Site icon Vistara News

Health Tips: ತಂಪು ತಂಪು ಕೂಲ್‌ ಕೂಲ್‌ ಈ ಲಾವಂಚ ಎಂಬ ಬೇಸಿಗೆಯ ಬಂಧು!

lavancha

ಬೇಸಿಗೆ ಬಂತೆಂದರೆ ನಾವು ಮೊರೆ ಹೋಗುವ ಅನೇಕ ನೈಸರ್ಗಿಕ ತಂಪು ಪಾನೀಯಗಳ ಪೈಕಿ ಖಸ್‌ ಖಸ್‌ ಅಥವಾ ಲಾವಂಚದ ಶರಬತ್ತು ಕೂಡಾ ಒಂದು. ಹಿಂದಿನಿಂದ ನಮ್ಮ ಹಿರಿಯರು ಕಂಡುಕೊಂಡ ನೈಸರ್ಗಿಕ ಪರಿಹಾರಗಳಲ್ಲಿ ಇದೂ ಒಂದು. ಆದರೆ ಇತ್ತೀಚೆಗಿನ ದಿನಗಳಲ್ಲಿ ಇವುಗಳ ಬಳಕೆ ಕಡಿಮೆಯಾಗುತ್ತಿದೆ. ಆದರೆ, ಬೇಸಿಗೆಯ ಧಗೆಗೆ ನೈಸರ್ಗಿಕ ಪರಿಹಾರಗಳಷ್ಟು ಒಳ್ಳೆಯ ಆಯ್ಕೆ ಇನ್ನೊಂದಿಲ್ಲ. ಲಾವಂಚ ಕೇವಲ ನಮ್ಮ ಬಾಯಾರಿಕೆ ನೀಗಿಸುವುದಷ್ಟೇ ಅಲ್ಲ, ದೇಹವನ್ನು ತಂಪಾಗಿಡುವುದಕ್ಕೆ ಕೂಡಾ ನೆರವಾಗುತ್ತದೆ. ಲಾವಂಚದ ಟೊಪ್ಪಿ ಬಿಸಿಲಿನಿಂದ ನಮಗೆ ರಕ್ಷಣೆ ನೀಡಿದರೆ, ಶರಬತ್ತು ಹಾಗೂ ಲಾವಂಚದ ನೀರು ನಮ್ಮ ದೇಹವನ್ನು ಒಳಗಿನಿಂದ ತಣ್ಣಗಿರಿಸುತ್ತದೆ. ಬೇಸಿಗೆ ಬಂತೆಂದರೆ ಇವೆಲ್ಲವುಗಳ ಅಗತ್ಯ ನಮಗೆ ನಿಜವಾಗಿ ಮನವರಿಕೆಯಾಗುತ್ತದೆ.

ಖಸ್‌ಖಸ್‌ ಅಥವಾ ಲಾವಂಚ ನಮಗೆ ಪ್ರಿಯವಾಗುವುದು ಅದರ ವಿಶೇಷವಾದ ಘಮದಿಂದ. ಲಾವಂಚದ ಬೇರು ಕೇವಲ ಶರಬತ್ತಷ್ಟೇ ಅಲ್ಲ, ಸಾಬೂನು, ಸುಗಂಧ ದ್ರವ್ಯಗಳು, ಪಾನ್‌ ಮಸಾಲಾ ಸೇರಿದಂತೆ ಅನೇಕ ಬಗೆಯ ಆಹಾರವಸ್ತುಗಳು ಹಾಗೂ ಕಾಸ್ಮಿಟಿಕ್‌ಗಳ ತಯಾರಿಕೆಯಲ್ಲೂ ಬಳಕೆಯಾಗುತ್ತದೆ. ಲಾವಂಚವೆಂಬ ಹುಲ್ಲಿನ ಬೇರಿನಲ್ಲಿ ವಿಟಮಿನ್‌ ಎ, ಬಿ, ಸಿ ಸೇರಿದಂತೆ ಹಲವು ಪೋಷಕಾಂಶಗಳೂ, ಖನಿಜಾಂಶಗಳೂ ಹೇರಳವಾಗಿರುವುದರಿಂದ ಇದು ಪುರಾತನ ಕಾಲದಿಂದಲೂ ಜನರು ತಮ್ಮ ಮನೆಗಳಲ್ಲಿ ಬೇಸಿಗೆಯ ಉರಿಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು, ದೇಹ ತಂಪಾಗಿಸಲು ಬಳಸುತ್ತಿದ್ದ ವಸ್ತುವಾಗಿದೆ.

ಖಸ್‌ ಖಸ್‌ ಅಥವಾ ಲಾವಂಚವನ್ನು ನಿತ್ಯ ಬಳಕೆಯಲ್ಲಿ ಬೇಸಿಗೆಯಲ್ಲಿ ಉಪಯೋಗಿಸಬೇಕೆಂದರೆ ಒಂದೋ ಯಾವ ಶ್ರಮವೂ ಇಲ್ಲದೆ ಮಾರುಕಟ್ಟೆಯಲ್ಲಿ ಸಿಗುವ ಹಸಿರು ಬಣ್ಣದ ಖಸ್‌ಖಸ್‌ ಸಿರಪ್‌ ಖರೀದಿಸಬಹುದು. ಇಲ್ಲವೇ, ಮನೆಯಲ್ಲೇ ಲಾವಂಚದ ಬೇರುಗಳನ್ನು ನೀರಿನಲ್ಲಿ ಮೂರು ದಿನಗಳ ಕಾಲ ನೆನೆ ಹಾಕಿ ಅದನ್ನು ಶರಬತ್ತಿಗೆ ಬಳಸಬಹುದು, ಅಥವಾ ಆ ನೀರನ್ನು ಹಾಗೆಯೇ ಕುಡಿಯಬಹುದು.

1. ಲಾವಂಚದ ಬೇರಿನ ನೀರನ್ನು ಹೀಗೆ ನಿತ್ಯವೂ ಸೇವಿಸುವುದರಿಂದ ಇತರ ಅನೇಕ ಪ್ರಯೋಜನಗಳೂ ಇವೆ. ಈ ಬೇರಿನಲ್ಲಿ ಸಾಕಷ್ಟು ಕಬ್ಬಿಣಾಂಶ, ಮ್ಯಾಂಗನೀಸ್‌ ಹಾಗೂ ಹಲವು ಬಗೆಯ ವಿಟಮಿನ್‌ಗಳೂ ಇರುವುದರಿಂದ ಇದು ನೈಸರ್ಗಿಕವಾಗಿ ಅಧಿಕ ರಕ್ತದೊತ್ತಡವನ್ನು ಸಮತೋಲನಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಇದು ರಕ್ತ ಪರಿಚಲನೆಯನ್ನು ತೀವ್ರಗೊಳಿಸಿ, ಅಧಿಕ ಒತ್ತಡವಿದ್ದಲ್ಲಿ ಅದನ್ನೊಂದು ಹದಕ್ಕೆ ತರುತ್ತದೆ.

ಇದನ್ನೂ ಓದಿ: Health Tips: ನಾರು ಒಳ್ಳೆಯದು; ಆದರೂ ಅತಿಯಾಗಿ ತಿನ್ನಬೇಡಿ!

2. ಅಧಿಕ ಬಾಯಾರಿಕೆಗೆ ಇದು ಸೂಕ್ತ ಮನೆಮದ್ದು. ಬೇಸಿಗೆಯ ಧಗೆಗೆ ಎಷ್ಟು ನೀರು ಕುಡಿದರೂ ನೀರು ಕುಡಿದಂತೆ ಅನಿಸದಿದ್ದಾಗ ಲಾವಂಚದ ನೀರು ಸಹಾಯಕ್ಕೆ ಬರುತ್ತದೆ. ಇದು ಬಾಯಾರಿಕೆಯನ್ನು ತಣಿಸುತ್ತದೆ. ಹೆಚ್ಚು ಬಾಯಾರದಂತೆಯೂ ನೋಡಿಕೊಳ್ಳುವ ಗುಣ ಇದರಲ್ಲಿದೆ. ಒಂದು ಸಮತೋಲನ ಬಾಯಾರಿಕೆಯನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.

3. ಲಾವಂಚದಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿರುವುದರಿಂದ ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಲ್ಲಿಯೂ ಸಹಾಯ ಮಾಡುತ್ತದೆ.

4. ಇದರಲ್ಲಿ ಝಿಂಕ್‌ ಹೇರಳವಾಗಿ ಇರುವುದರಿಂದ ಕಣ್ಣಿನ ಸಂಬಂಧೀ ತೊಂದರೆಗೂ ಇದು ಉತ್ತಮ ಪರಿಹಾರ ನೀಡುತ್ತದೆ. ಕಣ್ಣಿನ ಅಲರ್ಜಿಗಳು ಹಾಗೂ ಈ ಸಂಬಂಧಿಸಿದ ಸಮಸ್ಯೆಗಳಿಗೆ ಇದು ಉತ್ತಮ ಔಷಧಿ.

5. ಲಾವಂಚದಿಂದ ಕೇವಲ ಇಷ್ಟೇ ಅಲ್ಲ. ಇನ್ನೂ ಅನೇಕ ಲಾಭಗಳಿವೆ. ಇದು ದೇಹದ ಉರಿಯೂತ, ಅಲ್ಲಲ್ಲಿ ನೋವು ಇತ್ಯಾದಿಗಳಿಗೂ ಒಳ್ಳೆಯ ಔಷಧಿ. ಕಿಡ್ನಿ ಕಲ್ಲಿನ ಸಮಸ್ಯೆಗೂ ಇದು ಒಳ್ಳೆಯದು. ಪಚನಕ್ರಿಯೆಯನ್ನು ಉತ್ತೇಜಿಸುವ ಇದು ನರಮಂಡಲದ ಸಮಸ್ಯೆಗಳಿಗೂ ಒಳ್ಳೆಯದು. ನಿದ್ದೆಯ ಸಮಸ್ಯೆ ಇರುವ ಮಂದಿಗೆ ಲಾವಂಚದ ಶರಬತ್ತು ಒಳ್ಳೆಯದು. ಲಾವಂಚದ ಬೇರಿನ ದಿಂಬಿನಲ್ಲಿ ಮಲಗುವುದು ಕೂಡಾ ಪರಿಹಾರ ಕೊಡಬಹುದು.

ಇದನ್ನೂ ಓದಿ: Health Tips: ನಾನ್‌ಸ್ಟಿಕ್‌ ಪಾತ್ರೆಗಳು ಆರೋಗ್ಯಕ್ಕೆ ಮಾರಕವಾಗದಂತೆ ಬಳಸುವುದು ಹೇಗೆ?

Exit mobile version