ಅಡುಗೆ ಮನೆ (Kitchen Room Safety) ಪ್ರತಿ ಮನೆಯ ಮುಖ್ಯ ಸ್ಥಳ. ಮನುಷ್ಯನ ಆರೋಗ್ಯ ಚೆನ್ನಾಗಿರಬೇಕು ಎಂದರೆ ಅಡುಗೆ ಮನೆಯಲ್ಲಿ ಶುಚಿ, ರುಚಿಯಾದ ಆಹಾರ ತಯಾರಾಗುತ್ತಿರಬೇಕು. ಹೆಣ್ಣು ಮಕ್ಕಳ ಮ್ಯಾಜಿಕ್ ರೂಂ ಆಗಿರುವ ಈ ಅಡುಗೆ ಮನೆ ಮಕ್ಕಳಿಗೆ ಹಲವು ರೀತಿಯಲ್ಲಿ ಅಪಾಯವನ್ನು ಉಂಟು ಮಾಡಲೂಬಹುದು. ಮಕ್ಕಳಿರುವ ಮನೆಗಳಲ್ಲಿ ಮನೆಯ ಪೀಠೋಪಕರಣದಿಂದ ಹಿಡಿದು ಎಲ್ಲ ವಿಚಾರದಲ್ಲೂ ನಾವು ಜಾಗರೂಕರಾಗಿಬೇಕಾಗುತ್ತದೆ. ಅದರಂತೆ ಅಡುಗೆ ಮನೆಯ ವಿಚಾರದಲ್ಲೂ ಕೂಡ ಮಕ್ಕಳ ಬಗ್ಗೆ ಗಮನ ಹರಿಸಬೇಕು. ಮಕ್ಕಳಿರುವ ಮನೆಯವರು ಅಡುಗೆ ಮನೆ ವಿಚಾರದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗೃತೆ ಬಗ್ಗೆ ಇಲ್ಲಿದೆ ಮಾಹಿತಿ.
ಕ್ಲೀನರ್‌ಗಳು ಮಕ್ಕಳ ಕೈಗೆ ಸಿಗದಿರಲಿ
ಅಡುಗೆ ಮನೆ ಸ್ವಚ್ಛ ಮಾಡುವುದಕ್ಕೆಂದು ಹಲವು ರೀತಿಯ ಕ್ಲೀನರ್‌ಗಳನ್ನು ಬಳಸುತ್ತೇವೆ. ಅದೇ ರೀತಿ ತರಹೇವಾರಿ ಡಿಶ್‌ವಾಶರ್ ಸೋಪ್‌ಗಳು, ಲಿಕ್ವಿಡ್‌ಗಳು ಅಡುಗೆ ಮನೆಯಲ್ಲಿ ಇರುತ್ತವೆ. ಈ ರೀತಿಯ ವಸ್ತುಗಳನ್ನು ಮಕ್ಕಳ ಕೈಗೆ ಸಿಗದಂತೆ ಯಾವುದಾದರೂ ಮೇಜಿನಲ್ಲಿಟ್ಟು ಕೀ ಹಾಕಿಡಿ. ಇವುಗಳು ಮಕ್ಕಳ ಕಣ್ಣಿಗೆ ಕಂಡರೆ ಅವರು ಅವುಗಳೊಂದಿಗೆ ಆಟ ಆಡಲಾರಂಭಿಸಬಹುದು ಅಥವಾ ಅದನ್ನು ಬಾಯಿಯೊಳಗೆ ಹಾಕಿಕೊಳ್ಳಬಹುದು. ಇದರಿಂದ ಅವರ ಆರೋಗ್ಯ ಗಂಭೀರವಾಗಿ ಹಾಳಾಗುತ್ತದೆ.
ಚಾಕು, ಕತ್ತಿ ದೂರ ಇಡಿ
ಅಡುಗೆ ಮನೆ ಎಂದ ಮೇಲೆ ಚಾಕು, ಕತ್ತಿ, ಕತ್ತರಿಯಂತಹ ಹರಿತವಾದ ಉಪಕರಣಗಳು ಇದ್ದೇ ಇರುತ್ತದೆ. ಈ ರೀತಿಯ ಉಪಕರಣಗಳು ಮಕ್ಕಳ ಗಮನವನ್ನೂ ಬೇಗ ಸೆಳೆದುಬಿಡುತ್ತವೆ. ಹಾಗಾಗಿ ಈ ರೀತಿಯ ಚೂಪಾದ ಉಪಕರಣಗಳನ್ನು ಯಾವುದೇ ಕಾರಣಕ್ಕೂ ಮಕ್ಕಳ ಕೈಗೆ ಸಿಗದಂತೆ ಜೋಪಾನವಾಗಿ ಇರಿಸಿ. ಅವುಗಳನ್ನು ಬಳಸಿಕೊಂಡು ಮಕ್ಕಳೊಂದಿಗೆ ಆಟವಾಡುವುದಕ್ಕೆ ಹೋಗಬೇಡಿ. ಹಾಗೆ ಮಾಡಿದರೆ ನಿಮ್ಮಂತೆ ಆಡಲು ಹೋಗಿ ಅವರು ತಮಗೆ ಹಾನಿ ಮಾಡಿಕೊಳ್ಳಬಹುದು.
ಎಲೆಕ್ಟ್ರಿಕ್ ಉಪಕರಣಗಳ ಅನ್‌ಪ್ಲಗ್ ಮಾಡಿ
ಅಡುಗೆ ಮನೆಯಲ್ಲಿ ಮಿಕ್ಸಿ, ಓವೆನ್ ಸೇರಿ ಹಲವು ರೀತಿಯ ಎಲೆಕ್ಟ್ರಿಕ್ ಉಪಕರಣಗಳು ಇರುತ್ತವೆ. ಅವುಗಳನ್ನು ಬಳಸಿದ್ದಾದ ಮೇಲೆ ಅವುಗಳನ್ನು ಅನ್‌ಪ್ಲಗ್ ಮಾಡಿಡಿ. ಆದಷ್ಟು ಅವುಗಳನ್ನು ಮಕ್ಕಳ ಕೈಗೆ ಸಿಗದಂತೆ ಇರಿಸಿ. ಒಂದು ವೇಳೆ ಅದು ಮಕ್ಕಳ ಕೈಗೆ ಸಿಕ್ಕರೂ ಅನ್‌ಪ್ಲಗ್ ಮಾಡಿರುವುದರಿಂದ ಅದರಿಂದ ಅವರಿಗೆ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಒಂದು ವೇಳೆ ಈ ಉಪಕರಣಗಳ ವೈಯರ್‌ಗಳು ಕೆಳಗೆ ಜೋತಾಡುತ್ತಿದ್ದರೆ, ಮಕ್ಕಳು ಅದನ್ನು ಎಳೆದುಕೊಂಡು ತಮ್ಮ ಮೈ ಮೇಲೆ ಬೀಳಿಸಿಕೊಳ್ಳಬಹುದು. ಹಾಗಾಗಿ ಅದರ ಬಗ್ಗೆಯೂ ಗಮನವಿರಲಿ.
ಪಾತ್ರೆಗಳ ಹಿಡಿಕೆ ಒಲೆಯ ಹಿಂಭಾಗಕ್ಕಿರಲಿ
ಪಾತ್ರೆಗಳನ್ನು ಒಲೆ ಮೇಲೆ ಇರಿಸಿದಾಗ ಅದರ ಹಿಡಿಕೆಯನ್ನು ಒಲೆಯ ಹಿಂಭಾಗಕ್ಕೆ ತಿರುಗಿಸಿಡಿ. ಇದರಿಂದ ನಿಮ್ಮ ಮಗು ಹಿಡಿಕೆ ಹಿಡಿದು ಎಳೆಯಲು ಪ್ರಯತ್ನಿಸುವುದು ತಪ್ಪುತ್ತದೆ. ಹಾಗೆಯೇ ನೀವು ಟೀ ಕಾಫಿ ಅಥವಾ ಯಾವುದೇ ಬಿಸಿ ದ್ರವವನ್ನು ಕೈನಲ್ಲಿ ಹಿಡಿದುಕೊಂಡಿರುವಾಗ ನಿಮ್ಮ ಮಗು ಎಲ್ಲಿದೆ ಎನ್ನುವುದನ್ನು ಗಮನಿಸಿಟ್ಟುಕೊಳ್ಳಿ. ಇಲ್ಲವಾದರೆ ನಿಮಗೆ ಗೊತ್ತಿಲ್ಲದೆ ಮಗು ನಿಮ್ಮನ್ನು ಎಳೆದು ನೀವು ಗಾಬರಿಯಿಂದ ಕೈನಲ್ಲಿರುವ ಬಿಸಿ ದ್ರವವನ್ನು ಕೈ ಬಿಟ್ಟುಬಿಡಬಹುದು.
ಓವೆನ್ ಬಗ್ಗೆ ಜಾಗೃತೆ
ಓವೆನ್ ಖರೀದಿಸುವಾಗ ಓವೆನ್ ಬಾಗಿಲು ಮುಟ್ಟಿದರೆ ಶಾಖ ತಾಕದೆ ಇರುವಂತಹ ಓವೆನ್ ಅನ್ನೇ ಖರೀದಿಸಿ. ಇದರಿಂದ ಒಂದು ವೇಳೆ ನಿಮ್ಮ ಮಗು ಗೊತ್ತಿಲ್ಲದೆ ಓವೆನ್ ಬಾಗಿಲು ಮುಟ್ಟಿದರೂ ಮಗುವಿಗೆ ಯಾವುದೇ ತೊಂದರೆಯಾಗುವುದಿಲ್ಲ. ಗ್ಯಾಸ್ ಸ್ಟವ್ ಬಳಕೆ ಮಾಡಿದ ನಂತರ ಅದನ್ನು ಗ್ಯಾಸ್ ಬಳಿಯೂ ಆಫ್ ಮಾಡಿಡಿ. ಮಕ್ಕಳಿಗೆ ಕುತೂಹಲ ಜಾಸ್ತಿಯಾದ್ದರಿಂದ ಅವರು ಸ್ಟವ್ ಅನ್ನು ಆನ್ ಮಾಡಲು ಪ್ರಯತ್ನಿಸಬಹುದು. ಆಗ ಗ್ಯಾಸ್ ಕೂಡ ಆಫ್ ಆಗಿದ್ದರೆ ನೀವು ಅಪಾಯದಿಂದ ಪಾರಾಗಬಹುದು. ಇಲ್ಲವಾದರೆ ದೊಡ್ಡ ಅಪಾಯವಾದೀತು ಜೋಕೆ.
ಬೆಂಕಿ ಪೊಟ್ಟಣ ಕೈಗೆ ಸಿಗದಿರಲಿ
ಮನೆಯಲ್ಲಿ ಬೆಂಕಿ ಪೊಟ್ಟಣಗಳನ್ನು ಯಾವುದೇ ಕಾರಣಕ್ಕೂ ಮಕ್ಕಳಿಗೆ ಸಿಗುವಂತೆ ಇರಿಸಬೇಡಿ. ಹುಟ್ಟು ಹಬ್ಬದ ಸಂದರ್ಭದಲ್ಲಿ ಮೇಣದ ಬತ್ತಿ ಹಚ್ಚಿಸಲು ಅಥವಾ ದೇವರ ಪೂಜೆ ಮಾಡುವಾಗ ದೀಪ ಬೆಳಗಿಸಲು ಬೆಂಕಿ ಪೊಟ್ಟಣ ಬಳಸಿದರೆ ತಕ್ಷಣ ಅದನ್ನು ಮಕ್ಕಳ ಕೈಗೆ ಸಿಗದ ಜಾಗದಲ್ಲಿ ಇರಿಸಿಬಿಡಿ. ಮಕ್ಕಳು ಬೆಂಕಿ ಪೊಟ್ಟಣ ಹತ್ತಿಸಲು ಪ್ರಯತ್ನಿಸಬಹುದು ಅಥವಾ ಅರಿಯದೆ ಅದನ್ನು ಬಾಯಿಗೂ ಹಾಕಿಕೊಂಡುಬಿಡಬಹುದು. ಹಾಗಾಗಿ ಅದರ ಬಗ್ಗೆ ಜೋಪಾನವಾಗಿರಿ.
ಮೈಕ್ರೋವೇವ್‌ನ ಹತ್ತಿರ ಬರದಿರಲಿ
ಮೈಕ್ರೋವೇವ್ ಅನ್ನು ನೀವು ಬಳಸುತ್ತಿದ್ದರೆ ಅದನ್ನು ಬಳಸುವ ಅಷ್ಟೂ ಸಮಯ ಅದರ ಬಳಿಯೇ ಇರಿ. ಮೈಕ್ರೋವೇವ್‌ನ ಬಾಗಿಲು ತೆರೆಯುವುದಕ್ಕೆ ನಿಮ್ಮ ಮಗುವಿಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬೇಡಿ. ಮಕ್ಕಳ ಹಾಲಿನ ಬಾಟಲಿಗಳನ್ನು ಮೈಕ್ರೋವೇವ್‌ನಲ್ಲಿ ಇಡಬೇಡಿ. ಬಾಟೆಲ್ ಮೈಕ್ರೋವೇವ್ ಅಲ್ಲಿ ಸ್ಫೋಟವಾಗುವ ಸಾಧ್ಯತೆಯಿರುತ್ತದೆ. ಮಕ್ಕಳನ್ನು ಮೈಕ್ರೋವೇವ್‌ನಿಂದ ಯಾವಾಗಲೂ ದೂರವಿರಿಸಿ.
ಬೆಂಕಿ ನಂದಿಸುವ ಉಪಕರಣ ಇರಲಿ
ಅಡುಗೆ ಮನೆಯಲ್ಲಿ ಅಗ್ನಿಶಾಮಕವನ್ನು ಇರಿಸಿ. ಹಾಗೆಯೇ ನೀವು ಬಹುಮಡಿಯ ಮನೆಯಲ್ಲಿ ವಾಸಿಸುತ್ತಿದ್ದರೆ, ಪ್ರತಿ ಮಹಡಿಯಲ್ಲೂ ಒಂದೊಂಡು ಬೆಂಕಿನಂದಿಸುವ ಉಪಕರಣವನ್ನು ಇರಿಸಿಕೊಳ್ಳಿ. ತುರ್ತು ಸಮಯದಲ್ಲಿ ಇದು ನಿಮಗೆ ಸಹಾಯಕ್ಕೆ ಬರುತ್ತದೆ.
ರೆಫ್ರಿಜರೇಟರ್ ಬಗ್ಗೆ ಗಮನ ಕೊಡಿ
ಮನೆಯ ರೆಫ್ರಿಜರೇಟರ್ ಮೇಲೆ ತರಹೇವಾರಿ ವಸ್ತುಗಳನ್ನು ಅಂಟಿಸಿಡುವ ಅಭ್ಯಾಸ ಅನೇಕರಿಗೆ ಇರುತ್ತದೆ. ಈ ರೀತಿ ಅಂಟಿಸುವಾಗ ಮಕ್ಕಳ ಬಗ್ಗೆ ಗಮನವಿರಲಿ. ನೀವು ಅಂಟಿಸುವ ವಸ್ತುಗಳು ಮಕ್ಕಳ ಕೈಗೆ ಸಿಗಬಾರದು. ಒಂದು ವೇಳೆ ಅದು ಅವರ ಕೈಗೆ ಸಿಕ್ಕರೆ ಅವರು ಅದನ್ನು ನುಂಗಿಬಿಡಬಹುದು. ಇದರಿಂದ ಮಕ್ಕಳ ಪ್ರಾಣಕ್ಕೇ ಅಪಾಯ ಉಂಟಾಗುತ್ತದೆ.
ಇದನ್ನೂ ಓದಿ: Ghee Health Benefits: ಮಳೆಗಾಲದಲ್ಲಿ ಜಾಸ್ತಿ ತುಪ್ಪ ತಿನ್ನಿ; ಏಕೆಂದರೆ