Site icon Vistara News

Health Tips: ನಿಂತು ಊಟ ಮಾಡುವುದಕ್ಕಿಂತ ಕೂತು ಊಟ‌ ಮಾಡಿದರೆ ಏನೇನು ಲಾಭಗಳಿವೆ ನೋಡಿ!

Health Tips

ಬದುಕಿನ (Health Tips) ಇನ್ನೊಂದು ಹೆಸರೇ ಧಾವಂತ ಎಂಬುದು. ಗಡಿಬಿಡಿಯ ಹೊರತಾಗಿ ಇನ್ನೇನೂ ಇಲ್ಲ ಅನುಭವಿಸುವುದಕ್ಕೆ ಎನ್ನುವಂತೆ ಬದುಕುತ್ತೇವೆ ನಾವು. ಎಲ್ಲಿಯವರೆಗೆ ಎಂದರೆ ಎಷ್ಟೇ ದುಡಿದರೂ ಕೂತು ತಿನ್ನುವುದಕ್ಕೆ ನಮಗೆ ಸಮಯವಿಲ್ಲ. ಆದರೆ ಕೂತು ತಿನ್ನುವುದಕ್ಕೂ ಅದರದ್ದೇ ಆದ ಪ್ರಯೋಜನಗಳಿವೆ ಎನ್ನುತ್ತವೆ ಅಧ್ಯಯನಗಳು. ಅಂದರೆ ಕೆಲಸ ಮಾಡದೆ ಕೂತು ತಿನ್ನುವ ಬಗ್ಗೆ ಹೇಳುತ್ತಿರುವುದಲ್ಲ, ತಿನ್ನುವಾಗ ಕುಳಿತುಕೊಳ್ಳುವುದರ ಬಗ್ಗೆ ಇಲ್ಲಿ ಮಾತು. ಏಷ್ಯಾದ ಬಹುತೇಕ ಸಂಸ್ಕೃತಿಗಳಲ್ಲಿ ʻಊಟʼ ಎಂದರೆ ಕೆಳಗೆ ಕುಳಿತೇ ತಿನ್ನುವ ಕ್ರಮವಿತ್ತು. ಹಳೆಯ ಕಾಲದವರಂತೆ ಪಟ್ಟಾಗಿ ಕೆಳಗೆ ಕೂತು ತಿನ್ನುವ ಕ್ರಮವೀಗ ಅಪರೂಪದಲ್ಲಿ ಅಪರೂಪ. ಹೀಗೆ ಸ್ವಸ್ಥವಾಗಿ ಕೂತು, ನಿರುಮ್ಮಳ ಮನಸ್ಸಿನಿಂದ ಊಟ ಮಾಡುವುದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭದಾಯಕ ಎನ್ನುತ್ತವೆ ಕೆಲವು ಅ‍ಧ್ಯಯನಗಳು. ಏನು ಪ್ರಯೋಜನ ಹೀಗೆ ನೆಮ್ಮದಿಯಾಗಿ ಕೂತುಣ್ಣುವುದರಿಂದ?

ಜೀರ್ಣಾಂಗಗಳು ಚುರುಕು

ನಿಂತು, ಓಡುತ್ತಾ ಅಥವಾ ಇನ್ನಾವುದೇ ಭಂಗಿಯಲ್ಲಿ ತಿನ್ನುವುದಕ್ಕಿಂತ, ಕುಳಿತು ಬೆನ್ನು ನೇರವಾಗಿ ಇರಿಸಿಕೊಂಡು ತಿನ್ನುವುದು ಜೀರ್ಣಾಂಗಗಳ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ನೈಸರ್ಗಿಕವಾಗಿ ಜೀರ್ಣಾಂಗಗಳು ರಚನೆಯಾದ ರೀತಿಯಲ್ಲೇ ನೇರವಾಗಿ ಅವುಗಳನ್ನು ಇರಿಸಿಕೊಂಡು ಊಟ ಮಾಡುವುದರಿಂದ, ಆಹಾರ ತಡೆಯಿಲ್ಲದಂತೆ ಪಚನೇಂದ್ರಿಯಗಳಲ್ಲಿ ಸಾಗಬಹುದು. ಇದರಿಂದ ಹೊಟ್ಟೆ ಉಬ್ಬರಿಸುವುದು ಅಥವಾ ಹುಳಿತೇಗಿನಂಥ ತೊಂದರೆಗಳನ್ನು ಕಡಿಮೆ ಮಾಡಲು ಸಾಧ್ಯ ಎನ್ನಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿದ್ದು, ಕುಳಿತು ವಿಶ್ರಾಂತಿಯಲ್ಲಿ ಊಟ ಮಾಡುವಾಗ ದೇಹ-ಮನಸ್ಸಿಗೆ ದೊರೆಯುವ ಆರಾಮದ ಭಾವ. ಒತ್ತಡದಲ್ಲಿ ಗಬಗಬ ಮುಕ್ಕಿ ಓಡುವುದಕ್ಕೂ, ನಿರುಮ್ಮಳವಾಗಿ ಕುಳಿತು ತಿನ್ನುವುದಕ್ಕೂ ದೇಹದ ಅಂಗಗಳು ಪ್ರತಿಕ್ರಿಯಿಸುವ ರೀತಿ ತೀರಾ ಭಿನ್ನ. ಏನನ್ನು ಉಣ್ಣುತ್ತಿದ್ದೀರಿ, ಅದರ ರುಚಿ ಹೇಗಿದೆ, ಅದು ನಿಮಗೆಷ್ಟು ಬೇಕು/ ಸಾಕು- ಇಂಥ ಎಲ್ಲ ಭಾವನೆಗಳು ಊಟ ಮಾಡುವಾಗ ಮನದಲ್ಲಿರಬೇಕು. ಏನೋ ತಿಂದೆ, ಎಷ್ಟೋ ತಿಂದೆ ಎನ್ನುವ ಉದಾಸೀನ ಭಾವನೆ ನಮ್ಮ ದೇಹದ ಮೇಲೂ ಅಡ್ಡ ಪರಿಣಾಮ ಬೀರುತ್ತದೆ.

ಭಂಗಿ ಸುಧಾರಣೆ

ಕುರ್ಚಿ ಮೇಲೆ ಕೂರುವುದು ಅಥವಾ ನಿಂತು ತಿನ್ನುವುದು ಮುಂತಾದ ಇನ್ನಾವುದೇ ರೀತಿಯ ಊಟ/ ತಿಂಡಿಯ ಭಂಗಿಗಿಂತಲೂ ಕೆಳಗೆ ಶಿಸ್ತಾಗಿ ಕುಳಿತು ಉಣ್ಣುವುದು ದೇಹದ ಭಂಗಿಯನ್ನು ಸುಧಾರಿಸುತ್ತದೆ. ಉದಾ, ದಿನವಿಡೀ ಕುರ್ಚಿಯಲ್ಲಿ ಬೆನ್ನಿಗೆ ಆಧಾರ ನೀಡಿಯೇ ಕುಳಿತುಕೊಳ್ಳುತ್ತೇವೆ. ಅದರರ್ಥ, ಬೆನ್ನಿನ ಭಾಗ ಸ್ನಾಯುಗಳನ್ನು ನಾವು ಬಳಸುತ್ತಿಲ್ಲ. ಊಟಕ್ಕೆಂದು ಕೆಳಗೆ ಕೂರುವಾಗ ಬೆನ್ನಿಗೆ ಯಾವುದೇ ಆಧಾರವಿರುವುದಿಲ್ಲ. ಆಗ ಬೆನ್ನಿನ ಸ್ನಾಯುಗಳು ಕೆಲಸ ಮಾಡಲೇಬೇಕು; ಮಾಂಸಪೇಶಿಗಳು ಉದ್ದೀಪನಗೊಳ್ಳಲೇಬೇಕು.
ಈ ಮೂಲಕ ಬೆನ್ನು ಮತ್ತು ಪಕ್ಕೆಯ ಸ್ನಾಯುಗಳನ್ನು ಸಕ್ರಿಯ ಮಾಡಿ, ದೇಹದ ಅಂಗ-ಭಂಗಿಗಳನ್ನು, ಕೀಲು-ಸ್ನಾಯುಗಳ ಆರೋಗ್ಯವನ್ನು ಸುಧಾರಿಸಲು ಸಾಧ್ಯವಾಗುತ್ತದೆ. ನಿಯಮಿತವಾಗಿ ಕಾಲು ಮಡಿಸಿದ ಭಂಗಿಯಲ್ಲಿ ಕೆಳಗೆ ಕೂರುವುದರಿಂದ ಕೆಳಬೆನ್ನು, ಸೊಂಟ, ಪೃಷ್ಠ, ತೊಡೆ ಮತ್ತು ಕಿಬ್ಬೊಟ್ಟೆಯ ಸ್ನಾಯುಗಳು ಬಲವಾಗುತ್ತವೆ. ಬೆನ್ನು ಮೂಳೆಯ ಆರೋಗ್ಯ ಸುಧಾರಿಸುತ್ತದೆ. ರಕ್ತ ಪರಿಚಲನೆ ಉತ್ತಮವಾಗುತ್ತದೆ. ಇದು ಊಟದ ಸಮಯದಲ್ಲಿ ಮಾತ್ರವಲ್ಲ, ದಿನವಿಡೀ ನಮ್ಮೆಲ್ಲ ಚಟುವಟಿಕೆಗಳಿಗೆ ನೆರವಾಗುವ ರೀತಿಯಲ್ಲಿ ಆರೋಗ್ಯ ಸುಧಾರಿಸಿಕೊಳ್ಳಲು ನೆರವಾಗುತ್ತದೆ.

ಇದನ್ನೂ ಓದಿ: Home Remedies: ಮಕ್ಕಳನ್ನು ಕಾಡುವ ಶೀತ-ಕೆಮ್ಮಿಗೆ ಮನೆಯಲ್ಲೇ ಇದೆ ಉಪಶಮನ

ಮಾನಸಿಕ ಆರೋಗ್ಯ

ಊಟ ಮಾಡುವಾಗ ಮಾನಸಿಕ ಸ್ಥಿತಿ ಹೇಗಿರುತ್ತದೆ ಎನ್ನುವುದು ಅತ್ಯಂತ ಗುರುತರವಾದದ್ದು. ಆದರೆ ಅದನ್ನೆಲ್ಲ ಗಾಳಿಗೆ ತೂರಿರುವ ನಾವು, ಟಿವಿ ನೋಡುತ್ತಾ, ಮೊಬೈಲ್‌ ಗೀರುತ್ತಾ ಅಥವಾ ಆ ಹೊತ್ತಿಗೆ ಸಂಬಂಧವಿಲ್ಲ ಇನ್ನೇನೋ ಮಾಡುತ್ತಾ ಉಣ್ಣುತ್ತೇವೆ. ಊಟಕ್ಕೂ ಒಂದು ಶ್ರದ್ಧೆ ಬೇಕು, ಹೊತ್ತಿಗೆ ಸರಿಯಾಗಿ ಹಸಿವು ತಣಿಸಿದ ಅನ್ನದ ಬಗೆಗೆ ಕೃತಜ್ಞತೆ ಬೇಕು. ಇದನ್ನೆಲ್ಲ ಮನದಲ್ಲಿ ಇರಿಸಿಕೊಳ್ಳುವುದಕ್ಕೆ ಊಟಕ್ಕಾಗಿ ಒಂದು ಘಳಿಗೆಯನ್ನು ಮೀಸಲಿಟ್ಟರೆ ಮಾತ್ರವೇ ಸಾಧ್ಯ. ವಿಶ್ರಾಂತಿಯ ಭಾವದೊಂದಿಗೆ ಕೂತು ಊಟ ಮಾಡುವುದು ಇಂಥ ಕಾರಣಗಳಿಗೆ ಮುಖ್ಯವಾಗುತ್ತದೆ.
ಆಹಾರದ ಘಮ, ರುಚಿ, ಬಣ್ಣ ಇತ್ಯಾದಿಗಳೆಲ್ಲ ನಮ್ಮ ಜೀರ್ಣ ರಸದ ಸ್ರವಿಸುವಿಕೆಯನ್ನು ಹೆಚ್ಚಿಸಬಲ್ಲವು. ಅದನ್ನೆಲ್ಲ ಗಮನಿಸುವಷ್ಟು ವ್ಯವಧಾನ ನಮಗಿರಬೇಕು. ಇದು ಊಟದ ಸಂತೃಪ್ತಿಯನ್ನು ಹೆಚ್ಚಿಸಬಲ್ಲದು. ಅಂದರೆ ಪರಾತಗಟ್ಟಲೆ ತಿನ್ನದಿದ್ದರೂ, ಸ್ವಲ್ಪ ತಿಂದಷ್ಟಕ್ಕೇ ತೃಪ್ತಿಯನ್ನು ನೀಡಬಲ್ಲದು. ಇದು ಸತ್ವಗಳನ್ನು ಹೀರಿಕೊಳ್ಳಲು ದೇಹಕ್ಕೆ ನೆರವಾಗುವುದೇ ಅಲ್ಲದೆ, ತೂಕ ಇಳಿಸುವ ಉದ್ದೇಶ ಇದ್ದವರಿಗೆ ವರದಂತೆ ಕೆಲಸ ಮಾಡುತ್ತದೆ. ಹಾಗಾಗಿ ಕೂತು ಊಟ ಮಾಡಿ, ಉಂಡೆದ್ದ ಮೇಲೆ ಅದನ್ನು ಕರಗಿಸಿ!

Exit mobile version