Site icon Vistara News

Rain water safety | ಮಳೆನೀರಿಗೆ ಬೊಗಸೆಯೊಡ್ಡಿ ಕುಡಿಯುವ ಮೊದಲು, ಇನ್ನೊಮ್ಮೆ ಯೋಚಿಸಿ

rain

ಮಳೆ ನೀರನ್ನು ಅತಿಶುದ್ಧ ಎಂದು ಕರೆಯುತ್ತಿದ್ದ, ಹಿಡಿದು ಕುಡಿಯುತ್ತಿದ್ದ ದಿನಗಳೂ ಇದ್ದವು. ಆದರೀಗ ಪರಿಸ್ಥಿತಿ ಯಾವ ಮಟ್ಟಕ್ಕೆ ಹದಗೆಟ್ಟಿದೆ ಎಂದರೆ, ಅಂಟಾರ್ಕ್ಟಿಕಾದಲ್ಲಿ ಬೀಳುವ ಮಳೆಯೂ ಸಹ ರಾಸಾಯನಿಕಗಳಿಂದ ಮುಕ್ತವಾಗಿಲ್ಲ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.

ಎಂದಿಗೂ ಕರಗದ ರಾಸಾಯನಿಕಗಳು ಎಂದೇ ಕರೆಸಿಕೊಳ್ಳುವ ಪಾಲಿ ಮತ್ತು ಪರ್‌ಪ್ಯೂರೋ ಆಲ್ಕೈಲ್‌ ವಸ್ತುಗಳು (ಪಿಎಫ್‌ಎಎಸ್‌) ವಿಶ್ವದೆಲ್ಲೆಡೆಯಲ್ಲಿ ಕಂಡುಬಂದಿವೆ. ಧ್ರುವ ಪ್ರದೇಶಗಳ ಮಳೆನೀರಿನಲ್ಲೂ ಇವುಗಳು ಪತ್ತೆಯಾಗಿವೆ. ಸ್ಟಾಕ್‌ಹೋಂ ವಿಶ್ವವಿದ್ಯಾಲಯದಲ್ಲಿ ನಡೆಸಲಾದ ಅಧ್ಯಯನದ ವರದಿಯನ್ನು ಪರಿಸರ ವಿಜ್ಞಾನ ಮತ್ತು ತಂತ್ರಜ್ಞಾನ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದ್ದು, ವಿಶ್ವದ ಬಹುತೇಕ ಯಾವುದೇ ಭಾಗದ ಮಳೆನೀರಿನಲ್ಲೂ ಪಿಎಫ್‌ಎಎಸ್‌ ರಾಸಾಯನಿಕಗಳು ಪತ್ತೆಯಾಗಿವೆ.

ನಾವು ದಿನನಿತ್ಯ ಉಪಯೋಗಿಸುವ ನಾನ್‌ಸ್ಟಿಕ್‌ ಪಾತ್ರೆಗಳು, ಅಗ್ನಿಶಾಮಕ ಫೋಮ್‌ಗಳು, ಕೆಲವು ಆಹಾರ ಪ್ಯಾಕೇಜಿಂಗ್‌ ವಸ್ತುಗಳು, ವಾಟರ್‌ಪ್ರೂಫ್‌ ಬಟ್ಟೆಗಳು, ಎಲೆಕ್ಟ್ರಾನಿಕ ಉಪಕರಣಗಳು, ಸೌಂದರ್ಯವರ್ಧಕಗಳು… ಇತ್ಯಾದಿಗಳಲ್ಲಿ ಈ ರಾಸಾಯನಿಕಗಳು ಬಳಕೆಗೊಳ್ಳುತ್ತವೆ. ಈ ರಾಸಾಯನಿಕ ವಸ್ತುಗಳು ಪ್ರಾಕೃತಿಕವಾಗಿ ಲಭ್ಯವಿಲ್ಲ, ಬದಲಿಗೆ ಮಾನವರಿಂದಲೇ ಆವಿಷ್ಕಾರಗೊಂಡವು. ಎಂದೆಂದಿಗೂ ನಿಸರ್ಗದಲ್ಲಿ ಕರಗದೆ ಉಳಿಯುತ್ತವೆ. ಇದರಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಪತ್ತೆಯಾಗುತ್ತದೆ. ಕ್ಯಾನ್ಸರ್‌, ಫಲವಂತಿಕೆಯ ಸಮಸ್ಯೆಗಳು ಮತ್ತು ಮಕ್ಕಳಲ್ಲಿ ಬೆಳವಣಿಗೆ ಕುಂಠಿತಗೊಳ್ಳುವುದು ಈ ಪೈಕಿ ಪ್ರಮುಖ ಸಮಸ್ಯೆಗಳು ಎನ್ನುತ್ತಾರೆ ವಿಜ್ಞಾನಿಗಳು. ಆದರೆ ಈವರೆಗೂ ಈ ರಾಸಾಯನಿಕಗಳು ಮತ್ತು ಆರೋಗ್ಯ ಸಮಸ್ಯೆಗಳ ನಡುವಿನ ನೇರ ಸಂಬಂಧ ಪತ್ತೆಯಾಗಿಲ್ಲ ಎಂಬುದು ಇನ್ನಷ್ಟು ಸಮಸ್ಯೆಯ ಸಂಗತಿ.

ಇದನ್ನೂ ಓದಿ: Beauty Care | ಬಾದಾಮಿ ತೈಲ ಅತ್ಯುತ್ತಮ ಸೌಂದರ್ಯವರ್ಧಕ

ಅಧ್ಯಯನ ಹೇಳುವುದೇನು?

ವಿಶ್ವದೆಲ್ಲೆಡೆಯ ಮಳೆನೀರಿನಲ್ಲಿ ಪಿಎಫ್‌ಎಎಸ್‌ ಮಟ್ಟ ಎಷ್ಟಿದೆ ಎಂಬುದನ್ನು ಪ್ರಮುಖವಾಗಿ ನೋಡಲಾಗಿತ್ತು. ಇದಕ್ಕಾಗಿ ಈ ಸಾಲಿಗೆ ಸೇರುವ ನಾಲ್ಕು ಪ್ರಮುಖ ರಾಸಾಯನಿಕಗಳನ್ನು ಅಧ್ಯಯನಕ್ಕೆ ಪರಿಗಣಿಸಲಾಗಿತ್ತು. ಜಗತ್ತಿನೆಲ್ಲೆಡೆಯ ಕುಡಿಯುವ ನೀರು ಮತ್ತು ಮಣ್ಣಿನಲ್ಲಿ ಈ ರಾಸಾಯನಿಕಗಳು ಅಪಾಯಕಾರಿ ಪ್ರಮಾಣದಲ್ಲಿ ಬೆರೆತಿವೆ ಎಂಬುದು ಖಾತ್ರಿಯಾಗಿದೆ. ಸುಮಾರು ೪,೫೦೦ ರೀತಿಯ ಫ್ಲೋರಿನ್‌ನ ಸಂಯುಕ್ತಗಳು ನಮ್ಮ ದಿನಬಳಕೆಯ ವಸ್ತುಗಳಲ್ಲಿ ಉಪಯೋಗಿಸಲ್ಪಸುತ್ತಿವೆ.

ʻಈ ರಾಸಾಯನಿಕಗಳ ಸುರಕ್ಷಿತ ಮಟ್ಟವನ್ನು ನಾವು ಎಂದೋ ಮೀರಿದ್ದೇವೆ. ಈಗ ಮರಳಿ ಹೋಗುವುದಕ್ಕೆ ಸಾಧ್ಯವಿಲ್ಲ. ಅದರರ್ಥ ನಾವೆಲ್ಲೂ ಸಾಯುತ್ತೇವೆ ಎಂದಲ್ಲ. ಆದರೆ ವಿಶ್ವದ ಯಾವುದೇ ಜಾಗವೂ ಈಗ ರಾಸಾಯನಿಕ ಮುಕ್ತವಾಗಿಲ್ಲ ಎಂಬುದು ಸ್ಪಷ್ಟ. ಈ ವಸ್ತುಗಳ ಬಳಕೆಯನ್ನು ಕಡಿತ ಮಾಡಲೇಬೇಕಿದೆʼ ಎಂದು ಈ ಅಧ್ಯಯನ ವರದಿಯ ಲೇಖಕ ಇಯಾನ್‌ ಕಸಿನ್ಸ್‌ ಹೇಳಿದ್ದಾರೆ.

ʻಅಮೆರಿಕದ ಮಾನದಂಡದ ಪ್ರಕಾರ ಕುಡಿಯುವ ನೀರಿನಲ್ಲಿ ಇರಬಹುದಾದ ಪಿಎಫ್‌ಒಎ ಮಟ್ಟವನ್ನು ಅಳೆಯುವುದಾದರೆ, ಜಗತ್ತಿನ ಯಾವ ಜಾಗದಲ್ಲೂ ಮಳೆ ನೀರು ಕುಡಿಯಲು ಯೋಗ್ಯವಲ್ಲ. ನಾವೆಲ್ಲ ಈಗ ಮಳೆ ನೀರನ್ನೇ ನೇರವಾಗಿ ಕುಡಿಯುತ್ತೇವೆ ಎಂದಲ್ಲ. ಆದರೆ ನಮ್ಮ ಬಹಳಷ್ಟು ಜಲಮೂಲಗಳು ಮಳೆ ನೀರನ್ನೇ ಆಶ್ರಯಿಸಿವೆʼ ಎಂಬುದು ಅವರ ಮಾತು.

ಇದನ್ನೂ ಓದಿ: Organic Express: ಆರೋಗ್ಯವೇ ಭಾಗ್ಯ ಎನ್ನುವ ಸಾವಯವ ಉತ್ಪನ್ನಗಳ ಮಾದರಿ ತಾಣ

Exit mobile version