Site icon Vistara News

Health Tips Kannada: ಕಣ್ಣಿನ ಕೆಳಗಿನ ಕಪ್ಪು ಕಲೆ ನಿವಾರಿಸುವುದು ಹೇಗೆ?

Health Tips Kannada
ತಣ್ಣನೆಯ ಕಂಪ್ರೆಸ್‌
ತಂಪಾದ ನೀರಲ್ಲಿ ಅದ್ದಿದ ಬಟ್ಟೆ, ಫ್ರಿಜ್‌ನಲ್ಲಿ ಕೆಲಕಾಲ ಇರಿಸಿದ ತೇವದ ಟೀ ಬ್ಯಾಗ್‌ ಮುಂತಾದವುಗಳನ್ನು ಕಣ್ಣಿನ ಮೇಲೆ 10-15 ನಿಮಿಷ ಇರಿಸಿಕೊಳ್ಳಿ. ಅದರಲ್ಲೂ ಗ್ರೀ ಟೀ ಅಥವಾ ಕ್ಯಾಮೊಮೈಲ್‌ ಟೀ ಹೆಚ್ಚು ಉಪಯುಕ್ತ. ಇದರಿಂದ ಈ ಭಾಗದಲ್ಲಿ ಉಬ್ಬಿದಂತೆ ಕಾಣುವ ರಕ್ತನಾಳಗಳು ಸಂಕೋಚಗೊಳ್ಳುತ್ತವೆ. ಇದರಿಂದ ಕಣ್ಣಿನ ಕೆಳಗಿನ ಭಾಗ ಉಬ್ಬಿದಂತಾಗಿ ಕಪ್ಪಾಗಿದ್ದರೆ ಕಡಿಮೆಯಾಗುತ್ತದೆ.
ಸೌತೇಕಾಯಿ
ತಂಪಾದ ಸೌತೇಕಾಯಿಯ ಗಾಲಿಯಂಥ ತುಂಡನ್ನು ಕಣ್ಣುಗಳ ಮೇಲಿರಿಸಿ 20 ನಿಮಿಷ ಬಿಡಿ. ಇದನ್ನು ದಿನವೂ ಮಾಡಬಹುದು. ಇದರಿಂದ ಕಣ್ಣಿನ ಕೆಳಗೆ ಉಬ್ಬಿದ್ದರೆ ಕಡಿಮೆಯಾಗಿ, ಗಾಢಬಣ್ಣವೂ ತಿಳಿಯಾಗುತ್ತದೆ. ಜೊತೆಗೆ ಕಣ್ಣನ್ನು ತಂಪಾಗಿಸಿ, ದೃಷ್ಟಿಗೂ ಅನುಕೂಲ ಒದಗಿಸುತ್ತದೆ.
ಆಲೂಗಡ್ಡೆ
ಸೌತೇಕಾಯಿಯಂತೆ, ಆಲೂಗಡ್ಡೆಗೂ ನೈಸರ್ಗಿಕವಾದ ಬ್ಲೀಚಿಂಗ್‌ ಗುಣವಿದೆ. ಹಾಗಾಗಿ ಕಪ್ಪಾದ ಚರ್ಮವನ್ನು ನಿಧಾನಕ್ಕೆ ತಿಳಿಯಾಗಿಸುತ್ತದೆ. ಫ್ರಿಜ್‌ನಲ್ಲಿಟ್ಟ ಆಲೂಗಡ್ಡೆಯನ್ನು ತುರಿದು ರಸ ತೆಗೆಯಿರಿ, ಈ ತಂಪಾದ ರಸದಲ್ಲಿ ಸ್ವಚ್ಛ ಹತ್ತಿಯ ಬಟ್ಟೆಯನ್ನು ಅದ್ದಿ ಕಣ್ಣುಗಳ ಕೆಳಗಿರಿಸಿಕೊಳ್ಳಿ. ೧೫ ನಿಮಿಷಗಳ ನಂತರ ತಂಪಾದ ನೀರಲ್ಲಿ ತೊಳೆಯಿರಿ.
ಟೊಮಾಟೊ ರಸ
ಇದೂ ಸಹ ಗಾಢ ಬಣ್ಣವನ್ನು ತಿಳಿಯಾಗಿಸಬಲ್ಲ ಗುಣವನ್ನು ಹೊಂದಿದೆ. ಟೊಮಾಟೊ ರಸ ತೆಗೆದು, ಕೆಲವು ಹನಿ ನಿಂಬೆರಸ ಸೇರಿಸಿ. ಇದರಲ್ಲಿ ಸ್ವಚ್ಛ ವಸ್ತ್ರವನ್ನು ಅದ್ದಿ, ಕಣ್ಣುಗಳ ಕೆಳಗಿರಿಸಿಕೊಳ್ಳಿ. 10 ನಿಮಿಷಗಳ ನಂತರ ಬೆಚ್ಚಗಿನ ನೀರಲ್ಲಿ ತೊಳೆಯಿರಿ.
ಬಾದಾಮಿ ಎಣ್ಣೆ
ವಿಟಮಿನ್‌ ಇ ಹೇರಳವಾಗಿದೆ ಬಾದಾಮಿ ತೈಲದಲ್ಲಿ. ರಾತ್ರಿ ಮಲಗುವ ಮುನ್ನ, ಇದರ ಕೆಲವು ಹನಿಗಳನ್ನು ಕಣ್ಣ ಕೆಳಭಾಗದಲ್ಲಿ ಲಘುವಾಗಿ ಹಚ್ಚಿ ಮಸಾಜ್‌ ಮಾಡಿ. ರಾತ್ರಿಡೀ ಇದನ್ನು ಹಾಗೆಯೇ ಬಿಡಿ. ಹಚ್ಚಿದ ಎಣ್ಣೆ ಅತಿಯಾದರೆ ಕಣ್ಣುರಿ ಬಂದೀತು. ಹಾಗಾಗಿ ಸ್ವಲ್ಪವೇ ಹಚ್ಚಿ.
ಗುಲಾಬಿ ಜಲ
ಹತ್ತಿಯ ಪ್ಯಾಡ್‌ಗಳಲ್ಲಿ ತಂಪಾದ ಗುಲಾಬಿ ಜಲದಲ್ಲಿ ಅದ್ದಿ, ಮುಚ್ಚಿದ ಕಣ್ಣುಗಳ ಮೇಲೆ ಇರಿಸಿಕೊಳ್ಳಿ. ಸೌತೇಕಾಯಿಯಂಥದ್ದೇ ಪರಿಣಾಮಗಳನ್ನು ಗುಲಾಬಿ ಜಲವೂ ನೀಡಬಲ್ಲದು. 15 ನಿಮಿಷಗಳ ನಂತರ ತಂಪಾದ ನೀರಲ್ಲಿ ತೊಳೆಯಿರಿ.
ಲೋಳೆಸರ
ಇದರ ತಂಪಾದ ತಾಜಾ ಜೆಲ್‌ ತೆಗೆಯಿರಿ. ಅದನ್ನು ಕಣ್ಣಿನ ಕೆಳಭಾಗದಲ್ಲಿ ಇರಿಸಿಕೊಂಡು 20 ನಿಮಿಷ ಬಿಡಿ. ನಂತರ ತಂಪಾದ ನೀರಿನಿಂದ ತೊಳೆಯಿರಿ. ಇದು ಚರ್ಮವನ್ನು ಬಿಗಿಯಾಗಿಸಿ, ತೇವವನ್ನು ಹಿಡಿದಿಡುತ್ತದೆ. ಜೊತೆಗೆ ಕಣ್ಣಿನ ಕೆಳಭಾಗದ ಕಪ್ಪು ಚರ್ಮವನ್ನು ತಿಳಿಯಾಗಿಸುತ್ತದೆ. ಇವೆಲ್ಲವುಗಳ ಜೊತೆಗೆ, ದೇಹಕ್ಕೆ ಚೆನ್ನಾಗಿ ನೀರು ಬೇಕು. ಋತುಮಾನದ ಸೊಪ್ಪು-ತರಕಾರಿ-ಹಣ್ಣುಗಳು ಬೇಕು. ಕಣ್ತುಂಬಾ ನಿದ್ದೆಯಂತೂ ಕಡ್ಡಾಯ.
Exit mobile version