ನಮ್ಮ ಕೆಲಸಗಳು ಯಾವುದೇ ಇದ್ದರೂ ಅದಕ್ಕೆ ಮೂಳೆಗಳು ಬಲವಾಗಿರಬೇಕು. ಅದರಲ್ಲೂ ಚಳಿಗಾಲದಲ್ಲಿ ಕೀಲು ಮತ್ತು ಮೂಳೆಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಕಾರಣ, ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳದೆ ವಿಟಮಿನ್ ಡಿ ಕಡಿಮೆಯಾಗುವುದು. ಅದರಲ್ಲೂ ಅರ್ಥರೈಟಿಸ್‌ನಂಥ ಸಮಸ್ಯೆ ಇರುವವರಿಗೆ ಚಳಿಗಾಲದಲ್ಲಿ ಮೂಳೆಗಳ ಆರೋಗ್ಯ ಮತ್ತಷ್ಟು ನಾಜೂಕಾಗುತ್ತದೆ. ಪ್ರಾಯ ಸಣ್ಣದಿರುವಾಗ ಮೂಳೆಗಳ ಸಾಂದ್ರತೆ ಚೆನ್ನಾಗಿ ಇರುವುದರಿಂದ ಋತುಮಾನ ಯಾವುದಾದರೂ ಹೆಚ್ಚಿನ ತೊಂದರೆ ಕಾಣುವುದಿಲ್ಲ. ಆದರೆ ಪ್ರಾಯ ಹೆಚ್ಚುತ್ತಿದ್ದಂತೆ ಮೂಳೆಗಳ ಸಾಂದ್ರತೆ ಸಹಜವಾಗಿ ಕಡಿಮೆಯಾಗುತ್ತದೆ. ಅದನ್ನು ಸರಿಯಾಗಿ ಕಾಳಜಿ ಮಾಡದಿದ್ದರೆ, ಚಳಿಗಾಲಗಳು ಇನ್ನಿಲ್ಲದ ತೊಂದರೆ ನೀಡುತ್ತವೆ. ಈ ಹಿನ್ನೆಲೆಯಲ್ಲಿ, ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಲು ಚಳಿಗಾಲದಲ್ಲಿ ಮಾಡಬೇಕಾದ್ದೇನು ಎಂಬುದನ್ನು ಗಮನಿಸೋಣ.
ಡೈರಿ ಉತ್ಪನ್ನಗಳು
ಹಾಲು-ಹೈನಗಳ ಸೇವನೆಯು ಮೂಳೆಗಳ ಆರೋಗ್ಯ ರಕ್ಷಣೆಗೆ ಸರಳ ಉಪಾಯ. ಇದರಲ್ಲಿರುವ ಕ್ಯಾಲ್ಶಿಯಂ,ಪ್ರೊಟೀನ್, ವಿಟಮಿನ್ ಡಿ, ಪೊಟಾಶಿಯಂ ಮತ್ತು ಫಾಸ್ಫರಸ್ ಅಂಶಗಳು ಎಲುಬುಗಳ ಆರೋಗ್ಯಕ್ಕೆ ಆವಶ್ಯಕ ಸತ್ವಗಳು. ಕ್ಯಾಲ್ಶಿಯಂಗಾಗಿ ಹೈನವನ್ನೇ ನೆಚ್ಚಕೊಂಡಿದ್ದರೆ, ದಿನಕ್ಕೆ ಮೂರು ಗ್ಲಾಸ್ ಹಾಲು ಕುಡಿಯುವುದು ಅಗತ್ಯ. ಜೊತೆಗೆ ದಿನವೂ ತಪ್ಪದೆ ಬಿಸಿಲಿಗೂ ಒಡ್ಡಿಕೊಳ್ಳಲೇಬೇಕು. ಚಳಿಯಲ್ಲಿ ಬಿಸಿಲು ಕಾಯಿಸುವುದು ಹಿತ!
ಪಾಲಕ್ ಸೊಪ್ಪು
ಪೌಷ್ಟಿಕಾಂಶದ ಖಜಾನೆ ಎಂದೇ ಕರೆಸಿಕೊಳ್ಳುವ ಸೊಪ್ಪಿದು. ಕ್ಯಾಲ್ಶಿಯಂ, ಕಬ್ಬಿಣ, ವಿಟಮಿನ್‌ಗಳು ಮತ್ತು ಖನಿಜಗಳುಇದರಲ್ಲಿ ಹೇರಳವಾಗಿವೆ. ವಾರಕ್ಕೆ ಮೂರು ಸರ್ವಿಂಗ್ ಪಾಲಕ್ ಸೊಪ್ಪು ಹಲವು ರೀತಿಯ ಕೊರತೆಗಳನ್ನು ತುಂಬಿಕೊಡಬಲ್ಲದು. ಸರಳ ಸೂಪ್‌ನಿಂದ ಹಿಡಿದು, ಖಿಚಡಿ, ಗ್ರೇವಿ, ಪರಾಠಗಳವರೆಗೆ ಹಲವಾರು ರೀತಿಯಲ್ಲಿ ಇದನ್ನು ಅಡುಗೆಗೆ ಉಪಯೋಗಿಸಬಹುದು.
ಕಾಯಿ-ಬೀಜಗಳು
ಕ್ಯಾಲ್ಶಿಯಂ ನೀಡುವಂಥ ಹಲವು ಬೀಜಗಳನ್ನು ಆಗೀಗ ಮೆಲ್ಲುವುದು ಮೂಳೆಗಳ ಬಲವರ್ಧನೆಗೆ ಸಹಕಾರಿ. ಈಪಟ್ಟಿಯಲ್ಲಿ ಎಳ್ಳು, ಚಿಯಾ, ಹೆಂಪ್, ಕುಂಬಳಕಾಯಿ ಬೀಜ, ಅಗಸೆ, ತಾವರೆಬೀಜ ಮತ್ತು ಪಿಸ್ತಾಗಳು ಮುಂಚೂಣಿಯಲ್ಲಿವೆ. ಉಳಿದಂತೆ ಬಾದಾಮಿ, ವಾಲ್‌ನಟ್, ಪೆಕಾನ್, ಚೆಸ್ಟ್‌ನಟ್‌ಗಳು ಸಹ ಮೂಳೆಗಳ ಸಾಂದ್ರತೆ ಕುಸಿಯದಂತೆ ಕಾಪಾಡುತ್ತವೆ.
ಹಸಿರು ತರಕಾರಿಗಳು
ಮೂಲಂಗಿ ಸೊಪ್ಪಿನಂಥ ಗಡ್ಡೆಗಳ ಮೇಲಿನ ಸೊಪ್ಪುಗಳು, ಬೆಂಡೆಕಾಯಿ, ಬ್ರೊಕೊಲಿ, ಎಲೆಕೋಸು ಮುಂತಾದ ಹಸಿರುತರಕಾರಿಗಳು ಮೂಳೆಗಳ ಆರೋಗ್ಯ ಕಾಪಾಡುವುದಕ್ಕೆ ನೆರವಾಗುತ್ತವೆ. ಈ ತರಕಾರಿಗಳಲ್ಲಿರುವ ಕ್ಯಾಲ್ಶಿಯಂ ಹೀರಿಕೊಳ್ಳುವುದು ದೇಹಕ್ಕೆ ಸುಲಭ. ಪಾಲಕ್‌ನಲ್ಲಿನ ಕ್ಯಾಲ್ಶಿಯಂ ಕೆಲವೊಮ್ಮೆ ಹೀರಲಾಗದೆ ಸಮಸ್ಯೆಯಾದ ಉದಾಹರಣೆಗಳೂ ಇವೆ.
ಬೇಳೆ-ಕಾಳುಗಳು
ಮೊಳಕೆ ಕಾಳುಗಳು ಮತ್ತು ಇಡೀ ಧಾನ್ಯಗಳು ಮೂಳೆಗಳಿಗೆ ಪ್ರಿಯವಾದ ಆಹಾರಗಳು. ಇವುಗಳಲ್ಲಿರುವ ಪ್ರೊಟೀನ್,ವಿಟಮಿನ್ ಮತ್ತು ಖನಿಜಗಳು ದೇಹದ ಒಟ್ಟಾರೆ ಸ್ಯಾಸ್ಥ್ಯವನ್ನು ಹೆಚ್ಚಿಸಿ, ಮಾಂಸಪೇಶಿಗಳನ್ನು ಬಲಗೊಳಿಸಿ, ಈ ಮೂಲಕ ಮೂಳೆಗಳಿಗೆ ಹೆಚ್ಚಿನ ಬಲ ದೊರಕಿಸುತ್ತವೆ. ಇದಿಷ್ಟೇ ಅಲ್ಲ, ಮಧುಮೇಹದಂಥ ರೋಗಗಳನ್ನು ದೂರ ಇರಿಸಿ, ಹೃದಯವನ್ನು ಬಲಗೊಳಿಸುತ್ತವೆ. ಹಾಗಾಗಿ ಇಡೀ ಧಾನ್ಯಗಳು ಮತ್ತು ಮೊಳಕೆ ಕಾಳುಗಳ ಲಾಭ ಇಮ್ಮುಖವಾದದ್ದು.
ಸೋಯಾ ಬೀನ್
ಸಾಮಾನ್ಯವಾಗಿ ಪ್ರೊಟೀನ್ ಹೆಚ್ಚಿಸುವಂಥ ಆಹಾರಗಳ ಪಟ್ಟಿಯಲ್ಲಿ ಮಾತ್ರವೇ ಸೋಯಾ ಉತ್ಪನ್ನಗಳುಕಾಣಸಿಗುತ್ತವೆ. ಆದರೆ ಮೂಳೆಗಳ ಸಬಲತೆಗೂ ಇದು ನೆರವಾಗುತ್ತದೆ. ಸೋಯಾ ಕಾಳು, ಹಾಲು, ತೋಫು… ಹೀಗೆ ಹಲವು ರೀತಿಯಲ್ಲಿ ಸೋಯ ಬಳಕೆ ಮಾಡಲು ಸಾಧ್ಯವಿದೆ. ಇದರಿಂದ ಮಾಂಸಖಂಡಗಳು, ಕೀಲು ಮತ್ತು ಮೂಳೆಗಳು ಸೇರಿದಂತೆ ದೇಹದ ಸಂಪೂರ್ಣ ಆರೋಗ್ಯ ಸುಧಾರಿಸುತ್ತದೆ.
ಇದನ್ನೂ ಓದಿ: Men’s Health After 40: 40ರ ನಂತರ ಪುರುಷರ ಆರೋಗ್ಯ ಕಾಳಜಿ ಹೀಗಿರಲಿ