Site icon Vistara News

Healthy Sandwich Spread: ಮನೆಯಲ್ಲೇ ಮಾಡಿ ಕಡಿಮೆ ಕ್ಯಾಲರಿಯ ಆರೋಗ್ಯಕರ ಸ್ಯಾಂಡ್‌ವಿಚ್‌ ಸ್ಪ್ರೆಡ್‌!

Healthy Sandwich Spread

ಸ್ಯಾಂಡ್‌ವಿಚ್‌ ಎಂಬ ತಿನಿಸು, ಬೆಳಗ್ಗೆ, ಮಧ್ಯಾಹ್ನ ಸಂಜೆ ರಾತ್ರಿಯೆನ್ನದೆ, ಯಾವುದೇ ಹೊತ್ತಿಗೂ ಹೊಟ್ಟೆ ತುಂಬಿಸಬಲ್ಲ ಒಂದು ಸುಲಭವಾದ ತಿನಿಸು. ಅಷ್ಟೇ ರುಚಿಯಾದ ತಿನಸು ಎಂಬುದರಲ್ಲೂ ಎರಡು ಮಾತಿಲ್ಲ. ಮಕ್ಕಳಿರುವ ಹೆತ್ತವರಿಗಂತೂ, ವಾರದಲ್ಲಿ ಎರಡು ಸಲವಾದರೂ ಮನೆಯಲ್ಲಿ ಸ್ಯಾಂಡ್‌ವಿಚ್‌ ಮಾಡಬೇಕಾದ ಪ್ರಸಂಗಗಳು ಇದ್ದೇ ಇರುತ್ತವೆ. ಕಚೇರಿ ಕೆಲಸಕ್ಕೆ ಬೇಗ ಹೋಗಬೇಕಾದಾಗ, ಅತೀವ ಕೆಲಸದ ಒತ್ತಡದಲ್ಲಿರುವಾಗ, ಅಡುಗೆ ಮಾಡಲು ಪುರುಸೊತ್ತು, ವ್ಯವಧಾನ ಇರದಿದ್ದಾಗ, ಬೇರೆ ಅಡುಗೆ ಮಾಡಲು ಗೊತ್ತಿಲ್ಲದೇ ಇದ್ದಾಗ, ಏನಾದರೂ ರುಚಿಯಾಗಿ ತಿನ್ನಬೇಕೆಂದು ಬಯಕೆಯಾದಾಗ, ಹೀಗೆ ನಾನಾ ಕಾರಣಗಳಲ್ಲಿ ಸ್ಯಾಂಡ್‌ವಿಚ್‌ ಎಂಬ ತಿನಿಸು ಅಡುಗೆಮನೆಯಲ್ಲಿ ಹೊತ್ತಲ್ಲದ ಹೊತ್ತಿನಲ್ಲೆಲ್ಲ ಪ್ರತ್ಯಕ್ಷವಾಗುತ್ತದೆ. ಬ್ರೆಡ್‌ ಆರೋಗ್ಯಕ್ಕೆ ಅಷ್ಟೇನೂ ಒಳ್ಳೆಯದಲ್ಲ ಎಂದು ತಿಳಿದಿದ್ದರೂ, ಬಹುತೇಕರ ಮನೆಗಳಲ್ಲಿ ಬ್ರೆಡ್‌ ಬಳಕೆ ಸಾಮಾನ್ಯ. ಈ ಬ್ರೆಡ್‌ ಒಳಗೆ ಮೆಯೋನೀಸ್‌ ಅಥವಾ ಇನ್ನೇನೋ ಅದರೊಳಗೆ ಸುರಿದು ಇನ್ನಷ್ಟು ಅನಾರೋಗ್ಯಕರ ವಾತಾವರಣವನ್ನು ಅಲ್ಲಿ ಸೃಷ್ಟಿಸುವುದು ಬೇಡವೆನಿಸಿದವರೆಲ್ರೂ, ಸ್ಯಾಂಡ್‌ವಿಚ್‌ನಲ್ಲೂ ಆರೋಗ್ಯಕರ ವಿಧಾನಗಳನ್ನು ಹುಡುಕುತ್ತಾರೆ. ಆದರಷ್ಟೂ ಬ್ರೆಡ್‌ ಜೊತೆಗೆ ಒಂದಷ್ಟು ತರಕಾರಿ, ಪ್ರೊಟೀನ್‌, ನೈಸರ್ಗಿಕ ಆಹಾರಗಳು ಹೊಟ್ಟೆ ಸೇರಲಿ ಎಂದು ಬಯಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಬಗೆಬಗೆಯ ಸ್ಪ್ರೆಡ್‌ಗಳು ರುಚಿಕರವಾಗಿ ಕಂಡರೂ, ಅದರಲ್ಲಿರುವ ಆರೋಗ್ಯಕರ ಅಂಶಗಳು ಅಷ್ಟಕ್ಕಷ್ಟೇ ಎಂಬ ಸತ್ಯವೂ ತಿಳಿದಿರುವುದರಿಂದ ಒಂದಿಷ್ಟಿ ಒಳ್ಳೆಯ ಆರೋಗ್ಯಕರ, ಹಾಗೂ ಕಡಿಮೆ ಕ್ಯಾಲರಿಯ ಮನೆಯಲ್ಲೇ ಮಾಡಬಹುದಾದ ಸ್ಯಾಂಡ್‌ವಿಚ್‌ ಸ್ಪ್ರೆಡ್‌ಗಳ ವಿವರ ಇಲ್ಲಿದೆ. ಸಾಕಷ್ಟು ಪೋಷಕಾಂಶವನ್ನು ನೀಡುವ ಈ ಆರೋಗ್ಯಕರ ಸ್ಪ್ರೆಡ್‌ಗಳು (healthy sandwich spread) ಇವು.

ಹುಮಸ್‌

ಚೆನ್ನಾ, ಎಳ್ಳು ಹಾಗೂ ಆಲಿವ್‌ ಎಣ್ಣೆಯಿಂದ ಮಾಡಬಹುದಾದ ಹುಮಸ್‌, ಪ್ರೊಟೀನ್‌ನಿಂದ ಸಮೃದ್ಧವಾಗಿರುವ ಸ್ಪ್ರೆಡ್‌. ಇದರಲ್ಲಿ ದೇಹಕ್ಕೆ ಅಗತ್ಯವಾದ ಒಳ್ಳೆಯ ಕೊಬ್ಬಿದೆ. ಇದನ್ನು ತಯಾರಿಸಿ, ಸ್ಯಾಂಡ್‌ವಿಚ್‌ ಮಾಡುವಾಗ ಒಳಗೆ ಲೇಪಿಸಿ ಟೊಮೇಟೋ, ಸೌತೆಕಾಯಿ ಇತ್ಯಾದಿಗಳನ್ನೂ ಇಟ್ಟು ಸ್ಯಾಂಡ್‌ವಿಚ್‌ ಮಾಡಬಹುದು.

ಬೆಣ್ಣೆಹಣ್ಣು

ಅವಕಾಡೋ ಅಥವಾ ಬೆಣ್ಣೆಹಣ್ಣನ್ನು ಸ್ಯಾಂಡ್‌ವಿಚ್‌ ಒಳಗೆ ಸ್ಪ್ರೆಡ್‌ನಂತೆ ಬಳಸಬಹುದು. ರುಚಿಯಾದ ಹಾಗೂ ಅಷ್ಟೇ ಪೋಷಕಾಂಶಯುಕ್ತವೂ ಆಗಿರುವ ಈ ಸ್ಪ್ರೆಡ್‌ ಮಾಡಲು ಬೆಣ್ಣೆಹಣ್ಣಿಗೆ ವಿವಿಧ ಮಿಕ್ಸ್‌ಡ್‌ ಹರ್ಬ್ಸ್‌ ಹಾಗೂ ಮಸಾಲೆಗಳನ್ನು ಬಳಸಬಹುದು. ಸಿಹಿಯಾದ ಹಾಗೂ ಸ್ಪೈಸೀಯಾದ ಸ್ಯಾಂಡ್‌ವಿಚ್‌ಗಳೆರಡಕ್ಕೂ ಇದು ಸೂಕ್ತವಾದ ಆಯ್ಕೆ.

ಬೆರ್ರಿಗಳು

ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಸಿಹಿಯಾದ ಸ್ಯಾಂಡ್‌ವಿಚ್‌ ಇಷ್ಟವಾಗುತ್ತಿದ್ದರೆ, ಮಾರುಕಟ್ಟೆಯಿಂದ ಜ್ಯಾಮ್‌ ತಂದು ಸುರಿಯುವ ಬದಲು ಬೆರ್ರಿ ಹಣ್ಣುಗಳನ್ನು ಮ್ಯಾಶ್‌ ಮಾಡಿ ಬಳಸಬಹುದು. ನಿಮಗಿಷ್ಟವಾದ ಬೆರ್ರಿ ಹಣ್ಣುಗಳನ್ನು ಕೊಂಡು ತಂದು ಅವನ್ನೆಲ್ಲ ಮ್ಯಾಶ್‌ ಮಾಡಿ, ಸ್ವಲ್ಪ ಜೇನುತುಪ್ಪ ಸೇರಿಸಿ ಪೇಸ್ಟ್‌ ತರಹ ಮಾಡಿ, ನೈಸರ್ಗಿಕವಾದ ಸಿಹಿಯಾದ ಸ್ಯಾಂಡ್‌ವಿಚ್‌ಗಳನ್ನು ಮಾಡಬಹುದು. ಬೆಳಗಿನ ಹಗುರವಾದ ಉಪಹಾರಕ್ಕೆ ಇದನ್ನು ಮಾಡಬಹುದು.

ಪೀನಟ್‌ ಬಟರ್‌

ಮಾರುಕಟ್ಟೆಯಿಂದ ದೊಡ್ಡ ಜಾರ್‌ನಲ್ಲಿ ಪೀನಟ್‌ ಬಟರ್‌ ತಂದು ಸ್ಯಾಂಡ್‌ವಿಚ್‌ಗೆ ಸ್ಪ್ರೆಡ್‌ ಮಾಡಿ ಕೊಡುವ ಬದಲು ನೀವೇ ಏಕೆ ಪೀನಟ್‌ ಬಟರನ್ನು ಮನೆಯಲ್ಲಿಯೇ ಮಾಡಬಾರದು? ನೆಲಗಡಲೆಯಿಂದ ಪೀನಟ್‌ ಬಟರ್‌ ಮಾಡಿ ಅದರ ಜೊತೆಗೆ ಬಾಳೆಹಣ್ಣಿನ ತುಣುಕುಗಳನ್ನೂ ಸೇರಿಸಿ ಅದನ್ನು ಸ್ಯಾಂಡ್‌ವಿಚ್‌ ಸ್ಪ್ರೆಡ್‌ ಆಗಿ ಬಳಸಬಹುದು. ಬೇಕಾದರೆ ಜೇನುತುಪ್ಪವನ್ನೂ ಸೇರಿಸಬಹುದು.

ಪನೀರ್‌ನ ಮೆಯೋನೀಸ್‌

ನಿಮಗೆ ಮೆಯೋನೀಸ್‌ ಅತ್ಯಂತ ಪ್ರಿಯವಾದ ಸ್ಯಾಂಡ್‌ವಿಚ್‌ ಸ್ಪ್ರೆಡ್‌ ಆಗಿದ್ದರೆ, ನೀವು ಪನೀರ್‌ ಅಥವಾ ಮೊಸರಿನಿಂದ ಇಂತಹ ಸ್ಯಾಂಡ್‌ವಿಚ್‌ ಸ್ಪ್ರೆಡ್‌ ಮಾಡಬಹುದು. ಯಾವುದೇ ಕಷ್ಟವಿಲ್ಲದ, ರುಚಿಯಲ್ಲೂ ರಾಜಿ ಮಾಡಿಕೊಳ್ಳದ ಈ ಸ್ಪ್ರೆಡ್‌ ಮಕ್ಕಳಿಗೂ ಬಹಳ ಪ್ರಿಯವಾಗುತ್ತದೆ. ಮೊಸರಿನ ನೀರನ್ನು ಸಂಪೂರ್ಣವಾಗಿ ಒಂದು ಬಟ್ಟೆಯಲ್ಲಿ ಹಿಂಡಿ ತೆಗೆದು ಅಥವಾ ಪನೀರ್‌ರನ್ನು ಚೆನ್ನಾಗಿ ಮ್ಯಾಶ್‌ ಮಾಡಿ ಅದಕ್ಕೆ ಒಂದಿಷ್ಟು ನೆನೆಸಿದ ಗೋಡಂಬಿ ಹಾಗೂ ಒಂದು ಹಸಿ ಬೆಳ್ಳುಳ್ಳಿಯನ್ನು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಂಡು ಪೇಸ್ಟ್‌ ತಯಾರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಮಿಕ್ಸ್ಡ್‌ ಹರ್ಬ್ಸ್‌ ಸೇರಿಸಿದರೆ, ಮಾರುಕಟ್ಟೆಯ ಮೆಯೋನೀಸ್‌ಗಳೆಲ್ಲ ಮಕಾಡೆ ಮಲಗಬೇಕು!

ಇದನ್ನೂ ಓದಿ: Heatwave Effect: ಬೇಸಿಗೆಗೂ ಕಣ್ಣಿನ ಸಮಸ್ಯೆಗೂ ಇದೆ ನಂಟು!

Exit mobile version