ಅತಿಯಾದರೆ ಅಮೃತವೂ ವಿಷವೇ ಎಂಬ ಮಾತಿಗೆ ಸರಿಯಾದ ಉದಾಹರಣೆಯಿದು. ಅರಿಶಿನ ಎಂಬುದು ಆರೋಗ್ಯದ ವಿಚಾರದಲ್ಲಿ ಚಿನ್ನ ಹೌದೇ ಆದರೂ, ಅತಿಯಾದರೆ ಏನೇನು ಸಮಸ್ಯೆಗಳನ್ನು ತಂದೊಡ್ಡಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಅರಿಶಿನದ ಸಪ್ಲಿಮೆಂಟ್‌ಗಳನ್ನು ಉತ್ತಮ ಆರೋಗ್ಯಕ್ಕಾಗಿ ಎಂಬ ದೃಷ್ಟಿಯಿಂದ ತೆಗೆದುಕೊಳ್ಳುತ್ತಿದ್ದರೆ ಅದರಿಂದ ಪಿತ್ತಕೋಶಕ್ಕೆ ಸಮಸ್ಯೆಯಾಗಬಹುದು ಎಂದು ಇತ್ತೀಚೆಗಿನ ಸಮೀಕ್ಷೆಯೊಂದು ವರದಿ ಮಾಡಿದೆ. ಅರಿಶಿನ, ಗ್ರೀನ್ ಟೀ ಎಕ್‌ಟ್ರ್ಯಾಕ್ಟ್, ಅಶ್ವಗಂಧ, ಗಾರ್ಸಿನಿಯಾ ಕಾಂಬೋಜಿಯಾ ಇತ್ಯಾದಿಗಳ ಸಪ್ಲಿಮೆಂಟ್‌ಗಳನ್ನು (Herbal Supplement) ಇಂದು ವ್ಯಾಪಕವಾಗಿ ಅಮೆರಿಕವೂ ಸೇರಿದಂತೆ ವಿಶ್ವದೆಲ್ಲೆಡೆ ಜನರು ಸೇವಿಸುತ್ತಿದ್ದು, ಇದರ ಬಳಕೆ ಅನೇಕ ಆರೋಗ್ಯದ ಸಮಸ್ಯೆಗಳನ್ನು ಹುಟ್ಟುಹಾಕಬಹುದು ಎಂದು ವರದಿ ಹೇಳಿದೆ. ವೈದ್ಯರ ಸಲಹೆಯಿಲ್ಲದೆ, ನೇರವಾಗಿ ತಾವೇ ತಾವಾಗಿ ಇಂತಹ ಸಪ್ಲಿಮೆಂಟ್‌ಗಳನ್ನು ಬಳಸುವುದು ಸಾಮಾನ್ಯವಾಗಿದೆ. ಅಗತ್ಯವಿಲ್ಲದೆ ಇವುಗಳನ್ನು ಸೇವನೆ ಮಾಡುವುದರಿಂದ ಪಿತ್ತಕೋಶದ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಸಂಧಿವಾತದಂತಹ ಸಮಸ್ಯೆಗೆ ಅರಿಶಿನದ ಸಪ್ಲಿಮೆಂಟ್, ಶಕ್ತಿವರ್ಧನೆಗೆ ಗ್ರೀನ್‌ಟೀ ಸಪ್ಲಿಮೆಂಟ್, ಒತ್ತಡವನ್ನು ಕಡಿಮೆ ಮಾಡಲು ಅಶ್ವಗಂಧ, ತೂಕ ಇಳಿಕೆಗೆ ಗಾರ್ಸಿನಿಯಾ ಕಾಂಬೋಜಿಯಾ, ಹೃದಯದ ಆರೋಗ್ಯಕ್ಕೆ ಕೆಂಪು ಈಸ್ಟ್ ಅನ್ನ ಇತ್ಯಾದಿಗಳು ಇತ್ತೀಚೆಗೆ ಟ್ರೆಂಡ್ ಆಗುತ್ತಿದ್ದು, ಜನರು ವ್ಯಾಪಕವಾಗಿ ಬಳಸುತ್ತಿದ್ದಾರೆ. ಗ್ರೀನ್‌ಟೀ ಕುಡಿಯುವುದಕ್ಕೂ ಇದಕ್ಕೂ ಬಹಳ ವ್ಯತ್ಯಾಸವಿದೆ. ಇದು ಗ್ರೀನ್ ಟೀ ಎಕ್ಟ್ರ್ಯಾಕ್ಟ್ ಸಪ್ಲಿಮೆಂಟ್ ಕುರಿತಾಗಿದೆ ಎಂದು ಯುನಿವರ್ಸಿಟಿ ಆಫ್ ಮಿಚಿಗನ್ ತನ್ನ ವರದಿಯಲ್ಲಿ ಹೇಳಿದೆ.
ಪಿತ್ತಕೋಶಕ್ಕೆ ಹಾನಿ
ವರದಿಯಲ್ಲಿ ಇನ್ನೂ ಅನೇಕ ವಿವರಗಳೂ ಉಲ್ಲೇಖವಾಗಿವೆ. ಸಪ್ಲಿಮೆಂಟ್‌ಗಳಿಂದಾಗಿ ಪಿತ್ತಕೋಶಕ್ಕೆ ಹಾನಿಯಾಗುವುದು ಇದೇ ಮೊದಲಲ್ಲ. ಆದರೆ, ಇತ್ತೀಚೆಗಿನ ದಿನಗಳಲ್ಲಿ ಇವುಗಳ ಬಳಕೆ ಅಧಿಕವಾಗಿದೆ. ಅಗತ್ಯವಿಲ್ಲದಲ್ಲೂ ಆರೋಗ್ಯದ ನೆಪದಲ್ಲಿ ಅತಿಯಾಗಿ ಸೇವನೆ ಮಾಡುವುದು ಅಧಿಕವಾಗಿದೆ. ವೈದ್ಯರು ಸೂಚಿಸದೇ ಇದ್ದರೂ, ತಾವೇ ತಾವಾಗಿ ಕೊಂಡುಕೊಂಡು ನಿತ್ಯವೂ ಸೇವನೆ ಮಾಡುವುದರಿಂದ ದೇಹದ ಅಂಗಾಂಗಳ ಮೇಳೆ ಒತ್ತಡ ಬೀರುತ್ತದೆ. ಸಪ್ಲಿಮೆಂಟ್‌ಗಳ ಓವರ್‌ಡೋಸ್ ಆಗಿ, ಈ ಕಾರಣದಿಂದ ಆಸ್ಪತ್ರೆ ಸೇರುವ ಪ್ರಕರಣಗಳೂ ನಡೆದಿವೆ ಎಂದು ಅದು ಹೇಳಿದೆ.
ಇದನ್ನೂ ಓದಿ: Tea vs Coffee: ಟೀ ಒಳ್ಳೆಯದಾ ಕಾಫಿ ಒಳ್ಳೆಯದಾ? ಇಲ್ಲಿದೆ ಉತ್ತರ
ಅಡ್ಡ ಪರಿಣಾಮ
ಹರ್ಬಲ್ ಹೆಸರಿನಲ್ಲಿ ಇಂದು ಮಾರುಕಟ್ಟೆಗೆ ಬಗೆಬಗೆಯ ಸಪ್ಲಿಮೆಂಟ್‌ಗಳು ದಾಳಿ ಮಾಡುತ್ತಿದ್ದು, ಇದರಿಂದ ಹಲವು ಅಡ್ಡ ಪರಿಣಾಮಗಳೂ ಆಗುತ್ತಿವೆ. ಇದನ್ನು ತಿಳಿಯದೆ ಜನರು ಸೇವಿಸುತ್ತಿದ್ದಾರೆ. ವೈದ್ಯರ ನೆರವನ್ನೂ ಕೇಳುತ್ತಿಲ್ಲವಾದ್ದರಿಂದ, ಈ ಸಮಸ್ಯೆ ಉದ್ಭವಿಸಿದೆ ಎಂದು ಹೇಳಿದೆ. ಜೊತೆಗೆ, ಕೆಲವು ಹರ್ಬಲ್ ಪ್ರಾಡಕ್ಟ್‌ಗಳು ನಿಜಕ್ಕೂ ಉಪಯೋಗಕರವೇ ಆಗಿದ್ದರೂ, ಅದನ್ನು ಎಷ್ಟು, ಯಾವಾಗ ತೆಗೆದುಕೊಳ್ಳಬಹುದು ಎಂಬುದೂ ಸರಿಯಾಗಿ ತಿಳಿಯದೆ ಓವರ್ ಡೋಸ್ ಆಗುತ್ತಿದೆ. ಜನರು ಅಗತ್ಯವಿದ್ದರೆ, ವೈದ್ಯರ ಸಲಹೆಯನ್ನು ಪಡೆದುಕೊಂಡು ಸಪ್ಲಿಮೆಂಟ್‌ಗಳ ಮೊರೆ ಹೋಗಬೇಕು. ಅನಗತ್ಯ ಸಂದರ್ಭಗಳಲ್ಲಿ ಸೇವಿಸಬಾರದು. ದೇಹಕ್ಕೆ ಅತಿಯಾದರೆ ಆರೋಗ್ಯಕರವಾದ ಸಪ್ಲಿಮೆಂಟ್‌ಗಳೂ ಕೂಡಾ ತೊಂದರೆಯನ್ನೇ ಉಂಟು ಮಾಡಬಹುದು. ಹಾಗಾಗಿ ಈ ಬಗ್ಗೆ ಎಚ್ಚರ ಅಗತ್ಯ ಎಂದು ಅದು ಹೇಳಿದೆ.