ಬದಲಾಗುವ ಋತುಗಳು ಹೊತ್ತು ತರುವ ಖಷಿಯೇ ಬೇರೆ. ಸೆಖೆ, ಮಳೆಯ ವಾತಾವರಣ ಮುಗಿದು, ಎಲೆಗಳೆಲ್ಲ ಹಣ್ಣಾಗಿ ಮೆಲ್ಲನೆ ಒಂದೊಂದಾಗಿ ಉದುರಲು ಶುರುವಾಗುವ ಹೊತ್ತಿಗೆ ನವೆಂಬರ್ ತಿಂಗಳು ಶುರುವಾಗುತ್ತದೆ. ಮರಗಳೆಲ್ಲ ಬೋಳು ಬೋಳಾಗಿ ಒಣಗಿದಂತೆ ಕಂಡರೂ, ಪ್ರಕೃತಿ ಮುಂದಿನ ಋತುವಿಗೆ ಒಳಗಿನಿಂದಲೇ ಸಿದ್ಧತೆ ನಡೆಸುತ್ತಿರುತ್ತದೆ. ಬೆಳಗ್ಗೆ ಎದ್ದ ಕೂಡಲೇ, ಮಂಜು ಮುಸುಕಿದ ಹಿತವಾದ ಚಳಿಗೆ ಹಾಸಿಗೆಯಿಂದ ಏಳಲು ಆಲಸ್ಯವಾದರೂ ಮಂಜಿನೆಡೆಯಿಂದ ತೂರಿ ಬರುವ ಸೂರ್ಯ ಕಿರಣಗಳಿಗೆ ಮುಖವೊಡ್ಡಿ ಕೈಯಲ್ಲೊಂದು ಹಬೆಯಾಡುವ ಚಹಾವೋ ಕಾಫಿಯೋ ಹಿಡಿದು ಕೂತರೆ ಚಳಿಗಾಲ ಆಹಾ ಎನಿಸುತ್ತದೆ. ಕೆಲವರಿಗೆ ಚಳಿಗಾಲ ಹೀಗೆ ಮುದ ನೀಡಿದರೆ, ಇನ್ನೂ ಕೆಲವರಿಗೆ ಚಳಿಗಾಲವೆಂದರೆ ಆಗಿ ಬರದು! ಕಾರಣ, ದೇಹಾರೋಗ್ಯ ಕೈಕೊಡುವುದು. ಆರೋಗ್ಯವೆಂಬುದು ಪ್ರತಿಯೊಬ್ಬರಿಗೂ ಅತ್ಯಂತ ಮುಖ್ಯ. ಆರೋಗ್ಯ ಕೈಕೊಟ್ಟರೆ, ಬದುಕಿನ ಯಾವ ಖುಷಿಯನ್ನೂ ಅನುಭವಿಸಲು ಸಾಧ್ಯವಾಗುವುದಿಲ್ಲ. ಹಾಗೆಯೇ ಚಳಿಗಾಲವೂ ಕೂಡಾ. ಚಳಿಗಾಲ ಕೆಲವು ಮಂದಿಗೆ ಇದೇ ಕಾರಣಕ್ಕೆ ಸಹ್ಯವಾಗುವುದಿಲ್ಲ. ಚಳಿಯಲ್ಲಿ ನಡುಗುವ ಜೊತೆಗೆ ಬಿಡದೆ ಕಾಡುವ ತಲೆನೋವು, ನೆಗಡಿ, ಶೀತ, ಅಸ್ತಮಾ ಮತ್ತಿತರ ಸಮಸ್ಯೆಗಳು, ವಕ್ಕರಿಸುವ ಮೈಕೈನೋವು, ಸಂಧಿವಾತಗಳು ಹೀಗೆ ಹಲವು ಸಮಸ್ಯೆಗಳು ಕೆಲವರದ್ದು. ಇನ್ನೂ ಕೆಲವರಿಗೆ ಚಳಿಗಾಲ ಆರಂಭವಾಗುತ್ತಿದ್ದಂತೆ ಬದಲಾಗುವ ಹವಾಮಾನಕ್ಕೆ ತಲೆ ಸಣ್ಣಗೆ ನೋಯಲು ಶುರುವಾದರೆ, ಕೆಲವೊಮ್ಮೆ ಮೂರ್ನಾಲ್ಕು ದಿನಗಳ ಕಾಲ ಕಾಡುವುದೂ ಉಂಟು. ಹೀಗೆ ಕಾಡುವ ತಲೆನೋವಿನ ಸಮಸ್ಯೆ ಇರುವ ಮಂದಿ ಬಹುಬೇಗನೆ ತಲೆನೋವಿನಿಂದ ಮುಕ್ತಿ ಪಡೆಯಲು ಈ ಟಿಪ್ಸ್ಗಳನ್ನೂ ಪಾಲಿಸಬಹುದು.
- ಹೀಟಿಂಗ್ ಪ್ಯಾಡ್ (ಬಿಸಿನೀರಿನ ಪ್ಯಾಡ್) ಅನ್ನು ಹಣೆಗೆ ಹತ್ತರಿಂದ ೧೫ ನಿಮಿಷಗಳ ಕಾಲ ಒತ್ತಿ ಹಿಡಿಯುವುದರಿಂದ ತಲೆಶೂಲೆ ಹತೋಟಿಗೆ ಬರುತ್ತದೆ. ಕೇವಲ ಹಣೆ ಮಾತ್ರವಲ್ಲ, ಕುತ್ತಿಗೆ, ತಲೆಯ ಹಿಂಭಾಗಗಳಿಗೂ ಬಿಸಿನೀರಿನ ಪ್ಯಾಡ್ ಇಟ್ಟುಕೊಳ್ಳುಬಹುದು. ಹೀಗೆ ಮಾಡುವುದರಿಂದ ಕೊಂಚ ಸಮಯದಲ್ಲಿ ತಲೆನೋವು ಹತೋಟಿಗೆ ಬರುತ್ತದೆ.
- ನಿಮಗೆ ಪೋನಿಟೈಲ್ ಹಾಕಿಕೊಳ್ಳುವ ಅಥವಾ ಜುಟ್ಟು ಕಟ್ಟಿಕೊಳ್ಳುವ ಅಭ್ಯಾಸವಿದ್ದರೆ, ನಿಮ್ಮ ಜುಟ್ಟಿನ ರಬ್ಬರ್ಬ್ಯಾಂಡನ್ನು ಕೊಂಚ ಸಡಿಲ ಮಾಡಿ. ಅಥವಾ ಕೂದಲನ್ನು ಬಿಟ್ಟಿಕೊಳ್ಳಿ. ಗಟ್ಟಿಯಾಗಿ ಪೋನಿಟೈಲ್ ಹಾಕುವುದರಿಂದಲೂ ತಲೆನೋವು ಹೆಚ್ಚಾಗುತ್ತದೆ.
- ತಲೆನೋವಿನ ಸಂದರ್ಭ ಆದಷ್ಟೂ ಗ್ಯಾಜೆಟ್ ಬಳಕೆ ಕಡಿಮೆ ಮಾಡಿ. ಮೊಬೈಲ್ ದೂರ ಇಡಿ. ಲ್ಯಾಪ್ಟಾಪ್ ಮುಟ್ಟಬೇಡಿ. ಕೊಂಚ ವಿಶ್ರಾಂತಿ ಪಡೆಯಿರಿ. ಅಥವಾ ಇವನ್ನು ಬಳಕೆ ಮಾಡಲೇಬೇಕಾದ ಅನಿವಾರ್ಯತೆ ಇತ್ತು ಎಂದಾದಲ್ಲಿ, ಆದಷ್ಟೂ ಕಣ್ಣಿಗೆ ಹಿತವಾಗಿರುವಂತೆ ಬೆಳಕನ್ನು ಕಡಿಮೆ ಮಾಡಿ. ನೀವು ಕುಳಿತಿರುವ ಕೋಣೆಯ ಕಿಟಕಿಗಳ ಕರ್ಟೈನ್ ಹಾಕಿ ಕೋಣೆಯನ್ನು ಮಂದ ಬೆಳಗಿನಲ್ಲಿಡಿ. ಹೊರಗೆ ಹೋಗುವ ಸಂದರ್ಭ ಬಿಸಿಲಿದ್ದರೆ ತಂಪು ಕನ್ನಡಕ ಧರಿಸಿ.
- ಚಳಿಗಾಲದ ತಲೆಶೂಲೆಗೆ ಬಹಳ ಸಾರಿ ನೀವು ಕಡಿಮೆ ನೀರು ಕುಡಿಯುವುದೂ ಕೂಡಾ ಪ್ರಮುಖ ಕಾರಣವಾಗಿರುತ್ತದೆ. ಹಾಗಾಗಿ ಸರಿಯಾಗಿ ನೀರು ಕುಡಿಯಿರಿ.
- ತಲೆನೋವಿನ ಸಂದರ್ಭ ಕಾಫಿಯೋ, ಚಹಾವೋ ಕುಡಿಯಿರಿ. ಕೆಫೀನ್ ಅಂಶವು ತಲೆನೋವನ್ನು ಕೊಂಚಮಟ್ಟಿಗೆ ಹತೋಟಿಗೆ ತರುತ್ತದೆ. ಆದರೆ, ಪದೇ ಪದೇ ಕುಡಿಯಬೇಡಿ.
- ಕೆಲವು ರಿಲ್ಯಾಕ್ಸೇಶನ್ ವ್ಯಾಯಾಮಗಳನ್ನು ಕಲಿಯಿರಿ. ಯೋಗ, ಕೆಲವು ಬಗೆಯ ಉಸಿರಾಟದ ಟೆಕ್ನಿಕ್ಗಳು, ಧ್ಯಾನ, ಮಾಂಸಖಂಡಗಳನ್ನು ರಿಲ್ಯಾಕ್ಸ್ ಮಾಡುವ ಸಣ್ಣಪುಟ್ಟ ವ್ಯಾಯಾಮಗಳನ್ನು ಕಲಿತು, ಇಂಥ ಸಂದರ್ಭ ಬಳಸಿ. ಇವು ನಿಮ್ಮ ಸಹಾಯಕ್ಕೆ ಖಂಡಿತವಾಗಿಯೂ ಬರುತ್ತವೆ.
- ತಲೆಗೆ ಚೆನ್ನಾಗಿ ಮಸಾಜ್ ಮಾಡಿಸಿಕೊಳ್ಳಿ. ಆರಾಮವಾಗಿ ಮಲಗಿ ಒಂದೊಳ್ಳೆ ಮಸಾಜ್ ಮಾಡಿಕೊಂಡರೆ ಎಷ್ಟೋ ಹಾಯೆನಿಸುತ್ತದೆ.
- ಶುಂಠಿ ಚಹಾ ಮಾಡಿ ಕುಡಿಯಿರಿ. ಬಿಸಿಬಿಸಿ ಹಬೆಯಾಡುವ ಈ ಚಹಾ ಕುಡಿದರೆ ಸಮಾಧಾನ ಸಿಗುತ್ತದೆ. ಕುದಿಯುವ ನೀರಿಗೆ ಕೊಂಚ ಶುಂಠಿ ತುರಿದು ಹಾಕಿ ಕುದಿಸಿ ಸೋಸಿ ಆ ನೀರನ್ನು ಕುಡಿಯುವುದು ಒಳ್ಳೆಯದು. ಚಹಾಕ್ಕೆ ಶುಂಠಿ ಹಾಕಿಯೂ, ಅಥವಾ ಮಸಾಲೆ ಹಾಕಿಯೂ ಮಾಡಿ ಕುಡಿಯಬಹುದು.
- ಹಬೆ ತೆಗೆದುಕೊಳ್ಳಿ. ಎರಡು ಮೂರು ಬಿಂದು ನೀಲಗಿರಿ ತೈಲವನ್ನು ಕುದಿಯುವ ನೀರಿಗೆ ಹಾಕಿ ಹಬೆ ತೆಗೆದುಕೊಳ್ಳಿ. ಕಟ್ಟಿದ ಮೂಗು, ನೆಗಡಿ ಮತ್ತಿತರ ಸಮಸ್ಯೆಗಳಿಂದ ತಲೆನೋವು ಹೆಚ್ಚಾಗುತ್ತಿದ್ದರೆ, ಸಮಸ್ಯೆ ಕೊಂಚ ಹತೋಟಿಗೆ ಬರುತ್ತದೆ.
ಇದನ್ನೂ ಓದಿ: Tips to Keep Joints Healthy: ಹೀಗೆ ಮಾಡಿ, ಕೀಲುಗಳ ಸ್ವಾಸ್ಥ್ಯ ಕಾಪಾಡಿ