುವ ಅಥವಾ ಇಲ್ಲಿ ಹೊಸದಾಗಿ ಬೆಳೆಯಲ್ಪಡುವ ಅವು, ಇಲ್ಲಿನ ವಾತಾವರಣಕ್ಕೆ ಅಲ್ಲಿಯಂಥ ರುಚಿಯನ್ನು ಕೊಡದಿರುವ ಸಾಧ್ಯತೆಯಿದೆ. ಉದಾ, ಸ್ಟ್ರಾಬೆರಿಯನ್ನು ಹೇಳುವುದಾದರೆ, ಇಲ್ಲಿ ನಮಗೆ ದೊರೆಯುವ ಸ್ಟ್ರಾಬೆರಿಗಳು ಸಾಮಾನ್ಯವಾಗಿ ಹುಳಿ. ಆದರೆ ಪಶ್ಚಿಮ ದೇಶಗಳಲ್ಲಿ ಅವು ತಿನ್ನುವುದಕ್ಕೆ ರುಚಿಯಾಗಿಯೂ ಇರುತ್ತವೆ. ನಮ್ಮಲ್ಲಿ ಹುಳಿ ಮತ್ತು ಸಿಹಿ- ಈ ಎರಡೂ ರುಚಿಗಳ ಕಿತ್ತಳೆ ದೊರೆಯುವುದಿಲ್ಲವೇ… ಹಾಗೆ. ವಿಟಮಿನ್‌ ಸಿ ಹೇರಳವಾಗಿರುವ ಈ ಹಣ್ಣಿನಲ್ಲಿ ನಾರು ಸಹ ಭರಪೂರ ಇರುತ್ತದೆ. ರಸಭರಿತವಾಗಿದ್ದು, ತಿಂದಷ್ಟಕ್ಕೂ ದಾಹ ತಣಿಸುತ್ತದೆ. ತನ್ನದೇ ವಿಶಿಷ್ಟ ಪರಿಮಳ ಹೊಂದಿರುವ ಈ ಬೆರ್ರಿಯನ್ನು ಇಷ್ಟಪಟ್ಟು ತಿನ್ನುವವರು ಬಹಳಷ್ಟು ಜನರಿದ್ದಾರೆ. ತರಹೇವಾರಿ ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣನ್ನು ತಿನ್ನುವುದರ ಲಾಭಗಳೇನು (Health Benefits Of Strawberries) ಎಂಬುದನ್ನು ತಿಳಿಯೋಣ.

ಹೃದಯದ ಮಿತ್ರ

ಕೆಂಬಣ್ಣದ ರಸಭರಿತ ಸ್ಟ್ರಾಬೆರಿಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಹಾಗಾಗಿ ಹೃದಯವನ್ನು ಕಾಪಿಡುವ ಕೆಲಸವನ್ನಿದು ಚೆನ್ನಾಗಿ ಮಾಡಬಲ್ಲದು. ದೇಹದಲ್ಲಿ ಒಳ್ಳೆಯ ಕೊಬ್ಬನ್ನು ಹೆಚ್ಚಿಸುವುದು, ರಕ್ತದಲ್ಲಿನ ಪ್ಲೇಟ್‌ಲೆಟ್‌ ಸಂಖ್ಯೆಯನ್ನು ವೃದ್ಧಿಸುವುದು, ರಕ್ತದೊತ್ತಡ ನಿಯಂತ್ರಣದಲ್ಲಿ ಇರಿಸುವುದು- ಇಂಥ ಉಪಕಾರಿ ಕೆಲಸಗಳನ್ನು ಸ್ಟ್ರಾಬೆರಿ ಮಾಡಬಲ್ಲದು

ಪ್ರತಿರೋಧಕ ಶಕ್ತಿ ಹೆಚ್ಚಳ

ವಿಟಮಿನ್‌ ಸಿ ವಿಫುಲವಾಗಿರುವ ಈ ಹಣ್ಣಿನ ಸೇವನೆಯಿಂದ ಪ್ರತಿರೋಧಕ ಶಕ್ತಿ ಪ್ರಬಲವಾಗುತ್ತದೆ. ಸೋಂಕುಗಳೊಂದಿಗೆ ಹೋರಾಡಲು ದೇಹಕ್ಕೆ ಅಗತ್ಯ ಶಕ್ತಿಯನ್ನಿದು ನೀಡುತ್ತದೆ. ಜೊತೆಗೆ, ಆಹಾರದಲ್ಲಿ ದೊರೆಯುವ ಕಬ್ಬಿಣದಂಶವನ್ನು ದೇಹ ಹೀರಿಕೊಳ್ಳುವುದಕ್ಕೆ, ಉರಿಯೂತ ನಿವಾರಣೆಗೆ, ಮೂಳೆಗಳು ಗಟ್ಟಿಯಾಗುವುದಕ್ಕೆ- ಹೀಗೆ ಹಲವಾರು ಕೆಲಸಗಳಿಗೆ ವಿಟಮಿನ್‌ ಸಿ ಅಗತ್ಯವಾಗಿ ಬೇಕು.

ಮಧುಮೇಹದ ಭೀತಿ ದೂರ

ಸ್ಟ್ರಾಬೆರಿಯಲ್ಲಿ ನಾರಿನಂಶ ವಿಫುಲವಾಗಿದೆ. ಇದರಿಂದ ಇದನ್ನು ಸೇವಿಸಿದ ತಕ್ಷಣ ಗ್ಲೂಕೋಸ್‌ ಆಗಿ ಪರಿವರ್ತನೆಯಾಗಿ ರಕ್ತಕ್ಕೆ ಬಿಡುಗಡೆಯಾಗುವ ಪ್ರಕ್ರಿಯೆ ನಿಧಾನವಾಗುತ್ತದೆ. ಹಾಗಾಗಿ ರಕ್ತದಲ್ಲಿ ಸಕ್ಕರೆಯಂಶದ ಏರಿಳಿತ ಆಗದಂತೆ ಕಾಪಾಡಿಕೊಳ್ಳಬಹುದು. ಮಾತ್ರವಲ್ಲ, ಇದರಲ್ಲಿರುವ ನೀರು ಮತ್ತು ನಾರು ಅತಿಯಾಗಿ ತಿನ್ನದಂತೆ ತಡೆಯುತ್ತವೆ.

ರಕ್ತದೊತ್ತಡ ನಿರ್ವಹಣೆ

ಸ್ಟ್ರಾಬೆರಿಯಲ್ಲಿ ಆಂಥೋಸಯನಿನ್‌ಗಳು ಭರಪೂರ ಇವೆ. ಈ ಉತ್ಕರ್ಷಣ ನಿರೋಧಕಗಳು ರಕ್ತದೊತ್ತಡ ಏರದಂತೆ ತಡೆಯುವಲ್ಲಿ ಸಹಾಯ ಮಾಡುತ್ತವೆ. ರಕ್ತದ ಏರೊತ್ತಡದಿಂದ ನರಳುತ್ತಿರುವವರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ನಿಯಮಿತವಾದ ಸ್ಟ್ರಾಬೆರಿ ಸೇವನೆಯು ರಕ್ತದೊತ್ತಡವನ್ನು ನಿರ್ವಹಿಸಲು ನೆರವು ನೀಡುತ್ತದೆ.

ಪಾರ್ಶ್ವವಾಯು ದೂರ

ಮೆದುಳಿಗೆ ಶುದ್ಧ ರಕ್ತದ ಪೂರೈಕೆಯಲ್ಲಿ ತಡೆಯಾದರೆ ಪಾರ್ಶ್ವವಾಯು ಹೊಡೆಯುತ್ತದೆ. ಮೆಗ್ನೀಶಿಯಂ, ಫಾಸ್ಫರಸ್, ವಿಟಮಿನ್‌ ಸಿ ಮುಂತಾದ ಸತ್ವಗಳು ಇರುವಂಥ ಆಹಾರ ಪಾರ್ಶ್ವವಾಯುವಿನ ಭೀತಿಯನ್ನು ದೂರ ಮಾಡಬಲ್ಲದು. ಈ ಎಲ್ಲ ಸತ್ವಗಳು ಸ್ಟ್ರಾಬೆರಿಯಲ್ಲಿವೆ. ಈ ಹಣ್ಣಿನ ಸೇವನೆ ಹೀಗೆ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಲಾಭ ತರಬಲ್ಲದು.

ಮಲಬದ್ಧತೆ ದೂರ

ಸೇವಿಸುವ ಆಹಾರದಲ್ಲಿ ಕರಗದಿರುವಂಥ ನಾರುಗಳು ಇರುವುದು ಅಗತ್ಯ. ಕಾರಣ, ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸಿ, ಕರುಳಿನ ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಈ ನಾರು ಮಹತ್ವದ ಪಾತ್ರವನ್ನು ವಹಿಸುತ್ತದೆ. ಇಂಥ ನಾರು ಸ್ಟ್ರಾಬೆರಿಯಲ್ಲಿ ಸಾಕಷ್ಟಿದೆ. ಇವುಗಳ ಸೇವನೆಯಿಂದ ಜೀರ್ಣಾಂಗಗಳ ತೊಂದರೆಯನ್ನು ನಿವಾರಿಸಿಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಮಲಬದ್ಧತೆಯನ್ನು ದೂರ ಮಾಡಬಹುದು.

ಇದನ್ನೂ ಓದಿ: Inflammation: ದೇಹ ಉಬ್ಬರಿಸಿ ಉರಿಯೂತವೇ? ಈ ಆಹಾರಗಳೇ ನಿಮಗೆ ಆಪದ್ಭಾಂಧವ!

Exit mobile version