Site icon Vistara News

Health Tips Kannada: ನಮ್ಮ ದೇಹದಲ್ಲಿ ಉಪ್ಪಿನ ಅಂಶ ಕಡಿಮೆಯಾಗಿದೆ ಎಂದು ತಿಳಿಯುವುದು ಹೇಗೆ?

Health Tips Kannada

ನಮ್ಮ ದೇಹ ಒಂದು ಸಂಕೀರ್ಣವಾದ ವ್ಯವಸ್ಥೆ. ಇದು ಆರೋಗ್ಯಕರವಾಗಿ ಇರಬೇಕೆಂದರೆ ನಾವು ಅದನ್ನು ಸರಿಯಾದ ಪೋಷಕಾಂಶಗಳನ್ನು ಕಾಲಕಾಲಕ್ಕೆ ಒದಗಿಸಿ ಚೆನ್ನಾಗಿ ನೋಡಿಕೊಳ್ಳಬೇಕು. ದೇಹವೆಂಬ ದೇಗುಲವನ್ನು ಚೆನ್ನಾಗಿ ನೋಡಿಕೊಂಡರಷ್ಟೇ ಮಾನಸಿಕ ದೈಹಿಕವಾದ ಆರೋಗ್ಯ ಚೆನ್ನಾಗಿದ್ದೀತು. ದೇಹಕ್ಕೆ ಅಗತ್ಯವಾಗಿ ಬೇಕೇಬೇಕಾದ ಪೋಷಕಾಂಶಗಳನ್ನು ಸರಿಯಾಗಿ ಪೂರೈಸದಿದ್ದಲ್ಲಿ ಅದರ ಪರಿಣಾಮಗಳೂ ತಿಳಿದು ಬಂದಾವು. ಹಾಗಂತ ಪೋಷಕಾಂಶಗಳು ಅಗತ್ಯಕ್ಕಿಂತ ಹೆಚ್ಚಾದರೂ ಕೂಡಾ ಅದು ನಮಗೆ ಯಾವುದಾದರೊಂದು ಬಗೆಯಲ್ಲಿ ತಿಳಿದೇ ತಿಳಿಯುತ್ತದೆ. ಉದಾಹರಣೆಗೆ ಉಪ್ಪಿನ ಮೂಲಕ ದೇಹಕ್ಕೆ ಸಿಗುವ ಸೋಡಿಯಂ ಅತಿಯಾಗಲೂ ಬಾರದು. ಅಷ್ಟೇ ಅಲ್ಲ, ಕಡಿಮೆಯಾಗಲೂ ಬಾರದು. ಅಧಿಕ ರಕ್ತದೊತ್ತಡ, ಹೃದಯದ ಸಮಸ್ಯೆ ಇತ್ಯಾದಿ ಇರುವ ಮಂದಿಗೆ ಸೋಡಿಯಂ ಅತಿಯಾದರೂ (Health Tips Kannada) ಸಮಸ್ಯೆಯೇ.
ಸೋಡಿಯಂ ಕ್ಲೋರೈಡ್‌ ಎಂಬ ಉಪ್ಪಿನಲ್ಲಿ ಶೇ 40ರಷ್ಟು ಸೋಡಿಯಂ ಇದ್ದರೆ ಶೇ 60ರಷ್ಟು ಕ್ಲೋರೈಡ್‌ ಇದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ ಒಬ್ಬ ಆರೋಗ್ಯವಂತ ದಿನಕ್ಕೆ ೫ ಗ್ರಾಂಗಿಂತ ಹೆಚ್ಚು ಸೋಡಿಯಂ ಸೇವಿಸಬಾರದು. ಐಸಿಎಂಆರ್‌ ಹೇಳುವಂತೆ ಒಬ್ಬನಿಗೆ ಪ್ರತಿನಿತ್ಯ 1.1ರಿಂದ 3.3 ಗ್ರಾಂ ಸೋಡಿಯಂ ಅಥವಾ 2.8ರಿಂದ 8.3 ಗ್ರಾಂ ಸೋಡಿಯಂ ಕ್ಲೋರೈಡ್‌ ಅಗತ್ಯವಿದೆ. ಅಂದರೆ, 2,300 ಎಂ.ಜಿಯಷ್ಟು ಉಪ್ಪು ನಾವು ಒಂದು ದಿನಕ್ಕೆ ಸೇವಿಸಬಹುದು. ಸಾಮಾನ್ಯವಾಗಿ ಅರ್ಥವಾಗುವ ಭಾಷೆಯಲ್ಲಿ ಹೇಳುವುದಾದರೆ, ಒಂದು ಚಮಚ ಉಪ್ಪು ಒಂದು ದಿನಕ್ಕೆ ನಮ್ಮ ದೇಹಕ್ಕೆ ಸಾಕು. ಆದರೆ, ಸದ್ಯ ನಾವೆಲ್ಲರೂ ನಮ್ಮ ದೇಹಕ್ಕೆ ನೀಡುತ್ತಿರುವ ಸೋಡಿಯಂ ಇದರ ದುಪ್ಪಟ್ಟಿದೆ. ಆದರೂ, ಬಹಳಷ್ಟು ಸಾರಿ ನಾವು ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಸೋಡಿಯಂ ನೀಡುತ್ತಿದ್ದೇವಾ ಇಲ್ಲವಾ ಎಂಬುದು ತಿಳಿಯುವುದೇ ಇಲ್ಲ. ಆದರೆ, ದೇಹವು ತನಗೆ ಯಾವುದೇ ಪೋಷಕಾಂಶ ಕಡಿಮೆಯಾಗಲಿ, ಹೆಚ್ಚಾಗಲಿ ಹೇಳಿಯೇ ತೀರುತ್ತದೆ. ಆದರೆ, ಅದು ಹೇಳುವುದು ನಮಗೆ ಅರ್ಥವಾಗುತ್ತದೆಯೋ ಎಂಬುದು ಮುಖ್ಯ ವಿಚಾರ.
ಸೋಡಿಯಂ ನಮ್ಮ ದೇಹಕ್ಕೆ ಕಡಿಮೆಯಾದಾಗಲೂ ದೇಹ ಅದರದ್ದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ಹೇಗೆ ಸೋಡಿಯಂ ಹೆಚ್ಚಾದರೆ ಸಮಸ್ಯೆಯೋ ಹಾಗೆಯೇ ಸೋಡಿಯಂ ಕಡಿಮೆಯಾದರೂ ಸಮಸ್ಯೆಯೇ. ಸೋಡಿಯಂ ಕಡಿಮೆಯಾದರೆ, ಖಿನ್ನತೆ, ಸುಸ್ತು, ತಲೆಸುತ್ತು, ವಾಂತಿ, ತಲೆನೋವು, ಕಿರಿಕಿರಿಯಾಗುವುದು, ಗೊಂದಲ ಇತ್ಯಾದಿ ಸಮಸ್ಯೆಗಳೂ ಬರಬಹುದು.

ತಲೆನೋವು

ನಮ್ಮ ನರಮಂಡಲಕ್ಕೆ ಸೋಡಿಯಂ ಬೇಕೇಬೇಕು. ಸೋಡಿಯಂ ಕಡಿಮೆಯಾದಾಗ ಅದರ ಪರಿಣಾಮವಾಗಿ ತಲೆನೋವು ಆರಂಭವಾಗುತ್ತದೆ. ಹಾಗಂತ ಎಲ್ಲ ತಲೆನೋವುಗಳು ಸೋಡಿಯಂ ಕೊರತೆಯಿಂದಲ್ಲ. ಆದರೆ, ಸೋಡಿಯಂ ಕೊರತೆಯೂ ಕೂಡ ತಲೆನೋವಿಗೆ ಕಾರಣವಾಗಿರಬಹುದು.

ತಲೆಸುತ್ತು ಹಾಗೂ ವಾಂತಿ

ಸೋಡಿಯಂನ ಮಟ್ಟ ಏರುಪೇರಾದಾಗ ದೇಹದಲ್ಲಿರುವ ನೀರೂ ಕೂಡಾ ಹೀಗೆ ಹೊರಹೋಗಬಹುದು.

ಗೊಂದಲ

ಸೋಡಿಯಂ ನರಮಂಡಲದ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಮಿದುಳಿಗೆ ಈ ಸಮಸ್ಯೆ ಬರುತ್ತದೆ. ಇಲ್ಲಿ ಮಿದುಳು ಸಂದೇಶಗಳನ್ನು ಸರಿಯಾಗಿ ಕಳುಹಿಸಲು ಸಾಧ್ಯವಾಗದೆ, ಗೊಂದಲದಂತಹ ಮನಸ್ಥಿತಿ ನಿರ್ಮಾಣವಾಗುತ್ತದೆ.

ಇದನ್ನೂ ಓದಿ: Benefits Of Eating Guava: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ಸೀಬೆಕಾಯಿ ತಿನ್ನಿ!

ಮಾಂಸಖಂಡಗಳಲ್ಲಿ ಸೆಳೆತ

ಸೋಡಿಯಂ ಕೊರತೆಯಾದಾಗ, ದೇಹದಲ್ಲಿ ಬೇಡದ ವಸ್ತುಗಳು ಸರಿಯಾಗಿ ಹೊರಗೆ ಹೋಗಲು ಸಾಧ್ಯವಾಗದೆ, ಅವು ಹೀಗೆ ಮಾಂಸಖಂಡಗಳ ಮೇಲೆ ಅಡ್ಡ ಪರಿಣಾಮ ಬೀರುತ್ತವೆ. ಉದಾಹರಣೆಗೆ ಲ್ಯಾಕ್ಟಿಕ್‌ ಆಸಿಡ್‌ನಂತ ಬೇಡವಾದ ವಸ್ತು ದೇಹದಿಂದ ಕಾಲಕಾಲಕ್ಕೆ ಹೊರಹೋಗಲು ಸಾಧ್ಯವಾಗದೆ, ಹೀಗಾಗುತ್ತದೆ.
ಹೀಗಾಗಿ ದೇಹದಲ್ಲಿ ಸಮತೋಲನ ಕಾಯ್ದುಕೊಳ್ಳಲು, ಎಲ್ಲ ಅಂಗಾಗಗಳೂ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸೋಡಿಯಂ ಬೇಕೇ ಬೇಕು. ಕೇವಲ ಸೋಡಿಯಂ ಮಾತ್ರವಲ್ಲ, ಎಲ್ಲ ಬಗೆಯ ಪೋಷಣೆಯೂ ಲಭ್ಯವಾಗಬೇಕು. ಹಾಗಾಗಿ, ಉಪ್ಪಿನ ಸೇವನೆಯ ಬಗ್ಗೆ ವಿಶೇಷ ಕಾಳಜಿ ಅತ್ಯಂತ ಅಗತ್ಯ. ಇದು ದೇಹಕ್ಕೆ ಕಡಿಮೆಯೂ ಆಗದಂತೆ, ಹೆಚ್ಚೂ ಆಗದಂತೆ ಕಾಳಜಿ ವಹಿಸಬೇಕು.

Exit mobile version