Site icon Vistara News

Health Tips: ಅನೀಮಿಯ ತಡೆಯುವುದಕ್ಕೆ ದಿನಕ್ಕೆಷ್ಟು ಕಬ್ಬಿಣದಂಶ ಬೇಕು? ಇದನ್ನು ಆಹಾರದಿಂದ ಪಡೆಯುವುದು ಹೇಗೆ?

health tips

ರಕ್ತಹೀನತೆಯ ಬಗ್ಗೆ (Health Tips) ಒಂದಿಷ್ಟು ಕೇಳಿರಬಹುದು. ಹಿಮೋಗ್ಲೋಬಿನ್‌ ಕಡಿಮೆ ಇದೆಯೆಂದು ಇಂಜೆಕ್ಷನ್‌ ಅಥವಾ ಮಾತ್ರೆ ತೆಗೆದುಕೊಳ್ಳುವವರನ್ನೂ ಕಂಡಿರಬಹುದು. ಸೊಪ್ಪು, ಬೀಟ್‌ರೂಟ್‌ ಮುಂತಾದ ಕೆಲವು ಆಹಾರಗಳಲ್ಲಿ ಕಬ್ಬಿಣದಂಶ ಹೇರಳವಾಗಿದೆ ಎಂಬುದನ್ನು ತಿಳಿದಿರಲೂಬಹುದು. ಆದರೆ ಅನೀಮಿಯ ಅಥವಾ ರಕ್ತಹೀನತೆ ಕಾಡದಂತೆ ಮಾಡುವುದಕ್ಕೆ ದಿನಕ್ಕೆ ಎಷ್ಟು ಕಬ್ಬಿಣದಂಶ ದೇಹ ಸೇರಬೇಕು ಎಂಬುದು ಗೊತ್ತೇ? ವೈದ್ಯರು ನೀಡಿದ ಪೂರಕಗಳನ್ನು ಸೇವಿಸುವುದು ಬೇರೆ ವಿಷಯ. ಅದನ್ನೇನು ಜೀವನಪೂರ್ತಿ ತಿನ್ನುವುದಕ್ಕೆ ಸಾಧ್ಯವಿಲ್ಲವಲ್ಲ. ಬದುಕಿಡೀ ತಿನ್ನುವುದು ಕಬ್ಬಿಣದಂಶ ಇರುವ ಆಹಾರಗಳನ್ನೇ ತಾನೇ? ಈ ಅಂಶವು ಕಡಿಮೆಯಾಗದಂತೆ ನಿಭಾಯಿಸುವುದು ಹೇಗೆ?

ಕಬ್ಬಿಣ ನಮಗೇಕೆ ಬೇಕು?

ನಮಗೆ ಇದು ಅಗತ್ಯವಾದ ಖನಿಜ ಎಂಬುದು ನಿಜ, ಆದರೆ ಯಾಕೆ? ನಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್‌ ಅಂಶದ ಉತ್ಪಾದನೆಗೆ ಇದು ಅಗತ್ಯ. ದೇಹದೆಲ್ಲೆಡೆ ಆಮ್ಲಜನಕವನ್ನು ಸಾಗಾಣಿಕೆ ಮಾಡಲು ಬೇಕಾಗುವ ಕೆಂಪು ರಕ್ತ ಕಣಗಳಲ್ಲಿರುವ ಒಂದು ವಿಶಿಷ್ಟ ಪ್ರೊಟೀನ್‌ ಈ ಹಿಮೋಗ್ಲೋಬಿನ್‌. ಆಹಾರವನ್ನು ಶಕ್ತಿಯಾಗಿ ಮಾರ್ಪಾಡು ಮಾಡುವಲ್ಲಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ, ಮೆದುಳಿನ ಕ್ಷಮತೆಗೆ, ಸ್ನಾಯುಗಳ ಬಲವರ್ಧನೆಗೆ… ಹೀಗೆ ಹಲವು ಕೆಲಸಗಳಿಗೆ ನಮಗೆ ಕಬ್ಬಿಣದಂಶ ಆವಶ್ಯಕ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದಲ್ಲಿ 5 ವರ್ಷದೊಳಗಿನ ಮಕ್ಕಳಲ್ಲಿ ಸುಮಾರು ಶೇ. 40ರಷ್ಟು ಮಂದಿ, ಶೇ. 37ರಷ್ಟು ಗರ್ಭಿಣಿ ಮಹಿಳೆಯರು, 15-50 ವರ್ಷ ವಯೋಮಾನದ ಶೇ. 30 ಮಹಿಳೆಯರು ರಕ್ತಹೀನತೆಯಿಂದ ಬಳಸುತ್ತಿದ್ದಾರೆ. ಇದಕ್ಕೆ ಹೋಲಿಸಿದರೆ ಪುರುಷರಲ್ಲಿ ರಕ್ತಹೀನತೆಯ ಪ್ರಮಾಣ ಕಡಿಮೆ.

ಎಷ್ಟು ಬೇಕು?

ಇವೆಲ್ಲ ಸೂಕ್ಷ್ಮ ಪೋಷಕಾಂಶಗಳಾದ್ದರಿಂದ ದಿನಕ್ಕೆ ಮಿಲಿಗ್ರಾಂಗಳ ಲೆಕ್ಕದಲ್ಲಿ ಸಾಕಾಗುತ್ತದೆ. ಆದರೆ ಅದೂ ಕೊರತೆಯಾಗಿ ಕಾಡುವುದಿದೆ. ಅದರಲ್ಲೂ ಮಾಂಸ ಮತ್ತು ಮೀನು ತಿನ್ನದವರಲ್ಲಿ ಈ ಕೊರತೆ ಇನ್ನೂ ಅಧಿಕ. ಸಸ್ಯಾದಿಗಳಲ್ಲಿರುವ ಕೆಲವು ರೀತಿಯ ಖನಿಜಗಳನ್ನು ಹೀರಿಕೊಳ್ಳಲು ದೇಹಕ್ಕೆ ಕಷ್ಟವಾಗುತ್ತದೆ ಎನ್ನುತ್ತಾರೆ ತಜ್ಞರು. ಅವರವರ ಲಿಂಗ ಮತ್ತು ವಯಸ್ಸಿನ ಮೇಲೆ ದೇಹಕ್ಕೆ ಬೇಕಾಗುವ ಕಬ್ಬಿಣದ ಅಂಶ ವ್ಯತ್ಯಾಸವಾಗುತ್ತದೆ. 19-50ರ ವಯೋಮಾನದ ಮಹಿಳೆಯರಿಗೆ ದಿನಕ್ಕೆ 18 ಮಿಲಿಗ್ರಾಂ, 51 ವರ್ಷಗಳ ನಂತರದ ಮಹಿಳೆಯರಿಗೆ ದಿನಕ್ಕೆ 8 ಮಿಲಿಗ್ರಾಂ, 19 ವರ್ಷಗಳ ನಂತರದ ಪುರುಷರಿಗೆ ದಿನಕ್ಕೆ 8 ಮಿಲಿಗ್ರಾಂ, ಗರ್ಭಿಣಿಯರಿಗೆ ದಿನಕ್ಕೆ 27 ಮಿಲಿಗ್ರಾಂ ಕಬ್ಬಿಣದಂಶ ಬೇಕಾಗುತ್ತದೆ. ಇವನ್ನೆಲ್ಲ ಯಾವ ಆಹಾರಗಳಿಂದ ಪಡೆಯಬಹುದು?

ಕಬ್ಬಿಣಯುಕ್ತ ಆಹಾರಗಳು

ಆಹಾರದಲ್ಲಿ ಕಬ್ಬಿಣದಂಶ ಹೆಚ್ಚಿದ್ದರೆ, ರಕ್ತಹೀನತೆಯನ್ನು ನಿವಾರಿಸಲು ನೆರವಾಗುತ್ತದೆ. ಮೀನು, ಕೆಂಪು ಮಾಂಸ, ಚಿಕನ್‌, ಕಾಳುಗಳು, ಬೇಳೆಗಳು, ತೋಫು, ಹಸಿರು ಸೊಪ್ಪು ಮತ್ತು ತರಕಾರಿಗಳು, ಬೀಟ್‌ರೂಟ್‌, ದಾಳಿಂಬೆ, ಬ್ರೊಕೊಲಿ, ಒಣದ್ರಾಕ್ಷಿ, ಎಪ್ರಿಕಾಟ್‌ನಂಥವು ಆಹಾರದಲ್ಲಿರಲಿ.

ವಿಟಮಿನ್‌ ಸಿ

ಕಬ್ಬಿಣಯುಕ್ತ ಆಹಾರವನ್ನೇನೋ ತಿನ್ನುತ್ತೀರಿ. ಇದು ಸರಿಯಾಗಿ ಹೀರಲ್ಪಡುವುದಕ್ಕೆ ವಿಟಮಿನ್‌ ಸಿ ಅಂಶ ಅಗತ್ಯ. ಹಾಗಾಗಿ ಸಿಟ್ರಸ್‌ ಹಣ್ಣುಗಳಾದ ಕಿತ್ತಳೆ, ದ್ರಾಕ್ಷಿ, ನಿಂಬೆಯಂಥವು, ಎಲ್ಲಾ ರೀತಿಯ ಬೆರ್ರಿಗಳು, ಕಿವಿ ಹಣ್ಣು, ಕ್ಯಾಪ್ಸಿಕಂ, ಟೊಮೇಟೊ ಇತ್ಯಾದಿಗಳು ದೈನಂದಿನ ಆಹಾರದಲ್ಲಿ ಬೇಕು. ಜೊತೆಗೆ, ಹಿಮೋಗ್ಲೋಬಿನ್‌ ಉತ್ಪಾದನೆಯಲ್ಲಿ ವಿಟಮಿನ್‌ ಬಿ೯ ಅಥವಾ ಫೋಲೇಟ್‌ ಪ್ರಧಾನ ಕೆಲಸ ಮಾಡುತ್ತದೆ. ಪಾಲಕ್‌ ಸೊಪ್ಪು, ಬ್ರೊಕೊಲಿ, ಅವಕಾಡೊ ಅಥವಾ ಬೆಣ್ಣೆ ಹಣ್ಣು, ಕಿತ್ತಳೆ ಹಣ್ಣಿನಂಥವು ಅಗತ್ಯವಾಗಿ ಬೇಕು.

ಇದನ್ನೂ ಓದಿ: Whiten Your Yellow Teeth: ಈ ಆಹಾರಗಳು ನಿಮ್ಮ ಹಲ್ಲುಗಳ ಬಣ್ಣಗೆಡಿಸುತ್ತವೆ ಎನ್ನುವುದು ಗೊತ್ತಿದೆಯೆ?

ಇವು ಬೇಡ

ಕೆಲವು ಆಹಾರಗಳು ಕಬ್ಬಿಣದಂಶವನ್ನು ದೇಹ ಹೀರಿಕೊಳ್ಳದಂತೆ ತಡೆಯುತ್ತವೆ. ಉದಾ, ಕಾಫಿ, ಚಹಾದಂಥ ಕೆಫೇನ್‌ಯುಕ್ತ ಪೇಯಗಳು, ಕ್ಯಾಲ್ಶಿಯಂ ಸಾಂದ್ರವಾಗಿರುವ ಆಹಾರಗಳು, ನಾರುಭರಿತ ತಿನಿಸುಗಳನ್ನು ಊಟದ ಸಮಯದಲ್ಲಿ ದೂರ ಮಾಡಿ. ಇದರಿಂದ ಕಬ್ಬಿಣದಂಶ ಚೆನ್ನಾಗಿ ಹೀರಲ್ಪಡುತ್ತದೆ. ಆಲ್ಕೋಹಾಲ್‌ ಮತ್ತು ಜಡ ಜೀವನಗಳೆರಡೂ ಹಿಮೋಗ್ಲೋಬಿನ್ನ ಶತ್ರುಗಳು. ಆಲ್ಕೋಹಾಲ್‌ ಸೇವನೆಯಿಂದ ಕಬ್ಬಿಣದಂಶವನ್ನು ದೇಹ ಹೀರಿಕೊಳ್ಳುವುದಕ್ಕೆ ಅಡಚಣೆ ಉಂಟಾಗುತ್ತದೆ.

ನೀರು, ನಿದ್ದೆ

ದಿನಕ್ಕೆ ಎಂಟು ತಾಸು ನಿದ್ದೆ ಮತ್ತು ಎಂಟು ಗ್ಲಾಸ್‌ ನೀರು- ಇದನ್ನು ದಿನದ ಮಂತ್ರವಾಗಿಸಿಕೊಳ್ಳಿ. ದೇಹಕ್ಕೆ ಸಾಕಷ್ಟು ವಿಶ್ರಾಂತಿ ದೊರೆಯದಿದ್ದರೆ ಕೆಂಪುರಕ್ತಕಣಗಳ ಉತ್ಪಾದನೆಯಲ್ಲಿ ತೊಡಕಾಗುತ್ತದೆ. ಇದು ಹಿಮೋಗ್ಲೋಬಿನ್‌ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ನೀರಿನ ಕೊರತೆಯಾದರೆ ರಕ್ತದ ಸಾಂದ್ರತೆ ಮತ್ತು ಪ್ರಮಾಣದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಈ ಬಗ್ಗೆ ಗಮನ ಬೇಕು.

Exit mobile version