Site icon Vistara News

Healthy Food For Dengue: ಈ ಆಹಾರಗಳನ್ನು ತಿನ್ನಿ; ಡೆಂಗ್ಯೂಗೆ ಡೋಂಟ್ ಕೇರ್ ಅನ್ನಿ

Healthy Food For Dengue

ಮಳೆಗಾಲ ಬಂದಿದೆ. ಮಳೆಗಾಲದ ಜೊತೆಗೆ ಸಹಜವಾಗಿ, ಜ್ವರ, ಶಿತ, ನೆಗಡಿ, ಕೆಮ್ಮುಗಳೂ ಬಂದಿವೆ. ಮುಖ್ಯವಾಗಿ, ಎಲ್ಲೆಡೆ ವ್ಯಾಪಕವಾಗಿ ಕೇಳಿಬರುತ್ತಿರುವ ಡೆಂಗ್ಯೂ ಜ್ವರ ಕೂಡಾ ದಿನೇ ದಿನೇ ಹೆಚ್ಚಾಗುತ್ತಿವೆ. ಈಗಾಗಲೇ, ಕರ್ನಾಟಕದಲ್ಲಿ ಡೆಂಗ್ಯೂನಿಂದ ಸಾವಿರಾರು ಮಂದಿ ಬಳಲುತ್ತಿದ್ದು, ಈ ಬಗ್ಗೆ ಮುಂಜಾಗರೂಕತೆ ವಹಿಸಬೇಕಿದೆ. ಡೆಂಗ್ಯೂ, ಮಲೇರಿಯಾ ಸೇರಿದಂತೆ ಯಾವುದೇ ಜ್ವರವಿರಬಹುದು, ಸೊಳ್ಳೆಯ ಕಡಿತದಿಂದ ಬರುತ್ತದೆಯಾದರೂ, ದೇಹದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ರೋಗ ನಿರೋಧಕ ಶಕ್ತಿಯನ್ನು ಈ ಮಳೆಗಾಲದಲ್ಲಿ ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ, ಈ ಸಂದರ್ಭ ಆರೋಗ್ಯಕರ ಆಹಾರ ಸೇವನೆ ಅತ್ಯಂತ ಮುಖ್ಯ. ಬನ್ನಿ, ಡೆಂಗ್ಯೂ ಹಾಗೂ ಮಲೇರಿಯಾದಂತಹ ಜ್ವರ ನಮ್ಮನ್ನು ಬಾಧಿಸದಂತೆ ಯಾವೆಲ್ಲ ಆಹಾರ ಸೇವನೆಯಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು (Healthy Food For Dengue) ನೋಡೋಣ.

ಸಿಟ್ರಸ್‌ ಹಣ್ಣುಗಳು

ವಿಟಮಿನ್‌ ಸಿ ಹೆಚ್ಚಿರುವ ಹಣ್ಣುಗಳು ರೋಗ ನಿರೋಧಕ ಶಕ್ತಿಯನ್ನು ದೇಹದಲ್ಲಿ ಹೆಚ್ಚಿಸುತ್ತದೆ. ನಿಂಬೆ, ಕಿತ್ತಳೆ, ಮುಸಂಬಿ ಇತ್ಯಾದಿ ಹಣ್ಣುಗಳಲ್ಲಿ ವಿಟಮಿನ್‌ ಸಿ ಅಧಿಕವಾಗಿದೆ. ಇವಿಷ್ಟೇ ಅಲ್ಲದೆ, ನೆಲ್ಲಿಕಾಯಿ, ಕಿವಿ, ಸ್ಟ್ರಾಬೆರಿ, ಟೊಮೇಟೋ ಇತ್ಯಾದಿಗಳಲ್ಲಿಯೂ ವಿಟಮಿನ್‌ ಸಿ ಇರುವುದರಿಂದ ವಿಟಮಿನ್‌ ಸಿ ಅಧಿಕವಾಗಿರುವ ತರಕಾರಿ ಹಣ್ಣುಗಳ ಸೇವನೆ ಮಾಡುವ ಮೂಲಕ ರೋಗ ನಿರೋಧಕತೆಯನ್ನು ಹೆಚ್ಚಿಸಿಕೊಳ್ಳಬಹುದು.

ಹಸಿರು ಸೊಪ್ಪು ತರಕಾರಿಗಳು

ಮಲೇರಿಯಾ, ಚಿಕುನ್‌ಗುನ್ಯಾ, ಡೆಂಗ್ಯೂ ಇವುಗಳು ಬರದಂತೆ ಅಂತಷ್ಟೇ ಅಲ್ಲ, ನಮ್ಮ ದೇಹದಲ್ಲಿ ಆರೋಗ್ಯ ಚೈತನ್ಯವನ್ನು ಹೊರಹೊಮ್ಮಿಸಲು ಈ ಹಸಿರು ಸೊಪ್ಪು ತರಕಾರಿಗಳ ನಿಯಮಿತ ಸೇವನೆಯನ್ನು ನಾವು ಮರೆಯಲೇಬಾರದು.

ಆಂಟಿ ಆಕ್ಸಿಡೆಂಟ್‌ನಿಂದ ಸಮೃದ್ಧವಾಗಿರುವ ಆಹಾರಗಳು

ಈರುಳ್ಳಿ, ಸೇಬು, ಬೆರ್ರಿಗಳು, ಒಣದ್ರಾಕ್ಷಿ ಸೇರಿದಂತೆ ಆಂಟಿ ಆಕ್ಸಿಡೆಂಟ್‌ ಹೇರಳವಾಗಿರುವ ಆಹಾರವನ್ನು ಸೇವಿಸಿ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಮುಖ ಆಗರ.

ಪಪ್ಪಾಯ ಎಲೆಯ ರಸ

ಪಪ್ಪಾಯಿಯನ್ನು ತಿನ್ನುವುದಕ್ಕಿಂತಲೂ, ಅದರ ಎಲೆಯ ರಸ ಕುಡಿಯುವುದರಿಂದ ಡೆಂಗ್ಯುವನ್ನು ದೂರವಿಡಬಹುದು. ಇದು ಡೆಂಗ್ಯುಗೆ ಪ್ರಕೃತಿಯೇ ನೀಡಿದ ದಿವ್ಯವೌಷಧ. ಡೆಂಗ್ಯು ಬಂದಿರುವ ಮಂದಿಗೂ ಇದು ಒಳ್ಳೆಯ ಔಷಧ. ನೀವು ಮೊದಲೇ ಪಪ್ಪಾಯಿ ಹಾಗೂ ಪಪ್ಪಾಯಿ ಎಲೆಯ ರಸವನ್ನು ಆಗಾಗ ಸೇವಿಸುತ್ತಿದ್ದರೆ, ಡೆಂಗ್ಯುವಿನ ಅಪಾಯದಿಂದ ದೂರವಿರಬಹುದು.

ಬಾದಾಮಿ

ಬಾದಾಮಿಯಂಥ ವಿಟಮಿನ್‌ ಇ ಹೇರಳವಾಗಿರುವ ಆಹಾರದಲ್ಲಿ ಡೆಂಗ್ಯು, ಮಲೇರಿಯಾದಂತಹ ರೋಗಗಳನ್ನು ದೂರವಿಡುವ ಗುಣವಿದೆ. ನಿತ್ಯವೂ ಬೆಳಿಗ್ಗೆ ಬಾದಾಮಿ, ವಾಲ್‌ನಟ್‌ ತಿನ್ನುವುದರಿಂದ ಒಳ್ಳೆಯ ಲಾಭ ಪಡೆಯಬಹುದು. ಕೇವಲ, ಇದಕ್ಕೆ ಮಾತ್ರವಲ್ಲ, ಹೃದಯದ ಆರೋಗ್ಯವೂ ಸೇರಿದಂತೆ ಸಂಪೂರ್ಣ ಆರೋಗ್ಯಕ್ಕೆ ಈ ಅಭ್ಯಾಸ ಒಳ್ಳೆಯದು.

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿರುವ ವಾಸನೆಗೆ ಹಲವು ಕೀಟಗಳನ್ನೂ, ಸೊಳ್ಳೆಗಳನ್ನೂ ದೂರವಿರಿಸುವ ಗುಣವಿದೆ. ಇದು ಆಂಟಿ ಫಂಗಲ್‌ ಹಾಗೂ ಆಂಟಿ ಬ್ಯಾಕ್ಟೀರಿಯಲ್‌ ಗುಣಗಳನ್ನು ಹೊಂದಿರುವುದರಿಂದ ಸೇವನೆ ಒಳ್ಳೆಯದು.

ಶುಂಠಿ

ಶೀತ, ನೆಗಡಿ, ಜ್ವರ ಏನೇ ಇರಲಿ ಶುಂಠಿಯ ಗುಣಗಳು ಇದಕ್ಕೆ ಪೂರಕವಾಗಿರುವುದು ನಿಮಗೆ ಗೊತ್ತೇ ಇದೆ. ಹಾಗಾಗಿ ಮಳೆಗಾಲದಲ್ಲಿ ಶುಂಠಿಯ ಉಪಯೋಗ ಬಹಳ ಮುಖ್ಯ. ಗಂಟಲು ಕೆರೆತ, ಶೀತ, ನೆಗಡಿ ಕೆಮ್ಮು ಏನೇ ಇರಲಿ, ಬರದೇ ಇರಲಿ ಶುಂಠಿಯ ಸೇವನೆಯಿಂದ ಇವೆಲ್ಲ ಬರದಂತೆ ತಡೆಯಬಹುದು. ಅಷ್ಟೇ ಅಲ್ಲ, ಬಂದರೂ ಇದರ ಸೇವನೆಯಿಂದ ಪರಿಹಾರ ಪಡೆಯಬಹುದು.

ಮೊಸರು

ಮೊಸರಿನಲ್ಲಿರುವ ಪ್ರೊಬಯಾಟಿಕ್‌ ಗುಣವು ರೋಗ ನಿರೋಧಕತೆಯನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ದಿನಕ್ಕೊಂದು ಕಪ್‌ ಮೊಸರಿನ ಸೇವನೆ ಒಳ್ಳೆಯದು.

ಅರಿಶಿನ

ಅರಿಶಿನದ ಗುಣಗಳ ಬಗ್ಗೆ ಮತ್ತೆ ವಿವರಿಸಿ ಹೇಳಬೇಕಾಗಿಲ್ಲ. ದಿನವೂ ಅರಿಶಿನ ಹಾಕಿದ ಬಿಸಿ ಹಾಲನ್ನು ಕುಡಿಯುವ ಮೂಲಕ ರೋಗ ನಿರೋಧಕತೆಯನ್ನು ಹೆಚ್ಚಿಸಿಕೊಳ್ಳಬಹುದು. ಮಕ್ಕಳಿಗೆ ಮುಖ್ಯವಾಗಿ ಇದನ್ನು ಕೊಡುವುದರಿಂದ ಸಾಕಷ್ಟು ಲಾಭಗಳಿವೆ.

ಎಳನೀರು

ಎಳನೀರು ಅಥವಾ ತೆಂಗಿನಕಾಯಿ ನೀರನ್ನು ಸೇವಿಸುವುದರಿಂದ ರೋಗ ನಿರೋಧಕತೆ ಹೆಚ್ಚುತ್ತದೆ. ಇದರಲ್ಲಿ ಇಲೆಕ್ಟ್ರೋಲೈಟ್‌ಗಳಿದ್ದು, ಇವು ಡೆಂಗ್ಯು, ಮಲೇರಿಯಾದಂಹತ ಸಮಸ್ಯೆಗಳು ಬರದಂತೆ ದೂರವಿರಿಸುತ್ತದೆ.

Exit mobile version