ಕುಮಾರ ಪೆರ್ನಾಜೆ, ಪುತ್ತೂರು
ಬೆಂಗಳೂರು: ಕಲ್ಪವೃಕ್ಷ ಎಂದಾಕ್ಷಣ ತೆಂಗಿನ ಚಿತ್ರ ನಮ್ಮ ಕಣ್ಣ ಮುಂದೆ ಬರುತ್ತದೆ. ಅದರ ಜತೆಗೆ ಬಾಳೆಯೂ ಕಲ್ಪವೃಕ್ಷವೇ. ತೆಂಗಿನಂತೆ ಇದರ ಎಲ್ಲ ಭಾಗಗಳು ಉಪಯುಕ್ತ. ಬಾಳೆ ದಿಂಡು ಉತ್ತಮ ಔಷಧಿಯ ಗುಣಗಳನ್ನು ಹೊಂದಿದ್ದು, ಇತ್ತೀಚೆಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಿಡ್ನಿಯ ಕಲ್ಲಿನ ಸಮಸ್ಯೆಯನ್ನು ಗುಣಪಡಿಸುವ ಶಕ್ತಿ ಇದಕ್ಕಿದೆ. ಈ ಬಗೆಗಿನ ವಿವರ ಇಲ್ಲಿದೆ (Health Tips).
ಬಾಳೆ ದಿಂಡಿನ ಪ್ರಾಮುಖ್ಯತೆ ಇದೀಗ ಪ್ರತಿಯೊಬ್ಬರ ಅರಿವಿಗೂ ಬಂದಿದೆ. ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಒಂದು ಅಡಿ ಉದ್ದದ ದಿಂಡಿಗೂ ಬಹಳ ಬೇಡಿಕೆ ಸೃಷ್ಟಿಯಾಗಿದೆ. ಇದರಲ್ಲಿ ಚಟ್ನಿ, ಸಾಸಿವೆ, ಸಾಂಬಾರ್, ಪಲ್ಯ, ಪಕೋಡ, ದೋಸೆ, ಇಡ್ಲಿ, ಸಲಾಡ್, ಮೊಸರು ಗೊಜ್ಜು ಹೀಗೆ ನಾನಾ ಭಕ್ಷ್ಯ ತಯಾರಿಸಬಹುದು. ಮಾತ್ರವಲ್ಲ ಬಾಳೆ ನಾರಿನಿಂದ ವಿವಿಧ ಪರಿಸರಸ್ನೇಹಿ ಉತ್ಪನ್ನಗಳನ್ನು ತಯಾರಿಸಬಹುದು. ಚೀಲಗಳು, ಬುಟ್ಟಿಗಳು, ಸಸಿ ಕುಂಡಗಳು, ಯೋಗಾಸನ ಚಾಪೆಗಳು, ಹಗ್ಗ, ಬಟ್ಟೆ ತಯಾರಿ ಹೀಗೆ…ಏನೆಲ್ಲ ಮಾಡಬಹುದು ಎಂಬ ಸಂಶೋಧನೆ ಮಾಡುವ ತನಕ ಬಾಳೆ ಇಷ್ಟೊಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ ಎನ್ನುವುದು ಯಾರಿಗೂ ತಿಳಿದಿರಲಿಲ್ಲ.
ಕಿಡ್ನಿ ಕಲ್ಲು ಕರಗಿಸುವ ಬಾಳೆ ದಿಂಡು
ಮೊದಲೇ ಹೇಳಿದಂತೆ ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸುವ ಅದ್ಭುತ ಶಕ್ತಿ ಬಾಳೆ ದಿಂಡಿಗಿದೆ. ಜತೆಗೆ ಗ್ಯಾಸ್ಟ್ರಿಕ್ ಸಮಸ್ಯೆ, ಮೂತ್ರಪಿಂಡದ ಸಮಸ್ಯೆಗೆ ಇದು ರಾಮಬಾಣ. ಖಾಲಿ ಹೊಟ್ಟೆಯಲ್ಲಿ ಬಾಳೆದಿಂಡಿರ ರಸವನ್ನು ಸೇವಿಸುವುದರಿಂದ ಎಸಿಡಿಟಿ ಸಮಸ್ಯೆ ದೂರವಾಗುತ್ತದೆ. ಕಿಡ್ನಿ ಕಲ್ಲಿನ ಸಮಸ್ಯೆ ನಿವಾರಣೆಗೆ ಬಾಳೆ ದಿಂಡಿನ ನೀರನ್ನು ಕುಡಿಯುವುದು ಅತ್ಯುತ್ತಮ ಮಾರ್ಗ ಎನಿಸಿಕೊಂಡಿದೆ. ಈ ನೀರನ್ನು ಹೇಗೆ ಸಂಗ್ರಹಿಸಬಹುದು ಎನ್ನುವುದರ ವಿವರ ಇಲ್ಲಿದೆ. ಬಾಳೆಗಿಡ ಕಡಿದು ಮಧ್ಯದ ದಿಂಡನ್ನು ತೆಗೆದು ಕಾಂಡದಲ್ಲಿ ಗುಳಿಯ ಆಕಾರವನ್ನು ತೋಡಿ. ಬಳಿಕ ಕಸ, ಧೂಳು ಹಾರದಂತೆ ಅದಕ್ಕೆ ಪ್ಲಾಸ್ಟಿಕ್ ಅಥವಾ ಬಾಳೆ ಎಲೆ ಮುಚ್ಚಿ. ಮರುದಿನ ನೋಡಿದಾಗ ಗುಳಿಯಲ್ಲಿ ನೀರು ತುಂಬಿರುತ್ತದೆ.
ಈ ನೀರನ್ನು ಶುಭ್ರ ಪಾತ್ರೆಯಲ್ಲಿ ತೆಗೆದುಕೊಂಡು ನಿಯಮಿತವಾಗಿ ಸೇವಿಸಿ. ಇದರಿಂದ ಕಿಡ್ನಿ ಕಲ್ಲಿ ಕರಗುತ್ತದೆ ಎನ್ನುತ್ತಾರೆ ತಜ್ಞರು. ಅಲ್ಲದೆ ಬಾಳೆ ದಿಂಡನ್ನು ಅರೆದು ಅದನ್ನು ಸೋಸಿಯೂ ಕುಡಿಯಬಹುದು. ಹೀಗೆ ಬಾಳೆದಿಂಡಿನ ರಸವನ್ನು ವರ್ಷಕ್ಕೆ ಎರಡು ಬಾರಿಯಾದರೂ ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ಹೊರ ಹಾಕಬಹುದು.
ಇದನ್ನೂ ಓದಿ: Benefits of Tender Coconut: ಎಳನೀರು ಹೀರುವುದರಿಂದ ದೇಹಕ್ಕೆ ಏನೇನು ಲಾಭ ಗೊತ್ತೇ?
ಜ್ಯೂಸ್ ತಯಾರಿಸಿ
ಬಾಳೆ ದಿಂಡಿನ ರಸವನ್ನು ನೇರವಾಗಿ ಸೇವಿಸಲು ಸಾಧ್ಯವಾಗದಿದ್ದರೆ ಜ್ಯೂಸ್ ತಯಾರಿಸಿಯೂ ಕುಡಿಯಬಹುದು. ಬಾಳೆದಿಂಡಿನ ನೀರಿಗೆ ಜೀರಿಗೆ, ಶುಂಠಿ, ನಿಂಬೆರಸ, ಗಾಂಧಾರಿ ಮೆಣಸು, ಚಿಟಿಕೆ ಉಪ್ಪು, ಬೇಕಿದ್ದರೆ ಕಲ್ಲು ಸಕ್ಕರೆ ಸೇರಿಸಿ ಕುಡಿಯಬಹುದು. ಇದನ್ನು ಸಮಸ್ಯೆ ಇದ್ದವರೇ ಕುಡಿಯಬೇಕೆಂದಿಲ್ಲ. ಯಾರೂ ಬೇಕಾದರೂ ಸೇವಿಸಬಹುದು. ಇತ್ತೀಚೆಗಂತೂ ಬಿಸಿಲಿನ ತಾಪ ವಿಪರೀತವಾಗಿ ಏರಿಕೆಯಾಗುತ್ತಿದೆ. ಹೀಗಾಗಿ ಸಾಧ್ಯವಾದಷ್ಟು ಮನೆಯಲ್ಲಿಯೇ ತಯಾರಿಸಿದ ಆಹಾರದ ಜತೆಗೆ ಇಂತಹ ಪ್ರಾಕೃತಿಕ ಔಷಧಗಳ ಪ್ರಯೋಜನ ಪಡೆಯಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.