Site icon Vistara News

Health tips for Monsoon : ಮಳೆಗಾಲದ ಖುಷಿ ಅನುಭವಿಸಿ, ಆದರೆ ರೋಗಗಳನ್ನು ದೂರ ಇರಿಸಿ

monsoon health guide

ಮಳೆಗಾಲವೆಂದರೆ ಜೀವ ಧರಿಸುವ ಕಾಲವೂ ಹೌದು, ರೋಗ ತರಿಸುವ ಕಾಲವೂ ಹೌದು! ಹಾಗಾಗಿ ವರ್ಷ ಋತುವಿನಲ್ಲಿ ಸಾಮಾನ್ಯವಾಗಿ ಕಾಡುವ ಸೋಂಕುಗಳು (Health tips for Monsoon) ಮತ್ತು ಮುನ್ನೆಚ್ಚರಿಕೆಗಳ ಬಗೆಗಿನ ವಿವರಗಳು ಇಲ್ಲಿವೆ.

ಮಳೆಗಾಲದ ಹೊಸಿಲಲ್ಲಿದ್ದೇವೆ. ನೈಋತ್ಯ ಮುಂಗಾರು ಕೇರಳವನ್ನು ಯಾವತ್ತು ಪ್ರವೇಶಿಸುತ್ತದೆ ಎಂಬ ನಿರೀಕ್ಷೆಯಲ್ಲೇ ಇದ್ದೇವೆ. ಈಗ ಹೊಳೆಯುತ್ತಿರುವ ಆಗಸ ಯಾವಾಗ ಮಂಕಾಗುತ್ತದೆ, ಎಂದಿಗೆ ಮೋಡ ಕವಿಯುತ್ತದೆ, ಯಾವತ್ತು ತುಂತುರು ಮಳೆ ಶುರುವಾಗುತ್ತದೆ ಎಂದೆಲ್ಲಾ ಹವಾಮಾನ ವರದಿಯನ್ನು ನೋಡಿಯೇ ನೋಡುತ್ತೇವೆ. ಇಷ್ಟಾದರೆ ಮುಗಿಯಲಿಲ್ಲ, ಮಳೆಗಾಲಕ್ಕೊಂದು ಸರಿಯಾದ ತಯಾರಿ ಬೇಡವೇ? ಹಿಂದಿನ ದಿನಗಳಂತೆ, ಕೊಡೆ, ರೇನ್‌ಕೋಟು, ಗಂಬೂಟು ಎಂದೆಲ್ಲಾ ಸಿದ್ಧತೆ ಬೇಕಿಲ್ಲ. ಆದರೆ ಮಳೆಯೊಂದಿಗೆ ಮುತ್ತಿಕೊಳ್ಳುವ ಸೋಂಕು ರೋಗಗಳಿಗೆ (Health tips for Monsoon) ತಡೆಯೊಡ್ಡಲು ತಯಾರಿ ಬೇಕಲ್ಲ. ಮಳೆಗಾಲದಲ್ಲಿ ಸೊಳ್ಳೆ, ನೀರು ಮತ್ತು ಗಾಳಿಯಿಂದ ಹರಡುವ ಕಾಯಿಲೆಗಳ ಬಗ್ಗೆ ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಇಲ್ಲಿದೆ ಮಾಹಿತಿ.

ಸೊಳ್ಳೆಯಿಂದ ಹರಡುವ ರೋಗಗಳು

ಮಳೆಗಾಲವೆಂದರೆ ಹುಲ್ಲಿನಿಂದ ಹಿಡಿದು ಮರಗಳವರೆಗೆ, ಹುಳು-ಹುಪ್ಪಡಿಗಳಿಂದ ಹಿಡಿದು ಸೊಳ್ಳೆಗಳವರೆಗೆ ಸರ್ವತ್ರ ಚಿಗುರುವ ಕಾಲ. ಗಟ್ಟಿಯಾಗಿ ಹೆಜ್ಜೆ ಊರಿದಲ್ಲೂ ನೀರು ನಿಲ್ಲುವ ಮಳೆಗಾಲದ ದಿನಗಳೆಂದರೆ ಸೊಳ್ಳೆಗಳಿಗೆ ಸಂತಾನೋತ್ಪತ್ತಿಯ ದಿನಗಳು. ವಿಶ್ವಮಟ್ಟದಲ್ಲಿ ಶೇ. ೩೪ರಷ್ಟು ಡೆಂಗೂ ಪ್ರಕರಣಗಳು ಮತ್ತು ಶೇ. ೩ ಮಲೇರಿಯಾ ಪ್ರಕರಣಗಳಿಗೆ ಭಾರತವೇ ತವರು. ಹಾಗಾಗಿ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಗಮನಿಸೋಣ (Health tips for Monsoon).

ಮಲೇರಿಯಾ

ಅನಾಫಿಲಿಸ್‌ ಹೆಣ್ಣು ಸೊಳ್ಳೆಯು ಕಚ್ಚಿದಾಗ ದೇಹ ಸೇರುವ ಪ್ಮಾಸ್ಮೋಡಿಯಂ ಎಂಬ ಏಕಕೋಶ ಜೀವಿಯಿಂದ ಬರುವ ಕಾಯಿಲೆಯಿದು. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಇದು ಪ್ರಾಣಘಾತುಕವೂ ಆಗಬಲ್ಲದು. ಮುನ್ನೆಚ್ಚರಿಕೆಯಿಂದ ಇದನ್ನು ತಡೆಯುವುದು ಸಾಧ್ಯವಿದ್ದರೂ, ಜಾಗತಿಕ ಮಟ್ಟದಲ್ಲಿ ಪ್ರತಿವರ್ಷ ಲಕ್ಷಗಟ್ಟಲೆ ಜೀವಗಳು ಈ ರೋಗಕ್ಕೆ ಬಲಿಯಾಗುತ್ತಿವೆ.

ಏನಿದರ ಲಕ್ಷಣಗಳು?: ಸೊಳ್ಳೆ ಕಚ್ಚಿದ ೧೦ ದಿನಗಳ ನಂತರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ವಿಪರೀತ ಜ್ವರ, ಮೈಕೈ ನೋವು, ಚಳಿಯಾಗಿ ನಡುಕ, ಜ್ವರ ಕಡಿಮೆಯಾದರೆ ಸಿಕ್ಕಾಪಟ್ಟೆ ಬೆವರುವುದು, ತಲೆನೋವು, ವಾಂತಿ, ಡಯರಿಯದಂಥ ಚಿಹ್ನೆಗಳು ಕಂಡುಬರುತ್ತವೆ. ಈ ಯಾವುದೇ ಲಕ್ಷಣಗಳು ಕಂಡರೂ ವೈದ್ಯರೊಂದಿಗೆ ಸಮಾಲೋಚನೆ ಅಗತ್ಯ.

ಡೆಂಗೂ

ಏಡಿಸ್‌ ಹೆಣ್ಣು ಸೊಳ್ಳೆಯಿಂದ ಹರಡುವ ವೈರಸ್‌ ಸೋಂಕಿದು. ಸೊಳ್ಳೆ ಕಚ್ಚಿದ ನಾಲ್ಕಾರು ದಿನಗಳ ನಂತರ ರೋಗದ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಫ್ಲೂ ಮಾದರಿಯಲ್ಲಿ ಇರುವ ಈ ಕಾಯಿಲೆಯಲ್ಲಿ ಕೆಲವೊಮ್ಮೆ ರಕ್ತದಲ್ಲಿ ಪ್ಲೇಟ್‌ಲೆಟ್‌ಗಳು ಕುಸಿದು ಜೀವಕ್ಕೆ ಎರವಾಗುವ ಸಾಧ್ಯತೆಯಿದೆ.

ಲಕ್ಷಣಗಳು: ಜ್ವರ, ತೀವ್ರವಾದ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಕೀಲು ಮತ್ತು ಸ್ನಾಯುಗಳಲ್ಲಿ ನೋವು, ಮೈಮೇಲೆ ದದ್ದುಗಳು, ವಾಂತಿ- ಜ್ವರದೊಂದಿಗೆ ಈ ಪೈಕಿ ಯಾವುದೇ ಎರಡು ಲಕ್ಷಣಗಳನ್ನು ಕಂಡರೂ ವೈದ್ಯರನ್ನು ಸಂಪರ್ಕಿಸಬೇಕು.

ಚಿಕೂನ್‌ಗುನ್ಯಾ

ಸೊಳ್ಳೆ ಕಚ್ಚುವುದರಿಂದ ಹರಡುವ ಚಿಕೂನ್‌ಗುನ್ಯಾ ವೈರಸ್‌ನಿಂದಲೇ ಬರುವ ರೋಗವಿದು. ಜ್ವರದೊಂದಿಗೆ ತೀವ್ರವಾದ ಕೀಲುನೋವು ಇದರ ಪ್ರಮುಖ ಲಕ್ಷಣಗಳು. ಸೋಂಕಿತ ಸೊಳ್ಳೆ ಕಚ್ಚಿದ ೪-೮ ದಿನಗಳ ಅಂತರದಲ್ಲಿ ರೋಗಚಿಹ್ನೆಗಳು ಕಂಡುಬರುತ್ತವೆ. ಈ ಸೊಳ್ಳೆಗಳು ರಾತ್ರಿಯಲ್ಲಿ ಮಾತ್ರವೇ ಅಲ್ಲ, ಹಗಲಿನಲ್ಲೂ ಕಚ್ಚುತ್ತವೆ. ಏಷ್ಯಾ ಮತ್ತು ಭಾರತೀಯ ಉಪಖಂಡದಲ್ಲಿ ಮುಖ್ಯವಾಗಿ ಈ ಕಾಯಿಲೆ ಸದ್ದು ಮಾಡುತ್ತಿದೆ.

ತಡೆ ಹೇಗೆ?: ಸೊಳ್ಳೆಯಿಂದ ಹರಡುವ ಯಾವುದೇ ರೋಗವಾದರೂ, ಅದನ್ನು ತಡೆಯುವ ಕ್ರಮದಲ್ಲಿ ವಿಶೇಷ ವ್ಯತ್ಯಾಸವಿಲ್ಲ. ಮನೆಯ ಸುತ್ತಲೂ ನೀರು ನಿಲ್ಲದಂತೆ ನಿಗಾ ವಹಿಸಿ. ತೆರೆದ ಚರಂಡಿಯೇ ಬೇಕೆಂದಿಲ್ಲ, ಎಳನೀರಿನ ಚಿಪ್ಪುಗಳು, ರಸ್ತೆಗುಂಡಿಗಳಿಂದ ಹಿಡಿದು, ಎಲ್ಲೆಲ್ಲಿ ನೀರಿನ ಪಸೆಯಿದ್ದರೂ ಸೊಳ್ಳೆಗಳು ಸೃಷ್ಟಿ ಕಾರ್ಯ ನಡೆಸುತ್ತವೆ. ಮನೆಯಲ್ಲಿ ನೀರಿರಬಹುದಾದ ಕೂಲರ್‌ಗಳು, ಬಕೆಟ್‌ ಇತ್ಯಾದಿಗಳ ಬಗ್ಗೆ ಗಮನಕೊಡಿ. ನೀರು ತುಂಬಿಸಿಸುವ ಎಲ್ಲವನ್ನೂ ಮುಚ್ಚಿಡಿ. ನೀರು ನಿಲ್ಲುವಂಥ ಜಾಗಗಳಿದ್ದರೆ ಅವುಗಳ ಮೇಲೆ ಕೀಟನಾಶಕ ಸಿಂಪಡಿಸಿ.

ಮೈ ತುಂಬಾ ವಸ್ತ್ರಗಳನ್ನು ಧರಿಸಿದರೆ, ಸೊಳ್ಳೆಗಳು ಕಚ್ಚುವುದರಿಂದ ತಪ್ಪಿಸಿಕೊಳ್ಳಬಹುದು. ಸೊಳ್ಳೆ ನಿರೋಧಕ ಕ್ರೀಮ್‌, ಸ್ಪ್ರೇ ಅಥವಾ ಪ್ಯಾಚ್‌ಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಸೊಳ್ಳೆಗಳ ಉಪಟಳಕ್ಕೆ ಕೆಲವು ನೈಸರ್ಗಿಕ ಉಪಾಯಗಳೂ ಚಾಲ್ತಿಯಲ್ಲಿವೆ. ರಾತ್ರಿ ಮಲಗುವಾಗ ಕಡ್ಡಾಯವಾಗಿ ಸೊಳ್ಳೆ ಪರದೆ ಉಪಯೋಗಿಸಿ. ಚಿಕ್ಕ ಮಕ್ಕಳಿದ್ದರೆ ಎಲ್ಲಕ್ಕಿಂತ ಹೆಚ್ಚು ಅಪಾಯ ಅವರಿಗೇ ಆಗಬಹುದು, ಎಚ್ಚರವಹಿಸಿ.

ನೀರಿನಿಂದ ಹರಡುವ ರೋಗಗಳು: ಹೊಸ ನೀರು ಬಂದು ಹಳೆ ನೀರು ಕೊಚ್ಚಿ ಹೋಗುವ ಈ ಸಮಯವು, ನೀರು ಕಲುಷಿತವಾಗುವ ಪರ್ವಕಾಲ ಎಂದರೆ ತಪ್ಪಾಗುವುದಿಲ್ಲ. ಬಾವಿ, ಕೆರೆ, ಕಾಲುವೆ, ನದಿ- ಹೀಗೆ ಕುಡಿಯುವ ನೀರಿದ ಮೂಲಗಳೆಲ್ಲಿದ್ದಲ್ಲೂ ನೀರಿನ ಪ್ರಮಾಣ ಮತ್ತು ಗುಣಮಟ್ಟ ಬದಲಾಗಿರುತ್ತದೆ. ಕುಡಿಯುವ ನೀರಿಗೆ ಚರಂಡಿ ನೀರು ಸೇರುವ ಅಪಾಯವಿರುವ ಕಾಲವಿದು. ಪ್ರತಿವರ್ಷ ವಿಶ್ವಮಟ್ಟದಲ್ಲಿ ಸುಮಾರು ೫ ಲಕ್ಷ ಮಂದಿ ಶುದ್ಧ ಕುಡಿಯುವ ನೀರಿನ ಅಭಾವದಿಂದ ನಾನಾ ರೋಗಗಳಿಗೆ ತುತ್ತಾಗಿ ಸಾಯುತ್ತಿದ್ದಾರೆ.

ಟೈಫಾಯ್ಡ್

ಸಾಲ್ಮೊನೆಲ್ಲಾ ಟೈಫಿ ಎಂಬ ರೋಗಾಣುವಿನಿಂದ ಬರುವ ಇದು ಮಾರಣಾಂತಿಕ ರೋಗ. ಕಲುಷಿತವಾದ ಆಹಾರ ಮತ್ತು ನೀರಿನಿಂದಲೇ ಇದು ದೇಹ ಸೇರುತ್ತದೆ. ಜಾಗತಿಕವಾಗಿ, ಪ್ರತಿವರ್ಷ ಸುಮಾರು ೨ ಕೋಟಿ ಮಂದಿ ಟೈಫಾಯ್ಡ್‌ಗೆ ತುತ್ತಾದರೆ, ಸೂಕ್ತ ಚಿಕಿತ್ಸೆಯಿಲ್ಲದೆ ಸುಮಾರು ಒಂದೂವರೆ ಲಕ್ಷ ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ.

ಲಕ್ಷಣಗಳು: ದೀರ್ಘ ಕಾಲದವರೆಗೆ ಜ್ವರ, ಸುಸ್ತು, ತಲೆನೋವು, ವಾಂತಿ, ಕಿಬ್ಬೊಟ್ಟೆಯಲ್ಲಿ ನೋವು, ಡಯರಿಯಾದಂಥ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದಕ್ಕೆ ವೈದ್ಯರ ಶುಶ್ರೂಷೆಯ ಜೊತೆಗೆ ಸರಿಯಾದ ಆಹಾರವನ್ನೂ ತೆಗೆದುಕೊಳ್ಳಬೇಕು. ಸ್ವಚ್ಛತೆ ಕಡೆಗೆ ಗಮನ ನೀಡಲೇಬೇಕು.

ಕಾಲರಾ

ವಿಬ್ರಿಯೊ ಕಾಲೆರೆ ಎಂಬ ಬ್ಯಾಕ್ಟೀರಿಯಾದಿಂದ ಕಲುಷಿತ ನೀರು ಮತ್ತು ಆಹಾರದ ಮೂಲಕ ಇದು ಮಾನವರಿಗೆ ಹರಡುತ್ತದೆ. ತೀವ್ರವಾದ ಅತಿಸಾರ ಭೇದಿ ಇದರ ಪ್ರಮುಖ ಲಕ್ಷಣ. ಉಳಿದಂತೆ ಹೆಚ್ಚಿನ ಲಕ್ಷಣಗಳು ತೋರಿಸಿಕೊಳ್ಳುವುದಿಲ್ಲ ಈ ರೋಗ. ತ್ವರಿತವಾಗಿ ಚಿಕಿತ್ಸೆ ದೊರೆಯದಿದ್ದರೆ, ತೀವ್ರ ನಿರ್ಜಲೀಕರಣಕ್ಕೆ ಒಳಗಾಗಿ ಜೀವಕ್ಕೆ ಅಪಾಯ ಕಟ್ಟಿಟ್ಟಿದ್ದು.

ಲೆಪ್ಟೊಸ್ಪಿರೋಸಿಸ್

ಲೆಪ್ಟೊಸ್ಪೈರ ಎಂಬ ವೈರಸ್‌ನಿಂದ ಮುಖ್ಯವಾಗಿ ಮಳೆಗಾಲದಲ್ಲಿಯೇ ಬರುವ ರೋಗವಿದು. ಇದು ಮಾನವರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಬರಬಹುದು. ಸೋಂಕಿತ ವ್ಯಕ್ತಿ ಅಥವಾ ಪ್ರಾಣಿಯ ಮೂತ್ರದಿಂದ ನೀರಿನ ಮೂಲವನ್ನು ಈ ರೋಗಾಣು ಸೇರುತ್ತದೆ. ಅಲ್ಲಿ ಹಲವಾರು ವಾರಗಳು ಅಥವಾ ತಿಂಗಳವರೆಗೆ ಅದು ಇರಬಲ್ಲುದು. ಹಾಗಾಗಿ ಕೊಚ್ಚೆ ನೀರಿನ ಸಂಪರ್ಕದಿಂದ ದೂರ ಇರುವುದು ಅಗತ್ಯ. ಜ್ವರ, ನಡುಕ, ಸ್ನಾಯುನೋವು, ತಲೆನೋವು ಮುಂತಾದವು ಇದರ ಲಕ್ಷಣಗಳು.

ಹೊರಗೆ ಹೋಗುವಾಗ ಕಡ್ಡಾಯವಾಗಿ ಪಾದರಕ್ಷೆಗಳನ್ನು ಧರಿಸಿ. ಯಾವುದೇ ತೆರೆದ ಗಾಯಗಳಿದ್ದರೆ ಅದರಕ್ಕೆ ಚಿಕಿತ್ಸೆ ಪಡೆದುಕೊಳ್ಳಿ. ಈ ರೋಗಗಳಲ್ಲದೆ, ಕಾಮಾಲೆ ಅಥವಾ ಜಾಂಡೀಸ್‌, ಹೆಪಟೈಟಿಸ್‌ ಎ, ಗ್ಯಾಸ್ಟ್ರೋಎಂಟರೈಟಿಸ್‌ ಮುಂತಾದ ಹಲವಾರು ರೋಗಗಳು ಮಳೆಗಾಲದಲ್ಲಿ ಕಲುಷಿತ ನೀರು-ಆಹಾರದಿಂದ ಅಮರಿಕೊಳ್ಳುತ್ತವೆ

ತಡೆ ಹೇಗೆ?: ನೀರನ್ನು ಕುದಿಸಿಯೇ ಕುಡಿಯಿರಿ. ಆದಷ್ಟೂ ಹೊರಗಿನ, ಅದರಲ್ಲೂ ದಾರಿಬದಿಯ ಆಹಾರವನ್ನು ಸೇವಿಸಬೇಡಿ. ಮನೆಯಲ್ಲಿ ಆಹಾರ ವಸ್ತುಗಳನ್ನು ಮುಟ್ಟುವಾಗಲೂ ಕೈ ಶುಚಿ ಮಾಡಿಕೊಳ್ಳಿ. ಹಸಿಯಾಗಿ ಸೇವಿಸುವುದನ್ನು ಕಡಿಮೆ ಮಾಡಿ. ಹಣ್ಣುಗಳನ್ನು ತಿನ್ನುವ ಮುನ್ನ ಚೆನ್ನಾಗಿ ತೊಳೆಯಿರಿ. ನೀರಿನಲ್ಲಿ ಈಜುವುದು ಈ ದಿನಗಳಲ್ಲಿ ಸೂಕ್ತವಲ್ಲ. ಕೆಲವು ರೋಗಗಳಿಗೆ ಲಸಿಕೆಗಳು ಲಭ್ಯವಿದ್ದು, ಮುನ್ನೆಚ್ಚರಿಕೆಗೆ ಹಾಕಿಸಿಕೊಳ್ಳಬಹುದು.

ಗಾಳಿಯಲ್ಲಿ ಹರಡುವ ಸೋಂಕುಗಳು: ಶಾಲೆ ಆರಂಭವಾಗುವ ಸುಮೂರ್ತವೇ ಮಳೆಗಾಲದ ಆರಂಭಕ್ಕೂ ಒದಗಿ ಬರುವುದರಿಂದ, ಗಾಳಿಯಲ್ಲಿ ಹರಡುವ ನಾನಾ ರೀತಿಯ ವೈರಸ್‌ ಸೋಂಕುಗಳು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ನಂತರ, ಮನೆಮಂದಿಗೆಲ್ಲಾ ಹರಡುತ್ತದೆ.

ಇದನ್ನೂ ಓದಿ: Hair care in Monsoon: ಮಳೆಗಾಲದಲ್ಲಿ ತಲೆಕೂದಲು ಕಾಪಾಡಿಕೊಳ್ಳಲು ಇಲ್ಲಿವೆ ಟಿಪ್ಸ್

ನೆಗಡಿ, ಕೆಮ್ಮು: ಮಳೆಗಾಲದ ಆರಂಭಕ್ಕೆ ಮೂಗಿನಲ್ಲೂ ಮಳೆ ಆರಂಭವಾಗುವುದು ಸಾಮಾನ್ಯ. ಅದರಲ್ಲೂ ಮಕ್ಕಳು, ವೃದ್ಧರು ಮತ್ತು ಚೇತರಿಕೆಯಲ್ಲಿರುವ ರೋಗಿಗಳಿಗೆ ಇದರ ಉಪಟಳ ಹೆಚ್ಚು. ಮೊದಲಿಗೆ ನೆಗಡಿ, ನಂತರ ಕೆಮ್ಮು, ಒಮ್ಮೊಮ್ಮೆ ಮುಂದುವರಿದು ಜ್ವರ, ಗಂಟಲು ನೋವು ಎಂದೆಲ್ಲಾ ಸರಣಿ ಬೆಳೆಯುತ್ತಾ ಹೋಗುತ್ತದೆ.

ಫ್ಲೂ: ಇನ್‌ಫ್ಲುಯೆನ್ಜಾ ಎನ್ನಲಾಗುವ ಫ್ಲೂ ವೈರಸ್‌ಗಳು ತಂಟೆ ಮಾರಿಗಳು. ಕೆಮ್ಮಿದಾಗ, ಸೀನಿದಾಗ ಇವು ಗಾಳಿಯಲ್ಲಿ ಸೇರುತ್ತವೆ. ಜ್ವರ, ಚಳಿ, ಗಂಟಲು ನೋವು, ನೆಗಡಿ, ಕೆಮ್ಮು, ಸ್ನಾಯುನೋವು, ತಲೆ ನೋವು, ಸುಸ್ತು, ವಾಂತಿ, ಡಯರಿಯಾ- ಇವುಗಳಲ್ಲಿ ಒಂದಿಷ್ಟು ಅಥವಾ ಎಲ್ಲಾ ಲಕ್ಷಣಗಳೂ ಕಾಣಿಸಬಹುದು. ಕೆಲವೊಮ್ಮೆ ಕಫ ಬಿಗಿದು ಉಬ್ಬಸವನ್ನೂ ಎಬ್ಬಿಸಬಹುದು.

ಮುನ್ನೆಚ್ಚರಿಕೆ ಹೇಗೆ?: ಕೆಮ್ಮುವಾಗ, ಸೀನುವಾಗ ಮೂಗು, ಬಾಯಿಗಳನ್ನು ಮುಚ್ಚಿಕೊಳ್ಳಿ. ಸೋಂಕು ಇದ್ದರೆ ಮಾಸ್ಕ್‌ ಧರಿಸಿ, ಇತರರಿಗೆ ಹರಡದಂತೆ ಜಾಗ್ರತೆ ಮಾಡಿ. ಸೋಂಕು ಇರುವವರಿಂದ ಮಕ್ಕಳು, ವೃದ್ಧರನ್ನು ದೂರ ಇಡಿ. ನೈರ್ಮಲ್ಯದ ಅಭ್ಯಾಸವನ್ನು ಮಕ್ಕಳಿಗೆ ಮಾಡಿಸಿ. ಬೆಚ್ಚಗಿನ ನೀರನ್ನು ಸಾಕಷ್ಟು ಕುಡಿಯಿರಿ. ಮನೆಯಲ್ಲಿ ಸಾಕಷ್ಟು ಗಾಳಿ-ಬೆಳಕು ಇರುವಂತೆ ನೋಡಿಕೊಳ್ಳಿ. ಈ ಯಾವುದೇ ಸೋಂಕುಗಳಿಗೆ ಸ್ವಯಂವೈದ್ಯ ಮಾಡಿಕೊಳ್ಳಬೇಡಿ, ಆಸ್ಪತ್ರೆಗೆ ತೆರಳಿ.

ಇದನ್ನೂ ಓದಿ: Monsoon Travel Tips: ʻಮಳೆಗಾಲದಲ್ಲಿ ಪ್ರವಾಸʼ ಎಂಬ ದಿವ್ಯಾನುಭೂತಿ: ಹೊರಡುವಾಗ ಇವಿಷ್ಟು ನೆನಪಿರಲಿ!

Exit mobile version