Site icon Vistara News

Home Remedies For Mosquito Bite: ಸೊಳ್ಳೆ ಕಚ್ಚಿದ ಜಾಗದಲ್ಲಿ ವಿಪರೀತ ಉರಿಯೇ? ಈ ಸರಳ ಮನೆಮದ್ದುಗಳನ್ನು ಬಳಸಿ

Home Remedies For Mosquito Bite

ಬೇಸಿಗೆಯ ವಿಪರೀತ ಸೆಖೆ ಎಂದು ತಲೆಕೆಡಿಸಿಕೊಳ್ಳುವ ಮೊದಲೇ ಮಳೆಗಾಲ ಬಂದೇ ಬಿಟ್ಟಿದೆ. ಮಳೆಗಾಲ ಬರುವ ಸಂದರ್ಭ ಸೊಳ್ಳೆಗಳ ಹಾವಳಿ ವಿಪರೀತ. ಈಗಾಗಲೇ ಸಂಜೆಯಾದ ಕೂಡಲೇ ತೆರೆದ ಕಿಟಕಿ ಬಾಗಿಲುಗಳಿಂದ, ಸಂದಿಗೊಂದಿಗಳಿಂದ ನುಸುಳಿ ಸೊಳ್ಳೆಗಳು ಮನೆಯೊಳಗೆ ಬಂದೇ ಬರುತ್ತವೆ. ಬಹಳಷ್ಟು ಸಾರಿ ಸೊಳ್ಳೆ ಕಚ್ಚಿದರೂ ಅಂಥದ್ದೇನೂ ಸಮಸ್ಯೆ ಆಗಲಾರದಾದರೂ, ಕೆಲವೊಮ್ಮೆ ಸೊಳ್ಳೆಯದ ಕಡಿತದಿಂದ ಹಲವು ರೋಗಗಳೂ ಬರುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಹಾಗಾಗಿ, ಸೊಳ್ಳೆ ಕಡಿತದಿಂದ ದೂರವಿರುವುದು ಒಳ್ಳೆಯದು. ಡೆಂಗ್ಯು, ಮಲೇರಿಯಾ, ಚಿಕುನ್‌ಗುನ್ಯ ಸೇರಿದಂತೆ ಹಲವು ಬಗೆಯ, ನಮೂನೆಯ ಜ್ವರಗಳು ಸೊಳ್ಳೆ ಕಡಿತದಿಂದಲೇ ಬರುವುದರಿಂದ ಈ ವಿಚಾರದಲ್ಲಿ ಜಾಗರೂಕತೆ ಅತ್ಯಂತ ಅಗತ್ಯ. ಇನ್ನೂ ಕೆಲವರಿಗೆ ಸಾಮಾನ್ಯ ಸೊಳ್ಳೆ ಕಚ್ಚಿದರೂ, ಉರಿ, ಕಜ್ಜಿ, ಕೆಂಪು ಗುಳ್ಳೆಗಳಾಗುತ್ತದೆ. ಅಲ್ಲಿ ತುರಿಕೆ, ನೋವು ಇತ್ಯಾದಿಗಳೂ ಆಗುತ್ತವೆ. ಹಾಗಾಗಿ, ಸೊಳ್ಳೆ ಕಡಿತವಾದ ಮೇಲೆ ಆಗುವ ಇಂಥ ಪರಿಣಾಮಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದುಕೊಂಡರೆ, ಮನೆಯಲ್ಲೇ ಮಾಡಿಕೊಳ್ಳಬಹುದಾದ ಕೆಲವು ಉಪಾಯಗಳಿವೆ. ಬನ್ನಿ ಸೊಳ್ಳೆ ಕಚ್ಚಿದ ಉರಿ, ಕೆಂಪುಗುಳ್ಳೆಯ ಶಮನಕ್ಕೆ ಏನು ಪರಿಹಾರಗಳಿವೆ (home remedies for mosquito bite) ಎಂಬುದನ್ ನೋಡೋಣ.

ಐಸ್‌ ಕ್ಯೂಬ್‌

ಐಸ್‌ ಕ್ಯೂಬ್‌ ಯಾವಾಗಲೂ ಚರ್ಮದ ಮೇಲೆ ಆಗುವ ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತದೆ. ತುರಿಕೆಯಾಗುತ್ತಿದ್ದರೆ, ಅಲ್ಲಿ ಉರಿಯಾಗುತ್ತಿದ್ದರೆ, ಐಸ್‌ ಕ್ಯೂಬ್‌ ಇಡುವುದರಿಂದ ಈ ನೋವು ಶಮನವಾಗುತ್ತದೆ. ಉರಿಯ ತೀವ್ರತೆ ಹತೋಟಿಗೆ ಬರುತ್ತದೆ.

ಆಲೋವೆರಾ

ಚರ್ಮದ ಏನೇ ಸಮಸ್ಯೆಗಳಿದ್ದರೂ ಆಲೋವೆರಾದಲ್ಲಿ ಉತ್ತರವಿದೆ. ಸೂರ್ಯನ ಬಿಸಿಲಿಗೆ ಸುಟ್ಟ ಚರ್ಮವಿರಬಹುದು, ಸೊಳ್ಳೆ ಕಚ್ಚಿದ ಗುಳ್ಳೆಗಳಿರಬಹುದು, ಅಥವಾ ಮೊಡವೆ, ಕಪ್ಪು ಕಲೆಗಳಿರಬಹುದು, ಅಲೋವೆರಾ ಇಂತಹ ಸಮಸ್ಯೆಗಳಿಗೆಲ್ಲ ರಾಮಬಾಣವೇ. ಸೊಳ್ಳೆ ಕಚ್ಚಿದ ಜಾಗಕ್ಕೆ ಅಲೋವೆರಾ ಜೆಲ್‌ ಲೇಪಿಸಿ. ತಂಪಾದ ಅನುಭವವಾಗುತ್ತದೆ. ಅಷ್ಟೇ ಅಲ್ಲ, ಒಡನೆಯೇ ಉರಿ, ನೋವು ಹತೋಟಿಗೆ ಬರುತ್ತದೆ. ಮಕ್ಕಳಿಗೂ ಸಲಭವಾಗಿ ಮಾಡಬಹುದಾದ ಉಪಾಯ ಇದು.

ಜೇನುತುಪ್ಪ

ಚರ್ಮಕ್ಕೆ ಒಳ್ಳೆಯದು ಮಾಡುವ ಗುಣ ಜೇನುತುಪ್ಪದಲ್ಲಿದೆ. ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಲ್‌ ಹಾಗೂ ಆಂಟಿ ಇನ್‌ಫ್ಲಮೇಟರಿ ಗುಣಗಳಿಂದ ಇದೂ ಕೂಡಾ ಸೊಳ್ಳೆ ಕಚ್ಚಿದ ಗಾಯಕ್ಕೆ ಒಳ್ಳೆಯ ಮನೆಮದ್ದು. ಸೊಳ್ಳೆ ಕಚ್ಚಿದ ಜಾಗದಲ್ಲಿ ಎದ್ದ ದದ್ದಿನ ಮೇಲೆ ಜೇನುತುಪ್ಪ ಹಚ್ಚಿ ನೋಡಿ. ಉರಿ ಹಾಗೂ ದದ್ದು ಎರಡೂ ಕಡಿಮೆಯಾಗುತ್ತದೆ.

ತುಳಸಿ

ಪ್ರತಿಮನೆಯಲ್ಲೂ ಇರುವ ತುಳಸಿಯಿಂದ ಮಳೆಗಾಲದಲ್ಲಿ ಸಾಕಷ್ಟು ಪ್ರಯೋಜನಗಳಿವೆ. ಶೀತ, ನೆಗಡಿ, ಕೆಮ್ಮುಗಳ ಜೊತೆಗೆ, ಇಂಥ ಕಜ್ಜಿ, ತುರಿಕೆ ಗಾಯಗಳಿಗೂ ತುಳಸಿಯಲ್ಲಿ ಉತ್ತರವಿದೆ. ಸೊಳ್ಳೆ ಕಚ್ಚಿದ ಜಾಗಕ್ಕೆ ತುಳಸಿ ರಸ ಹಚ್ಚಿದರೆ ಸಾಕು, ಉರಿಯೂತ ಕಡಿಮೆಯಾಗುತ್ತದೆ.

ಈರುಳ್ಳಿ

ಪ್ರತಿ ಮನೆಯ ಅಡುಗೆ ಕೋಣೆಯಲ್ಲಿ ಸುಲಭವಾಗಿ ಯಾವಾಗಲೂ ಇರುವ ಈರುಳ್ಳಿಯಿಂದಲೂ ಸಾಕಷ್ಟು ಪ್ರಯೋಜನಗಳಿವೆ. ಆಹಾರದಲ್ಲಿ ನಿತ್ಯವೂ ಬಳಕೆಯಾಗುವ ಈರುಳ್ಳಿಯನ್ನು ಹೀಗೂ ಬಳಸುವ ಬಗ್ಗೆ ನಿಮಗೆ ಗೊತ್ರಲಿಕ್ಕಿಲ್ಲ. ಆದರೆ, ಸೊಳ್ಳೆ ಕಚ್ಚಿದ ಜಾಗಕ್ಕೆ ಈರುಳ್ಳಿಯನ್ನು ವೃತ್ತಾಕಾರಕ್ಕೆ ಕತ್ತರಿಸಿ ಅದರಿಂದ ಒಸರುವ ರಸವನ್ನು ಹಚ್ಚಿ. ಸ್ವಲ್ಪ ಹೊತ್ತಿನ ನಂತರ ಅದನ್ನು ತೊಳೆಯಬಹುದು. ಉರಿ, ದದ್ದು ಎರಡೂ ಕಡಿಮೆಯಾಗುತ್ತದೆ

ಇದನ್ನೂ ಓದಿ: Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

Exit mobile version