ಬೆಂಗಳೂರು: ಚಿರಂಜೀವಿ ಸರ್ಜಾ, ಪುನೀತ್ ರಾಜ್‌ಕುಮಾರ್, ಈಗ ಸ್ಪಂದನಾ ರಾಘವೇಂದ್ರ (Spandana Vijay Raghavendra). ಹೀಗೆ ಹಲವು ಸೆಲೆಬ್ರಿಟಿಗಳು ಕಿರಿಯ ವಯಸ್ಸಿನಲ್ಲೇ ಹೃದಯಾಘಾತದಿಂದ ಮೃತಪಡುತ್ತಿದ್ದಾರೆ. ನಮ್ಮ ಸ್ನೇಹಿತರು, ಕುಟುಂಬಸ್ಥರು, ಪರಿಚಯದವರು ಕೂಡ ಸಣ್ಣ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಕೊರೊನಾ ಸಾಂಕ್ರಾಮಿಕ ಪಿಡುಗಿನ ಬಳಿಕ 20-50 ವರ್ಷದೊಳಗಿನವರು ಹೆಚ್ಚಾಗಿ ಹೃದಯಾಘಾತದಿಂದ ಮೃತಪಡುತ್ತಿದ್ದು, ಅಧ್ಯಯನ ವರದಿಗಳು, ತಜ್ಞರು, ವೈದ್ಯರು ಕೂಡ ಇದನ್ನೇ ಹೇಳಿದ್ದಾರೆ.
ಐಸಿಎಂಆರ್ ವರದಿ ಹೇಳುವುದೇನು?
ಕೊರೊನಾ ನಂತರ ಹೃದಯಾಘಾತಕ್ಕೀಡಾಗುವವರ ಸಂಖ್ಯೆ ಹೆಚ್ಚಾಗುತ್ತಿರುವ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಈಗಾಗಲೇ ಸಂಶೋಧನೆ (ICMR) ಆರಂಭಿಸಿದೆ. ಹಾಗೆಯೇ, ಕೊರೊನಾ ಪಿಡುಗಿನ ನಂತರ ಹೃದಯಾಘಾತಕ್ಕೀಡಾಗುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ಐಸಿಎಂಆರ್ ತಜ್ಞರೇ ಒಪ್ಪಿಕೊಂಡಿದ್ದಾರೆ.
ಆದರೆ, ಕೊರೊನಾ ಸೋಂಕು ತಗುಲಿ, ನಂತರ ಗುಣಮುಖರಾದವರಲ್ಲಿ ಪ್ರಮಾಣ ಜಾಸ್ತಿ ಇದೆ ಎಂಬುದಾಗಿ ತಜ್ಞರು ಹೇಳಿದ್ದಾರೆ. ಆದಾಗ್ಯೂ, ಕೊರೊನಾ ಲಸಿಕೆಯಿಂದಲೂ ಹೃದಯಾಘಾತ ಆಗುತ್ತಿದೆಯೇ ಎಂಬ ಕುರಿತು ಕೂಡ ಐಸಿಎಂಆರ್ ತಜ್ಞರು ಸಂಶೋಧನೆ, ಅಧ್ಯಯನ ಆರಂಭಿಸಿದ್ದಾರೆ. ಇದರ ವರದಿ ಬಳಿಕವೇ ಹೃದಯಾಘಾತಕ್ಕೆ ಕೊರೊನಾ ಲಸಿಕೆ ಕಾರಣ ಹೌದೋ, ಅಲ್ಲವೋ ಎಂಬುದು ತಿಳಿಯಲಿದೆ.
ಇದನ್ನೂ ಓದಿ: Spandana Vijay Raghavendra: ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಬಗ್ಗೆ ಗೊತ್ತಿರದ ಸಂಗತಿಗಳಿವು
ಹೃದಯಾಘಾತ ಪ್ರಮಾಣ ಎಷ್ಟು ಏರಿಕೆ?
ಕೊರೊನಾ ಸೋಂಕಿನ ನಂತರದಲ್ಲಿ ಹೃದಯಾಘಾತ ಪ್ರಮಾಣ ಏರಿಕೆಯಾಗಿರುವುದನ್ನು ಜಾಗತಿಕ ವರದಿಗಳೇ ದೃಢಪಡಿಸಿವೆ. ಜಾಗತಿಕ ವರದಿಯೊಂದರ ಪ್ರಕಾರ, ಸಾಂಕ್ರಾಮಿಕದ ನಂತರ 24-45 ವರ್ಷದೊಳಗಿನವರಲ್ಲಿ ಹೃದಯಾಘಾತ ಪ್ರಮಾಣವು ಶೇ.30ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ. ಆ ಮೂಲಕ ಅಂತಾರಾಷ್ಟ್ರೀಯವಾಗಿಯೂ ಕೊರೊನಾ ನಂತರ ಹೃದಯಾಘಾತ ಪ್ರಮಾಣ ಹೆಚ್ಚಾಗಿದೆ ಎಂಬುದು ದೃಢಪಟ್ಟಿದೆ.
ಇದನ್ನೂ ಓದಿ: Spandana Vijay Raghavendra : ಮಂಗಳವಾರ ಮುಂಜಾನೆ ಸ್ಪಂದನಾ ಪಾರ್ಥಿವ ಶರೀರ ಬೆಂಗಳೂರಿಗೆ, ಅಂತಿಮ ದರ್ಶನಕ್ಕೆ ಸಿದ್ಧತೆ
ಶೇ.3-5ರಷ್ಟು ಏರಿಕೆ: ಡಾ.ಸಿ.ಎನ್. ಮಂಜುನಾಥ್
ಕೊರೊನಾ ನಂತರ ಹೃದಯಾಘಾತ ಪ್ರಮಾಣವು ಶೇ.3ರಿಂದ ಶೇ.5ರಷ್ಟು ಏರಿಕೆಯಾಗಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ. “ಮೊದಲೆಲ್ಲ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹೃದಯಾಘಾತ ಆಗುತ್ತಿರಲಿಲ್ಲ. ಆದರೆ, ಈಗ ಯುವಕರಿಗೂ ಹೃದಯಾಘಾತ ಹೆಚ್ಚುತ್ತಿದೆ. ಅಧಿಕ ಒತ್ತಡ, ಜೀವನ ಶೈಲಿ, ಆಹಾರ ಶೈಲಿ ಇದಕ್ಕೆ ಕಾರಣವಾಗಿದೆ” ಎಂದು ಮಾಹಿತಿ ನೀಡಿದ್ದಾರೆ.