ಪ್ರತಿ ನಿತ್ಯವೂ ನಾವು (Health Tips) ಎಷ್ಟು ತಿನ್ನಬೇಕು? ಇದು ಎಲ್ಲರಿಗೂ ಸದಾ ಕಾಲ ಗೊಂದಲ ಇರುವ ಮಿಲಿಯನ್ ಡಾಲರ್ ಪ್ರಶ್ನೆ. ಯಾಕೆಂದರೆ, ನಾವು ದಿನಕ್ಕೆ ಮೂರು ಹೊತ್ತು ತಿನ್ನುವುದು ಅಧಿಕೃತವಾದರೂ, ಆಗಾಗ ಮಧ್ಯದಲ್ಲಿ ತಿನ್ನುವ ತಿಂಡಿಗಳ, ಕುರುಕಲುಗಳ, ಲೆಕ್ಕ ಇಡುವವರಲ್ಲ. ರುಚಿರುಚಿಯಾಗಿ ಏನಾದರೂ ತಿನ್ನುವುದು, ಸಂಜೆಯ ಹೊತ್ತಿನಲ್ಲಿ ಗೆಳೆಯರ ಜೊತೆ ಹೋಗಿ ರಸ್ತೆಬದಿಯಲ್ಲಿ ಏನಾದರೂ ತಿನ್ನುವುದು, ನಡುವೆ ಬಿಸಿ ಬಿಸಿ ಕಾಫಿ, ಚಹಾಗಳು ಒಂದಾದ ಮೇಲೆ ಒಂದರಂತೆ ನಾವು ಎಷ್ಟು ತಿನ್ನುತ್ತಿದ್ದೇವೆ, ಕುಡಿಯುತ್ತಿದ್ದೇವೆ ಎಂಬ ಲೆಕ್ಕ ಹಾಕಲು ಆಸ್ಪದ ನೀಡುವುದೇ ಇಲ್ಲ. ದಿನಗಳೆದಂತೆ ತೂಕದಲ್ಲಿ ಗಣನೀಯ ಬದಲಾವಣೆಯಾದಾಗ, ಏನಾದರೊಂದು ಆರೋಗ್ಯ ಸಮಸ್ಯೆ ಬಂದಾಗ, ನಾವು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡಿಲ್ಲ ಎಂದು ಜ್ಞಾನೋದಯವಾದಾಗ ನಾವೇನು ತಿನ್ನುತ್ತಿದ್ದೇವೆ ಅಥವಾ ಕುಡಿಯುತ್ತಿದ್ದೇವೆ ಎಂಬ ಬಗ್ಗೆ ಆತ್ಮವಿಮರ್ಶೆ ಮಾಡಲು ತೊಡಗುತ್ತೇವೆ. ಹಾಗೆ ನೋಡಿದರೆ, ತೂಕ ಇಳಿಸುವಿಕೆ ಇತ್ಯಾದಿಗಳ ವಿಚಾರ ಬಂದಾಗಿನಿಂದ ನಾವು ಕ್ಯಾಲರಿಗಳ ಲೆಕ್ಕ ಹಾಕಲು ಶುರು ಮಾಡುತ್ತೇವೆ. ಆಗ ನಮಗೆ, ನಾವು ದಿನಕ್ಕೆ ನಿಜಕ್ಕೂ ಎಷ್ಟೆಲ್ಲ ಕ್ಯಾಲರಿ ಆಹಾರ ಸೇವಿಸುತ್ತಾ ಇದ್ದೇವೆ ಎಂಬುದರ ಅರಿವಾಗುತ್ತದೆ. ಒಬ್ಬ ಸಾಮಾನ್ಯ ಆರೋಗ್ಯವಂತ ಪುರುಷನಿಗೆ ದಿನಕ್ಕೆ 2,400ರಿಂದ 3000 ಹಾಗೂ ಆರೋಗ್ಯವಂತ ಮಹಿಳೆಗೆ ದಿನಕ್ಕೆ 1,800ರಿಂದ 2,400 ಕ್ಯಾಲರಿವರೆಗೆ ಆಹಾರ ಬೇಕು ಎಂಬುದನ್ನು ತಜ್ಞರು ಲೆಕ್ಕ ಹಾಕಿದರೂ, ತೂಕ ಇಳಿಸಬೇಕಾದ ಮಂದಿಯ ಲೆಕ್ಕಾಚಾರ ಬೇರೆಯೇ ಇರುತ್ತದೆ. ಎಷ್ಟೇ ಈ ವಿಚಾರದಲ್ಲಿ ಅರಿಯಲು ಹೊರಟರೂ ಹೊಸ ಹೊಸ ವಿಚಾರಗಳು ತಿಳಿಯುವ ಮೂಲಕ ತಲೆ ಗೊಂದಲದ ಗೂಡಾಗುತ್ತದೆ. ಆಹಾರ ತಜ್ಞರ ಪ್ರಕಾರ ತೂಕ ಇಳಿಸುವ ಮಂದಿ ಕ್ಯಾಲರಿ ಲೆಕ್ಕಾಚಾರದಲ್ಲಿ ತಿನ್ನುವ ಅಗತ್ಯವಿಲ್ಲ. ದಿನಕ್ಕೆ ಇಷ್ಟೇ ಕ್ಯಾಲರಿಯ ಆಹಾರವನ್ನಷ್ಟೇ ಹೊಟ್ಟೆಗೆ ಕಳಿಸಬೇಕು ಎಂಬ ಲೆಕ್ಕಾಚಾರದಲ್ಲಿ ತಿನ್ನುವುದರಿಂದ ಮಾತ್ರ ತೂಕ ಇಳಿಯುತ್ತದೆ ಎಂಬುದು ಸತ್ಯವಲ್ಲ. ಹಲವು ವಿಚಾರಗಳ ಪೈಕಿ ಕ್ಯಾಲರಿ ಕೌಂಟ್ ಕೂಡಾ ಒಂದು ಅಷ್ಟೇ, ಆದರೆ ಏನು ತಿನ್ನುತ್ತೇವೆ ಎಂಬುದು ಹೆಚ್ಚು ಮುಖ್ಯವಾಗುತ್ತದೆ.
ಎಷ್ಟು ತಿನ್ನಬೇಕು?
ಹಾಗಾದರೆ ಏನು ಎಷ್ಟು ತಿನ್ನಬೇಕು ಎಂಬ ಗೊಂದಲಕ್ಕೆ ಅವರ ಉತ್ತರ ಹೀಗಿದೆ. ತೂಕ ಇಳಿಸುವ ಗಡಿಬಿಡಿಯಲ್ಲಿ, ಏನೆಲ್ಲ ಸರ್ಕಸ್ ಮಾಡಿ, ತಮ್ಮ ಆಹಾರ ಶೈಲಿಯನ್ನೇ ಬದಲಾಯಿಸಿಕೊಂಡು ಕಷ್ಟಪಡುವ ಮಂದಿಗೆ ಅವರು ಸರಳವಾಗಿ ಆರೋಗ್ಯವಾಗಿರಲು ತಿನ್ನಬೇಕಾದ ಆಹಾರ ಏನು ಎಂಬುದನ್ನು ವಿವರಿಸುತ್ತಾರೆ.
ಉಣ್ಣುವ ಕ್ರಮ ಮುಖ್ಯ
ಅವರು ಹೇಳುವ ಕೆಲವು ಮಂತ್ರಗಳ ಪೈಕಿ, ನಿಧಾನವಾಗಿ ಉಣ್ಣುವ ಕ್ರಮ ಮುಖ್ಯವಾದುದು. ನಿಧಾನವಾಗಿ, ಪ್ರತಿಯೊಂದು ತುತ್ತನ್ನೂ ಅನುಭವಿಸಿ ತಿನ್ನುವುದರಿಂದ ನಮ್ಮ ದೇಹಕ್ಕೆ ಅಗತ್ಯವಿದ್ದಷ್ಟೇ ತಿನ್ನಲು ಸಾಧ್ಯವಾಗುತ್ತದೆ. ಆಹಾರ ಹೊಟ್ಟೆಗೆ ಸೇರಿ ಅದು ಸರಿಯಾಗಿ ಜೀರ್ಣವಾಗುತ್ತದೆ. ಆದರೆ, ಗಬಗಬನೆ ತಿನ್ನುವುದರಿಂದ ನಮ್ಮ ಅಗತ್ಯಕ್ಕಿಂತ ಹೆಚ್ಚು ತಿನ್ನುವ ಸಾಧ್ಯತೆಗಳೇ ಹೆಚ್ಚು. ಅದಕ್ಕೊಂದು ಸರಳವಾದ ಟ್ರಿಕ್ ಕೂಡಾ ಅವರು ಹೇಳುತ್ತಾರೆ. ನಮಗೆಷ್ಟು ಬೇಕೋ ಅದಕ್ಕಿಂತ ಅರ್ಧದಷ್ಟು ಪ್ರಮಾಣವನ್ನು ನಾವು ಬಡಿಸಿಕೊಂಡು, ನಾವು ಅದನ್ನು ಉಣ್ಣಲು ಸಾಮಾನ್ಯವಾಗಿ ಎಷ್ಟು ಸಮಯ ತೆಗೆದುಕೊಳ್ಳುತ್ತೇವೋ ಅದರ ದುಪ್ಪಟ್ಟು ಸಮಯ ತೆಗೆದುಕೊಂಡು ಉಣ್ಣುವುದು!
ಇನ್ನೊಂದು ಬಹುಮುಖ್ಯ ಅಂಶವೆಂದರೆ, ಕುಳಿತು ಉಣ್ಣುವುದು. ನಿಂತು ಉಣ್ಣುವುದಕ್ಕಿಂತ ಕುಳಿತು ಉಣ್ಣುವ ಕ್ರಮ ಒಳ್ಳೆಯದು ಎಂದೂ ಅವರು ಹೇಳುತ್ತಾರೆ.
ಇದನ್ನೂ ಓದಿ: Food Tips Kannada: ಇನ್‌ಸ್ಟಂಟ್ ನೂಡಲ್ಸ್ ತಿಂದರೆ ಆರೋಗ್ಯಕ್ಕೆ ತೊಂದರೆ ಇದೆಯೆ?
ನಿಮ್ಮ ತಟ್ಟೆಯಲ್ಲಿ ಏನೇನಿರಬೇಕು?
ನಿಮ್ಮ ತಟ್ಟೆಯಲ್ಲಿ ಏನೇನಿರಬೇಕು ಎಂಬುದನ್ನೂ ಅವರು ಎಲ್ಲರಿಗೂ ಅರ್ಥವಾಗುವಂತೆ ಬಹಳ ಸರಳವಾಗಿ ಹೇಳುತ್ತಾರೆ. ನಿಮ್ಮ ಆಹಾರದ ಶೇ.50ರಷ್ಟು ಪ್ರಮಾಣ ಧಾನ್ಯಗಳು ಅಥವಾ ಸಿರಿಧಾನ್ಯಗಳಿರಬೇಕು. ಶೇ ೩೫ರಷ್ಟು ಪ್ರಮಾಣ ತರಕಾರಿಗಳು, ಮೊಳಕೆ ಕಾಳು ಹಾಗೂ ಬೇಳೆಗಳಿರಬೇಕು. ಉಳಿದಂತೆ ಶೇ.೧೫ರಷ್ಟು ಕೆಲವು ಇತರ ರುಚಿಕರ ಆಹಾರವನ್ನು ಸೇರಿಸಬಹುದು. ಉದಾಹರಣೆಗೆ ಉಪ್ಪಿನಕಾಯಿ, ಚಟ್ನಿ, ಹಪ್ಪಳ ಇತ್ಯಾದಿಗಳು. ಸಾಮಾನ್ಯವಾಗಿ ಹೆಚ್ಚು ಚಿಂತೆ ಮಾಡದೆ ಆರೋಗ್ಯದ ಕಾಳಜಿ ವಹಿಸುವ ಮಂದಿ ಈ ಮಾದರಿಯಲ್ಲಿ ಉಣ್ಣುವ ಕ್ರಮ ರೂಢಿಸಿಕೊಂಡರೆ ಒಳ್ಳೆಯದು ಎಂದು ಅವರು ಎಲ್ಲರ ದೃಷ್ಟಿಯಿಂದ ಸರಳವಾಗಿ ವಿವರಿಸುತ್ತಾರೆ. ಇನ್ನುಳಿದಂತೆ, ಹೆಚ್ಚು ಈ ಬಗ್ಗೆ ಆಸ್ತೆ ವಹಿಸುತ್ತಿದ್ದರೆ, ಪ್ರತಿಯೊಬ್ಬರೂ ಅವರವರ ಆಯ್ಕೆಗೆ ಅನುಗುಣವಾಗಿ ಆಹಾರ ಅಭ್ಯಾಸಗಳನ್ನು ಆಹಾರ ತಜ್ಞರ ಶಿಫಾರಸಿನ ಮೇಲೆ ರೂಢಿಸಿಕೊಳ್ಳಬಹುದು ಎಂದೂ ಅವರು ಹೇಳುತ್ತಾರೆ.