Site icon Vistara News

Knuckle Cracking: ನೆಟಿಕೆ ಮುರಿಯುವುದು ಒಳ್ಳೆಯದೇ ಕೆಟ್ಟದ್ದೇ? ಇದರಿಂದ ಸಂಧಿವಾತ ಬರುತ್ತದೆಯೇ?

knuckle cracking

ನಾವು ಬಹಳಷ್ಟು ಮಂದಿ ಕೈಕಾಲುಗಳ ಬೆರಳುಗಳಲ್ಲಿ, ಗಂಟುಗಳಲ್ಲಿ ನೆಟಿಕೆ ಮುರಿಯುವುದರ (Knuckle Cracking) ಮೂಲಕ ರಿಲ್ಯಾಕ್ಸ್‌ ಫೀಲ್‌ ಮಾಡುತ್ತೇವೆ. ಬೆರಳುಗಳನ್ನು ಒಮ್ಮೆ ಎಳೆದು ಅಥವಾ ಮಡಚಿ, ಟಕ್‌ ಎಂಬ ಶಬ್ದ ಕೇಳಿದಾಗ ನಮಗೆ ನೆಮ್ಮದಿಯ ಅನುಭವವಾಗುತ್ತದೆ. ಆಹಾ ಎಂಬ ನಿಟ್ಟುಸಿರು ಬಿಡುತ್ತೇವೆ. ಅನೇಕರಿಗೆ ಇದು ನಿತ್ಯದ ಅಭ್ಯಾಸ. ದಿನಕ್ಕೊಮ್ಮೆ ನೆಟಿಕೆ ಮುರಿಯದಿದ್ದರೆ ಯಾಕೋ ಏನೋ ಕಳೆದುಕೊಂಡ ಭಾವ. ಆದರೆ, ಇನ್ನೂ ಕೆಲವರಿಗೆ ನೆಟಿಕೆ ಮುರಿಯುವುದು ಆಗದು. ಎಲ್ಲಿ ಬೆರಳು ಮುರಿದೇ ಬಿಡುತ್ತೇವೋ ಎಂಬ ಆತಂಕ ಕೆಲವರದ್ದು. ಒಟ್ಟಾರೆ, ಹೇಳುವುದಾದರೆ, ನೆಟಿಕೆ ಮುರಿಯುವುದು ಹಲವರ ಒಂದು ಅಭ್ಯಾಸ. ಉದ್ವೇಗವನ್ನು ದೂರ ಮಾಡುವ ಮಾರ್ಗವೂ ಹೌದು. ಈ ನೆಟಿಕೆ ತೆಗೆಯುವ (Knuckle Cracking) ಅಭ್ಯಾಸಕ್ಕೆ ಯಾವುದೇ ವೈಜ್ಞಾನಿಕ, ಮಾನಸಿಕ ಕಾರಣಗಳಿಲ್ಲ. ಆದರೆ ಇದು ಚಡಪಡಿಕೆಯ ಸಂಕೇತ. ಸುಮ್ಮನೆ ಕುಳಿತಲ್ಲಿ, ಕಾಯುತ್ತಾ ಇರುವಾಗ, ತಮ್ಮ ಸರದಿಗಾಗಿ ಉದ್ವೇಗದಲ್ಲಿ ಕುಳಿತಿರುವಾಗ, ಪರೀಕ್ಷೆ ಬರೆಯುವ ಮೊದಲು ಹೀಗೆ ಯಾವುದೇ ಸ್ಪರ್ಧೆಗಳನ್ನು ಎದುರಿಸುವುದಕ್ಕೂ ಮೊದಲು ನೆಟಿಕೆ ಮುರಿಯುವ ಅಭ್ಯಾಸವನ್ನು ಅನೇಕರು ರೂಢಿಸಿಕೊಂಡಿರುತ್ತಾರೆ. ಮನಸ್ಸು ಉದ್ವೇಗಕ್ಕೆ ಒಳಗಾಗುವ ಸಂದರ್ಭ ಅದರಿಂದ ಹೊರಬರಲು, ರಿಲ್ಯಾಕ್ಸ್‌ ಮಾಡಿಕೊಳ್ಳುವುದಕ್ಕೂ ಇದನ್ನು ತಮಗರಿವಿಲ್ಲದಂತೆ ಮಾಡುವ ಅಭ್ಯಾಸವನ್ನು ಕೆಲವರು ರೂಢಿಸಿಕೊಂಡಿರುತ್ತಾರೆ. ಒಟ್ಟಾರೆಯಾಗಿ, ನೆಟಿಕೆ ಮುರಿಯುವುದು, ತಮ್ಮ ಉದ್ವೇಗದಿಂದ, ಹೊರಬರಲು ಮಾಡುವ ಮಾನಸಿಕ ತಯಾರಿಯೂ ಕೆಲವು ಸಂದರ್ಭದಲ್ಲಿ ಆಗಿರುತ್ತದೆ. ನರ್ವಸ್‌ ಆದಾಗಲೂ, ಸ್ಟೇಜ್‌ನ ಮೇಲೆ ಹೋಗುವ ಮೊದಲು ಆಗುವ ಭಯವನ್ನು ನಿವಾರಿಸಲೂ, ಸಂದರ್ಶನಗಳನ್ನು ಎದುರಿಸುವುದಕ್ಕೂ ಮೊದಲು ನೆಟಿಕೆ ಮುರಿಯುವುವಂತೆ ಪ್ರೇರಣೆ ಆಗುವುದೂ ಸಾಮಾನ್ಯ. ಹಾಗಾಗಿ, ನೆಟಿಕೆ ಮುರಿಯುವುದು, ವ್ಯಕ್ತಿತ್ವದ ದೃಷ್ಟಿಯಿಂದ ನೋಡಿದಾಗ ನರ್ವಸ್‌ನೆಸ್‌ನ ಸಂಕೇತವಾಗಿಯೂ ಕಾಣಲಾಗುತ್ತದೆ.

Man Cracking His Knuckles on Blurred Background

ಸಂಧಿವಾತ ಬರದು

ಆದರೆ, ಸಮಾಜದಲ್ಲಿ ಸಾಕಷ್ಟು ಮಂದಿಯಲ್ಲಿ, ಈ ನೆಟಿಕೆ ಮುರಿಯುವುದರಿಂದ ಮುಂದೊಮ್ಮೆ ಸಂಧಿವಾತ, ಎಲುಬಿನ ತೊಂದರೆ ಬರುವ ಸಂಭವ ಹೆಚ್ಚಿದೆ ಎಂಬ ನಂಬಿಕೆಯಿದೆ. ನೆಟಿಕೆ ಎಂಬುದು ಸಾಮಾನ್ಯವಾಗಿ ಗಂಟುಗಳನ್ನು ಸದಾ ತೇವವಾಗಿಟ್ಟುಕೊಳ್ಳುವ ಸೈನೋವಿಯಲ್‌ ಎಂಬ ದ್ರವದಲ್ಲಿ ಇರುವ ಗುಳ್ಳೆಗಳು ಒಡೆದಾಗ ಆಗುವ ಶಬ್ದ. ಈ ದ್ರವದಲ್ಲಿ ಸಾರಜನಕ, ಆಮ್ಲಜನಕ, ಕಾರ್ಬನ್‌ ಡೈ ಆಕ್ಸೈಡ್‌ನ ಗುಳ್ಳೆಗಳನ್ನು ಬಿಡುಗಡೆ ಮಾಡುತ್ತವೆ. ನಾವು ನಮ್ಮ ಗಂಟುಗಳನ್ನು ಎಳೆದಾಗ ಹಾಗೂ ಮುರಿದಂತೆ ಮಾಡುವಾಗ ಅದು ʻಟಕ್‌ʼ ಎಂಬ ಸದ್ದಿನೊಂದಿಗೆ ಸಿಡಿಯುತ್ತದೆ. ಇದು ಹಲವರಿಗೆ ಸಂದುಗಳಲ್ಲಿರು ಟೈಟ್‌ನೆಸ್‌ ಅನ್ನು ಕಡಿಮೆ ಮಾಡುವ ಜೊತೆಗೆ ಆರಾಮದ ಅನುಭವ ನೀಡುತ್ತದೆ. ಆದರೆ ಎಲ್ಲರೂ ನಂಬಿರುವಂತೆ ಇದು ಸಂಧಿವಾತ ಅಥವಾ ಮೂಳೆಗಳ ಸಮಸ್ಯೆಯನ್ನು ತಂದೊಡ್ಡುವುದಿಲ್ಲ. ಸಂಧಿವಾತ ವಯಸ್ಸಾದಂತೆ ಹಾಗೂ ವಂಶವಾಹಿನಿಯಿಂದ ಬರುವ ಸಮಸ್ಯೆಯಾಗಿದ್ದು, ನೆಟಿಕೆ ಮುರಿಯುವುದರಿಂದ ಬರುವುದಿಲ್ಲ ಎಂದು ವೈದ್ಯರು ಸ್ಪಷ್ಟವಾಗಿ ಹೇಳುತ್ತಾರೆ. ಆದರೆ, ಸರಿಯಾಗಿ ನೆಟಿಕೆ ತೆಗೆಯದಿದ್ದರೆ, ಖಂಡಿತ ಉಳುಕು ಹಾಗೂ ಸಮಸ್ಯೆಯನ್ನು ತಂದೊಡ್ಡಬಹುದು. ಇಲ್ಲವಾದರೆ ಇದರಿಂದ ಏನೂ ಹಾನಿಯಿಲ್ಲ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: Bluetooth Side Effects: ಬ್ಲೂಟೂತ್‌ ಹೆಡ್‌ಫೋನ್‌ ರೇಡಿಯೊ ಕಿರಣಗಳಿಂದ ಕ್ಯಾನ್ಸರ್‌?

Exit mobile version