Site icon Vistara News

ವಾಯು ಮಾಲಿನ್ಯ | ನಿಮ್ಮ ಚರ್ಮ, ಕೂದಲನ್ನು ರಕ್ಷಿಸಿಕೊಳ್ಳಲು 6 ದಾರಿ

face care

ಅಕ್ಟೋಬರ್‌ ತಿಂಗಳು ಬಂದರೆ ಸಾಕು, ವಾತಾವರಣದಲ್ಲಿ ವಾಯುಮಾಲಿನ್ಯ ಹೆಚ್ಚಿದ ಬಗ್ಗೆ ಮಾಹಿತಿ ಬರುತ್ತದೆ. ನಿಧಾನವಾಗಿ ಮಳೆಗಾಲವೆಲ್ಲ ಮುಗಿದು ಚಳಿಗಾಲ ಶುರುವಾಗುವ ಸಮಯ, ವಾತಾವರಣ ಶುಷ್ಕವಾಗುತ್ತಾ ಸಾಗುವಾಗ ಹಾಗೂ ಒಣ ಹವಾಮಾನದ ದೆಸೆಯೆಂದ ಗಾಳಿ, ಧೂಳು ಹೆಚ್ಚುವುದರಿಂದ ನಗರಗಳಲ್ಲಿ ಮಾಲಿನ್ಯದ ಅಂಕಿಅಂಶಗಳು ಮೇಲೇರುತ್ತದೆ. ಇನ್ನೊಂದೆಡೆ, ಹಬ್ಬಗಳ ಭರಾಟೆಯಲ್ಲಿ ಪಟಾಕಿಗಳ ಹೊಗೆಯಿಂದ ಮಾಲಿನ್ಯ, ಮತ್ತೊಂದೆಡೆ ಗದ್ದೆಗಳಲ್ಲಿ ಹಳೇ ಪೈರನ್ನು ಸುಡುವುದರಿಂದ ಹೊಗೆ ಆವರಿಸಿ ಮಾಲಿನ್ಯದ ಮಟ್ಟ ಹೆಚ್ಚಾಗುವುದು ಗೊತ್ತೇ ಇದೆ. ಮುಖ್ಯವಾಗಿ ದೆಹಲಿಯಂತಹ ಮಹಾನಗರಗಳಲ್ಲಿ ಮಧ್ಯಾಹ್ನದ ಏರು ಬಿಸಿಲಿರಬೇಕಾದ ಸಮಯದಲ್ಲೂ, ಆಗಸವೇ ಕಾಣದಂತೆ, ಧೂಳು ಹಾಗೂ ಹೊಗೆಯ ಪರದೆಯೊಂದು ಭೂಮಿಗೂ ಆಗಸಕ್ಕೂ ನಡುವೆ ಹೊದ್ದಿರುವಂತೆ ಸದಾ ಮಂದ ಬೆಳಕೇ ಇರುತ್ತದೆ.

ಫಾಗ್‌ ಹಾಗೂ ಸ್ಮೋಕ್‌ ಇವುಗಳೆರಡೂ ಸೇರಿ ಸ್ಮಾಗ್‌ ಎಂದು ಕರೆಯಲ್ಪಡುವ ಈ ಮಾಲಿನ್ಯದ ಹೊದಿಕೆಯಿಂದ ಚರ್ಮ, ಕೂದಲು, ಶ್ವಾಸಕೋಶ ಸೇರಿದಂತೆ ಹಲವಾರು ಆರೋಗ್ಯ ಹಾಗೂ ಸೌಂದರ್ಯ ಸಮಸ್ಯೆಗಳು ಸಾಮಾನ್ಯ. ಅಸ್ತಮಾ ಕಾಯಿಲೆ ಇರುವ ಮಂದಿಗೆ ಇಂತಹ ಸಮಯದಲ್ಲಿ ತೊಂದರೆ ಉಲ್ಬಣಿಸಿದರೆ, ವೃತ್ತಿ ನಿಮಿತ್ತ ಹೊರಗೆ ಸುತ್ತಾಡುವ ಎಷ್ಟೋ ಮಂದಿ ಉಸಿರಾಟದ ತೊಂದರೆಗಳು ಮಾತ್ರವಲ್ಲ ಚರ್ಮ ಹಾಗೂ ಕೂದಲ ಸಮಸ್ಯೆಗಳಿಗೂ ಒಳಗಾಗುತ್ತಾರೆ.

ನಿಸ್ತೇಜವಾದ ಹೊಳಪಿಲ್ಲದ ಚರ್ಮ, ಒಣ ಹಾಗೂ ಗಂಟುಗಳಾಗುವ ಕೂದಲು, ಮುಖದ ಮೇಳೆ ಹೆಚ್ಚುವ ಕಪ್ಪುಚುಕ್ಕೆ ಹಾಗೂ ರಂಧ್ರಗಳು ಬಹುತೇಕರಿಗೆ ದುಃಸ್ವಪ್ನ. ಮಾಲಿನ್ಯಯುಕ್ತ ಗಾಳಿ ಚರ್ಮಕ್ಕೆ ಗಾಳಿಯಾಡುವಂತೆ ಮಾಡುವಲ್ಲಿ ತೊಂದರೆ ಕೊಡುವುದಲ್ಲದೆ, ಚರ್ಮದ ಸಹಜ ಕೆಲಸಗಳಿಗೆ ಕಿರಿಕಿರಿ ಉಂಟು ಮಾಡುತ್ತದೆ. ಇದರಿಂದ ಚರ್ಮ ಕೆಂಪಗಾಗುವುದಲ್ಲದೆ, ನೀರು ಕಡಿಮೆಯಾದಂತಾಗಿ, ಒಣಗಿದ ಹಾಗೂ ಸಿಪ್ಪೆಯೇಳುವಂಥ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಯುವಿಎ ಹಾಗೂ ಯುವಿಬಿ ಸೂರ್ಯನ ಕಿರಣಗಳು ಮಾಲಿನ್ಯದ ಜೊತೆಗೂ ಸೇರಿದಾಗ ಇದರ ಪರಿಣಾಂ ಇನ್ನೂ ಕೆಟ್ಟದಿರುವುದರಿಂದ ಚರ್ಮ ಹಾಗೂ ಕೂದಲು ಹಲವಾರು ಸಮಸ್ಯೆಗಳಿಗೀಡಾಗುತ್ತದೆ. ಬಹುಬೇಗನೆ ಮುಪ್ಪಿನ ಲಕ್ಷಣಗಳಾದ ಸುಕ್ಕು, ಕಪ್ಪುಚುಕ್ಕೆ, ರಂಧ್ರಗಳು ಮುಖದ ಚರ್ಮದ ಮೇಲೆ ಹೆಚ್ಚಾಗುತ್ತವೆ.

ಹಾಗಾದರೆ, ಮಾಲಿನ್ಯದಿಂದ ನಮ್ಮನ್ನು ನಾವು, ಮುಖ್ಯವಾಗಿ ಚರ್ಮ, ಕೂದಲುಗಳನ್ನು ಸಂರಕ್ಷಿಸಿಕೊಳ್ಳಬಹುದಾದ ಸುಲಭ ಪರಿಹಾರಗಳೇನು ಎಂಬುದನ್ನು ನೋಡೋಣ.

೧. ನೀರು ಕುಡಿಯಿರಿ: ಚೆನ್ನಾಗಿ ನೀರು ಕುಡಿಯುವುದಕ್ಕಿಂತ ಉತ್ತಮ ಪರಿಹಾರ ಸೌಂದರ್ಯ ಸಮಸ್ಯೆಗಳಿಗೆ ಇಲ್ಲ. ಚರ್ಮದ ಹಾಗೂ ಕೂದಲ ಆರೋಗ್ಯಕ್ಕೆ ಚೆನ್ನಾಗಿ ನೀರು ಕುಡಿಯುವುದು ಬಹಳ ಮುಖ್ಯ. ನೆಲ್ಲಿಕಾಯಿ ಅಥವಾ ತುಳಸಿ ಎಲೆಗಳನ್ನು ಹಾಕಿದ ನೀರನ್ನೂ ಆಗಾಗ ಕುಡಿಯಬಹುದು. ನೀರು ಯಾವಾಗಲೂ ದೇಸದಲ್ಲಿರುವ ಕಶ್ಮಲಗಳನ್ನು ಹೊಡೆದೋಡಿಸುತ್ತದೆ.

೨.ಚರ್ಮದ ಆರೈಕೆ ಮಾಡಿ: ಮಾಲಿನ್ಯದ ಪರಿಣಾಮಗಳು ಚರ್ಮದ ಮೇಲೆ, ಕೂದಲ ಮೇಲೆ ಕಾಣುತ್ತಿದ್ದರೆ ಖಂಡಿತವಾಗಿಯೂ ಆರೈಕೆ ಬೇಕು. ದಿನವೂ ಹೊರಗೆ ಹೋಗಿ ಬಂದು ಮಲಗುವ ಮೊದಲು ಚರ್ಮವನ್ನು ಚೆನ್ನಾಗಿ ತೊಳೆದುಕೊಂಡು ಮಾಯ್ಶ್ಚರೈಸರ್‌ ಹಚ್ಚಿ. ಬಿಸಿಲಿನಲ್ಲಿ ಹೊರಗೆ ಹೋಗುವ ಮುನ್ನ, ಸನ್‌ಸ್ಕ್ರೀನ್‌ ಹಚ್ಚುವುದನ್ನು ಮರೆಯಬೇಡಿ. ಮುಖವನ್ನು ತೊಳೆಯುವಾಗ ತಣ್ಣೀರು ಬಳಸಿ ಹಾಗೂ ಮೇಕಪ್‌ ಮಾಡಿದ್ದರೆ, ಮೇಕಪ್‌, ಕೊಳೆ ಎಲ್ಲವೂ ಸರಿಯಾಗಿ ಕ್ಲೀನ್‌ ಆಗಿರುವಂತೆ ನೋಡಿಕೊಳ್ಳಿ.

೩. ಫೇಸ್‌ ಪ್ಯಾಕ್‌ಗಳನ್ನು ಬಳಸಿ: ಕಾಯಿ ಪಪ್ಪಾಯಿಯ ಸಣ್ಣದೊಂದು ತುಂಡು ತೆಗೆದುಕೊಂಡು ಮುಖಕ್ಕೆ ಉಜ್ಜಬಹುದು, ಅಥವಾ, ಮುಲ್ತಾನಿ ಮಿಟ್ಟಿಯಿಂದ ಹಿಡಿದು ಮನೆಯಲ್ಲೇ ಮಾಡಬಹುದಾದ ಸಾಂಪ್ರದಾಯಿಕ ಫೇಸ್‌ ಪ್ಯಾಕ್‌ಗಳನ್ನು ಮಾಡಿ, ಹಚ್ಚಬಹುದು. ಮನೆಯಲ್ಲಿರುವ ಸಮಯದಲ್ಲಿ ಚರ್ಮಕ್ಕೆ ಸ್ವಚ್ಛವಾಗಿ ಉಸಿರಾಡಲು ಅವಕಾಶ ಮಾಡಿಕೊಡಿ.

ಇದನ್ನೂ ಓದಿ | Hair care | ತಲೆ ಕೆಡಿಸಿಕೊಳ್ಳಬೇಡಿ, ಚಳಿಗಾಲದಲ್ಲಿ ತಲೆಕೂದಲ ಆರೈಕೆ ಹೀಗೆ ಮಾಡಿ

೪. ಎಣ್ಣೆ ಮಸಾಜ್‌ ಮಾಡಿ: ತಲೆಕೂದಲ ಸಮಸ್ಯೆ ಇರುವ ಮಂದಿ ಪ್ರತಿ ಸ್ನಾನಕ್ಕೂ ಒಂದು ಗಂಟೆ ಮೊದಲು ಚೆನ್ನಾಗಿ ಎಣ್ಣೆ ಹಚ್ಚಿ ಹಾಗೆಯೇ ಬಿಟ್ಟು ಸ್ನಾನ ಮಾಡಬಹುದು, ಹೇರ್‌ ಪ್ಯಾಕ್‌ ಹಾಕಿ ಸ್ನಾನ ಮಾಡಬಹುದು. ಮುಖಕ್ಕೆ ಹಬೆಯನ್ನು ತೆಗೆದುಕೊಂಡು ಬಾದಾಮಿ ಎಣ್ಣೆಯಿಂದ ಮುಖದ ಚರ್ಮವನ್ನೂ ಮಸಾಜ್‌ ಮಾಡಿಕೊಂಡು ರಿಲ್ಯಾಕ್ಸ್‌ ಆಗಬಹುದು.

೫. ವಿಟಮಿನ್‌ ಇ ಬಳಸಿ: ವಿಟಮಿನ್‌ ಇ ಯುಕ್ತ ಮಾಯ್‌ಶ್ಚರೈಸರ್‌ ಹಾಗೂ ಎಣ್ಣೆಯಿಂದ ಮಸಾಜ್‌ ಮಾಡಿಕೊಳ್ಳಿ. ಚರ್ಮಕ್ಕೆ ಆಳವಾದ ಆರೈಕೆ ಇದರಿಂದ ಸಿಕ್ಕು, ಮಾಲಿನ್ಯದಿಂದಾಗಿ ಬಹುಬೇಗನೆ ಒಣ ಚರ್ಮದ ಸಮಸ್ಯೆಗಳಾದ ಬಹುಬೇಗನೆ ಮುಪ್ಪು ಆವರಿಸಿಕೊಂಡಂತ ಸುಕ್ಕಿನ ಸಮಸ್ಯೆಗಳು, ಕಪ್ಪು ಕಲೆಗಳು ಕಾಣಿಸುವುದರಿಂದ ಮಸಾಜ್‌ ಬಹಳ ಉತ್ತಮ. ಆಲಿವ್‌ ಎಣ್ಣೆಯೂ ಮಸಾಜ್‌ಗೆ ಒಳ್ಳೆಯದು.

೫. ಪೋಷಕಾಂಶಯುಕ್ತ ಆಹಾರ ಸೇವಿಸಿ: ಮಾಲಿನ್ಯದಿಂದ ರಕ್ಷಿಸಿಕೊಳ್ಳಲು ಮಾಸ್ಕ್‌ ಬಳಸಿ. ವಿಟಮಿನ್‌ ಸಿ, ಇ ಹಾಗೂ ಬೀಟಾ ಕೆರೋಟಿನ್‌ ಇರುವ ಆಹಾರ ಹೆಚ್ಚು ಬಳಸಿ. ಶ್ವಾಸಕೋಶದ ತಂದರೆ ಇರುವ ಮಂದಿ ಈ ಬಗ್ಗೆ ಮೊದಲೇ ವೈದ್ಯರ ಸಲಹೆ ಸೂಚನೆ ಪಡೆಯುವುದು ಅಗತ್ಯ. ಕಾರ್ಬೋನೇಟೆಡ್‌ ಡ್ರಿಂಕ್‌ಗಳು, ಜಂಕ್‌ ತಿನ್ನುವುದನ್ನು ಬಿಟ್ಟು ಸಮತೋಲಿತ ಆಹಾರದ ಕಡೆಗೆ ಗಮನ ನೀಡಿ.

ಇದನ್ನೂ ಓದಿ | Skin care Foods | ತ್ವಚೆಯ ಕಾಂತಿ ವೃದ್ಧಿಗಾಗಿ ಈ ಆಹಾರ ತಪ್ಪದೇ ಸೇವಿಸಿ

Exit mobile version