ಕೂತಲ್ಲೇ (Health Tips Kannada) ತೂಕಡಿಸುವವರು, ಬಸ್ಸಲ್ಲಿ, ರೈಲಲ್ಲಿ ಓಡಾಡುವಾಗ ಗೊರಕೆ ಹೊಡೆಯುವವರು, ಕಾರಲ್ಲಿ ಹಿಂದೆ ಕೂತಾಗ ನಿದ್ದೆ ಮಾಡುವವರು…ಹೀಗೆ ಎಲ್ಲೆಂದರಲ್ಲಿ ನಿದ್ದೆ ತೆಗೆಯುವವರನ್ನು ಕಂಡು ʻಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆʼ ಎಂದೆಲ್ಲಾ ಗಾದೆ ಸೃಷ್ಟಿಯಾಗಿರುವುದುಂಟು. ಹಾಗೆ ಕೂತಲ್ಲಿ ತೂಕಡಿಸುವವರೆಲ್ಲರೂ ಸುಖವಾಗಿದ್ದಾರೆ ಎಂದು ಅರ್ಥವೇ? ಚಿಂತೆ ಇಲ್ಲದವರೆಂದು ತಿಳಿಯಬಹುದೇ? ಸುಸ್ತಾದಾಗಲೂ ಸಣ್ಣದೊಂದು ನಿದ್ದೆ ಮಾಡಿದರೆ ಆರಾಮ ಎನಿಸುತ್ತದಲ್ಲ, ಏನಿದರ ಮರ್ಮ? ಹಾಗೆ ಹಗಲಿನಲ್ಲಿ ನಿದ್ದೆ ಮಾಡಿದರೆ ರಾತ್ರಿಯ ನಿದ್ದೆಗೆ ತೊಂದರೆ ಆಗುವುದಿಲ್ಲವೇ? ಇಂಥ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಚುಟುಕು ನಿದ್ದೆ
ಈ ಹೆಸರಿನಲ್ಲೇ ಸಾಮಾನ್ಯವಾಗಿ ಕರೆಸಿಕೊಳ್ಳುವ ಹಗಲಿನ ನಿದ್ದೆ ದೀರ್ಘವಾದರೆ ʻಪವರ್ ನ್ಯಾಪ್ʼ ಎನಿಸಿಕೊಳ್ಳುವುದಿಲ್ಲ. ತೀರಾ ಆಯಾಸವಾದಾಗ 20 ನಿಮಿಷ ನಿದ್ದೆ ಮಾಡಿದರೆ, ಎಚ್ಚರಾದಮೇಲೆ ದೇಹದ ಚೈತನ್ಯ ಹೆಚ್ಚಿದಂತೆ ಭಾಸವಾಗುತ್ತದೆ. ಇದು ಹೌದೇ ಎಂಬುದನ್ನು ತಿಳಿಯಲು ಯೂನಿವರ್ಸಿಟಿ ಕಾಲೇಜ್ ಲಂಡನ್‌ನ ವಿಜ್ಞಾನಿಗಳು ಅಧ್ಯಯನವೊಂದನ್ನು ನಡೆಸಿದ್ದರು. ಇದಕ್ಕಾಗಿ 40ರಿಂದ 69 ವರ್ಷ ವಯಸ್ಸಿನ ನಡುವಿನ ಸುಮಾರು ೩೫ ಸಾವಿರ ಮಂದಿಯನ್ನ್ ಅಧ್ಯಯನಕ್ಕೆ ಒಳಪಡಿಸಿದ್ದರು. ಇದರಲ್ಲಿ ಗಮನಿಸಿದಾಗ, ನಿಯಮಿತವಾಗಿ ಹಗಲಿಗೆ ಚುಟುಕು ನಿದ್ದೆ ಮಾಡುವವರ ಮೆದುಳು, ಪವರ್ ನ್ಯಾಪ್ ಮಾಡದವರ ಮೆದುಳಿಗಿಂತ ದೊಡ್ಡದಾಗಿತ್ತು. ಏನಿದರರ್ಥ?
ಮೆದುಳಿನ ಗಾತ್ರ ಕಿರಿದಾಗುವುದಕ್ಕೂ ಮೆದುಳಿಗೆ ವಯಸ್ಸಾಗುವುದಕ್ಕೂ ಸಂಬಂಧವಿದೆ. ಹಾಗಾಗಿ ನಿಯಮಿತವಾಗಿ ಚುಟುಕು ನಿದ್ದೆ ಮಾಡುವವರಲ್ಲಿ ಮೆದುಳು ಕುಗ್ಗಿಲ್ಲ ಎಂದರೆ, ಮೆದುಳಿಗೆ ಬೇಗ ವಯಸ್ಸಾಗುವುದನ್ನು ಪವರ್ ನ್ಯಾಪ್ ಮುಂದೂಡುತ್ತದೆ ಎನ್ನುತ್ತಾರೆ ಅಧ್ಯಯನಕಾರರು. ಅಂದರೆ, ಅಲ್‌ಜೈಮರ್ಸ್‌ನಂಥ ಮೆದುಳು ಸಂಬಂಧಿ ರೋಗಗಳು, ಹೃದಯದ ತೊಂದರೆಗಳನ್ನು ಮುಂತಾದವು ಬರುವುದನ್ನು ಮುಂದೂಡಲು ಸಾಧ್ಯವಾಗಬಹುದು ಎಂಬುದು ಅವರ ಅನಿಸಿಕೆ.
ಇದನ್ನೂ ಓದಿ: Health Tips Kannada: ಅನಾರೋಗ್ಯದ ಮೂಲ ಕೊಲೆಸ್ಟ್ರಾಲ್ ತಗ್ಗಿಸಬೇಕೆ? ಬೆಳಗ್ಗೆ ಈ ಪೇಯ ಕುಡಿಯಿರಿ
ಕೋಳಿ ನಿದ್ದೆಯ ಮ್ಯಾಜಿಕ್!
ಇಷ್ಟು ಮಾತ್ರವಲ್ಲ, 5ರಿಂದ 20 ನಿಮಿಷಗಳವರೆಗಿನ ಕೋಳಿ ನಿದ್ದೆಯಿಂದ ತಕ್ಷಣಕ್ಕೆ ಮೆದುಳಿನ ಕ್ಷಮತೆಯನ್ನು ಹೆಚ್ಚಿಸಬಹುದು. ತೀರಾ ಆಯಾಸವಾಗಿ ಕೆಲಸ ಮಾಡಲೇ ಆಗುತ್ತಿಲ್ಲ, ಓದಿದರೆ ತಲೆಗೇ ಹೋಗುತ್ತಿಲ್ಲ ಎಂಬಂಥ ಸಂದರ್ಭದಲ್ಲಿ, ಹತ್ತಿಪ್ಪತ್ತು ನಿಮಿಷಗಳ ಕೋಳಿ ನಿದ್ದೆ ನಿಜಕ್ಕೂ ಮ್ಯಾಜಿಕ್ ಮಾಡಬಲ್ಲದು. ನಿದ್ದೆ ಮುಗಿಸಿ ಎದ್ದ ಸುಮಾರು ಮೂರು ತಾಸುಗಳವರೆಗೆ ದೇಹ-ಮನಸ್ಸುಗಳು ಚೈತನ್ಯಪೂರ್ಣವಾಗಿ ಇರುತ್ತವೆ ಎಂಬುದು ಖಚಿತವಾಗಿದೆ. ಕ್ರೀಡಾಳುಗಳ ಸಹ ತಮ್ಮ ತರಬೇತಿಯ ನಡುವಿನಲ್ಲಿ ಚುಟುಕು ನಿದ್ದೆಗಾಗಿಯೇ ಸಮಯ ನಿಗದಿ ಮಾಡಿಕೊಂಡಿದ್ದರೆ, ದೇಹ ಬಳಲುವುದನ್ನು ತಪ್ಪಿಸಬಹುದು. ಹಲವು ಅಥ್ಲೀಟ್‌ಗಳು ಇದನ್ನು ತಮ್ಮ ಕ್ರೀಡಾ ಜೀವನದ ಭಾಗವೆಂದೇ ಭಾವಿಸುತ್ತಾರೆ.
ಇನ್ನಷ್ಟು ಲಾಭಗಳು
ದೇಹ-ಮನಸ್ಸು ಚೈತನ್ಯಪೂರ್ಣ ಆಗುವುದು ಮಾತ್ರವೇ ಅಲ್ಲದೆ ಹೆಚ್ಚಿನ ಲಾಭಗಳಿವೆ ಇದರಿಂದ. ಮೂಡ್ ಸುಧಾರಿಸಿ, ಮನಸ್ಸಿನ ಉಲ್ಲಾಸ ಹೆಚ್ಚಿಸುತ್ತದೆ. ನೆನಪಿನ ಶಕ್ತಿ ವೃದ್ಧಿಸುತ್ತದೆ, ಸೃಜನಶೀಲತೆ ವರ್ಧಿಸುತ್ತದೆ. ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವಾಗ ಇಂಥ ನಿದ್ದೆಗಳು ದೇಹದ ದುರಸ್ತಿಗೆ ಗಣನೀಯ ಕೊಡುಗೆ ನೀಡುತ್ತವೆ.
ರಾತ್ರಿ ನಿದ್ದೆಗೆ ಬದಲಲ್ಲ
ಇದಕ್ಕಾಗಿ ರಾತ್ರಿಯೆಲ್ಲ ನಿದ್ದೆಗೆಟ್ಟು ಮೊಬೈಲು ಗೀರುತ್ತಾ, ಸಿನೆಮ ನೋಡುತ್ತಾ ಕೂತು, ಹಗಲಿಗೆ ನಿದ್ದೆ ಮಾಡಿ, ಮೆದುಳನ್ನು ಚುರುಕಾಗಿ ಇಟ್ಟುಕೊಳ್ಳುತ್ತೇವೆ ಎಂದು ಬೀಗುವುದಲ್ಲ. ಮಾತ್ರವಲ್ಲ, ಹಗಲಿನ ನಿದ್ದೆ ಚುಟುಕಾಗದೆ ತೀರಾ ದೀರ್ಘವಾದರೆ, ರಾತ್ರಿಯ ಪಾಲಿಗೆ ಕುಟುಕು ನಿದ್ದೆಯಾಗಬಹುದು. ಹಾಗಾಗಿ ಹಗಲಿಗೆ ಮಾಡುವ ನಿದ್ದೆಯಿಂದ ರಾತ್ರಿಯ ನಿದ್ದೆಯ ಗುಣಮಟ್ಟದಲ್ಲಿ ವ್ಯತ್ಯಾಸವಾಗುತ್ತಿದೆ ಎಂದಾದರೆ, ಹಗಲಿನ ನಿದ್ದೆಯ ಪ್ರಮಾಣವನ್ನು ಕಡಿಮೆ ಮಾಡಬೇಕು. ರಾತ್ರಿಯ ನಿದ್ರಾಹೀನತೆಗೆ ಚುಟುಕು ನಿದ್ದೆ ಮದ್ದೂ ಅಲ್ಲ. ರಾತ್ರಿಗೆ 7-8 ತಾಸಿನ ನಿದ್ದೆಯ ಅವಧಿಯಲ್ಲಿ ತೊಂದರೆಯಾದರೆ, ಅದನ್ನು ಪ್ರತ್ಯೇಕವಾಗಿಯೇ ಸರಿ ಪಡಿಸಿಕೊಳ್ಳುವುದು ಸೂಕ್ತ. ಹಗಲಿನ ಸುಸ್ತು, ಒತ್ತಡ, ಆಯಾಸಗಳ ನಡುವೆ ಕೆಲಸ ಮಾಡುವುದಕ್ಕೆ ತೊಂದರೆಯಾಗದಂತೆ ಮಾತ್ರವೇ ಕೋಳಿ ನಿದ್ದೆಯನ್ನು ಉಪಯೋಗಿಸಿಕೊಳ್ಳುವುದು ಜಾಣತನ.
ಎಷ್ಟು ಹೊತ್ತು?
ಮಧ್ಯಾಹ್ನದ 1 ಗಂಟೆಯಿಂದ 4 ಗಂಟೆಯ ನಡುವೆ, 20 ನಿಮಿಷಕ್ಕಿಂತ ಕಡಿಮೆ ಸಮಯದ ನಿದ್ದೆ ಎಲ್ಲ ರೀತಿಯಲ್ಲೂ ಒಳ್ಳೆಯ ಪರಿಣಾಮವನ್ನು ನೀಡುತ್ತದೆ. ಇನ್ನೂ ದೀರ್ಘ ಕಾಲ ನಿದ್ದೆ ಮಾಡಿದರೆ, ಎದ್ದಾಗ ಮಂಕು ಕವಿದಂತೆ, ದೇಹವೆಲ್ಲ ಜಡವಾದಂತೆ ಭಾಸವಾಗುತ್ತದೆ. ಇದಕ್ಕೆ ಕಾರಣ, ಗಾಢ ನಿದ್ದೆಯ ಆವರ್ತನವನ್ನು ದೇಹ ಪ್ರವೇಶಿಸುವುದು. ವ್ಯಾಯಾಮ ಅಥವಾ ಕ್ರೀಡಾ ಚಟುವಟಿಕೆಗಳಿಂದ ದೇಹಕ್ಕೆ ತೀವ್ರ ಆಯಾಸವಾದಾಗಲೂ ನಿದ್ದೆಯ ಅವಧಿ 30 ನಿಮಿಷ ಮೀರದಿದ್ದರೆ ಒಳ್ಳೆಯದು.