ಪ್ರಾಯವನ್ನು ಮುಚ್ಚಿಡುವುದಕ್ಕೆ ಸಾಧ್ಯವೇ ಎಂಬ ಬಗ್ಗೆ ಮಾನವನ ಶೋಧ ಕೊನೆಯರಿಯದ್ದು. ನಮ್ಮ ಆಹಾರ, ಜೀವನಶೈಲಿ, ವಂಶವಾಹಿಗಳೆಲ್ಲ ಸೇರಿ ನಮ್ಮ ಚರ್ಮದ ನಯ, ಹೊಳಪು, ಸುಕ್ಕು ಮುಂತಾದ ಬಹಳಷ್ಟನ್ನು ನಿರ್ಧರಿಸುತ್ತವೆ, ಎಂಬಲ್ಲಿಗೆ ನಮಗೆ ವಯಸ್ಸಾದಂತೆ ಕಾಣುವುದು ಅಥವಾ ಕಾಣದಿರುವುದನ್ನೂ ನಿರ್ಧರಿಸುತ್ತವೆ ಎಂದಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ದೇಹಕ್ಕೆ ದೊರೆಯಬೇಕಾದ ಸತ್ವಗಳು ದೊರೆತಾಗ ಮಾತ್ರವೇ ಆರೋಗ್ಯಯುತ ತ್ವಚೆಯನ್ನು ಹೊಂದುವುದಕ್ಕೆ ಸಾಧ್ಯ. ಅದರಲ್ಲೂ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವಂಥ ಆಹಾರಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಜೊತೆಗೆ ಕೆಲವು ಫೇಸ್‌ಪ್ಯಾಕ್ ಅಥವಾ ಫೇಸ್ ಮಾಸ್ಕ್‌ಗಳು ಸಹ ಒಳ್ಳೆಯ ಫಲಿತಾಂಶ ನೀಡಬಲ್ಲವು. ಅಂಥ ಕೆಲವನ್ನು (Home Remedies for Skin) ಇಲ್ಲಿ ವಿವರಿಸಲಾಗಿದೆ.
ಆಹಾರ
ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿದ ಆಹಾರಗಳ ಸೇವನೆ ಅತಿಮುಖ್ಯ. ಇವುಗಳು ದೇಹದಲ್ಲಿ ಕೊಲಾಜಿನ್ ಉತ್ಪಾದನೆ ಹೆಚ್ಚಿಸಲು ಸಹಾಯ ಮಾಡುತ್ತವೆ. ಇದರಿಂದ ಚರ್ಮ ಸುಕ್ಕಾಗುವುದನ್ನು ತಡೆಯುವುದು ಮಾತ್ರವಲ್ಲ, ಕೀಲುಗಳು ಸವೆಯದಂತೆಯೂ ಕಾಪಾಡಿಕೊಳ್ಳಬಹುದು. ಒಮೇಗಾ ೩ ಕೊಬ್ಬಿನಾಮ್ಲ ಹೆಚ್ಚಿರುವ ಆಹಾರಗಳು, ವಿಟಮಿನ್ ಸಿ ಅಧಿಕವಿರುವ ಹಣ್ಣು ತರಕಾರಿಗಳು, ವಿಟಮಿನ್ ಇ ಹೇರಳವಾಗಿರುವ ಕಾಯಿ-ಬೀಜಗಳು- ಇವೆಲ್ಲವೂ ದಿನವೂ ನಮ್ಮ ಆಹಾರದ ಭಾಗವಾಗಿರಬೇಕು.
ಲೋಳೆಸರ
ಅಲೋವೇರಾ ಎಂದೇ ಕರೆಸಿಕೊಳ್ಳುವ ಇದನ್ನು ಯಾವುದೇ ಫೇಸ್ ಮಾಸ್ಕ್‌ಗೆ ಬಳಸುವ ಬದಲು, ಇದನ್ನೇ ಪ್ರತ್ಯೇಕವಾಗಿ ಮುಖಕ್ಕೆ ಲೇಪಿಸಬಹುದು. ಇದರಲ್ಲಿರುವ ಮ್ಯಾಲಿಕ್ ಆಮ್ಲವು ಚರ್ಮದ ಮೇಲೆ ಅತ್ಯಂತ ಪೂರಕ ಪರಿಣಾಮವನ್ನು ಬೀರುತ್ತದೆ. ಚರ್ಮವನ್ನು ಬಿಗಿಗೊಳಿಸಿ, ಸುಕ್ಕುಗಳನ್ನು ನಿವಾರಿಸಿ, ಶುಷ್ಕತೆಯನ್ನು ಹೋಗಲಾಡಿಸುತ್ತದೆ. ಇದನ್ನು ಲೇಪಿಸಿ ಸುಮಾರು ೨೦ ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ.
ಮೊಟ್ಟೆ, ಜೇನುತುಪ್ಪದ ಮಾಸ್ಕ್
ಮೊಟ್ಟೆಯ ಬಿಳಿಯ ಭಾಗ ಇದಕ್ಕೆ ಸೂಕ್ತವಾದದ್ದು. ಇದರಲ್ಲಿರುವ ಅಲ್ಬುಮಿನ್ ಅಂಶವು ಚರ್ಮದಲ್ಲಿ ಕೊಲಾಜಿನ್ ಹೆಚ್ಚಳಕ್ಕೆ ನೆರವಾಗುತ್ತದೆ. ಜೊತೆಗೆ ಜೇನುತುಪ್ಪವು ಚರ್ಮದ ನೈಸರ್ಗಿಕ ತೇವಾಂಶ ನಾಶವಾಗದಂತೆ ನೋಡಿಕೊಳ್ಳುತ್ತದೆ. ಮೊಟ್ಟೆಯ ಬಿಳಿ ಭಾಗ ಮತ್ತು ಜೇನುತುಪ್ಪದ ಮಿಶ್ರಣವನ್ನು ಮುಖಕ್ಕೆಲ್ಲ ಲೇಪಿಸಿ ಕನಿಷ್ಟ ೨೦ ನಿಮಿಷಗಳಾದರೂ ಬಿಡಿ. ನಂತರ ಬೆಚ್ಚಗಿನ ನೀರಲ್ಲಿ ಮುಖ ತೊಳೆದರಾಯ್ತು.
ಆಲಿವ್ ಎಣ್ಣೆ
ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿಂದ ಭರಿತವಾದ ಆಲಿವ್ ಎಣ್ಣೆಯಲ್ಲಿ ವಿಟಮಿನ್ ಎ ಮತ್ತು ಇ ಅಂಶಗಳು ಹೇರಳವಾಗಿವೆ. ಇವು ಚರ್ಮದ ಆರೋಗ್ಯ ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ರಾತ್ರಿ ಮಲಗುವ ಮುನ್ನ, ಆಲಿವ್ ಎಣ್ಣೆಯ ಕೆಲವು ಹನಿಗಳನ್ನು ಅಂಗೈಗೆ ಹಾಕಿಕೊಂಡು ಅದನ್ನು ಮುಖಕ್ಕೆಲ್ಲ ಲೇಪಿಸಿ. ಲಘುವಾಗಿ ವೃತ್ತಾಕಾರವಾಗಿ ಮುಖವನ್ನೆಲ್ಲ ಮಸಾಜ್ ಮಾಡುತ್ತಾ ಬನ್ನಿ. ಇದನ್ನು ರಾತ್ರಿಡೀ ಹಾಗೆಯೇ ಇರಿಸಿಕೊಂಡು ಮಲಗುವುದು ಸೂಕ್ತ. ಇದರಿಂದ ಚರ್ಮದ ಆರೈಕೆಗೆ ಅನುಕೂಲವಾಗುತ್ತದೆ.
ಸೌತೇಕಾಯಿ
ಈ ತರಕಾರಿಯಲ್ಲಿರುವ ನೀರಿನಂಶ ಮತ್ತು ಸಿಲಿಕಾಗಳು ಚರ್ಮದ ಬಿಗಿಯನ್ನು ಹೆಚ್ಚಿಸಿ, ಶುಷ್ಕತೆಯನ್ನು ಹೋಗಲಾಡಿಸುತ್ತವೆ. ಜೊತೆಗೆ ಚರ್ಮದ ಕಾಂತಿಯನ್ನು ಸಹ ಹೆಚ್ಚಿಸುತ್ತವೆ. ತಾಜಾ ಸೌತೇಕಾಯಿ ತುರಿಯನ್ನು ಮುಖದ ಮೇಲೆಲ್ಲ ಲೇಪಿಸಿ, ಅರ್ಧ ತಾಸು ಬಿಡಿ. ನಂತರ ತಂಪಾದ ನೀರಿನಲ್ಲಿ ಮುಖ ತೊಳೆಯುವುದರಿಂದ, ಇಡೀ ಮುಖದ ಚರ್ಮವೆಲ್ಲ ತಾಜಾ ಆಗುತ್ತದೆ.
ಇದನ್ನೂ ಓದಿ: Breastfeeding diet: ಹಾಲುಣಿಸುವ ಅಮ್ಮಂದಿರ ಆಹಾರ ಹೇಗಿರಬೇಕು?
ಅವಕಾಡೊ
ಬೆಣ್ಣೆ ಹಣ್ಣು ಚರ್ಮದ ಆರೈಕೆಯಲ್ಲಿ ಮಾತ್ರವೇ ಅಲ್ಲ, ಇಡೀ ಶರೀರಕ್ಕೆ ಬೇಕಾದ ಆರೈಕೆಯನ್ನೂ ಒದಗಿಸುವಷ್ಟು ಪೌಷ್ಟಿಕಾಂಶಗಳನ್ನು ಹೊಂದಿದೆ. ಚರ್ಮಕ್ಕೆ ಬೇಕಾದ ಕೊಲಾಜಿನ್ ಉತ್ಪಾದನೆಗೆ ಅಗತ್ಯವಾದ ಸತ್ವಗಳನ್ನು ಇದು ನೀಡುತ್ತದೆ. ಆರೋಗ್ಯಕರವಾದ ಕೊಬ್ಬಿನಂಶ, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಇದು ಚರ್ಮಕ್ಕೆ ಒದಗಿಸುತ್ತದೆ. ಚೆನ್ನಾಗಿ ಹಣ್ಣಾದ ಅವಕಾಡೊವನ್ನು ಪೇಸ್ಟ್ ಮಾಡಿ ಮುಖಕ್ಕೆ ಲೇಪಿಸಿ. ಅರ್ಧ ತಾಸಿನ ನಂತರ ಬೆಚ್ಚಗಿನ ನೀರಲ್ಲಿ ತೊಳೆಯಿರಿ.