Site icon Vistara News

Health Tips Kannada: ಯಾವ ಬೀಜ ತಿಂದರೆ ನಮ್ಮ ಆರೋಗ್ಯಕ್ಕೆ ಏನು ಪ್ರಯೋಜನ?

Health Tips Kannada

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು (Health Tips Kannada) ಎಂಬ ಹಳೇ ಗಾದೆಯನ್ನು ಈ ಬೀಜಗಳ ವಿಚಾರಕ್ಕೆ ಹೇಳಬಹುದೇನೋ. ಯಾಕೆಂದರೆ ಬೀಜಗಳು ನೋಡಲು ಚಿಕ್ಕದಾದರೂ, ಅದರಲ್ಲಿರುವ ಪೋಷಕಾಂಶಗಳ ವಿಚಾರಕ್ಕೆ ಬಂದರೆ ದೇಹಕ್ಕೆ ಅಗತ್ಯವಾಗಿರುವ ಎಲ್ಲವನ್ನೂ ಒಳಗೊಂಡಿವೆ. ವಿಟಮಿನ್‌ಗಳು, ಖನಿಜಾಂಶಗಳು, ಒಳ್ಳೆಯ ಕೊಬ್ಬು, ಪ್ರೊಟೀನ್‌ ಸೇರಿದಂತೆ ಎಲ್ಲವೂ ಇರುವ ಬೀಜಗಳು ತಿನ್ನಲು ರುಚಿಕರವಾಗಿಯೂ, ಆರೋಗ್ಯಕರವಾಗಿಯೂ ಇರುತ್ತವೆ. ಹಲವು ರೋಗಗಳು ಬರದಂತೆ ತಡೆಯುವ, ಶಕ್ತಿ ಸಾಮರ್ಥ್ಯ ಹೆಚ್ಚಿಸುವ ಈ ಬೀಜಗಳ ಸೇವನೆಯಿಂದ ನಮ್ಮ ಸೌಂದರ್ಯವೂ ಸೇರಿದಂತೆ ಆರೋಗ್ಯವೂ ವೃದ್ಧಿಯಾಗುತ್ತದೆ. ಬನ್ನಿ, ಯಾವೆಲ್ಲ ಬೀಜಗಳಿಂದ ಯಾವ ಲಾಭಗಳನ್ನು ನಾವು ಪ್ರಮುಖವಾಗಿ ಪಡೆಯಬಹುದು ಎಂಬುದನ್ನು ನೋಡೋಣ.

ದಾಳಿಂಬೆ ಬೀಜಗಳು

ಕೆಂಬಣ್ಣದ ದಾಳಿಂಬೆ ಹಣ್ಣಿನ ಬೀಜಗಳನ್ನು ಕವಿಗಳು ಹಲ್ಲುಗಳಿಗೆ ಹೋಲಿಸುತ್ತಾರೆ. ಮುತ್ತಿನಂತ ಹಲ್ಲನ್ನು ಹೊಂದಿದ್ದರೆ ದಾಳಿಂಬೆಯ ಬೀಜದಂತೆ ಮುದ್ದಾಗಿವೆ ಎನ್ನುವುದನ್ನು ನೀವು ನೋಡಿರಬಹುದು. ಈ ದಾಳಿಂಬೆಯ ಕೆಂಬಣ್ಣದ ಬೀಜಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳೂ, ವಿಟಮಿನ್‌ ಸಿಯೂ ಹೇರಳವಾಗಿವೆ. ಇದು ಕೊಬ್ಬನ್ನು ಕರಗಿಸುವ ಜೊತೆಗೆ ಆಂಟಿ ಏಜಿಂಗ್‌ ಗುಣಗಳನ್ನೂ ಹೊಂದಿದೆ. ಹೀಗಾಗಿ ತೂಕ ಇಳಿಸುವ ಮಂದಿಗೆ ದಾಳಿಂಬೆ ತಿನ್ನುವುದು ಬಹಳ ಒಳ್ಳೆಯದು.

ಸೂರ್ಯಕಾಂತಿ ಬೀಜ ಹಾಗೂ ಅಗಸೆ ಬೀಜ

ಸೂರ್ಯಕಾಂತಿ ಹೂವಿನ ಬೀಜಗಳ ಸಿಪ್ಪೆ ಸುಲಿದು ಅದರೊಳಗಿನ ಬೀಜವನ್ನು ಸೇವಿಸುವುದರಿಂದ ಸಾಕಷ್ಟು ಲಾಭಗಳಿವೆ. ಸೂರ್ಯಕಾಂತಿ ಬೀಜದಲ್ಲಿ ವಿಟಮಿನ್‌ ಬಿ೧, ತಾಮ್ರ, ವಿಟಮಿನ್‌ ಇ, ಆಂಟಿ ಆಕ್ಸಿಡೆಂಟ್‌ಗಳು, ಪ್ರೊಟೀನ್‌ ಹಾಗೂ ನಾರಿನಂಶ ಹೇರಳವಾಗಿವೆ. ಇದು ಮಧುಮೇಹಕ್ಕೆ ಬಹಳ ಒಳ್ಳೆಯದು. ಸೂರ್ಯಕಾಂತಿ ಹಾಗೂ ಅಗಸೆ ಬೀಜಗಳು ಗ್ಲುಕೋಸ್‌ ಮಟ್ಟವನ್ನು ಕೆಳಗಿಳಿಸುವ ಗುಣವನ್ನು ಹೊಂದಿರುವುದರಿಂದ ಇವೆರಡೂ ಕೂಡಾ ಮಧುಮೇಹಕ್ಕೆ ಒಳ್ಳೆಯ ಆಹಾರಗಳು.

ಚಿಯಾ ಬೀಜಗಳು

ಚಿಯಾ ಬೀಜಗಳು ಆಕಾರದಲ್ಲಿ ಪುಟಾಣಿಯಾದರೂ ಇವುಗಳಲ್ಲಿರುವ ಶಕ್ತಿ ದೊಡ್ಡದು. ಇತ್ತೀಚೆಗಿನ ದಿನಗಳಲ್ಲಿ ಚಿಯಾ ಬೀಜಗಳು ಹೆಚ್ಚು ಪ್ರಸಿದ್ಧಿಗೆ ಬಂದಿದ್ದು, ಸಲಾಡ್‌ಗಳಲ್ಲಿ, ಸ್ಮೂದಿಗಳಲ್ಲಿ ಹಾಗೂ ಡೆಸರ್ಟ್‌ಗಳಲ್ಲಿ ಬಳಕೆಯಾಗುತ್ತಿವೆ. ಕ್ಯಾಲ್ಶಿಯಂ ಹೆಚ್ಚಿರುವ ಚಿಯಾ ಬೀಜಗಳನ್ನು ತಿನ್ನುವುದರಿಂದ ಎಲುಬಿನ ಆರೋಗ್ಯ ವೃದ್ಧಿಯಾಗುತ್ತದೆ. ಎಲುಬು ಗಟ್ಟಿಯಾಗುತ್ತದೆ.

ಕುಂಬಳಕಾಯಿ ಬೀಜ

ಕುಂಬಳಕಾಯಿ ಬೀಜಗಳು ಹಸಿರು ಬಣ್ಣದಲ್ಲಿರುವ ಬೀಜಗಳಾಗಿದ್ದು, ಇವುಗಳ ಸೇವನೆಯಿಂದಲೂ ಸಾಕಷ್ಟು ಆರೋಗ್ಯದ ಲಾಭಗಳಿವೆ. ಸಲಾಡ್‌ ಹಾಗೂ ಸಿರಿಯಲ್‌ಗಳ ಜೊತೆಗೆ ಇವನನು ಸೇರಿಸಿ ಬಳಸಲಾಗುತ್ತದೆ. ಕಬ್ಬಿಣಾಂಶ ಅತ್ಯಂತ ಹೆಚ್ಚಿರುವ ಈ ಬೀಜಗಳು ಶಕ್ತಿವರ್ಧಕಗಳು. ನಮ್ಮ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುವ ಜೊತೆಗೆ ರಕ್ತದಲ್ಲಿ ಹಿಮೋಗ್ಲೋಬಿನ್‌ ಅನ್ನೂ ಇದು ಹೆಚ್ಚಿಸುವಲ್ಲಿ ಪಾತ್ರ ವಹಿಸುತ್ತದೆ. ತೂಕ ಇಳಿಕೆಗೂ ಇದು ಒಳ್ಳೆಯದು.

ಎಳ್ಳು

ಎಳ್ಳಿನ ಬೀಜಗಳೂ ಕೂಡಾ ನೋಡಲು ಚಿಕ್ಕವಾಗಿದ್ದರೂ ತಮ್ಮ ಗುಣದಲ್ಲಿ ಶ್ರೇಷ್ಠತೆಯನ್ನು ಮೆರೆಯುವಂಥವುಗಳು. ಫೈಟೋನ್ಯೂಟ್ರಿಯೆಂಟ್‌ಗಳು, ಆಂಟಿ ಆಕ್ಸಿಡೆಂಟ್‌ಗಳು, ವಿಟಮಿನ್‌ ಹಾಗೂ ನಾರಿನಂಶ ಹೆಚ್ಚಿರುವ ಈ ಬೀಜಗಳಲ್ಲಿ ಒಮೆಗಾ 6 ಫ್ಯಾಟಿ ಆಸಿಡ್‌ ಕೂಡಾ ಹೇರಳವಾಗಿದೆ. ಕೆಟ್ಟ ಕೊಲೆಸ್ಟೆರಾಲ್‌ ಅನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನೂ ಇದು ಹೆಚ್ಚಿಸುತ್ತದೆ. ಅಮೆರಿಕನ್‌ ಹಾರ್ಟ್‌ ಅಸೋಸಿಯೇಶನ್‌ ವರದಿಯ ಪ್ರಕಾರ, ಎಳ್ಳಿನಲ್ಲಿರುವ ಮೋನೋ ಸ್ಯಾಚುರೇಟೆಡ್‌ ಹಾಗೂ ಪಾಲಿ ಸ್ಯಾಚುರೇಟೆಡ್‌ ಕೊಬ್ಬು ಹಿತಮಿತವಾಗಿ ದೇಹ ಸೇರಿದರೆ, ಹೃದಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ. ಅಷ್ಟೇ ಅಲ್ಲ, ಪಾರ್ಶ್ವವಾಯುವಿನಂಥ ಸಮಸ್ಯೆಗಳನ್ನೂ ದೂರವಿರಿಸುತ್ತದೆ. ಇಂಥ ಅಪಾಯದಿಂದ ನಮ್ಮನ್ನು ದೂರವಿರಿಸುವ ಸಾಮರ್ಥಿವನ್ನು ಹೊಂದಿದೆ ಎಂದು ವರದಿ ಮಾಡಿದೆ.
ಈ ಬೀಜಗಳ ಲಾಭಗಳನ್ನು ನಾವು ಪಡೆಯುವುದಕ್ಕಾಗಿ ನಾವು ಮಾಡಬಹುದಾದ ಬೆಸ್ಟ್‌ ಉಪಾಯಗಳಲ್ಲಿ ಪ್ರಮುಖವಾದುದು, ಸಲಾಡ್‌ಗಳ ಮೇಲೆ ಟಾಪಿಂಗ್‌ನಂತೆ ಹಾಕಿ ಸೇವಿಸುವುದು. ಇಲ್ಲವಾದರೆ, ಸ್ನ್ಯಾಕಿಂಗ್‌ ಸಮಯದಲ್ಲಿ ಸಿಕ್ಕಸಿಕ್ಕ ತಿನಿಸುಗಳನ್ನು ತಿನ್ನುವ ಬದಲು ಇವನ್ನು ಸೇವಿಸುವುದು.

ಇದನ್ನೂ ಓದಿ: Pulses Benefits: ಬೇಳೆಕಾಳುಗಳಲ್ಲಿರುವ ಎಲ್ಲ ಪೋಷಕಾಂಶಗಳು ದೇಹಕ್ಕೆ ಸೇರಬೇಕಾದರೆ ಹೀಗೆ ಮಾಡಿ!

Exit mobile version