Site icon Vistara News

Juices Side Effect: ಅಂಗಡಿಯಲ್ಲಿ ಸಿಗುವ ಜ್ಯೂಸ್‌ ಕುಡಿದರೆ ಏನಾಗುತ್ತದೆ?

Juices Side Effect

ಹಣ್ಣಿನ ರಸ (Juices Side Effect) ಒಳ್ಳೆಯದು ಎಂಬುದು ಎಲ್ಲರ ಮಾತು. ಹಾಗಂತ ಅಂಗಡಿಗಳಲ್ಲಿ ದೊರೆಯುವ ಬಾಟಲಿಯಲ್ಲಿರುವ ನಾನಾ ಕಂಪೆನಿಗಳ ಫ್ರೂಟ್‌ ಜ್ಯೂಸ್‌ಗಳ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿಲ್ಲ. ಯಾವುದೋ ಒಂದು ಬ್ರಾಂಡ್‌ ಎಂದಲ್ಲ, ಅಂಥ ಯಾವ ಜ್ಯೂಸ್‌ಗಳೂ ಬೇಡ ಎನ್ನುವುದು ಆರೋಗ್ಯದ ಕಾಳಜಿ ಇರುವಂಥ ಎಲ್ಲರೂ ಹೇಳುವ ಮಾತು. ಹಣ್ಣಿನ ರಸವನ್ನೇ ಕುಡಿಯುವುದಾದರೆ ತಾಜಾ ಸಿದ್ಧಪಡಿಸಿಕೊಂಡೇ ಕುಡಿಯಿರಿ ಎಂಬ ಕಿವಿ ಮಾತನ್ನು ಹೇಳುತ್ತಾರೆ. ಹಾಗೇಕೆ? ಬಾಟಲಿಗಳಲ್ಲಿರುವ ರೆಡಿ-ಟು-ಯೂಸ್‌ ಜ್ಯೂಸ್‌ಗಳನ್ನು ಯಾಕೆ ಕುಡಿಯಬಾರದು? ಕುಡಿದರೇನಾಗುತ್ತದೆ? ರುಚಿ ಎನ್ನುವುದಕ್ಕೆ ಬಹಳಷ್ಟು ಕಲ್ಪನೆಗಳಿವೆ. ಆದರೆ ಎಲ್ಲಕ್ಕಿಂತ ಜನಪ್ರಿಯ ಕಲ್ಪನೆಯೆಂದರೆ ʻಸಿಹಿʼ ಎಂಬುದು. ನಾವು ಮನೆಯಲ್ಲೇ ಮಾಡಿದ ಹಣ್ಣಿನ ರಸಗಳು ಒಮ್ಮೆ ಸಿಹಿ, ಒಮ್ಮೆ ಸಪ್ಪೆ, ಇನ್ನೊಮ್ಮೆ ಹುಳಿ- ಹೀಗೆ ನಾನಾ ರುಚಿಯಲ್ಲಿ ದೊರೆಯುತ್ತವೆ. ಹಣ್ಣಿನ ಮೂಲ ರುಚಿ ಹೇಗಿದೆಯೋ ಹಾಗೆಯೇ ಹಣ್ಣಿನ ರಸ ಇರುತ್ತದೆ, ಇರಬೇಕು. ಆದರೆ ಬಾಟಲಿಯ ಜ್ಯೂಸ್‌ಗಳು ಹಾಗಲ್ಲ. ಎಲ್ಲವೂ ಸಿಹಿಯಾಗಿಯೇ ಇರುತ್ತವೆ. ರುಚಿಯಾಗಿರಲಿ ಎಂಬ ಕಾರಣಕ್ಕೆ ಹೆಚ್ಚುವರಿ ಸಕ್ಕರೆಯನ್ನು ತಯಾರಿಕೆಯ ಹಂತದಲ್ಲಿ ನಿಶ್ಚಿತವಾಗಿ ಸೇರಿಸಲಾಗುತ್ತದೆ. ಅದೇ ಕಾರಣಕ್ಕಾಗಿಯೇ ಬಾಟಲಿಯ ಜ್ಯೂಸ್‌ ಬೇಡ ಎಂದು ಹೇಳುವುದು.

ಎಷ್ಟು ಸಕ್ಕರೆ?

ಹೆಚ್ಚುವರಿ ಸಕ್ಕರೆ ಅಂದರೆ ಎಷ್ಟು? ಈ ಪ್ರಮಾಣ ಆಯಾ ಬ್ರಾಂಡ್‌ಗಳು ಮತ್ತು ಆಯಾ ಉತ್ಪನ್ನಗಳ ಮೇಲೆ ನಿರ್ಧಾರವಾಗುತ್ತದೆ. ಜ್ಯೂಸ್‌ನ ಪ್ರತಿಯೊಂದು ನಿಗದಿತ ಸರ್ವಿಂಗ್‌ನಲ್ಲಿ 6 ರಿಂದ 20 ಗ್ರಾಂಗಳವರೆಗೆ ಅಧಿಕ ಸಕ್ಕರೆಯನ್ನು ಸೇರಿಸಲಾಗುತ್ತದೆ. ಅಂದರೆ, ಆ ಉತ್ಪನ್ನದಲ್ಲಿ ಸೇರಿರುವ ನೈಸರ್ಗಿಕ ಸಿಹಿಯಂಶದ ಮೇಲಿನ ಸಕ್ಕರೆ ಪ್ರಮಾಣವಿದು. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಒಂದು ಗ್ಲಾಸ್‌ ಜ್ಯೂಸ್‌ನಲ್ಲಿ 1.5 ಚಮಚದಿಂದ 5 ಚಮಚದವರೆಗೂ ಹೆಚ್ಚುವರಿ ಸಕ್ಕರೆಯನ್ನು ನಾವು ಸೇವಿಸುತ್ತೇವೆ. ಇದು ಕೇವಲ ಜ್ಯೂಸ್‌ ಬಗೆಗಷ್ಟೇ ಅಲ್ಲ, ಫ್ಲೇವರ್‌ ಹೊಂದಿರುವ ಕಾಫಿ, ಮಿಲ್ಕ್‌ಶೇಕ್‌, ಚಹಾ, ಎನರ್ಜಿ ಡ್ರಿಂಕ್‌ಗಳು ಅಥವಾ ಎಳನೀರಾದರೂ ಸರಿ- ಇವೆಲ್ಲದಕ್ಕೂ ಹೆಚ್ಚುವರಿ ಸಕ್ಕರೆಯನ್ನು ಸೇರಿಸಲಾಗುತ್ತದೆ. ಇದರಿಂದ ಆ ಉತ್ಪನ್ನದ ಬಣ್ಣ, ರುಚಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.

ಏನಾಗುತ್ತದೆ?

ಬೇಸಿಗೆಯಲ್ಲಿ ಹಣ್ಣಿನ ರಸಗಳನ್ನು ಹೆಚ್ಚೆಚ್ಚು ಕುಡಿಯಬೇಕೆಂಬ ಬಯಕೆ ಇರುವುದು ಸಹಜ. ಆದರೆ ಒಂದೊಂದು ಗ್ಲಾಸ್‌ನಲ್ಲೂ ಇಷ್ಟೊಂದು ಪ್ರಮಾಣದ ಸಕ್ಕರೆ ದೇಹ ಸೇರುತ್ತದೆ ಎಂದಾದರೆ, ಆರೋಗ್ಯದ ಗತಿ ಏನು? ತೂಕ ಹೆಚ್ಚುವುದು, ಇನ್‌ಸುಲಿನ್‌ ಪ್ರತಿರೋಧಕತೆ, ಹೃದಯದ ಸಮಸ್ಯೆಗಳು- ಹೀಗೆ ತರಹೇವಾರಿ ತೊಂದರೆಗಳು ಸಾಲುಗಟ್ಟುತ್ತವೆ. ಅದರಲ್ಲೂ ಮಧುಮೇಹ ಇರುವವರು ಇಂಥವನ್ನು ನಿಯಮಿತವಾಗಿ ಕುಡಿದರೆ, ಸಕ್ಕರೆ ಕಾಯಿಲೆಯನ್ನು ನಿಯಂತ್ರಣಕ್ಕೆ ತರುವುದು ಬಹಳ ಕಷ್ಟವಾಗುತ್ತದೆ.

ಏನು ಮಾಡಬೇಕು?

ಎಲ್ಲಕ್ಕಿಂತ ಸುರಕ್ಷಿತವೆಂದರೆ ತಾಜಾ ಹಣ್ಣಿನ ರಸದ ಸೇವನೆ. ಯಾವುದೇ ಸಕ್ಕರೆ-ಬೆಲ್ಲಗಳನ್ನೆಲ್ಲ ಸೇರಿಸದಿದ್ದರೂ, ಹಣ್ಣಿನ ತಾಜಾ ಪರಿಮಳವೇ ಇದಕ್ಕೆ ಅದ್ಭುತ ರುಚಿಯನ್ನು ಒದಗಿಸುತ್ತದೆ. ಜ್ಯೂಸ್‌ ಮಾತ್ರವಲ್ಲ, ಸ್ಮೂದಿ, ಮಿಲ್ಕ್‌ಶೇಕ್‌ ಮುಂತಾದ ಯಾವುದನ್ನೂ ಮಾಡಿಕೊಳ್ಳುವುದು ಕಷ್ಟವಲ್ಲ. ಆರೋಗ್ಯ ಏನಾದೀತೊ ಎಂಬ ಚಿಂತೆ ಬಿಟ್ಟು ಹಾಯಾಗಿ ಇವುಗಳನ್ನು ಗುಟುಕರಿಸಬಹುದು.

ಗಮನಿಸಿ

ಒಂದೊಮ್ಮೆ ಬಾಟಲಿಯ ಜ್ಯೂಸ್‌ಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂದಾದರೆ, ಅವುಗಳನ್ನು ಖರೀದಿಸುವಾಗ ಬಾಟಲಿಯ ಮೇಲಿನ ಸ್ಟಿಕ್ಕರ್‌ ಗಮನಿಸಿ. ಇದರಲ್ಲಿ ಹೆಚ್ಚುವರಿ ಸಕ್ಕರೆ ಎಷ್ಟಿದೆ ಎಂಬುದನ್ನು ನೋಡಿ. ಈ ಪೈಕಿ ಯಾವುದರಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಸೇರಿಸಲಾಗಿದೆ ಎಂಬುದನ್ನು ಇದರಿಂದ ತಿಳಿಯಬಹುದು. ಕಡಿಮೆ ಸಕ್ಕರೆ ಇರುವುದನ್ನೇ ಖರೀದಿಸಿ. ಇರುವುದರಲ್ಲಿ ಇದು ಒಳ್ಳೆಯ ಉಪಾಯ.

ಇದನ್ನೂ ಓದಿ: Tips To Find The Juiciest Lemon: ಜ್ಯೂಸಿಯಾದ ನಿಂಬೆಹಣ್ಣನ್ನು ಮಾರುಕಟ್ಟೆಯಿಂದ ಆರಿಸಿ ತರುವುದೂ ಒಂದು ಕಲೆ! ಇಲ್ಲಿವೆ ಟಿಪ್ಸ್

ಪರ್ಯಾಯಗಳು

ಬೇಸಿಗೆಯ ದಾಹ ತಣಿಸಿಕೊಳ್ಳುವುದಕ್ಕೆ ಆರೋಗ್ಯಕರ ಪರ್ಯಾಯಗಳಿವೆ. ಅವುಗಳತ್ತ ನಾವು ಗಮನ ನೀಡಬೇಕಷ್ಟೆ. ಘಮಘಮಿಸುವ ಹರ್ಬಲ್‌ ಚಹಾಗಳು, ಗ್ರೀನ್‌ ಟೀಗಳು ದೇಹಕ್ಕೆ ಆರಾಮ ನೀಡುತ್ತವೆ. ಸುಡು ಬೇಸಿಗೆಯಲ್ಲಿ ಈ ಬಿಸಿ ಪೇಯಗಳನ್ನು ಹೇಗೆ ಕುಡಿಯುವುದೆಂಬ ಚಿಂತೆ ಇದ್ದರೆ, ಇವುಗಳನ್ನು ಆರಿಸಿ, ಫ್ರಿಜ್‌ನಲ್ಲಿರಿಸಿಯೂ ಸೇವಿಸಬಹುದು. ಪುದೀನಾ, ಅನಾನಸ್‌ ಮುಂತಾದವುಗಳನ್ನು ನೀರಿಗೆ ಸೇರಿಸಿದ ಇನ್‌ಫ್ಯೂಸ್ಡ್‌ ವಾಟರ್‌ ತಯಾರಿಸಿಕೊಳ್ಳಬಹುದು. ಮನೆಯಿಂದ ನಾಲ್ಕು ಹೆಜ್ಜೆ ಹೊರ ನಡೆದು ಎಳನೀರು ದೊರೆಯುತ್ತದೋ ನೋಡಿ. ಇವೆಲ್ಲ ಹೆಚ್ಚುವರಿ ಸಕ್ಕರೆ ಇಲ್ಲದೆಯೆ, ನೈಸರ್ಗಿಕವಾಗಿ ದೇಹವನ್ನು ತಂಪಾಗಿಡುವ ಮಾರ್ಗಗಳು.

Exit mobile version