Site icon Vistara News

Health Tips Kannada: ಸನ್‌ಸ್ಕ್ರೀನ್‌ ಕುರಿತು ನಿಮಗೆಷ್ಟು ಗೊತ್ತು?

Health Tips Kannada

ಸನ್‌ಸ್ಕ್ರೀನ್‌ (Sunscreen) ಕುರಿತಾಗಿ ಬಹಳಷ್ಟು ತಪ್ಪು ಕಲ್ಪನೆಗಳು ಚಾಲ್ತಿಯಲ್ಲಿವೆ. ಸೂರ್ಯನ ಬಿಸಿಲಲ್ಲಿರುವ ಅತಿನೇರಳೆ ಕಿರಣಗಳು ಚರ್ಮಕ್ಕೆ ಹಾನಿ ಮಾಡುವುದನ್ನು ತಡೆಗಟ್ಟುವ ಉದ್ದೇಶ ಇದನ್ನು ಬಳಸುವುದರ ಹಿಂದಿದೆ. ತೀವ್ರ ಬಿಸಿಲಿಗೆ ಹೋಗುವಾಗ ಸನ್‌ಬ್ಲಾಕ್‌ ಜೊತೆಗೆ ಉದ್ದ ತೋಳಿನ ವಸ್ತ್ರಗಳನ್ನು ಧರಿಸುವುದು ಇನ್ನೂ ಒಳ್ಳೆಯದು.
ಬಿಸಿಲಿಗೆ ಹೊರಗೆ ಹೋಗುವಾಗ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳುವ ಸಲಹೆ ಸಾಮಾನ್ಯವಾಗಿ ಎಲ್ಲರಿಂದ ಬರುತ್ತದೆ. ಆದರೆ ಸೌಂದರ್ಯ ತಜ್ಞರಿಂದ ಬರುವ ಸಲಹೆಗಳಲ್ಲಿ ಬಹಳಷ್ಟನ್ನು ಪಾಲಿಸಲು ಸಾಧ್ಯವಿಲ್ಲ ಎಂದೇ ಭಾವಿಸುತ್ತೇವೆ. ಆದರೆ ಬಿರುಬೇಸಿಗೆಯಲ್ಲಿ ನಿಯಮಿತವಾಗಿ ಸನ್‌ಸ್ಕ್ರೀನ್‌ ಬಳಕೆ ಮಾಡುವುದರಿಂದ ಚರ್ಮ ಸುಟ್ಟು ಕೆಂಪಾಗುವುದು, ಸುಕ್ಕಾಗುವುದು, ಕಪ್ಪು ಕಲೆಗಳು ಬರುವಂಥ ಬಹಳಷ್ಟು ತೊಂದರೆಗಳನ್ನು ತಪ್ಪಿಸಬಹುದು. ಆದರೆ ಈ ಬಗ್ಗೆ ಹಲವಾರು ತಪ್ಪು ತಿಳುವಳಿಕೆಗಳು ಚಾಲ್ತಿಯಲ್ಲಿವೆ. ಏನವು ಎಂಬುದನ್ನು (Health Tips Kannada) ನೋಡೋಣ.

ಮೋಡವಿರುವಾಗ ಸನ್‌ಸ್ಕ್ರೀನ್‌ ಬೇಡ

ಹಾಗೇನಿಲ್ಲ. ಮೋಡವಿರುವಾಗ ಸೂರ್ಯ ಕಾಣುವುದಿಲ್ಲ ಎನ್ನುವುದು ನಿಜವಾದರೂ, ಮೋಡದಡಿಗಿನ ಬಿಸಿಲು ಸಹ ಸಾಕಷ್ಟು ಸುಡುತ್ತದೆ. ತೀರ ಮಳೆ ಬರುವಾಗಿನ ಸಂದರ್ಭವನ್ನು ಹೊರತು ಪಡಿಸಿ, ಮೋಡ ಇರುವಾಗಲೂ ಚರ್ಮ ಸುಡಬಹುದು. ಹಾಗಾಗಿ ಸನ್‌ಸ್ಕ್ರೀನ್‌ ಕ್ರೀಮ್‌, ಸ್ಪ್ರೇ, ಸ್ಟಿಕ್‌ ಮುಂತಾದ ಯಾವುದನ್ನಾದರೂ ಬಳಸುವುದು ಒಳ್ಳೆಯದು.

ಕಪ್ಪು ಬಣ್ಣದವರಿಗೆ ಸನ್‌ಸ್ಕ್ರೀನ್‌ ಬೇಡ

ಬಿಳಿ ಬಣ್ಣದವರ ಚರ್ಮ ಬಿಸಿಲಿಗೆ ಸುಟ್ಟು ಕೆಂಪಾಗುವುದು ಎದ್ದು ಕಾಣುತ್ತದೆ. ಆನಂತರ ಕಪ್ಪಾಗುವುದು ಸಹಜ. ಇದರರ್ಥ ಚರ್ಮದ ಬಣ್ಣ ಕಪ್ಪಾಗಿದ್ದರೆ ಬಿಸಿಲು ಸುಡುವುದಿಲ್ಲ ಎಂದಲ್ಲ, ಸುಟ್ಟಿದ್ದು ಕಾಣುವುದಿಲ್ಲ ಅಷ್ಟೆ. ಕಪ್ಪು ಚರ್ಮದಲ್ಲಿ ಮೆಲನಿನ್‌ ಇರುವುದು ಸ್ವಲ್ಪ ಹೆಚ್ಚು ಎನ್ನುವುದು ನಿಜ. ಆದರೆ ಅವರಿಗೂ ಸನ್‌ಬ್ಲಾಕ್‌ ಬೇಕು. ಯಾವುದೇ ಬಣ್ಣದವರಿಗಾದರೂ ಬಿಸಿಲಿಗೆ ಚರ್ಮ ಸುಡುವುದರಲ್ಲಿ ವ್ಯತ್ಯಾಸವಿಲ್ಲ.

ವಿಟಮಿನ್‌ ಡಿ ಕೊರತೆ

ಸದಾ ಕಾಲ ಸನ್‌ಸ್ಕ್ರೀನ್‌ ಹಚ್ಚಿಕೊಂಡೇ ಇದ್ದರೆ ವಿಟಮಿನ್‌ ಡಿ ಕೊರತೆಯಾಗಬಹುದು ಎಂಬುದು ಹಲವರ ವಾದ. ಆದರೆ ಹಾಗೇನಿಲ್ಲ. 365 ದಿನವೂ ಸನ್‌ಸ್ಕ್ರೀನ್‌ ಹಚ್ಚಿಕೊಂಡಿದ್ದರೆ, ವಿಟಮಿನ್‌ ಡಿ ಉತ್ಪಾದನೆಗೆ ಕೊಂಚ ಹಿನ್ನಡೆ ಆಗುವ ಸಾಧ್ಯತೆ ಇಲ್ಲದಿಲ್ಲ. ಆದರೆ ಸಾಧಾರಣವಾಗಿ ಯಾರೂ ಆ ಪ್ರಮಾಣದಲ್ಲಿ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳುವುದಿಲ್ಲ.

ಮೇಕಪ್‌ನಲ್ಲಿ ಇರುವಷ್ಟು ಎಸ್‌ಪಿಎಫ್‌ ಸಾಕಾಗುತ್ತದೆ

ಇಲ್ಲ, ಸಾಕಾಗುವುದಿಲ್ಲ. ಬಹಳಷ್ಟು ಬಾರಿ ಮೇಕಪ್‌ಗಳಲ್ಲಿ 30 ಎಸ್‌ಪಿಎಫ್‌ ಸನ್‌ಬ್ಲಾಕ್‌ ಸೇರಿಕೊಂಡಿರುವುದು ಹೌದು. ಆದರೆ ಸನ್‌ಸ್ಕೀನ್‌ನಷ್ಟು ಧಾರಾಳವಾಗಿ ಮೇಕಪ್‌ ಬಳಕೆಯಾಗುವುದಿಲ್ಲ. ಹಾಗಾಗಿ ಇದರಲ್ಲಿರುವ ಸನ್‌ಬ್ಲಾಕ್‌ ನಂಬಿಕೊಳ್ಳುವ ಬದಲು, ಪ್ರತ್ಯೇಕ್ ಸನ್‌ಸ್ಕ್ರೀನ್‌ ಉಪಯೋಗಿಸುವುದು ಉತ್ತಮ.

ಹೆಚ್ಚು ಎಸ್‌ಪಿಎಫ್‌ ಎಂದರೆ ಹೆಚ್ಚು ರಕ್ಷಣೆ

ಹಾಗಲ್ಲ, ಹೆಚ್ಚಿನ ಎಸ್‌ಪಿಎಫ್‌ ಇದ್ದರೆ ರಕ್ಷಣೆಯ ಪ್ರಮಾಣ ಹೆಚ್ಚು ಎಂದೇನಿಲ್ಲ. ಬದಲಿಗೆ, ಸಮಯ ದೀರ್ಘ ಎಂದಾಗಬಹುದು. ಉದಾ, 30 ಎಸ್‌ಪಿಎಫ್‌ ಇದ್ದರೆ ಎಷ್ಟು ಅತಿನೇರಳೆ ಕಿರಣಗಳನ್ನು ತಡೆಯುತ್ತದೋ 60 ಎಸ್‌ಪಿಎಫ್‌ ಇದ್ದರೆ ಅದರ ದುಪ್ಪಟ್ಟು ಅತಿನೇರಳೆ ಕಿರಣಗಳನ್ನು ತಡೆಯುತ್ತದೆ ಎಂದು ಅರ್ಥವಲ್ಲ. ಇದು ಎಷ್ಟು ದೀರ್ಘ ಕಾಲ ಯುವಿ ಕಿರಣಗಳನ್ನು ತಡೆಯುತ್ತದೆ ಎಂಬುದನ್ನು ಸೂಚಿಸುತ್ತದೆ ಹೊರತು, ಎಷ್ಟು ಶೇಕಡಾ ತಡೆಯುತ್ತದೆ ಎಂದಲ್ಲ.

ವಾಟರ್‌ಪ್ರೂಫ್‌ ಇರುತ್ತದೆ

ಬಹಳಷ್ಟು ಕಂಪೆನಿಗಳು ಹಾಗೆಂದು ಹೇಳಿಕೊಳ್ಳುತ್ತವೆ. ಆದರೆ ವೃತ್ತಿಪರ ಈಜುಗಾರರು ಬಳಸುವಂಥ ಕೆಲವು ವಾಟರ್‌ ರೆಸಿಸ್ಟೆಂಟ್‌ ಸನ್‌ಬ್ಲಾಕ್‌ಗಳ ಹೊರತಾಗಿ, ಸಂಪೂರ್ಣ ವಾಟರ್‌ಪ್ರೂಫ್‌ ಇರುವುದು ಬಹಳ ಕಡಿಮೆ. ಹಾಗಾಗಿ ನೀರು, ಬೆವರು ಮುಂತಾದವುಗಳಿಂದ ಒದ್ದೆಯಾದಾಗ, ಒರೆಸಿದರೆ ಮತ್ತೆ ಸನ್‌ಸ್ಕ್ರೀನ್‌ ಬೇಕಾಗುತ್ತದೆ.

ಇದನ್ನೂ ಓದಿ: Hair Conditioner: ರಾಸಾಯನಿಕ ಹೇರ್‌ ಕಂಡೀಷನರ್‌ ಬಿಡಿ; ಈ 5 ನೈಸರ್ಗಿಕ ಹೇರ್ ಕಂಡೀಷನರ್ ಬಳಸಿ

ಎಲ್ಲರಿಗೂ ಒಂದೇ ಥರದ್ದು ಸಾಕು

ಇದೂ ತಪ್ಪು. ಒಂದೊಂದು ರೀತಿಯ ಚರ್ಮದವರಿಗೆ ಒಂದೊಂದು ರೀತಿಯ ಸನ್‌ ಬ್ಲಾಕ್‌ ಬೇಕಾಗಬಹುದು. ಎಣ್ಣೆ ಚರ್ಮದವರಿಗೆ ಜೆಲ್‌ ಸ್ವರೂಪದ ಸನ್‌ ಬ್ಲಾಕ್‌ಗಳು ಹೆಚ್ಚು ಉಪಯುಕ್ತ. ಇದರಿಂದ ಚರ್ಮದ ಸೂಕ್ಷ್ಮ ರಂಧ್ರಗಳು ಮುಚ್ಚಿಕೊಳ್ಳುವುದಿಲ್ಲ. ಒಣ ಚರ್ಮದವರಿಗೆ ಮಾಯಿಶ್ಚರೈಸರ್‌ ಜೊತೆಗಿರುವ ಸನ್‌ಸ್ಕ್ರೀನ್‌ ಅನುಕೂಲಕರ. ಸೂಕ್ಷ್ಮ ಚರ್ಮದವರು ಬೇಬಿ ಸನ್‌ಬ್ಲಾಕ್‌ ಉಪಯೋಗಿಸುವುದು ಕ್ಷೇಮ.

Exit mobile version