Site icon Vistara News

Happiness | ಸದಾ ಖುಷಿಯೇ ಬೇಕೇ? ಈ ಹಾರ್ಮೋನುಗಳನ್ನೂ ಚೆನ್ನಾಗಿ ನೋಡಿಕೊಳ್ಳಿ!

happiness

ಸಂತೋಷ, ಖುಷಿ ಯಾರಿಗೆ ಬೇಡ. ಶ್ರೀಮಂತನಾಗಲಿ ಬಡವನಾಗಿ ನಿಜ ಆರೋಗ್ಯದ ಗುಟ್ಟಡಗಿರುವುದು ಸಂತೋಷದಲ್ಲಿ. ಪುಟ್ಟ ಮಕ್ಕಳಿಂದ ಹಿರಿಯರವರೆಗೆ ಸಂತೋಷ, ಖುಷಿ ಎಲ್ಲರಿಗೂ ಬೇಕು. ಎಲ್ಲರೂ ಸಂತೋಷಕ್ಕಾಗಿ ಕೈ ಚಾಚುವವರೇ. ಪ್ರತಿಬೊಬ್ಬರೂ ಖುಷಿಯಾಗಿರಲು ಬಯಸುವವರೇ. ಆದರೇ, ಬಹಳಷ್ಟು ಸಾರಿ ಅಂದುಕೊಳ್ಳುವುದಕ್ಕೂ ನಡೆಯುವುದಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಖುಷಿಗಾಗಿ ಹಾತೊರೆದಷ್ಟೂ ಬೇಸರ, ಹತಾಶೆಗಳೂ ನಮ್ಮದಾಗುತ್ತದೆ ಎಂಬ ದೂರು ಹಲವರದು.

ಹಾಗಾದರೆ ಸದಾ ಖುಷಿಯಾಗಿರುವುದು ಹೇಗೆ? ಕೆಲವರು ಯಾವಾಗಲೂ ಖುಷಿಯಾಗಿಯೇ ಇರುತ್ತಾರಲ್ಲ, ಹಾಗೂ ಇರುವುದಕ್ಕೆ ಸಾಧ್ಯವಾ ಅಂತೆಲ್ಲ ಒಮ್ಮೆ ಯೋಚನೆ ಬಂದಿರಬಹುದು. ಆದರೆ, ಸಂತೋಷ, ಖುಷಿ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಒಬ್ಬ ವ್ಯಕ್ತಿಗೆ ಸಂತೋಷವಾದ ಕಾರಣಕ್ಕೆ ಅದು ಇನ್ನೊಬ್ಬನನ್ನೂ ಸಂತೋಷಪಡಿಸಬೇಕೆಂದೇನೂ ಇಲ್ಲ. ಒಬ್ಬೊಬ್ಬರಿಗೆ ಬದುಕಿನ ಸಣ್ಣಪುಟ್ಟ ವಿಚಾರಗಳೂ ಅಚ್ಚರಿ ಖುಷಿಯನ್ನು ನೀಡಿದರೆ ಇನ್ನೂ ಕೆಲವರಿಗೆ ಸಣ್ಣದು ಖುಷಿ ನೀಡಲಾರದು.

ಸಂತೋಷ ಅಥವಾ ಖುಷಿಗೂ ಹಾರ್ಮೋನಿಗೂ ಸಂಬಂಧ ಇದೆ. ನಾಲ್ಕು ಬಗೆಯ ಹಾರ್ಮೋನುಗಳು ನಮ್ಮ ಸಂತೋಷವನ್ನು, ಖುಷಿಯನ್ನು ನಿಯಂತ್ರಿಸುತ್ತಿರುತ್ತದೆ. ಸಾಮಾನ್ಯ ರೀತಿಯಲ್ಲಿ ನಾವು ಖುಷಿಯಾಗಿರಬೇಕಾದರೆ, ನಾವು ಆಗಾಗ ನಮ್ಮ ಈ ಸಂತೋಷದ ಹಾರ್ಮೋನುಗಳನು ವಿವಿಧ ರೀತಿಯಲ್ಲಿ ಉದ್ದೀಪನಗೊಳಿಸಬಹುದಂತೆ. ಇದರಿಂದ ಈ ಬಗೆಯ ಹಾರ್ಮೋನುಗಳು ಹೆಚ್ಚು ಉತ್ಪತ್ತಿಯಾಗುವ ಮೂಲಕ ನಮ್ಮ ಖುಷಿಯನ್ನು ಇನ್ನಷ್ಟು ಮತ್ತಷ್ಟು ವೃದ್ಧಿಸಿಕೊಳ್ಳಬಹುದು.

೧. ಡೋಪಮೈನ್‌ ಹಾರ್ಮೋನು: ಇದು ರಿವಾರ್ಡ್‌ ಹಾರ್ಮೋನು. ಅಂದರೆ, ನಿಮ್ಮ ಗೆಲುವುಗಳು, ನಿಮ್ಮ ಖುಷಿಯನ್ನು ಹೆಚ್ಚಿಸಿಕೊಳ್ಳಲು ನಿಮಗೆ ನೀವೇ ಮಾಡಿಕೊಳ್ಳಬಹುದಾದ ಕೆಲಸಗಳಿಂದ ಉದ್ದೀಪನಗೊಂಡು ಬಿಡುಗಡೆಯಾಗಿ ನಿಮ್ಮಲ್ಲೊಂದು ಸಂತೃಪ್ತಿಯ ಖುಷಿಯ ಭಾವವನ್ನು ಜಿನುಗಿಸುತ್ತದೆ. ಅದು ಡೋಪಮೈನ್.‌ ಏನಾದರೊಂದು ನಿಮ್ಮ ಕ್ರಿಯಾಶೀಲತೆಯ ಕೆಲಸ ಮಾಡಿ, ಅಥವಾ ಸಣ್ಣ ಸಣ್ಣ ಜಯವನ್ನು ಸಂಭ್ರಮ ಪಡಿ. ನಿಮ್ಮ ಟು-ಡು ಲಿಸ್ಟ್‌ನಲ್ಲಿದ್ದ ಯಾವುದಾದರಂದು ಕೆಲಸ ಮಾಡಿ ಟಿಕ್‌ ಮಾರ್ಕ್‌ ಹಾಕಿಬಿಡಿ. ಅಥವಾ ಏನಾದರೊಂದು ಹೊಸ ಕೆಲಸ ಮಾಡಿ, ಹೊಸತನ್ನು ಕಲಿಯಿರಿ. ಇಂಥ ಸಂದರ್ಭಗಳಲ್ಲೆಲ್ಲ ನಮಗೆ ಖುಷಿಯ ಭಾವ ಜಿನುಗಿವ ಹಾರ್ಮೋನಿದು.

೨. ಸೆರೆಟೋನಿನ್ ಹಾರ್ಮೋನು: ಮೂಡು ಹಾರ್ಮೋನಿದು. ಅಂದರೆ, ಒಂದು ರೌಂಡು ಎಲ್ಲಾದರೂ ಓಡಿ ಬನ್ನಿ. ಅಥವಾ ಸೂರ್ಯನ ಬಿಸಿಲಲ್ಲಿ ಚರ್ಮವೊಡ್ಡಿ ತಿರುಗಾಡಿ ಬನ್ನಿ. ಪ್ರಕೃತಿಯ ಹಚ್ಚಹಸಿರಿನ ನಡುವೆ ತಿರುಗಾಡಿಕೊಂಡು ಬನ್ನಿ. ಒಂದಿಷ್ಟು ಹೊತ್ತು ಧ್ಯಾನ ಮಾಡಿ. ಇಂಥ ಸಂದರ್ಭಗಳಲ್ಲಿ ನಮಗೆ ಖುಷಿಯ ಅನುಭವವಾಗುವಂತೆ ಮಾಡುವುದು ಸೆರೆಟೋನಿನ್‌ ಹಾರ್ಮೋನಿನ ಕೆಲಸ.

ಇದನ್ನೂ ಓದಿ | Life tips: ಅಂದುಕೊಂಡದ್ದನ್ನು ಮಾಡಲಾಗದಿದ್ದರೆ ನೀವು ಹೀಗಿದ್ದೀರಿ!

೩. ಆಕ್ಸಿಟೋಸಿನ್‌ ಹಾರ್ಮೋನು: ಇದನ್ನು ಬಹುಶಃ ಲವ್‌ ಡ್ರಗ್ ಅನ್ನಬಹುದೇನೋ. ಯಾಕೆಂದರೆ ಈ ಹಾರ್ಮೋನು ಪ್ರೀತಿಯ ಹಾರ್ಮೋನು. ಯಾರನ್ನು ಪ್ರೀತಿಸುತ್ತೀರೋ ಅವರಿಗೊಂದು ಹಗ್‌ ಕೊಡಿ. ಗಾಢಾಲಿಂಗನ ಮಾಡಿ. ಅವರಿಗೊಂದು ಮುತ್ತು ಕೊಡಿ. ಅವರಿಂದ ಮುತ್ತು ಮರಳಿ ಸಿಗಲಿ. ಈ ಹಾರ್ಮೋನು ಇದ್ದಕ್ಕಿದ್ದಂತೆ ಉದ್ದೀಪನಗೊಳ್ಳುತ್ತದೆ. ಅಷ್ಟೇ ಅಲ್ಲ, ಈ ಹಾರ್ಮೋನು ಸದಾ ಎಚ್ಚರದಲ್ಲಿರಲು, ಇನ್ನೂ ಕೆಲವು ಕೆಲಸಗಳನ್ನು ಮಾಡಬಹುದು. ಸದಾ ಹಾಡು ಕೇಳಬಹುದು. ಧಾರಾಳವಾಗಿ ನಿಮ್ಮ ಪ್ರೀತಿಪಾತ್ರರನ್ನು ಹೊಗಳುವ ಅವಕಾಶ ಬಂದಾಗ ಹೊಗಳಿಬಿಡಿ. ಕಂಜೂಸುತನ ಬೇಡ. ಅವರು ಖುಷಿಯಾದಾಗ ನಿಮ್ಮ ಖುಷಿಯೂ ಅರಳುತ್ತದೆ. ಮಕ್ಕಳೊಂದಿಗೆ ಆಟವಾಡಿ. ಎಲ್ಲ ದುಃಖದಘನ್ನು ಮರೆತು ಪುಟ್ಟ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಆಟವಾಡಿ. ಖುಷಿ ಖಂಡಿತವಾಗಿಯೂ ನಿಮ್ಮದಾಗುತ್ತದೆ.

೪. ಎಂಡೋರ್ಫಿನ್‌ ಹಾರ್ಮೋನು: ಇದೊಂಥರಾ ಪೈನ್‌ ಕಿಲ್ಲರ್‌ ಇದ್ದ ಹಾಗೆ. ಬೇಸರವಾದಾಗ, ಕೆಲವು ಕೆಲಸಗಳನ್ನು ಮಾಡುವ ಮೂಲಕ ಜಾಗೃತವಾಗಿ ನಮ್ಮ ನೋವನ್ನು ಶಮನಗೊಳಿಸುವ ಪ್ರಯತ್ನ ಮಾಡುವ ಖುಷಿಯ ಹಾರ್ಮೋನು. ಒಂದು ಚಾಕೋಲೇಟ್‌ ತಿಂದಾಗ, ನಕ್ಕಾಗ, ಒಂದು ಚೆಂದನೆಯ ಬಿಸಿಬಿಸಿಸ ಹಬೆ ನೀರು ಸ್ನಾನ ಮಾಡಿದಾಗ ಆಗುವ ಖುಷಿ, ಶಂತಿ, ಸಮಾಧಾನ ಈ ಹಾರ್ಮೋನು ನೀಡುತ್ತದೆ.

ಪುಟ್ಟ ಪುಟ್ಟ ಖುಷಿಗಳನ್ನು ಜೀವನದಲ್ಲಿ ಸದಾ ಅನುಭವಿಸಿ. ಖುಷಿಪಡುವ ಆಯ್ಕೆಗಳಲ್ಲೂ ಕಂಜೂಸುತನ ಬೇಡ. ನಿಮ್ಮನ್ನು ಖುಷಿಯಾಗಿಡಬಲ್ಲ ಆಯ್ಕೆಗಳನ್ನು ಕಂಡುಕೊಂಡು ಅದರಂತೆ ಖುಷಿಗೆ ದಾರಿಗಳನ್ನು ಹುಡುಕಿ. ನಿಮ್ಮ ಈ ಖುಷಿಯ ಹಾರ್ಮೋನುಗಳನ್ನು ಉದ್ದೀಪನಗೊಳಿಸಲು ನೀವು ಮನಸಾರೆ ಪಡುವ ಶ್ರಮ ಖಂಡಿತವಾಗಿಯೂ ಸಂತೋಷ ನೀಡಬಲ್ಲುದು. ಹೆಚ್ಚು ಯೋಚನೆ ಮಾಡದೆ ಖುಷಿ ಪಡಿ, ಅಷ್ಟೇ. ಸಿಂಪಲ್!

ಇದನ್ನೂ ಓದಿ | Happiness: ಈ ಪುಟ್ಟ ದ್ವೀಪದ ಜನ ಸದಾ ಸಂತೋಷವಾಗಿರ್ತಾರೆ, ಯಾಕೆ ಗೊತ್ತೆ?

Exit mobile version