ನೋವಿಗೆಂದು (Health Tips) ಔಷಧಿ ನುಂಗುವವರು ಬಹಳಷ್ಟು ಜನರಿದ್ದಾರೆ. ಆದರೆ ಯಾವುದೇ ನೋವು ನಿವಾರಕಗಳನ್ನು ದೀರ್ಘ ಕಾಲ ತೆಗೆದುಕೊಂಡರೆ, ಪದೇಪದೆ ತೆಗೆದುಕೊಂಡರೆ ಅಡ್ಡ ಪರಿಣಾಮಗಳು ತಪ್ಪಿದ್ದಲ್ಲ. ಹೃದಯದಿಂದ ಹಿಡಿದು ಯಕೃತ್‌ನವರೆಗೆ ಹಲವು ಅಂಗಗಳಿಗೆ ಇವು ಹಾನಿ ಮಾಡಬಲ್ಲವು. ಹಾಗಾಗಿ ಯಾವುದೇ ರಾಸಾಯನಿಕಗಳಿಲ್ಲದ ನೈಸರ್ಗಿಕವಾದ ವಸ್ತುಗಳಿಂದಲೇ ನೋವು ನಿವಾರಣೆ ಆಗುವುದಾದರೆ ಆರೋಗ್ಯಕ್ಕೆ ಆಗುವಂಥ ಹಾನಿಯನ್ನು ತಪ್ಪಿಸಬಹುದಲ್ಲ ಎಂಬ ಯೋಚನೆ ಬಂದರದು ಸಹಜ. ಕೆಲವು ಮೂಲಿಕೆಗಳು ಪ್ರಕೃತಿ ಸಹಜವಾಗಿಯೇ ನೋವನ್ನು ನಿವಾರಿಸುವಂಥ ಸಾಮರ್ಥ್ಯವುಳ್ಳವು. ಅಂಥ ಕೆಲವು ಮೂಲಿಕೆಗಳನ್ನು ಇಲ್ಲಿ ವಿವರಿಸಲಾಗಿದ್ದು, ನೋವು ನಿವಾರಕಗಳ ಅಡ್ಡ ಪರಿಣಾಮಗಳಿಲ್ಲದೆಯೇ ಅವುಗಳನ್ನು ಬಳಸಬಹುದು.
ಲವಂಗ
ಹಲ್ಲು ನೋವಿಗೆ ಯಾವುದೇ ಮಾತ್ರೆ ನುಂಗದೆಯೇ ಕಡಿಮೆ ಮಾಡಿಕೊಳ್ಳುವ ಉದ್ದೇಶವಿದ್ದರೆ ಲವಂಗ ಒಳ್ಳೆಯ ಆಯ್ಕೆ. ಪುಟ್ಟ ಹೂವಿನಂಥ ಆಕೃತಿಯಲ್ಲಿರುವ ಈ ಘಮಿಸುವ ಮೂಲಿಕೆಯನ್ನು ಬಳಸಿರುವುದಾಗಿ ಹಲವಾರು ಟೂತ್‌ಪೇಸ್ಟ್‌ಗಳ ಜಾಹೀರಾತುಗಳು ಹೇಳಿಕೊಳ್ಳುವುದನ್ನು ಗಮನಿಸಿರಬಹುದು. ಹಲ್ಲು ನೀವಿದ್ದಾಗ ನೇರವಾಗಿ ಲವಂಗವನ್ನೇ ಈ ಭಾಗದಲ್ಲಿ ಒತ್ತರಿಸಿಕೊಳ್ಳಬಹುದು ಅಥವಾ ಲವಂಗದ ಎಣ್ಣೆಯನ್ನೂ ಲೇಪಿಸಿಕೊಳ್ಳಬಹುದು. ಇದರಲ್ಲಿರುವ ಯುಜೆನಾಲ್ ಎಂಬ ಅಂಶವು ಪ್ರಬಲವಾದ ನೋವು ನಿವಾರಕ ಗುಣವನ್ನು ಹೊಂದಿದೆ. ಲವಂಗ ತೈಲದಲ್ಲಿ ಫಂಗಸ್ ವಿರೋಧಿ, ಬ್ಯಾಕ್ಟೀರಿಯ ವಿರೋಧಿ, ಉರಿಯೂತ ಶಾಮಕ ಗುಣಗಳಿವೆ. ಹಾಗಾಗಿ ನೋವು ನಿವಾರಣೆಗೆ ಲವಂಗವನ್ನು ಅಥವಾ ಲವಂಗ ತೈಲವನ್ನು ಯಾವುದೇ ಅಡ್ಡ ಪರಿಣಾಮಗಳಿಲ್ಲದಂತೆ ಸುರಕ್ಷಿತವಾಗಿ ಬಳಸಬಹುದು.
ಶುಂಠಿ
ಈ ಘಾಟು ಖಾರದ ಬೇರಿನಲ್ಲಿ ಮುಖ್ಯವಾಗಿ ಇರುವುದು ಉತ್ಕರ್ಷಣ ನಿರೋಧಕ ಗುಣ. ಇದಲ್ಲಿರುವ ಜಿಂಜರಾಲ್ ಮತ್ತು ಶಗೋಲ್‌ನಂಥ ಪ್ರಬಲ ಉರಿಯೂತ ಶಾಮಕಗಳು ನೋವಿಗೆ ಕಾರಣವಾಗುವ ಅಂಶಗಳನ್ನು ತಗ್ಗಿಸುವುದಕ್ಕೆ ಕೆಲಸ ಮಾಡುತ್ತವೆ. ಹಾಗಾಗಿ ಸ್ನಾಯುಗಳ ನೋವು, ಮೈಕೈ ನೋವಿಗೆ ಶುಂಠಿಯ ಕಷಾಯ ಉತ್ತಮ ಉಪಶಮನ ನೀಡುತ್ತದೆ. ಶುಂಠಿಯ ರಸವನ್ನು ತೆಗೆದು, ಎಣ್ಣೆಯಲ್ಲಿ ಕುದಿಸಿ, ಶುಂಠಿ ಎಣ್ಣೆಯನ್ನಾಗಿ ಮಾಡಿಕೊಂಡು ಮೈಕೈ ನೋವಿಗೆ ಲೇಪಿಸಿ ಮಸಾಜ್ ಮಾಡುವ ಕ್ರಮವೂ ಕೆಲವೆಡೆ ಚಾಲ್ತಿಯಲ್ಲಿದೆ.
ಪೆಪ್ಪರ್‌ಮಿಂಟ್
ತಲೆನೋವಿನಿಂದ ಹಿಡಿದು ಹಲವು ನೋವುಗಳ ನಿವಾರಣೆಗೆ ಪೆಪ್ಪರ್‌ಮಿಂಟ್ ತೈಲ ವ್ಯಾಪಕವಾಗಿ ಬಳಕೆಯಲ್ಲಿದೆ. ಇದರಲ್ಲಿರುವ ನೈಸರ್ಗಿಕವಾದ ನೋವು ನಿವಾರಕ ಗುಣದಿಂದ, ಹಲವಾರು ನೋವು ನಿವಾರಕ ತೈಲಗಳಲ್ಲೂ ಪೆಪ್ಪರ್‌ಮಿಂಟ್ ಬಳಸಲಾಗುತ್ತದೆ. ಹಲವು ರೀತಿಯ ಉತ್ಕರ್ಷಣ ನಿರೋಧಕಗಳು ಇದರಲ್ಲಿದ್ದು, ಉರಿಯೂತ ನಿವಾರಣೆಗೆ ಇದು ಒಳ್ಳೆಯ ಮದ್ದು. ಇದರ ಎಲೆಗಳನ್ನು ಚಹಾ ಮಾಡಿ ಸೇವಿಸಬಹುದು ಅಥವಾ ಇದರ ತೈಲಗಳನ್ನು ನೋವಿರುವ ಭಾಗಕ್ಕೆ ಲೇಪಿಸಬಹುದು.
ಬೆಳ್ಳುಳ್ಳಿ
ದಿನಬಳಕೆಯ ವಸ್ತುಗಳಲ್ಲೇ ಒಳ್ಳೆಯ ನೋವು ನಿವಾರಕವೆಂದು ಹೆಸರಾಗಿರುವುದೆಂದರೆ ಬೆಳ್ಳುಳ್ಳಿ ಗಡ್ಡೆ. ಮುಖ್ಯವಾಗಿ ಬ್ಯಾಕ್ಟೀರಿಯ ನಿರೋಧಕ, ಫಂಗಸ್ ಮತ್ತು ವೈರಸ್ ನಿರೋಧಕ ಗುಣಗಳೇ ಇದರ ನೋವು ನಿವಾರಕ ಸಾಮರ್ಥ್ಯಕ್ಕೆ ಕಾರಣ. ಸೋಂಕು ನಿವಾರಣೆ ಮಾಡುವ ಮೂಲಕ ಇದು ನೋವನ್ನೂ ಶಮನ ಮಾಡುತ್ತದೆ. ಗಂಟಲು ನೋವು, ಬೆನ್ನು ನೋವು ಮುಂತಾದ ಸಂದರ್ಭಗಳಲ್ಲಿ ಬೆಳ್ಳುಳ್ಳಿಯ ಕಷಾಯ, ಲೇಪಗಳು ಒಳ್ಳೆಯ ಕೆಲಸ ಮಾಡುತ್ತವೆ. ಮೈಕೈ ನೋವಿಗೆ, ಕೀಲು-ಸ್ನಾಯುಗಳ ನೋವಿಗೆ ಬೆಳ್ಳುಳ್ಳಿ ಎಣ್ಣೆ ಉತ್ತಮ ಮದ್ದು.
ಅರಿಶಿನ
ಉರಿಯೂತ ಶಮನವೇ ಇದರ ಪ್ರಬಲವಾದ ಗುಣ. ಹಾಗಾಗಿ ಗಂಟಲು ನೋವಿನಂಥ ಸೋಂಕಿನ ನೋವಿನಲ್ಲಿ ಇದು ಒಳ್ಳೆಯ ಉಪಶಮನ ನೀಡುತ್ತದೆ. ಇದನ್ನು ಕಷಾಯದ ಮೂಲಕ ಅಥವಾ ಎಣ್ಣೆ ಮಾಡಿಯೂ ಬಳಸಬಹುದು. ಮಂಡಿ ನೋವು, ಇತರ ಯಾವುದೇ ಕೀಲುಗಳ ನೋವಿನಲ್ಲಿ ಅರಿಶಿನ ಮತ್ತು ಬೆಳ್ಳಿಳ್ಳಿಯ ಎಣ್ಣೆ ಮಾಡಿ ಲೇಪಿಸುವ ಕ್ರಮ ಪರಂಪರಾಗತ ಔಷಧೀಯ ಕ್ರಮದಲ್ಲಿ ಬಳಕೆಯಲ್ಲಿದೆ.