Site icon Vistara News

Kidney Stones: ಈ ಅಭ್ಯಾಸ ನಿಮಗಿದ್ದರೆ ಕಿಡ್ನಿಯಲ್ಲಿ ಕಲ್ಲಾಗುವ ಅಪಾಯ ಹೆಚ್ಚು!

Kidney Stones

ಕೆಲವು ಆರೋಗ್ಯ ಸಮಸ್ಯೆಗಳು ಜೀವಕ್ಕೆ ಅಪಾಯ ತರದಿದ್ದರೂ ಸಾಕಷ್ಟು ನೋವನ್ನಂತೂ ತರುತ್ತವೆ. ಮೂತ್ರಪಿಂಡದ ಕಲ್ಲಿನ ಸಮಸ್ಯೆಯೂ ಅಂಥವುಗಳಲ್ಲಿ ಒಂದು. ಕಿಡ್ನಿಸ್ಟೋನ್‌ ಎಂದೇ ಕರೆಯಲಾಗುವ ಈ ಸಮಸ್ಯೆ ಇತ್ತೀಚಿನ ವರ್ಷಗಳಲ್ಲಿ ಮಿತಿಮೀರಿದೆ. ಉಪ್ಪು ಮತ್ತು ಖನಿಜಗಳಿಂದ ನಿರ್ಮಾಣವಾಗುವ ಈ ಸಣ್ಣ-ದೊಡ್ಡ ಹರಳುಗಳು, ಮೂತ್ರದಲ್ಲಿ ಹೊರಹೋಗುವಾಗ ವಿಪರೀತ ಉರಿ-ನೋವನ್ನು ತರುತ್ತವೆ. ಇದಕ್ಕೆ ಸಮರ್ಪಕ ಚಿಕಿತ್ಸೆಗಳು ಇವೆಯಾದರೂ ಚೆನ್ನಾಗಿ ನೀರು ಕುಡಿದು ಅದನ್ನು ದೇಹದಿಂದ ಮೂತ್ರದ ಮೂಲಕ ವಿಸರ್ಜಿಸುವುದಕ್ಕೇ ಹೆಚ್ಚಿನ ವೈದ್ಯರು ಶಿಫಾರಸು ಮಾಡುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸಮಸ್ಯೆ (Kidney Stones) ಹೆಚ್ಚಿರುವುದೇಕೆ?

ಆಹಾರದಲ್ಲಿನ ಬದಲಾವಣೆ

ನಮ್ಮ ಆಹಾರದಲ್ಲಿ ಅಗತ್ಯಕ್ಕೆ ತಕ್ಕಷ್ಟು ಪ್ರೊಟೀನ್‌, ಖನಿಜಗಳೆಲ್ಲ ಇರಬೇಕೆಂಬುದು ನಿಜ. ಆದರೆ ಪ್ರಾಣಿಜನ್ಯ ಪ್ರೊಟೀನ್‌, ಸೋಡಿಯಂ ಮತ್ತು ಸಂಸ್ಕರಿತ ಸಕ್ಕರೆಯ ಪ್ರಮಾಣ ಹೆಚ್ಚಾಗಿದೆ ಇಂದಿನ ದಿನಗಳಲ್ಲಿ. ಅಧಿಕ ಪ್ರಮಾಣದ ಉಪ್ಪು ತಿನ್ನುವುದರಿಂದ ಮೂತ್ರಪಿಂಡದಲ್ಲಿ ಹರಳುಗಟ್ಟುವ ಪ್ರಕ್ರಿಯೆ ಹೆಚ್ಚುತ್ತದೆ. ಇದರಿಂದ ಮೂತ್ರದಲ್ಲಿ ಸೋಡಿಯಂ ಮತ್ತು ಕ್ಯಾಲ್ಶಿಯಂ ವಿಸರ್ಜನೆ ಅಧಿಕವಾಗುತ್ತದೆ. ಮೂತ್ರದ ಪಿಎಚ್‌ ಹೆಚ್ಚಾಗಿ ಕಲ್ಲುಗಳು ಉಂಟಾಗುತ್ತವೆ. ಇದಲ್ಲದೆ, ಆಹಾರದಲ್ಲಿ ಉಪ್ಪಿನಂಶ ಅಧಿಕವಾದರೆ ಸಿಟ್ರೇಟ್‌ ಅಂಶ ದೇಹದಿಂದ ಹೊರಗೆ ಹೋಗುವುದು ಕಡಿಮೆಯಾಗುತ್ತದೆ. ಆದರೆ ಸಿಟ್ರೇಟ್‌ ಅಂಶ ಕಿಡ್ನಿ ಸೇರಬೇಕು, ಇದರಿಂದ ಕಿಡ್ನಿಯಲ್ಲಿ ಹರಳುಗಟ್ಟುವ ಪ್ರಕ್ರಿಯೆಯನ್ನು ತಡೆಯಬಹುದು.

ಚಟುವಟಿಕೆ ಕಡಿಮೆ

ನಗರೀಕರಣದ ಭರಾಟೆಯಲ್ಲಿ ಎಲ್ಲವೂ ಯಾಂತ್ರೀಕರಣಗೊಂಡಿವೆ. ಕೂತಲ್ಲಿಂದ ಎದ್ದು ಟಿವಿ, ಫ್ಯಾನು ಹಾಕುವ ಕಷ್ಟವೂ ಇಲ್ಲ; ಕೂತಲ್ಲೇ ರಿಮೋಟ್‌ ಒತ್ತಿದರಾಯಿತು. ಇದರಿಂದಾಗಿ ದೈಹಿಕ ಚಟುವಟಿಕೆಗಳು ಕಡಿಮೆಯಾಗಿವೆ. ಅತಿಯಾದ ಪ್ರಾಣಿಜನ್ಯ ಕೊಬ್ಬು ಮತ್ತು ಸಂಸ್ಕರಿತ ಆಹಾರಗಳ ಜೊತೆಗೆ ದೇಹಕ್ಕೆ ಚಟುವಟಿಕೆಯೂ ಇಲ್ಲದಿದ್ದರೆ, ಬೊಜ್ಜು ಬರಲೇಬೇಕಲ್ಲ. ಇದರ ಬೆನ್ನಿಗೆ ಆಗಮಿಸುವ ಮಧುಮೇಹ, ರಕ್ತದ ಏರೊತ್ತಡಗಳೆಲ್ಲ ಕಿಡ್ನಿ ಕಲ್ಲಿನ ಸಮಸ್ಯೆಯನ್ನು ಹೆಚ್ಚಿಸುತ್ತವೆ.

ಜೀವನಶೈಲಿ

ದೀರ್ಘ ಕಾಲ ಒಂದೇ ಕಡೆ ಕೂತಿರುವುದು, ವ್ಯಾಯಾಮ ಇಲ್ಲದಿರುವುದು, ಅತಿಯಾದ ಕೆಫೇನ್‌ ಸೇವನೆ, ಆಲ್ಕೋಹಾಲ್‌ ಸೇವನೆ ಇನ್ನಿತರ ಜೀವನಶೈಲಿಯ ದೋಷಗಳು ಕಿಡ್ನಿಗಳ ಆರೋಗ್ಯದ ಮೇಲೆ ಒತ್ತಡ ಹಾಕುತ್ತವೆ. ಮುಖ್ಯವಾಗಿ ದೇಹದ ಚಯಾಪಚಯ ಹಾಳಾದರೆ ಮತ್ತು ತೂಕ ಹೆಚ್ಚಿದರೆ, ಮೂತ್ರಪಿಂಡದಲ್ಲಿ ಖನಿಜಗಳು ಹರಳುಗಟ್ಟುವ ಭೀತಿ ಹೆಚ್ಚುತ್ತದೆ.

ತಡೆಯಲಾಗದೇ?

ಖಂಡಿತವಾಗಿಯೂ ಈ ಬಗ್ಗೆ ಪ್ರಯತ್ನ ಮಾಡಬಹುದು. ಇದರಲ್ಲಿ ಮೊದಲ ಹೆಜ್ಜೆಯೆಂದರೆ ದಿನದಲ್ಲಿ ಕುಡಿಯುವ ನೀರಿನ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವುದು. ದಿನಕ್ಕೆ ಕನಿಷ್ಟ 3 ಲೀ. ನೀರು ಕುಡಿಯುವ ಗುರಿಯನ್ನು ಪೂರ್ಣಗೊಳಿಸಿ. ದಿನದಲ್ಲಿ 2-2.5 ಲೀ.ನಷ್ಟು ಮೂತ್ರ ವಿಸರ್ಜನೆಯಾದರೆ, ಕಿಡ್ನಿಯಲ್ಲಿರುವ ಕಲ್ಲುಗಳನ್ನು ಕರಗಿಸಲು ಅಥವಾ ಬಾರದಂತೆ ತಡೆಗಟ್ಟಲು ಅನುಕೂಲವಾಗುತ್ತದೆ. ಮೂತ್ರ ಹೆಚ್ಚು ಸಾಂದ್ರವಾದಷ್ಟೂ ಹರಳುಗಟ್ಟುವ ಸಾಧ್ಯತೆ ಹೆಚ್ಚು. ಒಂದೊಮ್ಮೆ ಈಗಾಗಲೇ ಕಲ್ಲುಗಳಿದ್ದರೆ, ಪಿಎಚ್‌ ಅಧಿಕವಿರುವ ಸಾಂದ್ರ ಮೂತ್ರದಲ್ಲಿ ಅವುಗಳನ್ನು ಹೊರಹಾಕಲು ಸಾಧ್ಯವಿಲ್ಲ.

ಆಹಾರ

ಈಗಾಗಲೇ ಕಲ್ಲುಗಳಿದ್ದರೆ, ಆಕ್ಸಲೇಟ್‌ಗಳು ವಿಫಲವಾಗಿರುವ ಆಹಾರವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವುದು ಅಗತ್ಯ. ಟೊಮೇಟೊ, ಪಾಲಕ್‌ಗಳಲ್ಲಿ ಆಕ್ಸಲೇಟ್‌ಗಳ ಪ್ರಮಾಣ ಹೆಚ್ಚು. ಹೂಕೋಸು, ಬದನೆಕಾಯಿ, ಅಣಬೆಗಳಲ್ಲಿ ಯೂರಿಕ್‌ ಆಮ್ಲದ ಪ್ರಮಾಣ ಹೆಚ್ಚಿದ್ದು, ಇವೂ ಸಹ ಹರಳುಗಟ್ಟಲು ನೆರವಾಗುತ್ತವೆ. ಹಾಗಾಗಿ ಈ ತರಕಾರಿಗಳ ಸೇವನೆಯಲ್ಲಿ ಮಿತಗೊಳಿಸಿ. ಕ್ಯಾರೆಟ್‌, ಹಾಗಲಕಾಯಿಯಂಥ ತರಕಾರಿಗಳು ಕಲ್ಲುಗಳಾಗುವುದನ್ನು ತಡೆಯುವ ಗುಣ ಹೊಂದಿದ್ದು, ಇವುಗಳ ಸೇವನೆಯನ್ನು ಸ್ವಲ್ಪ ಹೆಚ್ಚು ಮಾಡಿ.
ಹಣ್ಣುಗಳ ವಿಷಯಕ್ಕೆ ಬಂದರೆ, ಚಿಕ್ಕು, ದ್ರಾಕ್ಷಿ ಹಣ್ಣುಗಳಲ್ಲಿ ಆಕ್ಸಲೇಟ್‌ ಪ್ರಮಾಣ ಅಧಿಕ. ಸೀತಾಫಲದಲ್ಲಿ ಯೂರಿಕ್‌ ಆಮ್ಲದ ಮಟ್ಟ ಹೆಚ್ಚು. ಇವೆಲ್ಲವನ್ನೂ ಕಡಿಮೆ ಮಾಡಿ. ಬದಲಿಗೆ, ಬಾಳೆ ಹಣ್ಣು ತಿನ್ನಿ. ಇದರಲ್ಲಿರುವ ವಿಟಮಿನ್‌ ಬಿ೬ ಅಂಶವು ಯೂರಿಕ್‌ ಆಮ್ಲವನ್ನು ವಿಘಟಿಸಿ, ಹೊರಹಾಕಲು ಯತ್ನಿಸುತ್ತದೆ. ಪೊಟಾಶಿಯಂ ಮತ್ತು ಮೆಗ್ನೀಶಿಯಂ ಅಧಿಕವಿರುವ ಎಳನೀರು ಸಹ ಒಳ್ಳೆಯದು. ಸಿಟ್ರೇಟ್‌ ವಿಫುಲವಾಗಿರುವ ಸಿಟ್ರಸ್‌ ಹಣ್ಣುಗಳು ಅಗತ್ಯವಾಗಿ ಬೇಕು. ಅನಾನಸ್‌ ಕೂಡ ಹರಳುಗಟ್ಟುವ ಪ್ರಕ್ರಿಯೆಯನ್ನು ತಡೆಯುತ್ತದೆ.

ಇದನ್ನೂ ಓದಿ: Monsoon Skincare: ಮಳೆಗಾಲದಲ್ಲಿ ಚರ್ಮದ ಆರೈಕೆ ಹೇಗಿರಬೇಕು?

ಇವು ಬೇಡ

ಚಿಕನ್‌, ಮಟನ್‌, ಮೀನು, ಮೊಟ್ಟೆಗಳಲ್ಲಿ ಯೂರಿಕ್‌ ಆಮ್ಲ ಅಥವಾ ಪ್ಯೂರಿನ್‌ಗಳ ಸಾಂದ್ರತೆ ಅಧಿಕ. ಹಾಗಾಗಿ ಈ ಆಹಾರಗಳಲ್ಲಿ ಕಡಿಮೆ ಮಾಡಿ. ಜೊತೆಗೆ, ಗೋಡಂಬಿ, ಕೊಕೊ, ಚಾಕಲೇಟ್‌ಗಳು, ಚಹಾ, ಕಾಫಿ ಮತ್ತಿತರ ಕೆಫೇನ್‌ಗಳಲ್ಲಿ ಆಕ್ಸಲೇಟ್‌ ಅಂಶ ಅಧಿಕ. ಇವುಗಳಲ್ಲಿ ಯಾವುದನ್ನೆಲ್ಲ ಬಿಡುವುದಕ್ಕೆ ಸಾಧ್ಯ ಎಂಬುದನ್ನು ನೋಡಿ. ತೀರಾ ಆಗದಿದ್ದರೆ, ಮಿತಗೊಳಿಸಿ. ಜಡ ಜೀವನಶೈಲಿಯಂತೂ ಬೇಡವೇ ಬೇಡ. ಪ್ರತಿದಿನ ನಿಯಮಿತವಾಗಿ ವ್ಯಾಯಾಮ ಮಾಡಿ.

Exit mobile version