ಸೇಬುಹಣ್ಣು ಅಥವಾ ಆಪಲ್ ಎಂದರೆ ನಿಮಗೆ ಇಷ್ಟವೇ? ನಿತ್ಯವೂ ಸೇಬು ಹಣ್ಣು ಸೇವಿಸುತ್ತೀರಾ? (How safe are apples to eat) ದಿನಕ್ಕೊಂದು ಸೇಬು ತಿನ್ನುವ ಮೂಲಕ ವೈದ್ಯರಿಂದ ದೂರವಿರಬಹುದು ಎಂಬ ವಿಶ್ವಾಸದಿಂದ ದಿನಾ ಒಂದೊಂದು ಸೇಬು ತಿನ್ನುತ್ತೀರಾ? ಹಾಗಿದ್ದರೆ ಕೊಂಚ ಯೋಚಿಸಿ. ಪಳಪಳ ಹೊಳೆವ ಸೇಬನ್ನು ಆಹಾ ಎಂದು ಬಾಯಿಗಿಡುವ ಮುನ್ನ ಇವು ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ಚಿಂತಿಸಿ. ಯಾಕೆಂದರೆ, ಹೆಚ್ಚು ಕೀಟನಾಶಕಗಳನ್ನು ತನ್ನ ಮೈಮೇಲೆ ಹೊದ್ದು ಪಳಪಳಿಸಿ ಮಾರುಕಟ್ಟೆಗೆ ಕಾಲಿಡುವ ಈ ಸೇಬನ್ನು ನಾವು ಸಿಪ್ಪೆ ಸುಲಿಯದೆ ತಿಂದರೆ ಹಲವು ವೈದ್ಯರಿಂದ ದೂರವಿರುವ ಮಾತೇಕೆ, ವೈದ್ಯರ ಹತ್ತಿರ ಹೋಗಬೇಕಾಗಬಹುದು ಎಚ್ಚರ! ಹೌದು. ಹೊಸ ಸಂಶೋಧನೆಯೊಂದರ ಪ್ರಕಾರ, ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ತೊಳೆಯುತ್ತಿರುವ ಶೈಲಿಯಿಂದ ಎಲ್ಲ ಬಗೆಯ ಕೀಟನಾಶಕಗಳೂ ತೊಳೆದು ಹೋಗುತ್ತಿಲ್ಲ. ಬದಲಾಗಿ ನಾವು ತಿನ್ನುತ್ತಿರುವ ಹಣ್ಣುಗಳಲ್ಲಿ ಇನ್ನೂ ಅಂಟಿಕೊಂಡೇ ಇರುತ್ತವೆಯಂತೆ. ಅಮೆರಿಕನ್ ಕೆಮಿಕಲ್ ಸೊಸೈಟಿ ಜರ್ನಲ್‌ನಲ್ಲಿ ಪ್ರಕಟವಾದ ಈ ಸಂಶೋಧನಾ ವರದಿಯ ಪ್ರಕಾರ, ಹಣ್ಣುಗಳನ್ನು ಹೀಗೆ ತಿನ್ನುವ ಕಾರಣದಿಂದ ನಾವು ಅನೇಕ ಬಗೆಯ ಆರೋಗ್ಯದ ಪರಿಣಾಮಗಳನ್ನೂ ಮುಂದೆ ಅನುಭವಿಸಬೇಕಾಗುತ್ತದೆ ಎಂದಿದೆ. ಕೊಳೆ ತೊಳೆಯುವ ಪ್ರಕ್ರಿಯೆ ನೀರಿನಿಂದ ತೊಳೆಯುವಾಗ ತೊಳೆದುಹೋಗುತ್ತದೆಯೇ ವಿನಃ ಎಲ್ಲ ಬಗೆಯ ರಾಸಾಯನಿಕಗಳೂ ಹಣ್ಣುಗಳ ಮೇಲ್ಮೈನಿಂದ ತೊಳೆದು ಹೋಗದು. ಬದಲಾಗಿ ಅವು ಹಣ್ಣಿನ ಮೇಲ್ಮೈ ಮೇಲೆ ಅಂಟಿಕೊಂಡೇ ಇರುತ್ತವೆ. ಜೊತೆಗೆ ಕತ್ತರಿಸಿ ತಿನ್ನುವಾಗ ನಮ್ಮ ದೇಹಕ್ಕೆ ಸೇರುತ್ತವೆ ಎಂದಿದೆ. ಮುಖ್ಯವಾಗಿ ಸೇಬುಹಣ್ಣನ್ನು ತೊಳೆಯುವ ಬಗೆಯನ್ನು ಪರೀಕ್ಷಿಸಿರುವ ಈ ಸಂಶೋಧನೆಯಲ್ಲಿ, ಸೇಬು ಹಣ್ಣನ್ನು ನಾವು ಬಹಳ ಅವೈಜ್ಞಾನಿಕವಾಗಿ ತೊಳೆಯುತ್ತೇವೆ. ಅದರ ಸಿಪ್ಪೆಯ ಮೇಲಷ್ಟೇ ಅಲ್ಲ, ಅದರ ಒಳಗಿನ ಹಣ್ಣಿನ ಭಾಗದವರೆಗೂ ರಾಸಾಯನಿಕಗಳ ಪ್ರಭಾವ ಹೋಗಿರುತ್ತವೆ. ಹೀಗಾಗಿ, ಸುಮ್ಮನೆ ನೀರಿನಲ್ಲಿ ತೊಳೆಯುವುದರಿಂದ ಯಾವ ರಾಸಾಯನಿಕಗಳೂ ಹೋಗಿರುವುದಿಲ್ಲ. ಹಾಗಾಗಿ, ಸೇಬು ಹಣ್ಣನ್ನು ತಿನ್ನುವ ಸಂದರ್ಭ ಅದರ ಸಿಪ್ಪೆಯನ್ನು ತೆಗೆದು ತಿನ್ನುವುದೇ ಒಳ್ಳೆಯದು ಎಂದು ವರದಿ ಸಲಹೆ ಮಾಡಿದೆ. ಇದರಿಂದ ಒಂದಿಷ್ಟು ಪ್ರಮಾಣದಲ್ಲಿ ರಾಸಾಯನಿಕ ಹೊಟ್ಟೆ ಸೇರುವುದನ್ನು ತಪ್ಪಿಸಬಹುದು ಎಂದಿದೆ.
ಸಿಪ್ಪೆ ಒಳ್ಳೆಯದು, ಅದರಲ್ಲಿ ನಾರಿನಂಶ ಹೆಚ್ಚಿದೆ ಎಂದು ವಾದಿಸುವವರೆಲ್ಲ, ಒಮ್ಮೆ ಇಂತಹ ಹಣ್ಣುಗಳಿಗೆ ಬಳಸುವ ರಾಸಾಯನಿಕಗಳನ್ನು ಗಮನಿಸಿ. ಸಿಪ್ಪೆ ಒಳ್ಳೆಯದು ಎಂದು ತಿನ್ನುವ ಮೂಲಕ ರಾಸಾಯನಿಕವನ್ನು ಬೇಕೆಂದೆ ಹೊಟ್ಟೆಗೆ ಹಾಕುತ್ತೀರಿ ಖಂಡಿತವಾಗಿಯೂ, ಸಿಪ್ಪೆ ಬಿಸಾಕುವುದರಿಂದ ಪೋಷಕಾಂಶ ನಷ್ಟವಾಗುತ್ತದೆ. ಆದರೆ, ಬೇರೆ ಉಪಾಯವಿಲ್ಲ ಎಂದೂ ಅದು ಹೇಳಿದೆ.
ಸೇಬು ಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಕೆ, ವಿಟಮಿನ್ ಎ, ವಿಟಮಿನ ಸಿ, ಪೊಟಾಶಿಯಂ ಇತ್ಯಾದಿಗಳು ಅಪಾರ ಪ್ರಮಾಣದಲ್ಲಿವೆ. ಹಣ್ಣಿಗಿಂತ ಈ ಪೋಷಕಾಂಶಗಳು ಅದರ ಸಿಪ್ಪೆಯಲ್ಲಿರುವುದೇ ಹೆಚ್ಚು ನಿಜವಾದರೂ, ಇಂದು ಹಣ್ಣುಗಳಿಗೆ ವ್ಯಾಪಕವಾಗಿ ಕೀಟನಾಶಕಗಳನ್ನು ಬಳಸುವ ಕಾರಣದಿಂದ ಈ ಮುಂಜಾಗರೂಕತಾ ಕ್ರಮವನ್ನು ಪ್ರತಿಯೊಬ್ಬರೂ ತೆಗೆದುಕೊಳ್ಳುವುದು ಅತ್ಯವಶ್ಯಕ ಎಂದಿದೆ.
ಇಷ್ಟಾಗಿಯೂ ನೀವು ನಿಮ್ಮ ಸೇಬು ಹಣ್ಣನ್ನು ಸಿಪ್ಪೆ ಸಮೇತ ತಿನ್ನಬಯಸುವುರಾದರೆ, ಕನಿಷ್ಟ ತೊಳೆಯುವಾಗ ಈ ಎಚ್ಚರವಹಿಸಿ
ಬಿಸಿ ನೀರಿನಲ್ಲಿ ನೆನೆಸಿ
ಬಿಸಿನೀರಿನಲ್ಲಿ ಸೇಬು ಹಣ್ಣನ್ನು ಕೆಲ ಸೆಕೆಂಡುಗಳ ಕಾಲ ನೆನೆಸಿ. ಕೂಡಲೇ ಹೊರತೆಗೆದು ಒಂದು ಒರಟು ಟವೆಲ್‌ನಲ್ಲಿ ಉಜ್ಜಿ. ಇದು ಅದರ ವ್ಯಾಕ್ಸ್ ಕೋಟನ್ನು ತೆಗೆಯಲು ಸಹಾಯ ಮಾಡುತ್ತದೆ. ಜೊತೆಗೆ ರಾಸಾಯನಿಕಗಳೂ ಗಣನೀಯವಾಗಿ ಕಡಿಮೆಯಾಗುತ್ತದೆ.
ತೆಗೆದು ಒರಸಿಡಿ
ವಿನೆಗರ್ ಅಥವಾ ನಿಂಬೆರಸವನ್ನು ಹಾಕಿದ ನೀರಿನಲ್ಲಿ ಸೇಬುಹಣ್ಣನ್ನು ಸ್ವಲ್ಪ ಹೊತ್ತು ನೆನೆಸಿ ತೆಗೆದು ಒರಸಿಡಿ. ಬೇಕಿಂಗ್ ಸೋಡಾ ಹಾಗೂ ನಿಂಬೆರಸ ಮಿಶ್ರ ಮಾಡಿ ನೀರಿನಲ್ಲಿ ಹಾಕಿ ತೊಳೆದರೂ ಆದೀತು.
ಇದನ್ನೂ ಓದಿ: Health Tips: ಅನೀಮಿಯ ತಡೆಯುವುದಕ್ಕೆ ದಿನಕ್ಕೆಷ್ಟು ಕಬ್ಬಿಣದಂಶ ಬೇಕು? ಇದನ್ನು ಆಹಾರದಿಂದ ಪಡೆಯುವುದು ಹೇಗೆ?
ಸಿಪ್ಪೆ ಸುಲಿದೇ ತಿನ್ನಿ:
ಆದಷ್ಟೂ ಸಿಪ್ಪೆ ಸುಲಿದೇ ತಿನ್ನಿ. ಯಾಕೆಂದರೆ, ಈ ವರದಿ ಹೇಳುವಂತೆ, ಸಿಪ್ಪೆಯ ಸಣ್ಣ ರಂಧ್ರಗಳ ಮೂಲಕ ರಾಸಾಯನಿಕಗಳು ಹಣ್ಣಿನ ಒಳಮೈಯವರೆಗೂ ಪ್ರವೇಶ ಪಡೆದಿರುತ್ತವೆ. ಹಾಗಾಗಿ ಸಿಪ್ಪೆ ತೆಗೆದು ತಿನ್ನುವುದರಿಂದ ಹೆಚ್ಚು ಭರವಸೆ ಹೊಂದಬಹುದು.