ಕಂಡಿದ್ದಕ್ಕೆಲ್ಲ ಒಂದೊಂದು ದಿನ ಆಚರಿಸುವುದು ಆಧುನಿಕ ಜಗತ್ತಿನ ಸಂಪ್ರದಾಯ. ಹೀಗಿರುವಾಗ ಸಿಗರೇಟ್‌ಗೊಂದು ದಿನ ಇರದಿದ್ದರೆ ಹೇಗೆ? ಇವತ್ತು ಧೂಮಪಾನದ ವಿಷಯಕ್ಕೇ ಮೀಸಲಾದ ದಿನ! ಇಷ್ಟೆಂದರೆ ʻದಮ್ʼ ಜೊತೆಗೆ ದಾಂಪತ್ಯ ಹೂಡಿರುವ ದಂ-ಪತಿಗಳು ಖುಷಿಯಿಂದ ಕುಣಿದಾಡಿಬಿಟ್ಟಾರು. ವಿಷಯ ಅರ್ಧಂಬರ್ಧ ಕೇಳಿಯೇ ಖುಷಿ ಪಟ್ಟರೆ, ಪೂರ್ತಿ ಕೇಳಿದ ಮೇಲೆ ಅಂಥವರು ಹೇಗಿರುತ್ತಾರೋ. ಪ್ರತಿ ವರ್ಷದ ಮಾರ್ಚ್ ತಿಂಗಳ ಎರಡನೇ ಬುಧವಾರವನ್ನು ʻಧೂಮಪಾನ ರಹಿತ ದಿನʼ ಎಂದು ಗುರುತಿಸಲಾಗಿದೆ. ಹೌದು, ಧೂಮಪಾನ ಮತ್ತು ತಂಬಾಕು ಚಟಗಳ ವಿರುದ್ಧದ ಅಭಿಯಾನದ ಹಿನ್ನೆಲೆಯಲ್ಲಿ ಈ ದಿನ ಹುಟ್ಟಿಕೊಂಡಿದ್ದು, ವಿಶ್ವದ ಎಲ್ಲ ದೇಶಗಳಲ್ಲಿ ಇದನ್ನು ಆಚರಿಸುವ (No Smoking Day) ಅನಿವಾರ್ಯತೆಯೂ ಎದುರಾಗಿದೆ.
ಇಂಗ್ಲೆಂಡ್‌ನಲ್ಲಿ 1984ರ ಬೂದಿ ಬುಧವಾರದಂದು (Ash Wednesday) ಈ ದಿನ ಮೊದಲಿಗೆ ಪ್ರಾರಂಭವಾಗಿದ್ದು, ನಂತರ ಅದನ್ನು ಮಾರ್ಚ್ ತಿಂಗಳ ಎರಡನೇ ಬುಧವಾರವೆಂದು ಘೋಷಿಸಲಾಯಿತು. ʻಧೂಮಪಾನ ರಹಿತ ದಿನʼ ಎಂಬ ಹೆಸರು ಕೇಳಿಯೇ ದಂ ಪ್ರಿಯರು ಕೋಪದಿಂದ ಹೊಗೆಯಾಡಬಹುದು. ಆದರೆ ಸಿಗರೇಟ್‌ನ ಕಾರಣಕ್ಕೆ ಹೊಗೆ ಹಾಕಿಸಿಕೊಳ್ಳುವುದು ಬೇಡ ಎನ್ನುವ ಆಸೆಯಿದ್ದರೆ, ಈ ಬಗ್ಗೆ ಲಕ್ಷ್ಯ ಕೊಡುವುದು ಕ್ಷೇಮ. ಕ್ಯಾನ್ಸರ್, ಶ್ವಾಸಕೋಶದ ಸೋಂಕುಗಳು, ಹೃದಯದ ಸಮಸ್ಯೆಗಳು, ಫಲವಂತಿಕೆಯ ಕೊರತೆ, ಗರ್ಭಾವಸ್ಥೆಯ ತೊಂದರೆಗಳು, ಅವಧಿಗೆ ಮುನ್ನವೇ ವಯಸ್ಸಾಗುವುದು, ಚರ್ಮ ಸುಕ್ಕಾಗುವುದು, ಹಲ್ಲು-ಒಸಡಿನ ಸಮಸ್ಯೆಗಳು… ಸಿಗರೇಟ್‌ನಿಂದಾಗುವ ತೊಂದರೆಗಳ ಪಟ್ಟಿ ಮುಗಿಯುವುದೇ ಇಲ್ಲ.
ಕೋಟಿಗಟ್ಟಲೆ ವ್ಯಸನಿಗಳು
ಭಾರತ ಒಂದರಲ್ಲೇ ಸುಮಾರು 26 ಕೋಟಿಗೂ ಹೆಚ್ಚು ತಂಬಾಕು ವ್ಯಸನಿಗಳಿದ್ದಾರೆ. ವಾರ್ಷಿಕ 10 ಲಕ್ಷ ಮಂದಿ ತಂಬಾಕಿನ ವ್ಯಸನದಿಂದ ಉಂಟಾಗುವ ರೋಗಗಳಿಗೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಆಸ್ತಮಾ, ಬ್ರಾಂಕೈಟಿಸ್, ನ್ಯುಮೋನಿಯದಂಥ ತೊಂದರೆಗಳು ಧೂಮಪಾನಿಗಳ ಪುಪ್ಪುಸವನ್ನು ಹಿಂಡುತ್ತಲೇ ಇರುತ್ತವೆ. ಹಾಗಾಗಿ ಸಿಗರೇಟ್ ವ್ಯಸನದಿಂದ ಮುಕ್ತರಾಗುವ ಅನಿವಾರ್ಯತೆಯನ್ನು ಎಲ್ಲೆಡೆ ಹರಡಲು ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ʻಮಕ್ಕಳನ್ನು ತಂಬಾಕಿನಿಂದ ದೂರವಿರಿಸಿʼ ಎನ್ನುವ ಘೋಷಣೆಯನ್ನು 2024ರಲ್ಲಿ ಸಾರಲಾಗುತ್ತಿದೆ.
ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಅರಿವಿಲ್ಲದೆಯೇ ಈ ವ್ಯಸನಕ್ಕೆ ಅಂಟಿಕೊಂಡವರು ಕಡಿಮೆ ಎನ್ನುವುದು ಇನ್ನೂ ವಿಪರ್ಯಾಸದ ವಿಷಯ. ಹಾಗಾಗಿ ಹೊಗೆ ಸುರುಳಿಯಿಂದ ಬಿಡಿಸಿಕೊಂಡು ಹೊರ ಬರುವುದಕ್ಕೆ ಏನು ಮಾಡಬಹುದು ಎನ್ನುವುದರ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುವ ಆವಶ್ಯಕತೆ ಈಗ ಎದುರಾಗಿದೆ. ಒಂದು ಧಂ ಎಳೆಯಲೇಬೇಕು ಎನ್ನುವ ತುಡಿತವನ್ನು ಹತ್ತಿಕ್ಕಿ, ಮನಸ್ಸಿನ ಚಪಲದ ಮೇಲೆ ಜಯ ಸಾಧಿಸುವುದು ಹೇಗೆ ಎನ್ನುವತ್ತ ಕೆಲವು ಕಿವಿಮಾತುಗಳಿವು.
ಕಾರಣವನ್ನು ನೀವೇ ಹುಡುಕಿಕೊಳ್ಳಿ
ಹೌದು, ಸಿಗರೇಟ್ ಬಿಡುವುದಕ್ಕೆ ಇನ್ನೊಬ್ಬರು ಹೇಳಿದಾಗ ಕೇಳುವುದಕ್ಕೆ ಮನಸ್ಸಾಗುವುದಿಲ್ಲ. ಬದಲಿಗೆ, ಕಾರಣವನ್ನು ನೀವೇ ಹುಡುಕಿಕೊಳ್ಳಿ. ಉದಾ, ಕ್ಯಾನ್ಸರ್ ದೂರ ಇಡುವುದು, ಹೃದಯವನ್ನು ಚೆನ್ನಾಗಿಡುವುದು, ನಿಮ್ಮ ಮಕ್ಕಳನ್ನು ಇದರಿಂದ ಕಾಪಾಡುವುದು- ಇಂಥ ಯಾವುದಾದರೂ ನಿಮ್ಮ ಮನಸ್ಸಿಗೆ ಸತ್ಯವೆನಿಸುವ ಕಾರಣವನ್ನು ಹುಡುಕಿ, ಅದಕ್ಕೆ ಭದ್ರವಾಗಿ ಅಂಟಿಕೊಳ್ಳಿ. ಆಗ ಪ್ರತಿಬಾರಿ ಧಂ ಎಳೆಯುವ ಮನಸ್ಸಾದಾಗಲೂ ಕಣ್ಣೆದುರಿಗೆ ಕೆಮ್ಮುತ್ತಿರುವ ನಿಮ್ಮದು ಅಥವಾ ಮಕ್ಕಳ ಚಿತ್ರವನ್ನು ತಂದುಕೊಳ್ಳಲು ಕಷ್ಟವಾಗುವುದಿಲ್ಲ.
ತುಡಿತಗಳನ್ನು ಮೆಟ್ಟಿ
ಒತ್ತಡ ಅತಿಯಾದರೆ ಧಂ ಬೇಕೆನಿಸುತ್ತದೆಯೇ? ಮಿತ್ರರೊಂದಿಗೆ ಪಾರ್ಟಿಗೆ ಹೋದಾಗ ಹತ್ತಿಕ್ಕುವುದು ಕಷ್ಟವೇ? ಪ್ರತಿ ದಿನ ಊಟದ ನಂತರ ಹೊಗೆ ಸುರುಳಿ ಸುತ್ತುತ್ತೀರೇ? ಅಂದರೆ, ಸಿಗರೇಟ್ ಬೇಕೆಂಬುದನ್ನು ಟ್ರಿಗರ್ ಮಾಡುವ ವಿಷಯ ಯಾವುದು ಗಮನಿಸಿ. ಉದಾ, ಪ್ರತಿದಿನ ಊಟದ ನಂತರ ಸಿಗರೇಟ್ ಅಭ್ಯಾಸವಿದ್ದರೆ, ಒಂದು ಡಾರ್ಕ್ ಚಾಕಲೇಟ್ ತಿನ್ನುವುದಕ್ಕೆ ಬದಲಾಯಿಸಿ. ಇದರಲ್ಲಿರುವ ಕೆಫೇನ್ ಮೆದುಳನ್ನು ಪ್ರಚೋದಿಸುತ್ತದೆ, ಆರೋಗ್ಯಕ್ಕಾಗುವ ಹಾನಿಯನ್ನು ಈ ಮೂಲಕ ಕಡಿಮೆ ಮಾಡಬಹುದು.
ಚಟ ಬದಲಾಯಿಸಿ!
ಇದೂ ಒಂದು ಮಾರ್ಗ. ಸಿಗರೇಟ್ ಬೇಕೆನಿಸಿದಾಗೆಲ್ಲ ಅದಕ್ಕಾಗಿಯೇ ಇರುವ ಕ್ಯಾಂಡಿಗಳನ್ನು ಬಾಯಲ್ಲಿರಿಸಿಕೊಳ್ಳಿ. ಒಂದೊಮ್ಮೆ ಅದು ಬೇಡದಿದ್ದರೆ, ಉಪ್ಪಲ್ಲಿ ಅದ್ದಿದ ನಿಂಬೆಹಣ್ಣು, ನೆಲ್ಲಿಕಾಯಿಯ ಕ್ಯಾಂಡಿಗಳನ್ನು ಅಥವಾ ಹುಣಸೆಹಣ್ಣಿನ ಕ್ಯಾಂಡಿಯನ್ನು ಪ್ರಯತ್ನಿಸಿ. ಆ ರುಚಿ ಬಾಯಿಗೆ ಒಗ್ಗದಿದ್ದರೆ ಬಾದಾಮಿ, ಫಾಕ್ಸ್‌ನಟ್ ಮುಂತಾದ ಕಾಯಿಗಳನ್ನು ʻಕಟಂʼ ಮಾಡಿ. ಆ ಹೊತ್ತಿಗೆ ಹಸಿಯಾದ ಕ್ಯಾರೆಟ್ ತಿನ್ನುವವರಿದ್ದಾರೆ. ಇಡೀ ಗೋದಿ ಕಾಳುಗಳನ್ನು ಅಗಿದೂ ಅಗಿದು ಚ್ಯೂಯಿಂಗ್ ಗಮ್‌ನಂತೆ ಮಾಡುವವರೂ ಇದ್ದಾರೆ. ಅಂತೂ ಸಿಗರೇಟ್ ಬಿಡುವುದಕ್ಕೆ ಆರೋಗ್ಯಕರ ದಾರಿಗಳು ಲೋಕದಲ್ಲಿ ಸಿಕ್ಕಾಪಟ್ಟೆ ಇವೆ, ನೀವು ಮನಸ್ಸು ಮಾಡಬೇಕಷ್ಟೆ.
ಹವ್ಯಾಸಗಳು
ಯಾವುದೋ ವಸ್ತು ಬೇಕೆಂದು ಹಠ ಮಾಡುವ ಮಕ್ಕಳ ಗಮನವನ್ನು ಬೇರೆಡೆ ಸೆಳೆಯುವ ತಂತ್ರ ನಿಮ್ಮ ಮನಸ್ಸಿನ ಹಠಕ್ಕೂ ಪರಿಣಾಮಕಾರಿ. ಉದಾ, ಊಟದ ನಂತರ ಸಿಗರೇಟ್ ಬೇಡುವ ಮನಸ್ಸನ್ನು ಯಾವುದೋ ಹವ್ಯಾಸದಲ್ಲಿ ವ್ಯಸ್ತವಾಗಿಸಿ. ವಾಕಿಂಗ್ ಇಲ್ಲವೇ ಸೈಕ್ಲಿಂಗ್ ಹೋಗಿ, ಹಾಡು ಕೇಳಿ, ಚಿತ್ರ ಬರೆಯಿರಿ, ಮಿತ್ರರೊಂದಿಗೆ ಮಾತಾಡಿ, ಗಿಡದ ಬುಡ ಕೆದಕಿ, ಆ ಹೊತ್ತಿನಲ್ಲಿ ದಿನಕ್ಕೊಬ್ಬರಿಗೆ ಫೋನ್ ಮಾಡುವ ಮೂಲಕ ಬಿಟ್ಟುಹೋದ ಸಂಬಂಧಗಳನ್ನು ಜೋಡಿಸಿಕೊಳ್ಳಿ- ಅಂತೂ ಮನಸ್ಸನ್ನು ಸಿಗರೇಟ್‌ನಿಂದ ವಿಮುಖ ಮಾಡುವುದಕ್ಕೆ ಏನು ಸಾಧ್ಯವೋ ಅದನ್ನು ಮಾಡಿ.
ಒಂದೇಒಂದು… ಊಹುಂ!
ಈಗೊಂದು ವಾರದಿಂದ ಸಿಗರೇಟ್ ಮುಟ್ಟಿಲ್ಲ. ಇವತ್ತು ಒಂದೇಒಂದು ದಂ ಎಳೆದು ಬಿಡುತ್ತೇನೆ ಎಂದು ಭಾವಿಸಿದರೆ- ಖಂಡಿತ ಬೇಡ. ʻಒಂದುʼ ಎನ್ನುವುದು ಅಷ್ಟಕ್ಕೇ ನಿಲ್ಲುವ ಖಾತ್ರಿ ಖಂಡಿತ ಇರುವುದಿಲ್ಲ. ಸಿಗರೇಟ್ ಬಿಡುವತ್ತ ಇಟ್ಟಿರುವ ಹೆಜ್ಜೆಯನ್ನು ಯಾವುದೇ ಕಾರಣಕ್ಕೂ ಹಿಂತೆಗೆಯಬೇಡಿ.
ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ? ಮಾನಸಿಕ ಒತ್ತಡವೂ ಕಾರಣವಾಗಿರಬಹುದು!