Site icon Vistara News

Health Tips: ಊಟದ ನಂತರದ ಸಿಹಿತಿಂಡಿ ಅಭ್ಯಾಸ ಬಿಡೋದು ಹೇಗೆ!

sweets

ಬಹುತೇಕರಿಗೆ ಒಂದು ಅಭ್ಯಾಸವಿದೆ. ಮಧ್ಯಾಹ್ನದೂಟವಾದ ತಕ್ಷಣ ಏನಾದರೊಂದು ಸಿಹಿ ಬಾಯಿಗಿಡಬೇಕು! ಏನಾದರೊಂದು ಸಿಹಿತಿಂಡಿ ಕೊನೆಯಲ್ಲಿ ಬೇಕೆನ್ನುವುದು (sweets after lunch) ಬಹಳ ಮಂದಿಗೆ ಅಭ್ಯಾಸವಾಗಿಬಿಟ್ಟಿರುತ್ತದೆ. ಇದು ಚಟದಂತೆ ಆದರೂ ಇದನ್ನು ಬಿಡಲು ಉಪಾಯವೇ ಇಲ್ಲ ಎಂಬಷ್ಟು ಸಿಹಿ ತಿನ್ನಬೇಕೆನಿಸುವ ಬಯಕೆ ಅಭ್ಯಾಸವಾಗಿಬಿಟ್ಟಿರುತ್ತದೆ. ತಿನ್ನದಿದ್ದರೆ ಏನೋ ಕಳೆದುಕೊಂಡ ಭಾವ. ಎಷ್ಟೋ ಮಂದಿ ಈ ಕೆಟ್ಟ ಅಭ್ಯಾಸದಿಂದ ಮುಕ್ತಿ ಬೇಕೆಂದು (Health tips) ಡಾಕ್ಟರ್‌ ಮೊರೆ ಹೋಗುವುದೂ ಇದೆ.

ಯಾವ ಕಾರಣಕ್ಕಾಗಿ ನಮಗೆ ಸಿಹಿ ಆಗಾಗ ತಿನ್ನಬೇಕೆನಿಸುತ್ತದೆ ಎಂದರೆ, ಮೊದಲನೆಯದಾಗಿ, ಇದು ಪೂರ್ಣವಾಗಿ ಮಾನಸಿಕ. ಪಚನಕ್ರಿಯೆ ಎಂಬುದೊಂದು ಹಾಡ್‌ ವರ್ಕ್‌. ಇಂತಹ ಹಾರ್ಡ್‌ ವರ್ಕ್‌ ಮಾಡಲು ಮತ್ತೆ ಮತ್ತೆ ಎನರ್ಜಿ ಬೇಕೆನಿಸುತ್ತದೆ. ಈ ಎನರ್ಜಿ ಕೊಡುವ ಸುಲಭ ಸಾಧನ ಈ ಸಕ್ಕರೆಯ ಅಂಶ. ಹಾಗಾಗಿ ಮಾನಸಿಕವಾಗಿ ಸಕ್ಕರೆಯ ಸಿಹಿ ತಿಂದಾದಾಗ ಸಿಗುವ ತೃಪ್ತಿಯೇ ಮುಖ್ಯವಾಗಿ ಸಿಹಿಯನ್ನು ಮತ್ತೆ ಮತ್ತೆ ಊಟವಾದ ಮೇಲೆ ತಿನ್ನುವಂತೆ ಪ್ರೇರೇಪಿಸುತ್ತಿರುತ್ತದೆ.

ಎರಡನೆಯದಾಗಿ, ಊಟವಾದ ನಂತರ ಒಂದುದಿನ ಸಿಹಿ ತಿಂದರೆ ಮತ್ತೊಂದು ದಿನವೂ ತಿನ್ನಬೇಕೆನಿಸುತ್ತದೆ. ಅದು ಹೀಗೆಯೇ ಮುಂದುವರಿದು ದಿನಗಳೆದಂತೆ ಚಟವಾಗಿ ಬಿಡುತ್ತದೆ. ಮಾದಕ ವಸ್ತುಗಳಿಗೆ ಅಂಟಿಕೊಂಡಂತೆ ಇರುವ ಚಟ. ದಿನವೂ ಊಟವಾದ ತಕ್ಷಣ ಮನಸ್ಸು ಸಿಹಿಯನ್ನು ಬಯಸುವಂತೆ ಮಾಡುತ್ತದೆ. ನಮ್ಮ ದೇಹ ಈ ಅಭ್ಯಾಸಕ್ಕೆ ಪ್ರೋಗ್ರಾಂ ಮಾಡಿಟ್ಟ ರೀತಿಯಲ್ಲಿ ವರ್ತಿಸುತ್ತದೆ. ಹಾಗಾಗಿ ಪ್ರತಿ ಊಟದ ನಂತರ ಮನಸ್ಸು ಸಿಹಿಯನ್ನೇ ಬಯಸುತ್ತದೆ. ಆದರೆ, ಇಲ್ಲಿ ಎಷ್ಟು ಸಿಹಿ ತಿನ್ನುತ್ತೇವೆ ಎನ್ನುವುದೂ ಕೂಡಾ ಮುಖ್ಯವೆನಿಸುತ್ತದೆ. ಒಂದು ಪುಟ್ಟ ಭಾಗ ದೇಹದೊಳಕ್ಕೆ ಹೋದರೆ ಚಿಂತೆಯಿಲ್ಲ. ಆದರೆ, ಒಂದು ದೊಡ್ಡ ಭಾಗವೆಂಬ ಸಿಹಿ ಪ್ರತಿದಿನ ಹೊಟ್ಟೆ ಸೇರುತ್ತಿದ್ದರೆ ಖಂಡಿತವಾಗಿಯೂ ಒಳ್ಳೆಯದಲ್ಲ, ಈ ಅಭ್ಯಾಸವನ್ನು ಕಡಿಮೆ ಮಾಡಲು ಶ್ರಮ ಪಡಬೇಕು. ಹಾಗಾದರೆ ಈ ಅಭ್ಯಾಸವನ್ನು ಕಡಿಮೆ ಮಾಡಲು ಅಥವಾ ಬಿಡಲು ಮೂರು ವಿಧಾನಗಳಿವೆ.

ನಿಮ್ಮ ಆಹಾರವನ್ನು ಗಮನಿಸಿ: ದಿನವೂ ತಟ್ಟೆಯಲ್ಲಿ ಏನೆಲ್ಲ ಪೌಷ್ಠಿಕಾಂಶಯುಕ್ತ ಆಹಾರವನ್ನು ಬಡಿಸಿಕೊಂಡಿರುತ್ತೀರಿ ಎಂಬುದರ ಬಗ್ಗೆ ಗಮನ ಇರಲಿ. ಒಂದಿಷ್ಟು ತರಕಾರಿ, ಪ್ರೋಟೀನು, ಆರೋಗ್ಯಕರ ಕೊಬ್ಬು, ಕಾರ್ಬೋಹೈಡ್ರೇಟ್‌ ಹಾಗೂ ನಾರಿನಂಶಯುಕ್ತ ಆಹಾರ ತಟ್ಟೆಯಲ್ಲಿರಲಿ. ಆಗ ಊಟವಾದ ನಂತರ ಕಡಿಮೆ ಮಟ್ಟದಲ್ಲಿ ಸಿಹಿ ತಿಂದಿರುತ್ತೀರಿ. ಅಥವಾ ಸಿಹಿ ತಿನ್ನಬೇಕೆಂಬ ಭಾವನೆ ನಿಧಾನವಾಗಿ ಕಡಿಮೆಯಾಗುತ್ತದೆ. ಉಳಿದ ಆಹಾರ ಪದಾರ್ಥಗಳು ನೀಡುವ ಶಕ್ತಿಯಿಂದಾಗಿ ಸಿಹಿ ತಿನ್ನುವ ಬಯಕೆ ತಾನೇ ತಾನಾಗಿ ಕಡಿಮೆಯಾಗುತ್ತದೆ. ಈ ವಿಧಾನ ಅತ್ಯಂತ ಸುಲಭ ಹಾಗೂ ಸರಳ.

ನೀವು ಸಿಹಿ ತಿನ್ನಬಾರದು ಎಂದು ನಿಮಗೆ ನೀವೇ ಬೇಲಿ ಹಾಕಿಕೊಂಡರೆ ಬಹಳಷ್ಟು ಸಾರಿ ಸಿಹಿ ಹೆಚ್ಚು ತಿನ್ನುವಂತೆ ಪ್ರೇರೇಪಣೆಯಾಗುತ್ತದೆ. ಅದಕ್ಕಾಗಿ, ಮನಸ್ಸನ್ನು ತಿನ್ನಲೇಬಾರದು ಇಂಬ ಕಟ್ಟುನಿಟ್ಟು ಮಾಡಿಕೊಳ್ಳಬೇಡಿ. ಆದರೆ ಕಡಿಮೆ ಮಾಡಿ ಅಷ್ಟೇ. ಆದಷ್ಟು ಸಿಹಿತಿಂಡಿ ತಿನ್ನುವ ಬದಲು ಸಿಹಿಯಾಗಿ ನೈಸರ್ಗಿಕವಾಗಿ ಸಿಗುವ ಆಯ್ಕೆಗಳನ್ನು ಮಾಡಿ. ಆಗ ನಿಧಾನವಾಗಿ ಆರೋಗ್ಯಕರ ಸಿಹಿ ಆ ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ. ಆದರೆ, ಈ ಅಭ್ಯಾಸವೂ ಕೂಡಾ ಒಂದು ಮಿತಿಯನ್ನು ದಾಟದಂತೆ ನೋಡಿಕೊಳ್ಳಿ.

ಗಮನವನ್ನು ಬೇರೆಡೆಗೆ ತಿರುಗಿಸುವುದೂ ಕೂಡಾ ಇಂಥದ್ದಕ್ಕೆ ಇನ್ನೊಂದು ಮಾರ್ಗ. ಪ್ರತಿದಿನವೂ ಮಧ್ಯಾಹ್ನ ಊಟವಾದ ತಕ್ಷಣ ಫ್ರಿಡ್ಜ್‌ನಲ್ಲಿಟ್ಟ ಐಸ್‌ಕ್ರೀಮೋ, ಚಾಕೋಲೇಟೋ ನೆನಪಾಗಿ ಗುಳುಂ ಮಾಡಿಬಿಡಬೇಕೆಂದು ಅನಿಸಿದರೆ, ನಿಮ್ಮ ಮನಸ್ಸ್ನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನ ಪಡಿ. ಉದಾಹರಣೆಗೆ ತಿಂದರೆ ಒಂದು ವಾಕ್‌ ಮಾಡುವುದು ಅಥವಾ ಊಟವಾದ ತಕ್ಷಣ ಮತ್ತೊಂದು ಕೆಲಸದಲ್ಲಿ ಬ್ಯುಸಿಯಾಗಿಬಿಡುವುದು ಅಥವಾ ಫ್ರೆಂಡ್‌ ಜೊತೆ ಮಾತಿಗಿಳಿಯುವುದು ಇತ್ಯಾದಿ. ಇದ್ದಕ್ಕಿದ್ದಂತೆ ಈ ಅಭ್ಯಾಸ ಸರಿಯಾಗದಿದ್ದರೂ ಕ್ರಮೇಣ ಸುಧಾರಿಸುತದೆ. ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ನಮ್ಮ ಆಹಾರಕ್ರಮವನ್ನು ಬದಲಾಯಿಸಬೇಕೆಂಬ ಮನಸ್ಥಿತಿ ಬೇಕು. ಆಗಷ್ಟೇ ಇದಕ್ಕೊಂದು ಪರಿಹಾರ ಸಿಕ್ಕೀತು. ಇಲ್ಲವಾದಲ್ಲಿ ಇದು ಪುಸ್ತಕದ ಬದನೆಕಾಯಿ ಆಗಿ ಉಳಿದೀತು.      

ಇದನ್ನೂ ಓದಿ: Health Tips: ಮೊಸರಿನ ಜೊತೆಗೆ ಈ ಆಹಾರಗಳನ್ನು ತಿಂದರೆ ಅಪಾಯ ಕಟ್ಟಿಟ್ಟಬುತ್ತಿ!

Exit mobile version