Site icon Vistara News

Health Benefits Of Tofu: ಪನೀರ್‌ನಂತೆ ಕಾಣುವ ಈ ಆಹಾರದ ಬಗ್ಗೆ ನಿಮಗೆ ಗೊತ್ತೆ?

Health Benefits Of Tofu

ನೋಡುವುದಕ್ಕೆ ಪನೀರ್‌ನಂತೆಯೇ ಕಾಣುವ ಈ ವಸ್ತುವಿನ ಬಗ್ಗೆ ಬಹಳಷ್ಟು ಜನರಿಗೆ ಕುತೂಹಲವಿದೆ. ಅದೂ ಪನೀರ್‌ನ ಒಂದು ಬಗೆ ಎಂದು ಭಾವಿಸಿದವರಿದ್ದಾರೆ. ಹಾಲಿನಿಂದಲೇ ಮಾಡಿದ್ದು ಎಂದು ತಿಳಿದವರಿದ್ದಾರೆ. ಆದರೆ ʻತೋಫುʼ ಎಂಬ ಹೆಸರು ಕೇಳಿ ಇದೇನು ಸಸ್ಯಜನ್ಯವೋ, ಪ್ರಾಣಿಜನ್ಯವೋ ಎಂಬ ಗೊಂದಲಕ್ಕೆ ಬಿದ್ದವರೂ ಇದ್ದಾರೆ. ʻಬೀನ್‌ ಕರ್ಡ್‌ʼ ಎಂಬ ಹೆಸರಿನಿಂದಲೂ ಕರೆಸಿಕೊಳ್ಳುವ ಇದು ಸೋಯಾ ಉತ್ಪನ್ನ. ಸಸ್ಯದಿಂದಲೇ ಸಿದ್ಧಗೊಂಡ ಈ ತೋಫು ಅತಿ ಹೆಚ್ಚಿನ ಪ್ರೊಟೀನ್‌ ಹೊಂದಿರುವ ತಿನಿಸು. ಜೊತೆಗೆ ಹಲವು ರೀತಿಯ ಪೋಷಕಸತ್ವಗಳು ಇದರಲ್ಲಿದ್ದು, ಅತ್ಯಂತ ಆರೋಗ್ಯಕರ (Health benefits Of Tofu) ತಿನಿಸು ಎಂಬ ಖ್ಯಾತಿಗೂ ಪಾತ್ರವಾಗಿದೆ.

ಏನಿದು ತೋಫು?

ಸರಳವಾಗಿ ಹೇಳುವುದಾದರೆ ಸೋಯಾ ಹಾಲಿನ ಪನೀರ್‌ ಎಂದು ತಿಳಿಯಬಹುದು. ನೋಡುವುದಕ್ಕೆ ಪನೀರ್‌ನಂತೆಯೇ ಇದ್ದರೂ, ಇವೆರಡರಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಸೋಯಾ ಹಾಲಿಗೆ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಉಪ್ಪನ್ನು ಸೇರಿಸಿ, ಹಸುವಿನ ಹಾಲಿನಂತೆಯೇ ಒಡೆಸಿ ಪನೀರ್‌ ರೀತಿಯಲ್ಲಿ ಕಾಣುವಂತೆಯೇ ತೋಫುವನ್ನು ಸಿದ್ಧಪಡಿಸಲಾಗುತ್ತದೆ. ನಂತರ ಇದನ್ನು ಚಚ್ಚೌಕವಾಗಿ ಕತ್ತರಿಸಲಾಗುತ್ತದೆ. ಇದು ಸಂಪೂರ್ಣ ಸಸ್ಯಜನ್ಯ ಉತ್ಪನ್ನ. ವೇಗನ್‌ಗಳಿಗೆ ಹೇಳಿ ಮಾಡಿಸಿದ ಆಹಾರ. ಇದನ್ನು ಎಲ್ಲರೂ ಸೇವಿಸಬಹುದು. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳಷ್ಟು ರೀತಿಯಲ್ಲಿ ಲಾಭಗಳಿವೆ. ಏನು ಪ್ರಯೋಜನಗಳಿವೆ ಸೋಯಾ ಹಾಲಿನ ಪನೀರ್‌ ಅಥವಾ ತೋಫು ಸೇವನೆಯಿಂದ?

ಅತ್ತ್ಯುತ್ತಮ ಪ್ರಾಣಿಜನ್ಯ ಪ್ರೊಟೀನ್

ಸಸ್ಯಾಹಾರಿಗಳಿಗೆ ಪ್ರೊಟೀನ್‌ ಸಾಲುವುದಿಲ್ಲ ಎಂಬ ದೂರು ಸಾಮಾನ್ಯ. ಆದರೆ ನಿಯಮಿತವಾಗಿ ಪನೀರ್‌, ತೋಫು ಸೇವನೆಯನ್ನು ರೂಢಿಸಿಕೊಂಡರೆ ಸಸ್ಯಾಹಾರಿಗಳೂ ಪ್ರೊಟೀನ್‌ ಕೊರತೆಯನ್ನು ನೀಗಿಸಿಕೊಳ್ಳಬಹುದು. ಅರ್ಧ ಕಪ್‌ ತೋಫುವಿನಲ್ಲಿ 181 ಕ್ಯಾಲೊರಿಗಳು, 21.8 ಗ್ರಾಂನಷ್ಟು ಪ್ರೊಟೀನ್‌, 11 ಗ್ರಾಂ ಕೊಬ್ಬು ಪ್ರಮುಖವಾಗಿ ದೊರೆಯುತ್ತದೆ. ಇದರಲ್ಲಿ ಅಗತ್ಯವಾದ ಎಲ್ಲ 9 ಅಮೈನೊ ಆಮ್ಲಗಳು ಸಮೃದ್ಧವಾಗಿ ದೊರೆಯುತ್ತವೆ. ಸ್ನಾಯುಗಳ ದುರಸ್ತಿ ಮಾಡಿ, ಬೆಳವಣಿಗೆಗೆ ಅಗತ್ಯವಾದಂಥ ಸಂಪೂರ್ಣ ಪ್ರೊಟೀನ್‌ ತೋಫುವಿನಲ್ಲಿ ದೊರೆಯುತ್ತದೆ.

ತೂಕ ಇಳಿಕೆಗೆ ಸೂಕ್ತ

ಕಡಿಮೆ ಕ್ಯಾಲರಿ ಮತ್ತು ಹೆಚ್ಚು ಪ್ರೊಟೀನ್‌ ಹೊಂದಿರುವ ಕಾರಣದಿಂದ, ತೂಕ ಇಳಿಸುವವರಿಗೆ ಹೇಳಿ ಮಾಡಿಸಿದ ಆಹಾರವಿದು. ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುವ ಇದು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದರಿಂದ ಆಗಾಗ ಕಾಡುವ ಕಳ್ಳ ಹಸಿವನ್ನು ದೂರ ಮಾಡಿ, ದೇಹದಲ್ಲಿ ಅನಗತ್ಯ ಕೊಬ್ಬು ಜಮಾಯಿಸುವುದನ್ನು ಸಹ ತಡೆಯಬಹುದು. ಹೀಗಾಗಿ ತೂಕ ಇಳಿಸುವವರಿಗೆ ಇದು ಸೂಕ್ತವಾದ ಆಹಾರವಿದು.

ಹೃದಯದ ಮಿತ್ರ

ತೋಫುವಿನಲ್ಲಿ ಸ್ಯಾಚುರೇಟೆಡ್‌ ಕೊಬ್ಬಿನ ಪ್ರಮಾಣ ಅತಿ ಕಡಿಮೆ. ಇದರಲ್ಲಿ ಇರುವ ಐಸೊಫ್ಲೇವನ್‌ಗಳು ಎಲ್‌ಡಿಎಲ್‌ ಕೊಲೆಸ್ಟ್ರಾಲ್‌ಗಳ ಜಮಾವಣೆಯನ್ನು ತಗ್ಗಿಸಲು ಸಹಾಯ ಮಾಡುತ್ತವೆ. ಹೀಗೆ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯ ಕಾಪಾಡಲು ಸೋಯಾ ಪನೀರ್‌ ನೆರವಾಗುತ್ತದೆ.

ಮಧುಮೇಹ ನಿಯಂತ್ರಣ

ತೋಫುವಿನ ಗ್ಲೈಸೆಮಿಕ್‌ ಸೂಚಿ ಕಡಿಮೆಯಿದೆ. ಅಂದರೆ ರಕ್ತದಲ್ಲಿರುವ ಸಕ್ಕರೆಯಂಶ ದಿಢೀರ್‌ ಏರಿಕೆಯಾಗಲು ಇದು ಅವಕಾಶ ನೀಡುವುದಿಲ್ಲ. ದೇಹದ ಚಯಾಪಚಯವನ್ನು ಹೆಚ್ಚಿಸುವ ಇದು, ನಾರು ಮತ್ತು ಪ್ರೊಟೀನನ್ನು ಸಾಂದ್ರವಾಗಿ ಹೊಂದಿದೆ. ಇಂಥ ಆಹಾರಗಳು ಮಧುಮೇಹಿಗಳಿಗೆ ಹೆಚ್ಚಿನ ಪ್ರಯೋಜನವನ್ನು ಒದಗಿಸುತ್ತವೆ. ಗರ್ಭಾವಸ್ಥೆಯ ಮಧುಮೇಹ ಹೊಂದಿದವರ ಮೇಲೆ ನಡೆಸಿದ ಪ್ರಯೋಗದಲ್ಲಿ, ಆರು ವಾರಗಳವರೆಗೆ ಹೆಚ್ಚಿನ ಪ್ರಮಾಣದ ಸೋಯ್‌ ಪ್ರೊಟೀನ್‌ ಸೇವಿಸಿದ ಮಹಿಳೆಯರಲ್ಲಿ ಸಕ್ಕರೆ ಕಾಯಿಲೆ ಗಣನೀಯವಾಗಿ ನಿಯಂತ್ರಣಕ್ಕೆ ಬಂದಿದ್ದು ದಾಖಲಾಗಿದೆ.

ಜೀರ್ಣಾಂಗಗಳು ಕ್ಷೇಮ

ತೋಫುವಿನಲ್ಲಿ ಸಾಕಷ್ಟು ನಾರಿನಂಶವಿದೆ. ಇದು ಮಲಬದ್ಧತೆಯ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ, ನಾರು ಹೆಚ್ಚಿರುವ ಆಹಾರಗಳಿಂದ ಜೀರ್ಣಾಂಗಗಳಲ್ಲಿರುವ ಉತ್ತಮ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ವೃದ್ಧಿಸಬಹುದು. ಇದಲ್ಲದೆ, ಕೆಲವು ಬಗೆಯ ತೋಫುಗಳ ತಯಾರಿಕೆಯ ಪ್ರಕ್ರಿಯೆಯಲ್ಲಿ ಒಂದಿಷ್ಟು ಪ್ರೊಬಯಾಟಿಕ್‌ ಬ್ಯಾಕ್ಟೀರಿಯಗಳು ಸೇರಿಕೊಳ್ಳುತ್ತವೆ. ಈ ಎಲ್ಲದರಿಂದ ಜೀರ್ಣಾಂಗಗಳ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಾಧ್ಯವಿದೆ.

ಮೂಳೆಗಳ ಸಾಂದ್ರತೆ ರಕ್ಷಣೆ

ತೋಫು ತಯಾರಿಸುವ ಪ್ರಕ್ರಿಯೆಯಲ್ಲಿಯೇ ಕ್ಯಾಲ್ಶಿಯಂ ಮತ್ತು ಮೆಗ್ನೀಶಿಯಂ ಇದರಲ್ಲಿ ಸೇರಿಕೊಳ್ಳುತ್ತವೆ. ಮೂಳೆಗಳ ಸಾಂದ್ರತೆಯ ರಕ್ಷಣೆಗೆ ಈ ಖನಿಜಗಳು ಅಗತ್ಯವಾಗಿ ಬೇಕು. ಹಾಗಾಗಿ ಆಸ್ಟಿಯೊಪೊರೊಸಿಸ್‌ ಇರುವಂಥವರಿಗೆ ಇದು ಒಳ್ಳೆಯ ಆಹಾರ. ಜೊತೆಗೆ, ಋತುಬಂಧದ ಸಮಪದಲ್ಲಿರುವವರು, ಯಾವುದೇ ರೀತಿಯ ಕ್ಯಾಲ್ಶಿಯಂ ಕೊರತೆ ಇರುವವರಿಗೂ ಇದು ಸೂಕ್ತ. ಮಿತ ಪ್ರಮಾಣದಲ್ಲಿ ಎಲ್ಲರೂ ಇದನ್ನು ಸೇವಿಸುವುದು ಒಳ್ಳೆಯದೆ.

ಇದನ್ನೂ ಓದಿ: Mango Juice Benefits: ತಾಜಾ ಮಾವಿನ ರಸ ಕುಡಿಯುವುದರಿಂದ ಎಷ್ಟೊಂದು ಪ್ರಯೋಜನ ಇದೆ ನೋಡಿ…

ಜಾಗ್ರತೆ ಮಾಡಿ

ಹಾಗೆಂದು ಇದನ್ನು ಮಿತಿಮೀರಿಯೂ ತಿನ್ನುವಂತಿಲ್ಲ. ಸೋಯ್‌ ಅಲರ್ಜಿ ಇರುವವರು, ಥೈರಾಯ್ಡ್‌ ತೊಂದರೆಗಳು ಇರುವವರು, ಅದರಲ್ಲೂ ಮುಖ್ಯವಾಗಿ ಹೈಪೊ ಥೈರಾಯ್ಡ್‌ ಇರುವವರು, ಕಿಡ್ನಿ ಕಲ್ಲು ಇರುವವರು ಇದನ್ನು ಮಿತವಾಗಿ ಬಳಸುವುದು ಸೂಕ್ತ. ಹೆಚ್ಚಿನ ಪ್ರೊಟೀನ್‌ ಮತ್ತು ನಾರು ಸೇವನೆಯಿಂದ ಕೆಲವರಿಗೆ ಹೊಟ್ಟೆ ಉಬ್ಬರ, ಅಜೀರ್ಣ, ಡಯರಿಯಾ ಕಾಡಬಹುದು. ಹಾಗಾಗಿ ತೋಫು ಒಳ್ಳೆಯದೇ ಆದರೂ ಇದನ್ನು ಮಿತವಾಗಿ ಸೇವಿಸುವುದು ಉತ್ತಮ.

Exit mobile version