ಫಿಟ್‌ನೆಸ್ ಪ್ರಿಯರಿಗೆ, ಕ್ರೀಡಾ ಪಟುಗಳಿಗೆ, ಜಿಮ್‌ನಲ್ಲಿ ಬೆವರುವವರಿಗೆ, ದೇಹ ಹುರಿಗಟ್ಟಿಸುವವರಿಗೆ, ಆರೋಗ್ಯದ ಆಸಕ್ತರಿಗೆ – ಹೀಗೆ ಹಲವು ರೀತಿಯ ಜನರ ಚಿತ್ತ ಪ್ರೊಟೀನ್ ಸತ್ವದತ್ತ ಇರುವುದು ಸಹಜ. ದೇಹಕ್ಕೆ ಪ್ರೊಟೀನ್ ಅಗತ್ಯವಿದೆ ಎಂಬ ನಿಟ್ಟಿನಲ್ಲಿ ಪ್ರೊಟೀನ್ ಪುಡಿಗಳು, ಶೇಕ್‌ಗಳು, ಬಾರ್‌ಗಳು, ಹೆಚ್ಚಿನ ಪ್ರಮಾಣದ ಮಾಂಸಾಹಾರ, ಮೊಟ್ಟೆ- ಇಂಥವನ್ನೆಲ್ಲ ತಿನ್ನುವವರಿದ್ದಾರೆ. ದೇಹಕ್ಕೆ ಪ್ರೊಟೀನ್ ಬೇಕು ಎಂಬುದು ನಿಜ. ಯಾಕೆ ಮತ್ತು ಎಷ್ಟು ಬೇಕು? (Protein overload) ವಿವರಗಳನ್ನು ನೋಡೋಣ. ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಪೌಷ್ಟಿಕಾಂಶಗಳಲ್ಲಿ ಪ್ರೊಟೀನ್ ಪ್ರಮುಖವಾದದ್ದು. ದೇಹದ ಯಾವುದೇ ರಿಪೇರಿ ಕೆಲಸಕ್ಕೆ, ಕಿಣ್ವಗಳು ಮತ್ತು ಚೋದಕಗಳನ್ನು ಉತ್ಪತ್ತಿ ಮಾಡುವುದಕ್ಕೆ, ರೋಗ ನಿರೋಧಕ ಶಕ್ತಿ ಹೊಂದುವುದಕ್ಕೆ, ಮಾಂಸಖಂಡಗಳ ದೃಢತೆ ಮತ್ತು ದೇಹದ ಶಕ್ತಿಗೆ- ಹೀಗೆ ಹತ್ತು ಹಲವು ಕೆಲಸಗಳಿಗೆ ಪ್ರೊಟೀನ್ ಅಗತ್ಯವಾಗಿ ಬೇಕು. ಅಗತ್ಯವಾದಷ್ಟು ಪ್ರೊಟೀನ್ ದೇಹಕ್ಕೆ ದೊರೆಯದಿದ್ದರೆ ಆಗುವ ಸಮಸ್ಯೆಗಳು ಒಂದೆರಡೇ ಅಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ, ದೇಹಕ್ಕೆ ಪ್ರೊಟೀನ್ ಹೆಚ್ಚಾಗಿಯೂ ಸಮಸ್ಯೆ ಆಗಿದ್ದಿದೆ.
ಹೌದು! ಅಗತ್ಯಕ್ಕಿಂತ ಅತಿಹೆಚ್ಚು ಪ್ರಮಾಣದಲ್ಲಿ ಪ್ರೊಟೀನ್ ದೊರೆತರೂ ದೇಹಕ್ಕದು ಸಮಸ್ಯೆಯೇ. ಉಪಯೋಗಿಸಿ ಉಳಿದ ಸತ್ವನ್ನು ದೇಹದಿಂದ ಹೊರದೂಡುವುದು ಸಣ್ಣ ಕೆಲಸವಲ್ಲ. ಪ್ರೊಟೀನ್ ಸಂಸ್ಕರಣೆಯಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ನೈಟ್ರೋಜನ್ ಹೊರದೂಡಬೇಕು. ಇವೆಲ್ಲದಕ್ಕೂ ದೇಹದ ಯಕೃತ್ತು ಮತ್ತು ಮೂತ್ರಪಿಂಡಗಳು ಹೆಚ್ಚುವರಿಯಾಗಿ ದುಡಿಯಬೇಕು. ಹಾಗಾಗಿ ಊಟದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯವಾದದ್ದು.
ತಿಳಿಯುವುದು ಹೇಗೆ?
ತಿನ್ನುತ್ತಿರುವ ಪ್ರೊಟೀನ್ ಪ್ರಮಾಣ ಹೆಚ್ಚು ಎಂಬುದು ತಿಳಿಯುವುದು ಹೇಗೆ? ಇದಕ್ಕೆ ಅಳತೆ ಇದೆಯೇ? ಇದು ಸಹಜವಾದ ಪ್ರಶ್ನೆ. ಅಂದಾಜಿಗೆ ಹೇಳುವುದಾದರೆ, ದೇಹದ ಒಂದು ಕೆ.ಜಿ. ತೂಕಕ್ಕೆ 0.8 ಗ್ರಾಂ ಪ್ರೊಟೀನ್ ಬೇಕಾಗುತ್ತದೆ ಮತ್ತು ಸಾಕಾಗುತ್ತದೆ. ಈ ಲೆಕ್ಕದಲ್ಲಿ ವಯಸ್ಕ ಪುರುಷರಿಗೆ ದಿನಕ್ಕೆ ಸುಮಾರು 56 ಗ್ರಾಂ ಪ್ರೊಟೀನ್ ಮತ್ತು ವಯಸ್ಕ ಮಹಿಳೆಯರಿಗೆ 46 ಗ್ರಾಂ ಪ್ರೊಟೀನ್ ಸಾಕಾಗುತ್ತದೆ. ಕ್ರೀಡಾಪಟುಗಳು ಮತ್ತು ಗರ್ಭಿಣಿಯರಿಗೆ ಇದಕ್ಕಿಂತ ಸ್ಪಲ್ಪ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಯಾರಿಗೇ ಆದರೂ, ಒಂದು ಕೆ.ಜಿ. ದೇಹದ ತೂಕಕ್ಕೆ ೨ ಗ್ರಾಂ ಪ್ರೊಟೀನ್ ಮೀರಿದರೆ- ಪ್ರೊಟೀನ್ ಸೇವನೆ ಅತಿಯಾಯಿತು ಎಂದೇ ಭಾವಿಸಬೇಕು.
ಆಗೇನಾಗುತ್ತದೆ?
ಸಮಸ್ಯೆಗಳು ಬರಬಹುದು. ಒಳ್ಳೆಯ ಸತ್ವವನ್ನು ಹೆಚ್ಚು ತಿಂದರೆ ಒಳ್ಳೆಯದೇ ಎಂದು ಭಾವಿಸಿದರೆ- ತಪ್ಪು! ಎಲ್ಲೋ ಒಮ್ಮೊಮ್ಮೆ ತಿಂದ ಪ್ರೊಟೀನ್ ಪ್ರಮಾಣ ಹೆಚ್ಚಾದರೆ ಅದೇನು ಸಮಸ್ಯೆಯಲ್ಲ. ಆದರೆ ಹೆಚ್ಚು ಕಾಲದವರೆಗೆ ಇದನ್ನೇ ಮಾಡುತ್ತಾ ಇದ್ದರೆ ತೊಂದರೆ ತಪ್ಪಿದ್ದಲ್ಲ. ದೇಹಕ್ಕೆ ದೊರೆತ ಪ್ರೊಟೀನ್ ಹೆಚ್ಚಾದರೆ ಅದನ್ನು ವಿಘಟನೆ ಮಾಡಿ, ಹೊರಗೆ ರವಾನಿಸಬೇಕಾಗುತ್ತದೆ. ಇದರ ಹೊರೆಯೆಲ್ಲ ಬೀಳುವುದು ಯಕೃತ್ತು ಮತ್ತು ಮೂತ್ರಪಿಂಡದ ಮೇಲೆ. ಮೂತ್ರಪಿಂಡದಲ್ಲಿ ಕಲ್ಲು ಕಾಣಿಸಬಹುದು. ಹೆಚ್ಚಿನ ಪ್ರಮಾಣದ ಯೂರಿಯ ಸಹ ರಕ್ತ ಸೇರುವುದರಿಂದ, ಮೂಳೆ ಟೊಳ್ಳಾಗುವ ಆಸ್ಟಿಯೊಪೊರೊಸಿಸ್ ಕ್ರಮೇಣ ಕಾಡಬಹುದು. ಕೆಲವರಿಗೆ ಯೂರಿಕ್ ಆಮ್ಲ ಹೆಚ್ಚಾದ್ದರಿಂದ ಗೌಟ್ ಆರ್ಥರೈಟಿಸ್ ತೊಂದರೆ ಕೊಡುವುದೂ ಇದೆ. ಅದರಲ್ಲೂ ಹೆಚ್ಚಿನ ಪ್ರಮಾಣದ ಪ್ರಾಣಿಜನ್ಯ ಪ್ರೊಟೀನ್ ಸೇವಿಸುತ್ತಿದ್ದರೆ ಕರುಳಿನ ಮೇಲೂ ಹೊರೆ ಹೆಚ್ಚುತ್ತದೆ. ಮಾತ್ರವಲ್ಲ, ಕರುಳಿನ ಕ್ಯಾನ್ಸರ್‌ಗೂ ದಾರಿ ಮಾಡಬಹುದು.
ಅಷ್ಟೇ ಅಲ್ಲ
ಹೆಚ್ಚುವರಿಯಾದ ಪ್ರೊಟೀನ್ ಹೊರಹಾಕುವುದಕ್ಕೆ ದೇಹಕ್ಕೆ ಹೆಚ್ಚಿನ ನೀರಿನ ಅಗತ್ಯವಿದೆ. ಈ ಬಗ್ಗೆ ಅರಿವಿಲ್ಲದಿದ್ದರೆ, ನಿರ್ಜಲೀಕರಣಕ್ಕೆ ತುತ್ತಾಗಬಹುದು. ಕೆಂಪು ಮಾಂಸ ಅತಿಯಾಗಿ ತಿಂದರೆ, ಪ್ರೊಟೀನ್ ಮಾತ್ರವಲ್ಲ, ಜೊತೆಗೆ ಕೊಬ್ಬೂ ಸೇರಿಕೊಂಡು ಇನ್ನಷ್ಟು ತೊಂದರೆ ತರುತ್ತದೆ. ದೇಹದಲ್ಲಿ ಅಮೈನೊ ಆಮ್ಲಗಳ ವಿಘಟನೆ ನಡೆಯುವ ಸಂದರ್ಭದಲ್ಲಿ ಬಾಯಿಯ ದುರ್ಗಂಧವೂ ಸಮಸ್ಯೆ ಕೊಡುತ್ತದೆ. ಪ್ರೊಟೀನ್ ಪ್ರಮಾಣ ಹೆಚ್ಚಾದರೆ ಹೊಟ್ಟೆ ಹಾಳಾಗುವ ಸಂಭವ ಹೆಚ್ಚು. ಅದರಲ್ಲೂ ಪ್ರೊಟೀನ್‌ಗೆ ಸೂಕ್ತ ಪ್ರಮಾಣದಲ್ಲಿ ನಾರಿನ ಅಂಶ ದೊರೆಯದೆ ಹೋದರೆ ಮಲಬದ್ಧತೆ ನಿಶ್ಚಿತ.
ಇದನ್ನೂ ಓದಿ: Ramphal Health Benefits: ರಾಮಫಲವೆಂಬ ಆರೋಗ್ಯಸೂತ್ರ