Site icon Vistara News

Health Tips: ಬೇಸಿಗೆಯ ಆಹಾರದಲ್ಲಿ ನಿಮಗೆ ಗೊತ್ತಿಲ್ಲದೆ ಈ ತಪ್ಪುಗಳಾಗಬಹುದು!

tender coconut

ಬಹಳಷ್ಟು ಮಂದಿಗೆ ಕೆಲವು ಬಗೆಯ ಆಹಾರಗಳು‌ (summer foods) ಹಾಗೂ ಹಣ್ಣುಹಂಪಲುಗಳನ್ನು‌ ಬೇಸಿಗೆಯಲ್ಲಿ‌ ನಮ್ಮ ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ‌ಸೇವಿಸಬೇಕು‌ ಎಂಬುದರಲ್ಲಿ‌ ನಂಬಿಕೆಯಿದೆ. ಆಹಾರದ ಬಗೆಗೆ ನಾವು ಇಟ್ಟುಕೊಂಡಿರುವ ನಂಬಿಕೆಗಳು ಕೆಲವೊಮ್ಮೆ ಸತ್ಯವೂ ಆಗಿರಬಹುದು, ಕೆಲವೊಮ್ಮೆ ಆ ನಂಬಿಕೆಯಲ್ಲಿ‌ ಹುರುಳೇ ಇಲ್ಲದೆಯೂ ಇರಬಹುದು. ಹಾಗಾದರೆ ಬನ್ನಿ‌ ನಮ್ಮ‌ ನಂಬಿಕೆಯ ಸತ್ಯಾಸತ್ಯತೆಯನ್ನೊಮ್ಮೆ ಒರೆಗೆ ಹಚ್ಚಿ ನೋಡೋಣ.

1. ಕೋಲ್ಡ್ ಡ್ರಿಂಕ್‌ಗಳು: ಕಾರ್ಬೋನೇಟೆಡ್ ಡ್ರಿಂಕ್‌ಗಳ ಬಗ್ಗೆ ಮಾತ್ರ ಇಲ್ಲಿ ಹೇಳುತ್ತಿಲ್ಲ. ಎಲ್ಲ ಬಗೆಯ ತಾಜಾ‌ ಜ್ಯೂಸ್‌ಗಳೂ, ಸ್ಮೂದಿಗಳೂ, ಮಿಲ್ಕ್ ಶೇಕ್ ಗಳೂ ಕೂಡಾ‌ ನಮ್ಮ‌ ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದಿಲ್ಲ. ದೇಹದ ಉಷ್ಣತೆ‌ ಮೇಲೆ‌ ಇವು‌ ಯಾವ ಪರಿಣಾಮ‌ವನ್ನೂ ಬೀರುವುದಿಲ್ಲ. ಆದರೆ, ಇವು ದೇಹಕ್ಕೆ ಬೇಕಾದ ತಾಜಾ‌ ಅನುಭೂತಿ‌ ನೀಡುತ್ತದೆ ಎಂಬುದು ನಿಜವೇ. ವಾತಾವರಣದಲ್ಲಿ ತೇವಾಂಶ ಹೆಚ್ಚಿರುವ ಸಂದರ್ಭ ಇವು ದೇಹವನ್ನು ತಣ್ಣಗಿರಿಸಲು‌ ಸಹಾಯ ಮಾಡಬಹುದು. ಆದರೆ, ನೇರವಾಗಿ ದೇಹದ ಉಷ್ಣತೆಯನ್ನು ಕಡಿಮೆಗೆ ತರುವುದಿಲ್ಲ. ಪೆಪ್ಸಿ, ಕೋಲಾದಂತಹ‌ ಕಾರ್ಬೋನೇಟೆಡ್ ಪೇಯಗಳನ್ನು ಬಿಟ್ಟರೆ ಉಳಿದವು ಖಂಡಿತವಾಗಿಯೂ ದೇಹದಲ್ಲಿ  ಬೇಸಿಗೆಯಲ್ಲಿ‌  ನೀರಿನಂಶ ಇರುವಂತೆ ನೋಡಿಕೊಳ್ಳುತ್ತವೆ.

health tips fruits for stress

2. ಬಿಸಿ ಪೇಯಗಳು: ಹಲವರಿಗೆ ಬೇಸಿಗೆಯಲ್ಲಿ ಬಿಸಿ ಪೇಯಗಳಾದ ಚಹಾ, ಕಾಫಿ ಕುಡಿಯುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಎಂಬ ಭಾವನೆಯಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂದು ನಂಬುವ ಮಂದಿ ಇವರು. ಆದರೆ ಇದು ಸಂಪೂರ್ಣ ತಪ್ಪು‌ ನಂಬಿಕೆ. ಬೇಸಿಗೆಯಲ್ಲಿ ಬಿಸಿಬಿಸಿ ಪೇಯಗಳನ್ನು ಕುಡಿಯುವುದರಿಂದ ಇನ್ಮಷ್ಟು ಸೆಖೆ ಹೆಚ್ಚಾಗುತ್ತದೆ. ತೇವಾಂಶ ಹೆಚ್ಚಿರುವ ಸೆಖೆ ಪ್ರದೇಶಗಳಾದ ಸಮುದ್ರ ತೀರದಲ್ಲಿ ಬಿಸಿ ಬಿಸಿ‌ ಚಹಾ, ಕಾಫಿ ಇನ್ನಷ್ಟು ಬೆವರಿಳಿಸುವಂತೆ ಮಾಡುತ್ತದೆ.  ಆದರೆ, ವಾತಾವರಣದಲ್ಲಿ ತೇವಾಂಶ ಕಡಿಮೆ ಇರುವ ಸಮಯದಲ್ಲಿ ಚಹಾ, ಕಾಫಿ ಕುಡಿಯಬಹುದು. ಆದರೆ ಹೆಚ್ಚು ಒಳ್ಳೆಯದಲ್ಲ.

3. ಹಣ್ಣು ಹಂಪಲು: ಹಣ್ಣು ಹಂಪಲುಗಳು ಬೇಸಿಗೆಯಲ್ಲಿ ಒಳ್ಳೆಯದನ್ನೇ ಮಾಡುತ್ತದೆ. ಮಾವು, ಕಲ್ಲಂಗಡಿ, ಮಾವು, ಚಿಕ್ಕು ಹಲಸು, ದ್ರಾಕ್ಷಿ, ಕಿತ್ತಳೆ, ಬಾಳೆಹಣ್ಣು ಹೀಗೆ ಬಹುತೇಕ ಎಲ್ಲ ಹಣ್ಣುಗಳ ಸೇವನೆಯೂ ಬೇಸಿಗೆಯಲ್ಲಿ ದೇಹದಲ್ಲಿ ನೀರಿನ‌ ಪೂರೈಕೆಯಲ್ಲಿ ಮುಖ್ಯ‌ ಪಾತ್ರ ವಹಿಸುತ್ತದೆ.

health tips fruits for stress

4. ಮಸಾಲೆ ಪದಾರ್ಥಗಳು: ಮೆಣಸು ಹಾಗೂ ಖಾರಯುಕ್ತ ಮಸಾಲೆ ಪದಾರ್ಥಗಳ‌ ಅತಿಯಾದ ಸೇವನೆ  ಬೇಸಿಗೆಯಲ್ಲಿ ಒಳ್ಳೆಯದಲ್ಲ. 

ಇದನ್ನೂ ಓದಿ: Health Tips: ಬಾರ್ಲಿ ನೀರಿನಲ್ಲಿದೆ ಹಲವು ಹಲವು ಆರೋಗ್ಯ ಪ್ರಯೋಜನ, ಇದು ಬೇಸಿಗೆಯ ಸಂಗಾತಿ

5. ಸ್ಪೋರ್ಟ್ಸ್‌ ಡ್ರಿಂಕ್‌ಗಳು: ಸ್ಪೋರ್ಟ್ಸ್ ಡ್ರಿಂಕ್‌ಗಳಲ್ಲಿ ಹೇರಳವಾಗಿ ಕೆಫೀನ್ ಇರುವುದರಿಂದ ಖಂಡಿತ ಇವು ಒಳ್ಳೆಯದಲ್ಲ. ಶಕ್ತಿವರ್ಧಕ‌ ಪೋಷಕಾಂಶಗಳು ಇದರಲ್ಲಿವೆ ಅಂದುಕೊಂಡು ಬೇಸಿಗೆಯ ದಾಹಕ್ಕೆ ಬಳಸಿಕೊಂಡರೆ ತತ್ ಕ್ಷಣಕ್ಕೆ ಪ್ರಯೋಜನ ಸಿಕ್ಕರೂ ದೀರ್ಘಕಾಲಕ್ಕೆ ಇವು ಒಳ್ಳೆಯದಲ್ಲ.

6. ಎಳನೀರು: ಬೇಸಿಗೆಯಲ್ಲಿ ಕುಡಿಯಬಹುದಾದ ಪೇಯಗಳ ಪೈಕಿ ಅತ್ಯಂತ ಒಳ್ಳೆಯದು ಎಂದರೆ ಎಳನೀರು. ಇದು ಬೇಸಿಗೆಯಲ್ಲಿ ದಾಹ ಇಂಗಿಸುವುದಷ್ಟೇ ಅಲ್ಲ, ಇದರಲ್ಲಿ ಎಲ್ಲ ಬಗೆಯ ಪೋಷಕಾಂಶಗಳೂ ಖನಿಜಾಂಶಗಳೂ ಇರುತ್ತದೆ. ಇದರಲ್ಲದೆ,ಮಜ್ಜಿಗೆಯನ್ನೂ ಅತ್ಯಂತ ಉತ್ತಮ ಬೇಸಿಗೆಯ ಪೇಯ ಎನ್ನಬಹುದು.

7. ಊಟ ಬಿಡುವುದು: ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಸಮದೂಗಿಸಿಕೊಳ್ಳುವ ಸಲುವಾಗಿ ಕೆಲವರು ಯಾವುದಾದರೊಂದು ಹೊತ್ತು ಊಟ ಬಿಡುವ ಯೋಚನೆ ಮಾಡುತ್ತಾರೆ. ಬಹಳ ಮಂದಿಗೆ ಇಂಥದ್ದೊಂದು ನಂಬಿಕೆಯಿದೆ. ಆದರೆ ಈ ನಂಬಿಕೆಯಲ್ಲಿ ಹುರುಳಿಲ್ಲ. ಕ್ಯಾಲರಿ ಕಡಿಮೆ ತೆಗೆದುಕೊಂಡರೆ ಬೇಸಿಗೆಯಲ್ಲಿ ಒಳ್ಳೆಯದು ನಿಜ. ಆದರೆ, ಇದಕ್ಕೆ ಊಟ ಬಿಡಲು ಹೋದರೆ ತೊಂದರೆ ತಪ್ಪಿದ್ದಲ್ಲ.

ಇದನ್ನೂ ಓದಿ: Health Tips: ಮೊಸರು, ಲಸ್ಸಿ, ಮಜ್ಜಿಗೆ; ಬೇಸಿಗೆಯಲ್ಲಿ ಯಾವುದು ಹಿತಕರ?

Exit mobile version