ಧ್ಯಾನ ಎನ್ನುತ್ತಿದ್ದಂತೆ ನಾನಾ (International Yoga Day) ಬಗೆಯ ಚಿತ್ರಗಳು ಮನಸ್ಸಿಗೆ ಬರುತ್ತವೆ. ಯಾರೋ ತಪಸ್ಸು ಮಾಡುವುದು, ಗಡ್ಡ ಬಿಟ್ಟುಕೊಂಡು ವೃಕ್ಷಾಸನದಲ್ಲಿ ನಿಂತಿರುವುದು, ಚಿನ್ಮುದ್ರೆ ಹಿಡಿದು ಕಣ್ಣು ಮುಚ್ಚಿ ಕೂತವರು… ಅವರವರ ಭಾವಕ್ಕೆ ತಕ್ಕಂತೆ ಭಿತ್ತಿಗಳು ಮೂಡುತ್ತವೆ. ಧ್ಯಾನ ಅಥವಾ ಮೆಡಿಟೇಶನ್ ಮಾಡುವುದೆಂದರೆ ಕಣ್ಣು ಮುಚ್ಚಿಕೊಂಡು, ಒಳ ಮನದಲ್ಲಿ ಲೋಕದ ವ್ಯವಹಾರವನ್ನೆಲ್ಲ ಚಿಂತಿಸುವುದು ಹೆಚ್ಚಿನವರ ಕ್ರಮ! ಬದುಕಿನ ಸ್ವಾಸ್ಥ್ಯ ವೃದ್ಧಿಗೆ ಹಾಗೂ ಒತ್ತಡ ನಿವಾರಣೆಗೆ ವ್ಯಾಪಕವಾಗಿ ವಿಶ್ವದೆಲ್ಲೆಡೆ ಚಿಕಿತ್ಸೆಯ ರೂಪದಲ್ಲಿ ಬಳಕೆಯಾಗುತ್ತಿರುವ ಕ್ರಮವಿದು. ಕಣ್ಣು ಮುಚ್ಚಿ ಒಳ ಹೋಗುವ ಈ ಕ್ರಿಯೆಗೆ ಹೊರಗಿನಿಂದ ವಿಮುಖರಾಗುವುದು ಅಗತ್ಯವೇ? ಇಂದಿನ ದಿನಗಳಲ್ಲಿ ಇದಕ್ಕೆ ಏಕಿಷ್ಟು ಮಹತ್ವ ದೊರೆತಿದೆ- ಇತ್ಯಾದಿ ಪ್ರಶ್ನೆಗಳಿಗೆ ಸಮಾಧಾನವನ್ನು ಶೋಧಿಸುವ ಪ್ರಯತ್ನವಿದು.
ಧ್ಯಾನವೆಂದರೆ ಏನು?
ಹಾಗೆಂದರೆ ಆಳವಾದ ವಿಶ್ರಾಂತಿ ಮತ್ತು ಜಾಗೃತ ಸ್ಥಿತಿ- ಈ ಎರಡನ್ನೂ ಒಂದೇ ಸಮಯಕ್ಕೆ ಏಕತ್ರಗೊಳಿಸಿದ ಸ್ಥಿತಿ! ಇದು ಋಷಿ-ಮುನಿಗಳಿಗೆ ಮಾತ್ರವೇ ಹೊಂದುವಂಥದ್ದು ಎಂಬ ತೀರ್ಮಾನಕ್ಕೆ ಈಗಲೇ ಬರಬೇಡಿ. ಸರಳವಾಗಿ ಹೇಳುವುದಾದರೆ, ಕುದಿಯುತ್ತಿರುವ ಮೈ-ಮನಗಳನ್ನು ಶಾಂತಗೊಳಿಸಿ, ನಮ್ಮೊಳಗಿನ ಉಲ್ಲಾಸವನ್ನು ಎಚ್ಚರಿಸುವ ಕ್ರಿಯೆಯಿದು. ಏನನ್ನೂ ಮಾಡದೆ, ಅಂದರೆ ಮೆದುಳಿಗೂ ಕೆಲಸ ನೀಡದೆ, ಎಲ್ಲವನ್ನೂ ಬಿಟ್ಟು ಆಳವಾದ ವಿಶ್ರಾಂತಿಗೆ ಜಾರುವುದು, ಆದರೆ ನಿದ್ದೆ ಮಾಡದೆ ಜಾಗೃತ ಅವಸ್ಥೆಯಲ್ಲೇ ಇರುವುದು ಈ ಕ್ರಮದ ಮುಖ್ಯವಾದ ಅಂಗ. ದೇಹಕ್ಕೆ ಆಹಾರ ನೀಡಿದಂತೆ ಮನಸ್ಸಿಗೂ ಗ್ರಾಸ ಬೇಡವೇ?
ಏಕೆ ಮಾಡಬೇಕು?
ಬದುಕಿನ ಇನ್ನೊಂದು ಹೆಸರೇ ಒತ್ತಡ ಎನ್ನುವಂತಿರುವಾಗ, ಈ ಚಕ್ರವ್ಯೂಹದಿಂದ ಹೊರಬರುವುದು ಹೇಗೆ? ಹೊರಗಿನ ಗದ್ದಲದಲ್ಲಿ ಆಂತರ್ಯದ ದನಿಯನ್ನು ಕೇಳುವುದು ಹೇಗೆ? ನೂರೆಂಟು ಗೋಜಲುಗಳ ನಡುವೆ ನಮಗೆ ಬೇಕಾದ್ದಕ್ಕೆ ಗಮನ ಕೊಡುವುದು ಸಾಧ್ಯವೇ? ಯಶಸ್ಸಿನ ಹಿಂದೆ ಓಡುವಾಗ ನಮ್ಮ ಕೈಗೆ ದೊರೆಯುತ್ತಿರುವುದೇನು ಎಂಬ ಗಮನವಾದರೂ ಇದೆಯೇ ನಮಗೆ? ಹಾಳಾಗುತ್ತಿರುವ ಆರೋಗ್ಯವನ್ನು ಮಾತ್ರೆಗಳು ಮಾತ್ರವೇ ಸರಿ ಮಾಡಿಯಾವೇ? ಇವಕ್ಕೆಲ್ಲ ಉತ್ತರ ಹುಡುಕಬೇಕೆಂದರೆ ಮೊದಲು ಮನಸ್ಸು ಶಾಂತವಾಗಬೇಕು. ಉದ್ರಿಕ್ತ ಮನದಿಂದ ಉತ್ತರ ಹುಡುಕಲು ಸಾಧ್ಯವಿಲ್ಲ. ಮೊದಲು ಮನಸ್ಸಿಗೆ ಸಮಾಧಾನ ದೊರೆತ ಮೇಲಷ್ಟೇ ಪ್ರಶ್ನೆಗಳಿಗೆ ಸಮಾಧಾನ ದೊರೆಯುವುದಕ್ಕೆ ಸಾಧ್ಯ. ಈಗ ನೀವೆ ಹೇಳಿ, ಧ್ಯಾನವನ್ನು ಏಕೆ ಮಾಡಬೇಕು?
ಇದನ್ನೂ ಓದಿ: Allergic Asthma: ಅಸ್ತಮಾ ಹೊಂದಿರುವ ವ್ಯಕ್ತಿಗಳು ಈ ಅಲರ್ಜಿಗಳಿಂದ ದೂರವಿರಬೇಕು
ಲಾಭಗಳೇನು?
- ಎಲ್ಲಕ್ಕಿಂತ ಮೊದಲು ನಮಗೆ ಅರಿವಿಗೆ ಬರುವ ಪ್ರಯೋಜನವೆಂದರೆ ಶರೀರದ ಚೈತನ್ಯ ಹೆಚ್ಚುವುದು. ನಮ್ಮ ಆಲೋಚನೆ, ಕ್ರಿಯೆ ಮತ್ತು ಉಸಿರಾಟಕ್ಕೂ ನಮ್ಮಲ್ಲಿ ಪ್ರವಹಿಸುವ ಚೈತನ್ಯಕ್ಕೂ ಗಾಢವಾದ ನಂಟಿದೆ. ಈ ಚೈತನ್ಯವೇ ನಮ್ಮಲ್ಲಿ ಧನಾತ್ಮಕ ಆಲೋಚನೆಗಳನ್ನು ಉಂಟು ಮಾಡುವುದು.
- ಎರಡನೆಯ ಪ್ರಯೋಜನವೆಂದರೆ ನಮ್ಮ ಆರೋಗ್ಯದಲ್ಲಿನ ಸುಧಾರಣೆ. ಅಂದರೆ ರಕ್ತದೊತ್ತಡ, ಮಧುಮೇಹ, ಹೃದಯದ ತೊಂದರೆಗಳು, ಜೀರ್ಣಾಂಗದ ಸಮಸ್ಯೆಗಳು, ಚರ್ಮದ ತೊಂದರೆಗಳು ಮುಂತಾದ ಹಲವಾರು ಸಮಸ್ಯೆಗಳಿಗೆ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳುವುದು ಪ್ರಬಲ ಔಷಧಿಯಾಗಿ ಕೆಲಸ ಮಾಡುತ್ತದೆ.
- ಮೂರನೆಯದಾಗಿ, ದೇಹ ಮತ್ತು ಮನಸ್ಸುಗಳ ವಿಕಾರಗಳನ್ನು ಮಟ್ಟ ಹಾಕಲು ಇದು ಅಗತ್ಯ. ಬೇಡದ ಆಲೋಚನೆಗಳನ್ನು ತಡೆಯುತ್ತಿದ್ದಂತೆ ನಿದ್ದೆ ಸುಲಲಿತವಾಗಿ ಬರುತ್ತದೆ. ನಿದ್ರಾಹೀನತೆಯಿಂದ ದಾಂಗುಡಿ ಇಡುವ ಲೆಕ್ಕವಿಲ್ಲದಷ್ಟು ಸಮಸ್ಯೆಗಳನ್ನು ದೂರ ಇರಿಸಬಹುದು.
- ಇವೆಲ್ಲ ಕಣ್ಣಮುಂದೆ ಕಾಣುವಂಥ ಪ್ರಯೋಜನಗಳು. ಅದಲ್ಲದೆ, ಮಾನಸಿಕ ಏಕಾಗ್ರತೆ, ನೆನಪಿನ ಶಕ್ತಿ ಹೆಚ್ಚಳ, ವಿವೇಕ ಜಾಗ್ರತೆಯಾಗುವುದು, ಯೋಚನೆಯಲ್ಲಿ ಸ್ಪಷ್ಟತೆ, ಗೊಂದಲ ದೂರವಾಗುವುದು, ಒತ್ತಡ ನಿವಾರಣೆ, ಸಂವಹನದಲ್ಲಿ ಸ್ಪಷ್ಟತೆ, ಹೊಸ ಆಲೋಚನೆಗಳು ಹುಟ್ಟುವುದು, ಕಲಿಯುವಲ್ಲಿನ ಚುರುಕುತನ, ಆತ್ಮವಿಶ್ವಾಸ ವೃದ್ಧಿ, ನಿರುಮ್ಮಳತೆ- ಇವೆಲ್ಲ ನಮ್ಮ ಮಾನಸಿಕ ಸ್ಥಿತಿ ಸುಧಾರಿಸಿದ್ದರಿಂದ ಆಗುವ ನೇರ ಪ್ರಯೋಜನಗಳು. ಧ್ಯಾನಸ್ಥರಾಗಿ ಕೂರುವುದಕ್ಕೆ ಇದಕ್ಕಿಂತ ಹೆಚ್ಚಿನ ಕಾರಣಗಳು ಬೇಕೆ?