ತಾನು ಸುಂದರವಾಗಿ ಕಾಣಬೇಕು (Hyperpigmentation) ಎಂಬ ಇಚ್ಛೆ ಯಾರಿಗಿಲ್ಲ ಹೇಳಿ? ಆದರೆ, ಈ ಆಸೆಗೆ ತಣ್ಣೀರೆರಚುವಂತೆ ಕಾಡುವ ಚರ್ಮದ ಸಮಸ್ಯೆ ಎಂದರೆ ಅದು ಹೈಪರ್ ಪಿಗ್ನೆಂಟೇಶನ್ ಅಥವಾ ಮೆಲಾಸ್ಮಾ. ಹೆಣ್ಣು ಗಂಡೆನ್ನದೆ ಕಾಡುವ ಇದು ಬಹುತೇಕರ ಸಾಮಾನ್ಯ ಸಮಸ್ಯೆ. ಚರ್ಮದ ಮೇಲೆ ಅಲ್ಲಲ್ಲಿ ಗಾಢವಾದ ಪ್ಯಾಚ್, ಕಪ್ಪು ಕಲೆಗಳು ಮೂಡುವುದೇ ಈ ಸಮಸ್ಯೆ. ಇದು ಹೇಳಿಕೊಳ್ಳುವಂಥ ಸಮಸ್ಯೆ ಅಲ್ಲವಾದರೂ, ಚರ್ಮದ ಸೌಂದರ್ಯ ಸಮಸ್ಯೆಯಾಗಿರುವುದರಿಂದ ಹಲವರನ್ನು ಮಾನಸಿಕವಾಗಿಯೂ ಬಾಧಿಸುತ್ತದೆ. ಮುಖ್ಯವಾಗಿ ಹೆಣ್ಣುಮಕ್ಕಳು ತಮ್ಮ ಚರ್ಮದ ಕಾಂತಿ ಮಾಯವಾಗಿ ಮುಖದ ಮೇಲೆ ಹೀಗೆ ಕಪ್ಪನೆಯ ಪ್ಯಾಚ್‌ಗಳು ಮೂಡಿದ್ದನ್ನು ಮತ್ತೆ ಇಲ್ಲವಾಗಿಸುವುದು ಹೇಗೆ ಎಂಬ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಾರೆ. ಚರ್ಮದಲ್ಲಿ ಮೆಲನಿನ್ ಉತ್ಪಾದನೆ ಹೆಚ್ಚಾಗುವುದರಿಂದ ಹೀಗಾಗುತ್ತದೆ. ಸಾಮಾನ್ಯವಾಗಿ ಎಲ್ಲ ಬಗೆಯ ಚರ್ಮದ ಮಂದಿಗೂ ಈ ಸಮಸ್ಯೆ ಬರಬಹುದಾಗಿದ್ದು, ಚರ್ಮವನ್ನು ಹೆಚ್ಚು ಹೊತ್ತು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಹಾಗೂ ಹಾಗೂ ಕೆಲವು ಹಾರ್ಮೋನಿನ ಸಮಸ್ಯೆಗಳಿಂದ ೩೫- ೪೦ ವಯಸ್ಸು ದಾಟುವ ಸಂದರ್ಭ ಹಲವರಲ್ಲಿ ಕಾಣಿಸಿಕೊಳ್ಳಬಹುದು. ಇನ್ನೂ ಕೆಲವರಿಗೆ ಗರ್ಭಿಣಿಯರಾಗಿದ್ದಾಗಲೂ ಹಾರ್ಮೋನಿನ ಏರುಪೇರಿನಿಂದ ಕಾಣಿಸಬಹುದು. ಬನ್ನಿ, ಹೈಪರ್‌ಪಿಗ್ಮೆಂಟೇಶನ್ ಸಮಸ್ಯೆ ಕಾಣಿಸಿಕೊಂಡಾಗ ನೀವು ನಿಮ್ಮ ಚರ್ಮಕ್ಕೆ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ.
ಏನು ಮಾಡಬೇಕು?
ನಿತ್ಯವೂ ಸನ್‌ಸ್ಕ್ರೀನ್ ಧರಿಸಿ
ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ನಮ್ಮ ಚರ್ಮವನ್ನು ರಕ್ಷಿಸಿಕೊಳ್ಳಲು ದಿನವೂ ಸನ್‌ಸ್ಕ್ರೀನ್ ಹಚ್ಚಿ. ಇದು ಮೆಲನಿನ್ ಉತ್ಪಾದನೆಯನ್ನು ಹೆಚ್ಚದಂತೆ ನೋಡಿಕೊಳ್ಳುತ್ತದೆ. ಪರಿಣಾಮವಾಗಿ ಹೈಪರ್‌ಪಿಗ್ಮೆಂಟೇಶನ್ ಹೆಚ್ಚಾಗುವುದಿಲ್ಲ.
ಮೆದುವಾದ ಸ್ಕಿನ್‌ಕೇರ್ ವಸ್ತುಗಳನ್ನು ಬಳಸಿ. ನಿಮ್ಮ ಚರ್ಮದ ಮೇಲೆ ಗಾಢವಾದ, ರಾಸಾಯನಿಕಯುಕ್ತ ತೀಕ್ಷ್ಣ ಕ್ರೀಮ್‌ಗಳನ್ನು ಬಳಸಬೇಡಿ. ಹಗುರವಾದ, ಮೆದುವಾದ, ನೈಸರ್ಗಿಕ ಗುಣಗಳುಳ್ಳ ವಸ್ತುಗಳ್ನೇ ಬಳಸಿ.
ಆಂಟಿಆಕ್ಸಿಡೆಂಟ್ ಸೇವಿಸಿ: ನೀವು ಸೇವಿಸುವ ಆಹಾರದಲ್ಲಿ ಹೇರಳವಾಗಿ ಆಂಟಿ ಆಕ್ಸಿಡೆಂಟ್‌ಗಳಿರಲಿ. ಮುಖ್ಯವಾಗಿ ವಿಟಮಿನ್ ಸಿ ಆಕ್ಸಿಡೇಟಿವ್ ಒತ್ತಡದಿಂದ ಪಾರು ಮಾಡುತ್ತದೆ. ವಿಟಮಿನ್ ಸಿ ಯುಕ್ತ ಆಹಾರ ಸೇವಿಸಿ. ಹಾಗೂ ವಿಟಮಿನ್ ಸಿ ಇರುವ ಸೌಂದರ್ಯವರ್ಧಕಗಳನ್ನು ನೀವು ಬಳಸಬಹುದು.
ಹೆಚ್ಚು ನೀರು ಕುಡಿಯಿರಿ
ಹೆಚ್ಚು ನೀರು ಕುಡಿಯುವುದು, ಚರ್ಮಕ್ಕೆ ಸರಿಯಾದ ನೀರು ಪೂರೈಕೆ ಮಾಡುವುದು ಒಳ್ಳೆಯದು. ಇದು ನೈಸರ್ಗಿಕವಾಗಿ ಒಳಗಿನಿಂದಲೇ ಚರ್ಮವನ್ನು ರಿಪೇರಿ ಮಾಡುತ್ತದೆ.
ಚರ್ಮಕ್ಕೆ ಹೊಳಪನ್ನು ನೀಡುವ ನಿಯಾಸಿನಮೈಡ್, ಕೋಜಿಕ್ ಆಸಿಡ್, ಲೈಕೋರೈಸ್ ಇತ್ಯಾದಿಗಳಿರುವ ಸೌಂದರ್ಯವರ್ಧಕಗಳನ್ನು ಬಳಸಬಹುದು. ಇದು ಹೈಪರ್‌ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡಿ ಚರ್ಮವನ್ನು ನಿಮ್ಮ ಹಳೆಯ ಬಣ್ಣಕ್ಕೆ ತರಲು ಸಹಾಯ ಮಾಡುತ್ತದೆ. ಕಲೆಗಳನ್ನು ಹೋಗಲಾಡಿಸುತ್ತವೆ.
ಆಗಾಗ ಎಕ್ಸ್‌ಫಾಲಿಯೇಟ್ ಮಾಡಿ. ಅರ್ಥಾತ್, ಒಳ್ಳೆಯ ನೈಸರ್ಗಿಕ ಗುಣಗಳುಳ್ಳ ಸ್ಕ್ರಬಿಂಗ್ ಲೋಷನ್ ಬಳಸಿ ವಾರಕ್ಕೆರಡು ಬಾರಿ ಸ್ಕ್ರಬ್ ಮಾಡಿ.
ಹೈಪರ್ ಪಿಗ್ಮೆಂಟೇಶನ್‌ಗೆ ಈಗ ಸಾಕಷ್ಟು ಸೌಂದರ್ಯ ಚಿಕಿತ್ಸೆಗಳೂ ಲಭ್ಯವಿವೆ. ಕೆಮಿಕಲ್ ಪೀಲ್, ಲೇಸರ್ ಥೆರಪಿ, ಮೈಕ್ರೋಡರ್ಮಾಬ್ರೇಶನ್ ಇತ್ಯಾದಿಗಳು ಈ ಸಮಸ್ಯೆಯನ್ನು ಸಾಕಷ್ಟು ಕಡಿಮೆ ಮಾಡುತ್ತವೆ. ಒಳ್ಳೆಯ ನುರಿತ ವೈದ್ಯರನ್ನು ಸಂಪರ್ಕಿಸಿ ಇವನ್ನು ಮಾಡಿಸಿಕೊಳ್ಳಬಹುದು.
ಇದನ್ನೂ ಓದಿ: Weight Loss Tips: ಕಪ್ಪು ಬಣ್ಣದ ಆಹಾರಗಳಿಂದ ತೂಕ ಇಳಿಸಿ!
ಇವನ್ನು ಮಾಡಬೇಡಿ
- ಯಾವತ್ತೂ ಸನ್‌ಸ್ಕ್ರೀನ್ ಹಚ್ಚದೆ ಇರಬೇಡಿ. ಸನ್‌ಸ್ಕ್ರೀನ್ ಬಹಳ ಮುಖ್ಯ.
- ಚರ್ಮವನ್ನು ಚಿವುಟಬೇಡಿ. ಮೊಡವೆ, ಕಜ್ಜಿಗಳಿದ್ದರೆ, ಅವುಗಳನ್ನು ಉಗುರಿನಿಂದ ಕೆರೆಯಬೇಡಿ. ಇವು ಕಲೆಯನ್ನು ಉಳಿಸಿಬಿಡುತ್ತವೆ.
- ಆಲ್ಕೋಹಾಲ್, ಸಲ್ಫೇಟ್, ಹಾಗೂ ಗಾಢ ಪರಿಮಳಗಳುಳ್ಳ ಸೌಂದರ್ಯವರ್ಧಕ, ಕ್ರೀಂಗಳನ್ನು ಬಳಸಬೇಡಿ.
- ನಿತ್ಯವೂ ಮಾಯ್ಶ್ಚರೈಸ್ ಮಾಡಿಕೊಳ್ಳುವುದನ್ನು ಮರೆಯಬೇಡಿ.
- ಅತಿಯಾಗಿ ಎಕ್ಸ್‌ಫಾಲಿಯೇಟ್ ಮಾಡಬೇಡಿ.
- ನಿಮ್ಮ ಚರ್ಮ ತೋರುವ ಪ್ರತಿಕ್ರಿಯೆಯನ್ನು ನಿರ್ಲಕ್ಷಿಸಬೇಡಿ. ಏನೇ ಅಲರ್ಜಿಯಿದ್ದರೂ ಕೂಡಲೇ ಸೂಕ್ತ ವೈದ್ಯರನ್ನು ಕಾಣಿ.
- ಯಾವತ್ತಿಗೂ ದಿನಾಂಕ ಮುಗಿದುಹೋದ ಸೌಂದರ್ಯವರ್ಧಕಗಳನ್ನು ಬಳಸಬೇಡಿ.